ಕಂ || ಅದನೇಱುವೆನದನೇಱಿಪೆ
ನದನೊತ್ತುವೆನೆನಗೆ ದಿವ್ಯವಸ್ತುಗಳಂ ಮು
ಟ್ಟಿದೆನಿದನಿಂತೆನ್ನಂಬಿ[ನೊ
ಳೆಂ]ದಭ್ಯುದಿತ ಬಲಂ ಪಿಡಿದೆನೆಂ[ದ]ನಾ ಗೋಸನೆಯಂ  ೩೨

ವ || ಎನೆ ಗೋಸನೆಯಲುಂ ಪೆಚ್ಚಿ ನುಡಿಯಲಕ್ಕು ಪೊಣರ್ದಲ್ಲಿಗೆವಪ್ಪುದುವಾರ್ಪಂ ತೋರ್ಪದುಮರಿದೆಂದೊಡೆ ನಿಮ್ಮಡಿ ದಿವ್ಯಂಗಳನರ್ಚನಕ್ರಿಯಾಸಹಿತಮಿರಿಸಿ ನಾಳೆ ಬಂದಪ್ಪೆನೆಂದೊಡತಂ ಮಗುೞ್ದು ಪೋಗಿ ಕಂಸನಂ ಕಂಡು ನಂದಗೋವನ ಮಗಂ ಗೋಸನೆಯಂ ಪಿಡಿದನೀಗಳಿವಂ ಪಿಡಿವುದುಮವಂಗಾಂತಮ್ಮಡಿಪುದುಮೇವಿರಿದು

ಕಂ || ತೊಟ್ಟಲೋಳಿರ್ಪಂದದಿನಂ
ತೊಟ್ಟುಂಬರಿಗೊಂಡು ಕೊಲಲು ಬಂದಸುರರ್ ಬಾ
ಯ್ವಿಟ್ಟು ಬಲ[೦]ಗೆಟ್ಟು ಚಲಂ
ಗೊಟ್ಟು[೦ ಸಲೆ] ಮುಟ್ಟುಗೆಟ್ಟು ಪೋದರ್ ಪಲಬರ್ ೩೩

ಈಗಳವನೀಧರಿತ್ರಿಯು
ಮಾಗಸಮುಮನೊಂದನೊಂದು ಕಯ್ಯೊಳ್ ಪಿಡಿದಿಂ
ಬಾಗಿರೆ ತಾಳಂ ಬಾರಿಸು
ವಾಗಳ್ ಮಾರ್ಕೊಳ್ವರಿಲ್ಲ ಮೂಱುಂ ಜಗದೊಳ್ ೩೪

ವ || ಇಂತಳವುಮವನ ದೋರ್ವಳಮುಮನರಸನಱಿಯಂ ನೀಮೆಕಱಿಯಿರೆ ಪೇೞಿಮೆಂದು ಕೆಲದೊಳಿರ್ದವರಂ ಸುಟ್ಟಿ ನುಡಿದೊಡವರಿಂತೆಂಬರ್

ಕಂ || ಅವನ ಜವನಳವಿಯಳವಿಯೆ
ಯವರುವರಱಿ [ದಪರೆನ]ದಿರಿಮೆಂದುಂ ತಾನೇಂ
ಬವ[ರದಿ]ಮುಳಿದೊಡೆ ಮೂಱುಂ
ಭುವನಂಗಳನೊಂದೆ ಕೊಳ್ಳಿಯೊಳ್ ಸುಡಲಾರ್ಕುಂ ೩೫

ವ || ಎನೆ ಕಂಸನದೆಲ್ಲವುಂ ಕೇಳ್ವೆಮೆಂದು ನಿಮ್ಮ ತಮ್ಮ ಮಾತೆಲ್ಲಮನವನೊಳ್ ಕಂಡು ನಂಬಲಕ್ಕುಮನ್ನೆಗಮಿ ಪೂಣ್ಕೆಯಂ ನೋೞ್ಪೆನೆಂದು ಮನದೊಳ್ ನೊಂದು ನೊಂದುದನಾರ್ಗಮಱಿಯಲಾಗದಂತು ಪೆಱಪೆಱದನೆ ನುಡಿಯುತ್ತುಮಿರ್ದು ದಿವ್ಯಪ್ರತಿಪಾಳಕರಂ ನೀವಾದಿತ್ಯವಸ್ತುಗಳನಧಿವಾಸಿಸಿ ದೇವತಾರ್ಚನಕ್ರಿಯೆಯಿನಿರಿಸಿಮೆಂದು ಮಱುದಿವಸಂ ಕಂಸಂ ತನ್ನ ಮಾಡದ ಮುಂದಣ ಪಿರಿಯ ಬಯಲೊಳ್ ಪಲರುಮರಸುಗಳ್ವೆರಸು ತಾಂ ಬಂಧು ಮಹಾಸ್ಥಾಯಿಕೆಯ ನಡುವೆ ಶುಚಿರ್ಭೂತನಾಗಿರ್ದಲ್ಲಿ ನಾಗಶಯ್ಯೆಯುಂ ಶಾರ್ಙ್ಗಾಯುಧ ಮುಮಯ್ವಾಯ ಶಂಖಮುಮಂ ತರಿಸಿ ಬರವಂ ಪಾರುತ್ತಿರ್ಪಿನಂ ಹರಿ ತ[ನ್ನೊ] ಡನಾಡಿಗಳಪ್ಪ ಗೋಪಕುಮಾರರನೊಡಗೊಂಡು ಪೊೞಲ್ಗೆ ವಂದರಮನೆಯಂ ಪೊಕ್ಕಾ ಸಭೆ ನಡುವೆ ನಿಂದು ನೋಡಿಂ ನೋಡಿಕೊಂಡು ನಾಗಶ್ಯಯ್ಯೆಯಂ ಸಾರೆಬರೆ ಮುನ್ನಂ ಪೊಗೆಯುಂ ಕೆಂಡಮುಮನುಗುಳುತ್ತಂ ಭಯಂಕರಾಕಾರವಾಗಿರ್ದುದಂ ಪೊರ್ದೆ ಶಾಂತಾಗಾರದಿನಿರೆ ಹಾಸಿನ ಮೇಗೆ ನಿಮಿರ್ದು ಕೊಂಕಿದ ಮಲ್ಲಿಗೆಯ ಬಾಸಿಗದ ಮೇಗೆ ಮೆಯ್ಯನಿಕ್ಕುವಂತೆ ಪಟ್ಟಿರ್ದಾಗಳ್

ಕಂ || ಕ[ಟ್ಟಾ]ಳ್ತನದುರ್ವಿನದಿಂ
ತೊಟ್ಟನೆ ಕೊಳೆ ತನ್ನ ಮೇಗೆ ಪಟ್ಟಿರ್ದಾಗಳ್
ದಿಟ್ಟ ವಿಷಮಪ್ಪ ಫಣಿಪತಿ
ಮಿಟ್ಟನೆ ಮಿಡುಕದೆ ಬೞಲ್ದು ಪಟ್ಟುದು ಭಯದಿಂ ೩೬

ವ || ಆ ಮಹಾನಾಗನ ಮೇಲೆ ಪಟ್ಟಿರ್ದೆಡಗಯ್ಯೊಳ್ ಶಾರ್ಙ್ಗಾಯುಧಮನೊಂದುಂಗುಷ್ಠದೊಳೊತ್ತಿಕೊಂಡೇಱಿಸಿ ಬಲದ ಕಯ್ಯೊಳಯ್ವಾಯ ಶಂಖಮಂ ಕೋಂಡೊತ್ತಿದಾಗಳ್

ಕಂ || ನೆರೆದ ಜನಮುರುಳೆ ಬಾಯ್ವಿಡೆ
ಪುರದ ಜನಂ ಬೆರ್ಚಿ ನಡುವಗೆ ಜನಪದದ ಜನಂ
ಸುರ ನರ ವಿದ್ಯಾಧರ ಜನ
[ಮಿರದೆಯದಂ]ಕೇಳ್ದು ಬೆಕ್ಕಸಂಬಡೆ ಭಯದಿಂ ೩೭

ವ || ಆ ಮಹಾನಾಗನ ಮೇಗೆ ಪಟ್ಟಿರ್ದಾ ಶಾರ್ಙ್ಗಾಯುಧಮನೇಱಿಸಿಯಾ ಶಂಖಮಂ ಪೂರಿಸಿದ ಸ್ವರಕ್ಕೆ ಕೃಷ್ಣನೆಂತಿರ್ದನೆಂದಡೆ

ಚಂ || ಹರಿಕರಿದಪ್ಪುದೊಂದು ಮುಗಿಲಂತಿರೆ ಸರ್ಪಫಣಾಮಣಿಪ್ರಭಾ
ಸುರರುಚಿ ಮಿಂಚಿನಂತಿರೆ ಸುಶಾರ್ಙ್ಗಮಹಾಯುಧಮಿಂದ್ರಚಾಪದಂ
ತಿರೆ ಮಹನೀಯ ಶಂಖರವಮಭ್ರಮಹಾರವದಂತಿರೆಲ್ಲಿಗಂ
ಪರೆದಿರೆ ಶೋಭೆವೆತ್ತು ಪೊಸಗಾರ್ಗೆಣೆಯಾದುದು ತತ್ಸಭಾಜನಂ ೩೮

ವ || ಅಂತಲ್ಲಿಂದಮೆರ್ದು ನಿಂದಿಂತಪ್ಪುದೆಂದು ನಾರಾಯಣಂ ಗೋಪಕುಮಾರರ್ ಸಹಿತಂ ತುಱುಪಟ್ಟಿಗೆವೋದನಿತ್ತ ಕಂಸ[೦] ನೆಟ್ಟನೆ ತನ್ನ ಪಗೆವನಪ್ಪನೆಂದೇವಯ್ಸಿ ಬೇಗ ಮಲ್ಲಿಂದಮೆರ್ದುಪೋಗಿ ಕೊಲ್ವುಪಾಯಂಗಳನೆ ಬಗೆಯುತ್ತಿರ್ದೊಂದು ದಿವಸಂ ಕಾಳ ಮಹಾನಾಗ ಸಂರಕ್ಷಿತಮಾಗಿ ಕಾಳಿಂದಿಯ ಮಡುವಿನ ನಡುವಿಣ ಶತಪತ್ರಪುಷ್ಪ ಮನಟ್ಟುಗೆಂದು ನಂದಗೋವಂಗೋಲೆಯನಟ್ಟಿಯಾತನಾ ಬೆಸಂ ತನಗಸಾಧ್ಯಮಪ್ಪುದಱಿಂ ಮಲ್ಮಲಂ ಮಱುಗಿ ತುಱುಪಟ್ಟಿಯ ವೃದ್ಧಗೋಪರಂ ಬರಿಸಿಯೇಗೆಯ್ವಮಿ ಪೂವನಟ್ಟುಗೆಂದು ಕಂಸ ಬೆಸಸಿದನಾ ಪೂವಂ ಕಾಳಿಂದಿಯ ಮಹಾನಾಗಂ ಕಾದಿರ್ಪನಾ ಪಾವಿನ ಕಯ್ಯೊಳ್ ಸಾವು ತಾರದಾಗಳರಸಂ ಕೊಲ್ವನೆಂತುಂ ಬಾೞಿಲ್ಲೆಂದು ಸಂಕಟಂಬಡುವುದುಮಂ ಬಾಯಂ ಬಿಡುವುದುಮಂ ಕುಮಾರಂ ಕಂಡು ನಿಮಗೆನ್ನಂತಪ್ಪ ಮಗನಂ ಪಡೆದು ನಡುಪುತ್ತಿರಲಾವ ಭಯಮುಮಾಗದಂಜದಿರಿಮದನಾನೆ ತಿರ್ದುವೆನೆಂದು ಬಾರಿಸೆ ಬಾರಿಸೆ ಪೋಗಿ ಗೋಪಾಳಜನಮೆಲ್ಲಂ ನೆರೆದು ನೋಡೆ ಮಡುವಂ ಪಾಯ್ದಿಸಿಪೋಗಿ ತಾವರೆಯನೆಯ್ದಿಪೋಗಿ ಮುನ್ನಂ ಫಣಿಪತಿಯಂ ಕೊಂದಲ್ಲದೆ ಪೂವಂ ಕೊಳ್ಳೆನೆಂದು ಪದ್ಮಷಂಡ[ಮಂ] ಬಳಸಿಯುಮಱಸುವಾಗಳ್

ಕಂ || ಕರಿದು ಮಡು ಕರಿದು ಫಣಿಪತಿ
ಕರಿದು ಕರಂ ಹರಿಯ ದೇಹಮದಱಿಂದಱಿಯ
ಲ್ಕರಿ[ದು]ರಗನ ಸಾಹಸಮಿದು
ಹರಿಯುಮದಲ್ತೆ ತೊಱೆಯೆ ತೆರೆಯೆಂ [ತೆಂತಾ]ಗಳ್ ೩೯

ಹರಿಯಂ ಭ್ರಾಂತಿಸಿ ನೋೞ್ಪ
ಗ್ಗುರಿಯುಂ ಪೊಗೆಯುಂ ಸಿಡಿಲ್ವ ಕೆಂಡಮನುಗುಳಿ
ತ್ತಿರವಂ ಫಣಾಮಣಿಪ್ರಭೆ
ಪರೆದಿರೆ ಕಂಡಾ ಮಹೋಗ್ರತರ ವಿಷಧರನಂ ೪೦

ಕಂಡು ಮುಳಿದೆಯ್ದಿ ಬೇಗಂ
ಕೆಂಡದವೊಲ್ ಪೊಡೆಯೆ ಮಾಣಿಕಂ ಕೆದಱುವಿನಂ
ಚಂಡಭುಜಂ ಪೊಯ್ದಡೆ ನೊಂ
ದಂಡಜಪತಿ ಬಿರ್ದುಪೊರಳುತಿರ್ದರೆ ಬೇಗಂ ೪೧

ಪಿಡಿದು ತೆಗೆದೆತ್ತಿ ಬೀಸು
ತ್ತಡಸಿ ತಗುಳ್ದಱೆಯ ಮೇಲೆ ನೀಲಾಂಬರಮಂ
ಪಿಡಿದೊಗೆವಸಗನ ತೆಱದಿಂ
ಪೊಡೆದಂ ವಿಷಧಾರಿ ಸೊಪ್ಪುಸೊವಡಪ್ಪಿನೆಗಂ ೪೨

ವ || ಆ ಕುಳಿಕಾಹಿಯನಂತು ಕೊಂದು ಪೆಱಗೀಡಾಡಿ ಶತಪತ್ರಕುಟ್ಮಲಂಗಳಂ ಕೊಯಿದುಕೊಂಡು ಮಗುೞ್ದೀಸಿ ಪೊಱಮಟ್ಟುಬಂದು ನಂದಗೋಪಂಗೊಪ್ಪಿಸಿದೊಡ್ಡಕ್ಕು ಮೆಮ್ಮಯ್ಯಂಗಕ್ಕುಮೆನ್ನ ತಲೆಯಂ ಕಾವಡಂ ಪಿರಿದಪ್ಪ ಸಂತೋಷಮನೀವಡಂ ನೀನಲ್ಲದೆ ಪೆಱರಾರೆಂದೊಸೆದಾತನ ಕಯ್ಯೊಳ್ ಸತ್ತ ಪಾವುಮಂ ಮಗನುಮಂ ಕೆಲ ಗೋಪಕುಮಾರರು ಮನೊಡಗೊಂಡು ಪೋಗಿ ಮಗನಂ ಪೆಱತೊಂದೆಡೆಯೊಳಿರಿಸಿ ನಂದಗೋವಂ ಪೋಗಿ ಕಂಸಂಗೆ ಸತ್ತ ಪಾವಂ ತೋಱಿ ಪೂವನೊಪ್ಪಿಸಿದೊಡೆ ಚೋದ್ಯಂಬಟ್ಟು ಬಾಯೊಳ್ ಕಯ್ಯನಿಟ್ಟು ಪೇೞಿದನೆಂತು ಕೊಂದೆ ಈ ಪೂವನೆಂತು ತಂದೆಯೆನೆ ತನ್ನ ಮಗನ ಸಾಹಸಮಂ ಪೇೞ್ದೊಸಗೆವಡೆದು ಮಗುೞೆ ಬರುತ್ತಂ ಮಗನನೋಡಗೊಂಡು ಬಪ್ಪಾಗಳೊಂದೆಡೆಯ ವೀಥಿಯೊಳ್

ಕಂ || ಅಜಿತಂಜಯನೆಂಬ ಮಹಾ
ಗಜೇಂದ್ರಮೈದನೆಯ ಮದದೊಳೊದವಿದ ಕಾಯ್ದಿಂ
ಪ್ರಜನಿತ ಕೋಪಾನ್ವಿತನಾ
ದ ಜವಂ ಬರ್ಪಂತೆ ಬರ್ಪುದಂ ಕಂಡವರ್ಗಳ್ ೪೩

ವ || ಭಯಂಗೊಂಡೋಟಂಗೊಂಡೊಡೆ ಕೃಷ್ಣಕುಮಾರಂ ತೊಲಗದೆ ನಿಂದು ಸಿಂಹನಾದಂಗೆಯ್ದೊಡಾನೆಗೆ ಮದವೊಡೆದ ಸಾಹಸಮನಱಿದು ಹಸ್ತಪ್ರಹಾರಂ[ಗೆಯ್ದೊಡಾಂ]ತು ಪೋಕೆಡದ ಕೈಯೊಳ್ ಪೂರ್ವಕಾಯಮನೊತ್ತಿ ಬಲದ ಕೋಡಂ ಪಿಡಿಯಲ್ಕೆ

ಕಂ || ಭೋರೆಂದು ಸುರಿಯೆ ಕನ್ನೆ
ತ್ತರು ಭೋರ್ ಭೋರೆಂದು ಸುರಿಯೆ ತೆಗೆ
ದಾ ರೌದ್ರೇಭದ ಕೋಡಂ
ಕಿೞ್ತುಕೊಂಡು ಮೋದಿದನಾಗಳ್(?) ೪೪

ವ || ಆ ನೋವಿನೊಳ್ ಕರಿ ನೀಲಗಿರಿ ಕೆಡೆವಂತೆ ಕೆಡದತ್ತದ[೦]ಕಂಡು ನಂದಗೋವಂ ಪರಿತಂದು ಪೊಲ್ಲಕೆಯ್ದೆಯುಂತೆಯಾಡುವಂಗೆಱೆಯಪನಾದುದೆಂಬಂತೆ ನೆವಮಿಲ್ಲದೆ ಮುಳಿವರಸನಿದಂ ಕೇಳ್ದಡೇಕೆ ಸೈರಿಸುವ[೦] ಪಾವಂ ಪೆತ್ತವರ್ ಬೇಲಿಯಂ ಪೊಕ್ಕಂ ತಾಯ್ತೆಂದು ಮಗನನೊಡಗೊಂಡು ತುಱುಪಟ್ಟಿಗೆ ಪೋದನನ್ನೆಗಮಿತ್ತಲ್

ಕಂ || ಬಂದು ಕೆಲರ್ ಕಂಸಂಗಿಂ
ತೆಂದರ್ ನಿಮ್ಮಡಿಯ ನಚ್ಚುವಜಿತಂಜಯಮಂ
ನಂದನ ನಂದನನೀಗಳ್
ಕೊಂದು ಜನಾನಂದನೋದಯಂ ಪೋದನಮಂ ೪೫

ವ || ಎಂಬುದಂ ಕೇಳುತ್ತೆ ಕುತ್ತವೆತ್ತ ಮದಹಸ್ತಿಯಂತೆ ಮುನಿದಾ ಕುಮಾರನೆಂತುಂ ಮುಂತುಂ ಪಗೆವನಾದನೆಂದು ಮನದೊಳ್ ನಿಶ್ಚಯಿಸಿ ಕೆಲನಱಿಯೆ ಕೊಲ್ವೆನಪ್ಪೊಡೆ ವಸುದೇವಂ ಮೊದಲಾಗಿ ಯಾದವರೆಲ್ಲಮೊಂದಾಗಿ ನಿಲ್ವರದಱಿನುಪಾಯದೊಳೆ ಕೊಲ್ವೆನೆಂದು ಬಗೆದಿರ್ದು ಮಲ್ಲಯುದ್ಧ ವ್ಯಾಜದೊಳ್ ಸಾಧಿಸುವೆನೆಂದು ನಿಶ್ಚಯಿಸಿ ಚಾಣೂರನುಂ ಮುಟ್ಟಿಗನುಂ ವಜ್ರಜಂಘನುಂ ಕೇಸರಿಯುಮೆಂಬ ನಾಲ್ವರ್ ಮಲ್ಲ ಪ್ರಧಾನರನೇಕಾಂತದೊಳ್ ಬರಿಸಿ ಮಲ್ಲಯುದ್ಧಮಂ ಮಾಡಿದಪ್ಪೆಂ ನೀಮೆಲ್ಲಂ ನಂದಗೋವನನೆಂತಪ್ಪೊಡಂ ಪೊಡರ್ದು ಕೊಂದಿಕ್ಕಿಂ ನಿಮಗೆ ಮೆಚ್ಚಿದ ಗ್ರಾಮಂಗಳಂ ಕುಡುವೆನೆನೆಯವಂದಿರ್ ತಮಗೆ ಮೃತ್ಯುವಂ ಕೈಕೊಳ್ವಂತೆ ಕೈಕೊಂಡು ಮಲ್ಲಯುದ್ಧಮಂ ಸಮಕಟ್ಟಿ ನಾಡಪ್ರಭುಗಳ್ಗ ಮರಸುಮಕ್ಕಳ್ಗಂ ಮಲ್ಲಯುದ್ಧಮಂ ನೋಡಲ್ ಬಪ್ಪುದೆಂದು ತನ್ನ ನಾಡೊಳಗೆಲ್ಲಂ ಗೋಸನೆವಿಡಿಸಿ ವಿಶಾಲಮಪ್ಪೆಡೆಯೊಳ್ ತನಗೆ ಮಿತ್ತುವಂ ಮಾಡಿಕೊಳ್ವಂತೆ ರಂಗಭೂಮಿಯಂ ಸಮೆಯಿಸಿ ಬಳಸಿಯುಮರಸುಮಕ್ಕಳ್ಗಂ ಜನದ ನೆರವಿಗಂ ನೋಡುವಂತು ಮಾಡಿಸುತ್ತಿರ್ದರಿರ್ಪಿನಮಾ ಸಮಕಟ್ಟುವ ಕಜ್ಜಮಿನಿಸಿನಿಸು ಪೊಣ್ಮೆ ವಸುದೇವಗಱಿಪಿ ನಾವಿನ್ನೆಗಂ ಮೆೞ್ಪಟ್ಟಿರ್ದವಿನ್ನಿಶ್ಚಯಂ ಕೊಲ್ವುದನಱಿದಿನ್ನೆಂತಿರ್ಪಂ ನಮ್ಮ ಸಂಬಂಧಮಂ ಕೂಡಿ ಕೂಸಿಂಗಱಿಪಿ ಕೂಡಿನಿಲ್ವಮೆಂದು ತಮ್ಮೊಳಾಳೋಚಿಸಿ ನಂದೋವಂಗಂ ಕೃಷ್ಣಕುಮಾರಂಗಂ ಬೞಿಯನಟ್ಟಿ ಮೂವರುಮೇಕಾಂತ ದೊಳಿರ್ದು ನಂದಾ ಕೇಳೀ ಕುಮಾರನಂ ಕಂಸಂ ಮುನ್ನೆ ದೇವತೆಗಳನಟ್ಟಿ ಬೞಿಯಮೆನಿತಾನುಮುಪ ದ್ರವಂಗಳನೊಡರ್ಚಿ ಮತ್ತಂ ಕಳಾಹಿರಕ್ಷಿತ ಪುಷ್ಪಂಗಳಂ ತರವೇೞ್ದಂತೆಂತುಂ ಕೋಲಲಾಱದೆ ಮಲ್ಲಯುದ್ಧದ ನೆವದೊಳ್ ಕೊಲ್ವುದಂ ಪಣ್ಣಿ ನಿಲೆಯುಂ ಬರ್ದುಂಕಿದೊಡೆ ಮೇಲೆವಿರ್ದು ಕೊಂದಪ್ಪನೆನೆ ಕುಮಾರನಿಂತೆಂದಂ

ಕಂ || ಗೋವುಳಿಗನ ಮಗನೆಂ ಪೊರೆ
ಪಾವುದುವಿಲ್ಲೇಕೆ ಮುಳಿವನಂತುಂ ಮುಳಿವಂ
ದೇವುದೊ ಚಾತುರ್ದಂತಂ
ಕಾವುದೆ ಕಾವಡಮೆ ಪುಣ್ಯಮೊಂದೇ ಕಾಗುಂ ೪೬

ವ || ಎನೆ ವಸುದೇವನೆಂಗುಂ ಪುಣ್ಯಮೆ ಕಾಗುಮೆಂಬೀ ಮಾತಪ್ಪುದು ಪಗೆ ಸಂಬಂಧಮುಂಟು ಕೇಳಿಮೆಂದು ಕಂಸನುತ್ಪತ್ತಿ ಮೊದಲಾಗೆ ಅತಿಮುಕ್ತಕರಾದೇಶಂ ನಡುವಾಗೆ ಕೃಷ್ಣನ ಭವಾವಸಾನಂಬರಂ ಪೇೞ್ದೆಂತುಂ ನಿನ್ನ ಪುಣ್ಯದಿಂದಾಗದಿಂತು ತಂದೀತಂ ಗೊಪ್ಪಿಸಿದೊಂಡಿತು ನೀಂ ಬಂದೆಡೆಯೆಂದು ಪೇೞ್ದಾಗಳ್ ನಂದನಗೋವನುಂ ಮಗನೆ ತಪ್ಪಿಲ್ಲಿದುವನಿಂತು ನಂಬಿದೆನೆನಗಿಂತಪ್ಪ ಪಗೆವನುಳ್ಳೊಡೆಮ್ಮ ಕಯ್ಯೊಳೆಂತು ಬರ್ದುಂಕು[ವು]ದೊ ನಾನೆ ಮುನ್ನಮವನಂ ಕೊಲ್ವೆನೆನ್ನನವ[೦] ಕೊಲ್ವನೆಂದು ಸಂಕಿಸದಿರಿಂ

ಕಂ || ಮೊಲೆಯುಣ್ಬ ದೆವಸದಂದೇಂ
ಕೊಲಲಾರ್ತುವೆ ದಿವ್ಯನಿಕರಮದುವಂ ಕೇಳ್ ದೋ
ರ್ವಲಮುಂ ಪೊದೞ್ದ ಮುಂಗೈ
ವಲಮುಂ ಪಿರಿದಾದುದೆನ್ನನಿನ್ನರ್ ಕೊಲ್ವರ್ ೪೭

ವ || ಎಂದೊಡಕ್ಕುಂ ನಿನ್ನಳವನೊಳ್ಳಿತ್ತಱಿದೆಮಾದೊಡಮೆಮ್ಮ ೞಲ್ಗೆಂತುಮುದಾಸೀ ನಂಗೆಯ್ಯಲ್ಬಾರದು ನೀನುಮಱಿದು ನೆಗೞೆಲ್ಲ ಮನಿಲ್ಲಿಯೆ ಕಾಣ್ಬಮೆಂದು ಸಮಕಟ್ಟಿರ್ದವರಂ ಕಳಿಪಿ ಕಜ್ಜದಂದಮನಱಿದುಂ ನೆರೆದುಮಿರ್ದ ಕಂಸನುಂ ಮಲ್ಲಪ್ರೋಕ್ಷಣದ ದೆವಸದಂದು ಕಯ್ಗೆಯ್ದು ಬಂದು ಬಂದ ನೆರವಿಯೆಲ್ಲಮಂ ಚೌಪಳಿಗೆಯೊಳಂ ಬಯಲ್ಗಳೊಳ[ಮ]ವರ್ಗೆ ತಕ್ಕಂತಿರಿಸಿ ಮಲ್ಲರಂ ಬರಿಸಿ ತಾನೊಂದೆಡೆಯೊಳುದ್ಧತವಿಳಾಸದಿಂ ಕುಳ್ಳಿರ್ದು ವಸುದೇವಸ್ವಾಮಿಯುಂ ತನ್ನ ಮಕ್ಕಳಪ್ಪ ಗಜಕುಮಾರ ಜರತ್ಕುಮಾರ ಸಾರವಿರ ದುಂದುಭಿ ಬಲದೇವಾದಿಗಳುಮನಾತ್ಮ ತಂತ್ರಮುಮ ನೊಡಗೊಂಡು ಬಂದು ನಂದಗೋವನ ಕೃಷ್ಣನ ಕೆಲದ ಚೌಪಳಿಗೆಯೊಳಿರ್ದರಾಗಳ್ ಕಂಸನರಸು ಮಕ್ಕಳ್ಗೆಲ್ಲ ಮುಡಲುಂ ತುಡ[ಲುಮ]ಟ್ಟಿ ನಂದಂಗಂ ಕೃಷ್ಣಂಗಮಱಿವು ಪುಟ್ಟೆ ಕಲಿಗಂಟಿಕ್ಕಿ ತೆರಳ್ದಿ ಬಿಗಿದುಟ್ಟು ಪೊಯಿಕಯ್ಯನೆಂಬಂತಿರ್ದನಂತಿರ್ಪಿನಂ ಮಲ್ಲರೆಲ್ಲ ಮತಿಶಯಮಾಗೆ ಕಯ್ಗೆಯ್ದು ಬಂದು ಪಂಚಾತೋದ್ಯವಾದ್ಯಕಾಱರಱಿದು ಬಾಜಿಸೆ ರಂಗಮಂ ಪೊಕ್ಕು

ಕಂ || ಎನಿತವಯವವೊಳವು [ಮವು]
ಳ್ಳನಿತಂ ರಸಭಾವದಿಂದ ಮಾಡೆ ನಯಂಬೆ
ತ್ತೆನಿತಾನುಂ ಲಯ [ವಿಲಯ]ಗ
ಳಿನಂಬರವ [ನಡರ್ದ] ಪಾತ್ರದಂತಾಡುವರುಂ ೪೮

ವ || ಮುನ್ನೆ ಕಂಸನಿದು ನಿಮ್ಮ ಪೂರ್ವರಂಗಮಾದೊಡಮಿಂತಾಡುವುದರಱೊಳೇಂ ಪೋರ್ಕುಳಿಯಾಡುವುದಂ ನೋಡಲ್‌ ಬಂದೆಮೆನೆ ಚಾಣೂರನೆಂಬಂ ಪ್ರಧಾನ ಮಲ್ಲಂ ಮೆಯ್ಯ[ಳ] ವಿನೊಳಂ ಸತ್ವದ ಬಂ[ಧ] ದೊಳಂ ಪಿರಿಯ ಗಾಯದೊಳಮುಪಾಯ ದೊಳಮರಿಯನಂತಾಗಿಯುಂ ಪೊಯ್ದಡೆ ಸಿಡಿಲ್ ಪೊಯ್ದಂತೆ ಪಿಡಿದೊಡೆ ಬಲುಗ್ರಹಂ ಪಿಡಿದಂತೆ ಒತ್ತಿದೊಡಾನೆಯೊತ್ತಿದಂತೆ ಪೊಕ್ಕಡೆ ಮಾರಿ ಪೊಕ್ಕಂತೆ ಸೊಕ್ಕಿದೊಡುಗ್ರದೇವತೆ ಸೊಕ್ಕಿದಂತೆ ನೂಂಕಿದೊಡೞಿವಡೆಯ ಮೇಲೆ ಚಾತುರ್ದಂತಬಲಂ ನೂಂಕಿದಂತಕ್ಕುಮೆಂದು ಸಂದೇಹಮಂ ಮಾಡಗುಮೆಂಬಂತಪ್ಪಾತನಂ ಬರಿಸೆ ಬಂದು ದೇವ ಬಿನ್ನಪಮಿಲ್ಲಿ ಯಾರೊಳ್ ಪೊಣರ್ವೆಂ

ಕಂ || ದಾನವ ಖಚರರ್ಕಳೊಳೇ
ನನುಂ[ತಾಂ]ನೆಱೆವರುಳ್ಳರಪ್ಪುದು ಮತ್ತೀ
ಮಾನವರೆನ್ನೊಳ್ ಪೊಣರ್ವಂ
ದಾನೆಯೊಳೊಡೆಕೊಂಡಮಾಡುವಂತಾಗಿಕ್ಕುಂ(?) ೪೯

ವ || ಎಂಬುದಂ ಕೇಳ್ದು ಕಂಸನೆಂಬುದೀ ನೆರೆದ ನೆರವಿಯೊಳ್ ಭಿನ್ನರಾಗದಂತೊರ್ವನೊ [ಳ್ ಪೊ]ಣರ್ದು ಪೋರ್ವುದಾರ್ಪಂ ತೋರ್ಪುದೆಂದೊಡಂತೆಗೆಯ್ವೆನೆಂದು ಬಳಸಿರ್ದ ನೆರವಿಯೆಲ್ಲ ಮನಂತಂತೆ ನೋಡಿ ನಂದನ ನಂದನನತ್ತ ನೋಡಿ

ಕಂ || ಬಲಮಂ ನಚ್ಚುವೆಯಾಪಡೆ
ಚಲದಿಂ ಪುಗುತಪ್ಪುದಲ್ಲದಂದಿಪ್ಪುದಿದೇಂ
ಬಲಮುಂ ಚಲಮುಮವೆನ್ನಿಂ
ತೊಲಗಿದೊ[ಡಂತ]ಳ್ಕಿ ಬಳ್ಕಿ ಪೋಪುದು ಪೇಱದೇಂ ೫೦

ವ || ನೀನಿನಿಸಾನುಂ ಬಲ್ಕಣಿಯ ಗಂಡನೆ ನಿನ್ನಂ ಕೊೞೆದ ದಕ್ಕ ಬಲ್ಕಣಿಯನೊತ್ತಿದಂತೆ ನುರ್ಗುಮಾಡುವೆಂ ಬಾಯೆನೆ ಕುಮಾರನೆ[೦] ಗುಮಱಸಿ ತಿಂಬ ದೆಯ್ವಕ್ಕೆ ಪಾೞಂಬಡುವುದು ಮೆನ್ನಲ್ಲಿ ಮೂದಲಿಸಿ ನುಡಿವುದುಮಿತಾಂಗೆನರ್ತಿ ಪೇೞೆಂದು ನುಡಿಯಿಂ ಮುನ್ನ ರಂಗಮಂ ಪೊಕ್ಕು ಭುಜಾಸ್ಫಾಳನಂಗೆಯ್ದೆಯ್ದಿದೊಡೆ ಚಾಣೂರನುಂ ಲಂಘನ[ವಲ್ಗನ] ಪ್ಲವನ ವಿಕ್ರಮ ಭ್ರಮರಿ ಕರಣಂಗಳಂ ಸಾರ್ಚಿ ಮುನ್ನಂ ಧರ್ಮಹಸ್ತಮಂ ನೀಡಿ ಪೊಕ್ಕಮರ್ದು ಸಮಲತಾ ಬಹುಕಳಿ ಕತ್ತರಿಗಳಿಂ ಗಾಯಮಱಿದೊತ್ತಿ ನೋಡಿ ಬಲ್ಲಿದನಪ್ಪೊದನಱಿದು ಸಿಡಿಲ್ದುಗಿದುಕೊಂಡು ಪೊಳೆದು ಪೋಗಲ್ ಬಗೆದುದಂ ಕುಮಾರನಱಿದೊಂದು ಕೈಯನುಗಿದು ಕೊಂಡು ಬಹುಕತ್ತರಿಯೊಳ್ ಕಿವಿಯುಂ ಮೂಗುಮನಡಸಿ ಮೊಗಮನೊತ್ತಿದಾಗಳ್

ಕಂ || ಮೂಗಿಂದಂ ಬಾಯಿಂದಂ
ಬೇಗಂ ಕನ್ನೆತ್ತರೊಡನೆ ಪಾಯ್ತರೆ ಕಣ್ಗಳ್
ಮೇಗೊಗೆದು ಸೊಸೆ ಹರಿ ಕಡು
ವೇಗದಿ ಪಿಡಿದೊತ್ತಿ ಕೊಂದು ಬಿಸುಟುಸಿರ್ದಿರ್ದಂ ೫೧

ವ || ಆಗಳ್ ಕಂಸನ ಮೊಗಂ ಕಿಱಿದಾದುನಱಿದು

ಕಂ || ಮುಟ್ಟಿಗ ಮಲ್ಲಂ ಪಾಯ್ದರೆ
ಕಟ್ಟಾಳ್ ಪರಿಕೆಡೆಯೆ ನೂಂಕಿ ಬೇಗಂ ಕಾಲೊಳ್‌
ಘಟ್ಟಿಸಿ ಕೊಂ[ದಿನ್ನಾ]ರ್ ಪೇ
ೞ್ದಟ್ಟೆಂದಾ ಕಂಸನತ್ತ ನೋಡುತ್ತಿರ್ದಂ ೫೨

ವ || ಆದಂ ಕಂಡು ಭಯಂಗೊಂಡು ಸುಗಿದ ವಜ್ರಜಂಘನುಂ ಕೇಸರಿಯುಮೆಂಬಿರ್ವರ್ ಮಲ್ಲರು[ಮೊ]ಡನೆರ್ದಾಗಳ್

ಕಂ || ಇರ್ವರುಮೊಡವಾಯ್ತಂದಡೆ
ಗರ್ವಿತನಿವರುಮನೆರಡು ಕಯ್ಯೊಳ್ ಪಿಡಿದಂ
ತೊರ್ವರಿನೊರ್ವರನಾಗಳ
ಗುರ್ವಾಗಿರೆ ಮೋದಿ ಕೊಂದು ಮುಂದಿಕ್ಕಿದೊನಂ ೫೩

ವ || ಕಂಸಂ ಕಂಡು ಮುಳಿದು ಮಲ್ಲರೆಲ್ಲರುವನೊಡನೆ ಪಾಯಿಮೆಂದಾಗಳ್

ಮ || ಇರದೆಯ್ತಂದೊಡವಾಯೆ ಕಂಡು ಕರಮಂ ನೀಡಿರ್ದು ಮಲ್ಲರ್ಕಳೆ
ಲ್ಲರುಮೊಳ್ಳಿತ್ತು ಕಱುತ್ತು ಪತ್ತುವಿನಮಂತಿರ್ದುಂ ಕರಂ ತಿಣ್ಣಮಾ
ಗಿರಿಮೆಂದಚ್ಚರಿಯಪ್ಪಿನಂ ಭ್ರಮರಿಯೊಳ್ [ನಿಲ್ವಂತೆನಿತ್ತಾನು ಮ
ಲ್ಲರು]ಮಂ ಬೀಸಿ ಬಿದಿರ್ಚಿ ಮತ್ತೆ ತುೞೆದೊಂ ನುಗ್ಗಾಗಿ ಸಾವನ್ನೆಗಂ ೫೪

ವ || ಅಂತಾ ರಂಗಭೂಮಿ ರಣರಂಗಭೂಮಿಯಂತೆ ಪೆಣಮಯಮಾಗೆ ಪೆಣಂಗಳ ನಡುವೆ ರಕ್ಕಸನಿಪ್ಪಂತಿರ್ದ ಕೃಷ್ಣನಂ ಪ್ರತಾಪದೊಳ್ ಕರಮುಷ್ಣನಂ ಕಂಸಂ ನೋಡಿ ಕನಲ್ದು ಸೈರಿಸದೆ ತನ್ನ ಮೆಯ್ಗಾಪಿನಾಳೆಲ್ಲಮಂ ಕರೆದೀತನಂ ಬೇಗಮಿಕ್ಕಿಮೆಂದು ತಾನೆರ್ದು ಪೋಗಲ್ ಬಗೆವಾಗಳ್ ವಸುದೇವನುಂ ಬಲದೇವಾದಿ ಕುಮಾರರುಂ ಕೈದುಗೆಯ್ದೀ ಕುಮಾರನಂ ಪೆಱಗಿಕ್ಕಿ ನಿಂದಾಂತೆಯ್ತ[೦]ದು ಮೆಯ್ಗಾಪಿನಾಳನಿಱಿವಾಗಳ್ ಕುಮಾರನಂ ಕಂಡು ಕಡುಮುಳಿದುಮಿ ದಿರ್ಚಿದರಂ ಪಡಲ್ವಡಿಸಿ ಪರಿತಂದು ಕಂಸನನುರುಳ್ತರೆ ಪೊಯ್ದು ಕೈಯ ಪೆಣನಂ ಬಿಸುಟು ಮುಳಿದಿರ್ದ ಮಾವನನಿಂತೆ ತಿಳುಪುವೆನೆಂದು ಕಾಲಂ ಪಿಡಿದು ನೆಗಪಿ ಬೀಸುತ್ತಮಂತೆ ಬಂದು

ಕಂ || ಎನ್ನೊಡವುಟ್ಟಿದರನಿವಂ
ಮುನ್ನೀ ಸೆಲೆಯಲ್ಲಿ ಪೊಯ್ದು ಕೊಂದಂ ಗಡಮಾ
ನಿನ್ನಿವನುಮನೀ ಸೆಲೆಯೊಳ್ ಪನ್ನತನಂ ಪೊಯ್ದು ಕೊಲ್ವೆನೆಂದತಿಕುಪಿತಂ ೫೫

ಕಂ || ಬೀಸಿ ಕರಮೆತ್ತಿ ಪೊಯ್ದಡೆ
ಸೂಸೆ ಮಿ[ದು]ಳ್‌ ಪೊಟ್ಟನೊಡೆಯೆ ತಲೆ ಕರಮಿಂತೊಂ
ದಾಸುರಮಾಗಿರೆ ಕೊಂದು ವಿ
ಭಾಸುರತೇಜದೊಳೆ ತಂದೆಯಲ್ಲಿಗೆ ಮಗುೞ್ದಂ ೫೬

ವ || ಅನ್ನೆಗಮವರುಮಿದಿರ್ಚಿದರನಿಕ್ಕಿ ಬೆರ್ಚಿದರನೋಡಿಸಿ ಬಂದು ಹರಿಯ ವಿಕ್ರಮಮುಂ ಕೇಸರಿಯ ವಿಕ್ರಮದಿಂದಗ್ಗಳಮಪ್ಪುದಂ ಕಂಡು ಮಗನನೊಡಗೊಂಡು ತಮ್ಮ ಮನೆಗೆವಂದಾಗಳ್ ನಾರಾಯಣಂ ದೇವಕಿಗೆಱಗಿ ಪೊಡೆವಟ್ಟಂತೆ ಬಂದು ತಮ್ಮಯ್ಯ ನೊಡವಂದ ತಮ್ಮ ಪಿರಿಯವ್ವೆಗ[ಳ್ಗಮ] ಣ್ಣಂಗಳ್ಗಂ ಪೊಡೆವಟ್ಟು ಪರಕೆಯಂ ಸೇಸೆಯುಮನಾಂತು ವಸುದೇವನನುಮತದಿಂ ಪೆರ್ಗಡೆಗ[ಳ್ ಪೇೞ] ಲಾ ಕಂಸಮೃತಕಮಂ ಶೋಭೆಯಿಂ ಸಂಸ್ಕರಿಸಿ ಜೀವಂಜಸೆಯಂ ಲೌಕಿಕಕ್ರಿಯೆಯೊಳ್ ನೆಗೞ್ಚಿ ಕಂಸನ ಮನೆಗೆ ಕಾಪಂ ಪೇೞ್ದು ಬೞಿಯಮುಗ್ರಸೇನನ ಪದ್ಮಾವತಿಯ ಬಂಧನಮಂ ಕಳೆದು ಬರಿಸಿ ಪಾಪ ಕರ್ಮನಿಂದಿಂತಾಯ್ತೆಂದವರನಾಱೆನುಡಿದು ಸ್ನಾನ ವಸನಾನ್ನಾದಿ ಕ್ರಿಯೆಯಿಂ ಸಂತೈಸಿರ್ದು ಮಱುದಿವಸಮವರ ಪರಿವಾರಮೆಲ್ಲಮಂ ಬರಿಸಿ ಕಂಸನ ಮರು[ಳ್ತ] ನದಿನಾಯ್ತೆಂದುಮುಗ್ರ ಸೇನ ಮಹಾ[ರಾ]ಜಂಗೆ ರಾಜ್ಯ ಮನೊಪ್ಪಿಸಿ ತಮಗೆ ಕರಮನುಕೂಲಂ ಮಾಡಿರ್ದೊಂದು ದಿವಸಂ ತಮ್ಮ ನಿಬರುಂ ಮಂತ್ರಿವರ್ಗಸಹಿತಮೊಂದೆಡೆಯೊಳಿರ್ದು

ಕಂ || ಮಿಕ್ಕಿರ್ದ ಜರಾಸಂಧನ
ತಕ್ಕಿನ ಪಿರಿಯಳಿಯನಂ ಬಲಾಧಿಕನಂ ಕೊಂ
ದಿಕ್ಕಿ ಮಗುೞ್ದುಲ್ಲಿ ನಮಗಿರ
ಲಕ್ಕುಮೆ ಪೋಗಿರ್ದು ನಮ್ಮ ಪೊೞಲೊಳ್ ಬಗೆವಂ ೫೭

ವ || ಎಂಬ ಕಜ್ಜಮನಾಳೋಚಿಸಿ ವಿಷಯಸಾಮಗ್ರಿಯಂ ಮಾಡಿ ತಮ್ಮ ಪೋಗು ಮನುಗ್ರಸೇನಂಗಱಿಪಿದೊಡಾನೇಕಿಲ್ಲಿಪ್ಪೆನೊಡವರ್ಪೆನೆಂದೊಡೆಮ್ಮಟ್ಟಿದ ಬೞಿಗೆ ಬರ್ಪುದೆಂದಿರಿಸಿ ನಾಗಶಯೈಯುಂ ಶಾರ್ಙ್ಗಾಯುಧಮುಮಯ್ವಾಯಶಂಖಮುಮಂ ಕೊಂಡು ಪಯಣಂಬೋಗಿ ಯಥಾಕ್ರಮದಿಂ ಸೂರ್ಯಪುರಮನೆಯ್ದಿದಾಗಳ್ ವಸುದೇವಾಗ್ರಜರಿದಿರ್ವಂದು ಕಂಡೊಡವರೆ ಪೊೞಲೆಲ್ಲಮತಿಶಯಾಷ್ಟಶೋಭಾವಿಧಾನದಿನಿದಿರ್ಗೊಂಡು

ಮ || ಪಿರಿಯಣ್ಣಂಗಳು ಮೊಪ್ಪಿತೋರ್ಪ ಪಲರುಂ ತಾಯ್ವರ್ಕಳು[೦] ತಂದೆಯುಂ
ಪಿರಿದುಂ ಕೂರ್ಮೆಯೊಳೊಂದಿ ಬಂದ ಧರಣೀನಾಥರ್ಕಳುಂ ಭೃತ್ಯರುಂ
ಬೆರಸಿಂದ್ರಂ ಕಡುರಾಗದಿಂದ್ರಪುರಮಂ ಪೊಕ್ಕಂದದೊಂದಂದದಿಂ
ಹರಿ ಸೌಂದರ್ಯಸಮೇತ ಸೂರ್ಯಪುರಮಂ ಪೊಕ್ಕಂ ಮಹೋತ್ಸಾಹದಿಂ ೫೮

ವ || ಪೊಕ್ಕು ಸೇಸೆಯುಂ ಪರಕೆಯುಮನಾಂತಂತೆ ಬಂದರಮನೆಯಂ ವಾಹನಂಗಳಿಂದಿೞಿದು ವಸುದೇವಂ ಮುನ್ನಂ ಸಮುದ್ರವಿಜಯರ್ಗೆ ಪೊಡೆವಟ್ಟಂತೆ ಮತ್ತಿನಣ್ಣಂಗಳ್ಗಂ ಪೊಡೆವಟ್ಟು ತನ್ನ ಪೆಂಡಿರುಂ ಮಕ್ಕಳುಮಂ ಪೊಡೆವಡಿಸಿ ಬಂದೆಲ್ಲರುಂ ಸಮುದ್ರವಿಜಯಮಹಾರಾಜನ ಮುಂದೆ ಕುಳ್ಳಿರ್ದೋಲಗಿಸುತಿರ್ದ ಹರಿಯನರಸನ ಮುಂದಿರಿಸಿ ನಿಮ್ಮ ಕಿಱಿಯ ಮಗಂ ಸಾಮಾನ್ಯನೆಂದಿಂತೆಂದಂ

ಕಂ || ಆಕ್ರಮಿಸಲಾಱರಹಿತರ್

ವಕ್ರಂ ಬರ್ಪನ್ನರಿಲ್ಲ ಭೂಪತಿಗಳ್ ಭೂ
ಚಕ್ರದೊಳಗೆಂತುಮಿವನ ಪ
ರಾಕ್ರಮಮರಿದಾರ್ಗೆ ಪೇೞಲಿನ್ನುಂ ಮುನ್ನಂ ೫೯

ವ || ಅದನಾಂ ಬಿನ್ನವಿಸವೇಡ ನೀಮೆ ಕಂಡುಂ ಕೇಳ್ದುಮಱಿಯ ದಿರ್ದಪಿರಲ್ಲಿರೆಂದು ಮಧುರಾಪ್ರವೇಶಮಾದಿಯಾಗಿ ಕಂಸವಿಧ್ವಂಸನಾಂತಂಬರಮಾದುದೆಲ್ಲಮಂ ಪೇೞ್ಗುಂ ಬೞಿಯಂ ಸ್ನಾನ ವಸನಾನುಲೇಪನಾನ್ನಪಾನಾದಿಗಳಿಂ ತಣಿದು

ಮ || ಹರಿವಂಶೋನ್ನತ ಪದ್ಮ ಷಂಡಹಿತಕೃದ್ವಿದ್ವಿಷ್ಟಸೇನೋ[ದ್ಧತೋ]
ತ್ಕ[ರ] ಭಸ್ಮೀಕೃತ ಶಕ್ತಿಯುಕ್ತಹತ ಭೋ [ಗಾಂತೋ] ಪಭೋಗೋ [ತ್ತರೋ]
ತ್ತರ ಸೌಂದರ್ಯಮಹಾವಿಳಾಸಿ ಬಳಭೃತ್ಸಂಕ್ರಾಂತ ವಿಕ್ರಾಂತಕೇ
ಸರಿ ಕೃಷ್ಣಂ ಸುಖದಿಂದಮಿರ್ದನಭಿ[ನೂ]ತ್ನೈಶ್ವರ್ಯದಿಂ ಧೈರ್ಯದಿಂ ೬೦

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಕಂಸವಿಧ್ವಂಸನಂ

ಷಷ್ಠಾಶ್ವಾಸಂ