ಚಂ || ಶ್ರುತಿ ಪವಣಾಗೆ ನುಣ್ಪುವಡೆದಿಂಪೊದವುತ್ತಿರೆ ತೀವಿ ನಿಂದಳಂ
ಕೃತಕರಮೊಪ್ಪೆ ಕೋಮಳಿಕೆ[ತಳ್ತೆಸೆ] ದೊಂದಿರೆ ನಾಡೆಯುಂ ಪ್ರಸ
ನ್ನತೆ ಕರರಾಗಮಾಗೆ ಸಭೆ ಬೆಕ್ಕಸಮಾಗೆ ಮನೋಜಜಾಣ ಸಂ
ಹತಿಯವೊಲಾಗೆ ಕನ್ನೆಯನುರುಳ್ತರೆ ಕೊಂಡುದು ಗೀತನಿಸ್ವನಂ ೩೨

ವ || ಆತನುಂ ಪ್ರಾಶ್ನಿಕರಾಗಿರ್ದ ವಿಶ್ವಾವಸು ತುಂಬುರ ನಾರದರ್ಕಳನ್ನರಪ್ಪ ಗಂಧರ್ವ ನಿಪುಣಾಚಾರ್ಯರೆಲ್ಲಮೊಂದೆ ಸರದೊಳ್ ಪೊಗಳೆ ಕನ್ನೆ ತನ್ನ ಪರಿಚಾರಕಿಯ ಕೈಯೊಳಿರ್ದ ಕುಸುಮಮಾಲೆಯಂ ಕೊಂಡು ವಸುದೇವನ ಕೊರಳೊಳಿಕ್ಕಿದಾಗಳೊಸಗೆವಱೆ ಪೊಯ್ದವಲ್ಲಿಂ ಬೞಿಯಂ ಜಯಸೇನೆ ರಂಗಮಂಬೊಕ್ಕು ಚಲ್ಲಣಮಂ ತುಡುವುದುಮೀಕೆಯಂ ಗೆಲ್ವರೊಳರಪ್ಪೊಡೆ ಬನ್ನಿಮೆಂಬುದುಮದುವನಾಂ ನೋೞ್ಪೆನೆಂದ ಕುಮಾರಂಗೆ ಮೇಳಸಮನಿಂಬುಮಾಡಿ ನಟ್ಟವಿರ್ದರುವಂಗರುಂ ನಾಣರುಂ ಶ್ರುತ್ಯಾವಧಾರಣೋ ಪೇತರಾಗಿರ್ದರುವ……….ಕ್ರಮಾಪೇಕ್ಷೆಯೊಳೊಂದು ದೆಸೆಯುಂ ಪಿಡಿದಿರ್ದಂ ಮತ್ತಮನೇಕಾ ತೋದ್ಯವಾದ್ಯಕಾಱರುಮೋಸರಿಸಿರ್ದು ಸಮಹಸ್ತಮಂ ಪಿಡಿದು ಪಾತ್ರಮಂ ಬರವೇಳೆ ಜವನಿಕೆಯಂತೆ [ಗೆಯಲ್]

ಕಂ || ಸದಭಿನು[ತನಾಟ್ಯ]ವಿದ್ಯಾ
ಮದಸ್ತರಪ್ಪವರನಿಂತಡಂಗೊತ್ತುವೆನೆಂ
ಬುದನೊಸೆದಭಿನಯಿಪಂತೊ
ತ್ತಿದ ಬಾರಸಮೊ [ಪ್ಪೆ]ರಂಗಮಂ ಪುಗುತಂದಳ್ ೩೩

ವ || ಅಂತು ಜಯಸೇನೆ ರಂಗಂಬೊಕ್ಕು ಪುಷ್ಪಾಂಜಲಿಗೆಯ್ದು ಅಷ್ಟಾಧಿಕವಿಂ[ಶ]ತ್ಯುತ್ತರ ಶತಸಂಖ್ಯಾತ ಹಸ್ತಕ್ರಿಯಾನುಗತಮಾಗಂಗುಲಿ ವಿಳಾಸಾಭಿನಯ ಪೂರ್ವಕಂ ತ್ರಿಪತಾಕೋರ್ದ್ವಮುಖಾ[ದ್ಯರ್ಧ] ಯಮಕಾದಿ ನೃತ್ಯದೊಳಾವುದನಾಡಿ ತೋರ್ಪೆನೆನೆ ನಿನ್ನ ಮೆಚ್ಚುವುದನಾಡೆಂಬುದುವಾಗಳುತ್ಕ್ಷೇಪಣಾಕುಂಚನ ಪ್ರಸಾರಣ ಮನೋಭ್ರಮಣ ಜಾವನ ಸ್ಯಂದನ ನಮನೋನ್ನಮನ ಸ್ಥಿತಾಚಳಿತ ಪ್ರಚಳಿತ ಕ್ರಾಂತಪಕ್ರಾಂತ ಕ್ಷಿ[ಪ್ತ]ಕ ಕ್ರಿಯಾವಿಶೇಷಮಾಗೆ ಪತಾಕಾ ತ್ರಿಪತಾಕಾ ಕ[ರ್ತ ರೀ]ಮುಖ ಅರ್ಧಚಂದ್ರಕಳಾ ಶುಕತುಂಡಾದಿ ಸಮಾಸದಭಿನಯ ಪ್ರಯೋಗ ಸುಭಗಮಾಗೆ ನಾಟ್ಯಾಂಗಮೆಲ್ಲಮಂ ತೋಱಿದಾಗಳ್ ಸಭಾಸದರಂಗುಲಿಸ್ಫೋಟನಪೂರ್ವಕಮದ್ಭುತ ಕುತೂಹಳಮನೋಹರರಾಗಿರ್ದಿದೇಂ ಚೋದ್ಯಮೆನುತ್ತಂ

ಚಂ || ಈಗಳ್ ಮಾನಸರಾರೊ ನರ್ತನಕಳಾಸಮ್ಯಕ್ಸಮಾಧಾನಸಂ
ಯೋಗಭ್ರಾಜಿತರಿನ್ನರೆಂದು ಪಲರುಂ ನಾ‌ಟ್ಯಾಂಗಮಂ ಬಲ್ಲರಿ
ರ್ದಾ [ಗಲ್ ನ]ರ್ತಿಸೆ ಕನ್ನೆ ಸೋಲ್ತು ನಯದಿಂ[ತಾನಂದು] ನಿಶ್ಚೈಸಿ ]ಸ
ದ್ಭೋಗಕ್ಕೀತನೆ ತಕ್ಕನೆಂದು ಕೊರಳೊಳ್ ತಂದಿಕ್ಕಿದಳ್ ಮಾಲೆಯಂ ೩೪

ವ || ಅಂತಿರ್ವರುಮನೊಂದೆ ರಂಗದೊಳ್ ಗೆಲ್ದ ವಸುದೇವನಂ ಜಿತಶತ್ರು ಮಹಾರಾಜಂ ತನ್ನರಮನೆಗೊಡಗೊಂಡುಪೋಗಿ ಶುಭಲಗ್ನದೊಳ್ ಮಹಾವಿಭೂತಿಯಿನಿರ್ವರ್ ಕನ್ನೆಯರುಮನೆರಡುಂ ಕೆಲದೊಳಮೊಂದೆ ಪಸೆಯೊಳಿರಿಸಿ ಪ್ರಾಣಿಗ್ರಹಣಂಗೆಯ್ದು ತನ್ನರ್ಧರಾಜ್ಯಮಂ ಬಳುವಳಿಗೊಟ್ಟು ಪರಸಿ ಸೇಸೆಯನಿಕ್ಕಿದೊಡಂತವರೊಳ್ ಕೂಡಿ ಪಲದಿಸಮಿರ್ದನಂತಿರ್ಪಿನಂ ವಿಜಯಿಗೆ ಗಭೋತ್ಪತ್ತಿಯಾಗಿ ಮಗನಂ ಪೆತ್ತಾಗಳಾತಂಗೆ ಕ್ರೂರನೆಂಬ ಪೆಸರನಿಟ್ಟನೂನೋತ್ಸಾಹದಿನಿರೆ ವಿಜಯಿಯೊಂದು ದೆವಸಮೇಕಾಂತದೊಳಿಂತೆಂದಳ್

ಕ || ಇನ್ನಪ್ಪುದು ಪತಿ ಪೇೞಲ್
ನಿನ್ನಂದಂ ವಿಪ್ರನಂದಮಲ್ತಣಮವನೀ
ಶೋನ್ನತವಂಶಜನಂದಮಿ
ದಂ ನೆಟ್ಟನೆ ತಿಳಿಯೆ ಪೇೞಿಮೆನಗೆನೆ ಪೇೞ್ಗುಂ ೩೫

ವ || ಆಂ ಕಿಱಿಯಂದಿಂತೊಟ್ಟು ರಾಜಪುತ್ರರ ಸಂಗತ್ಯದೆ ಬೆಳದೆನಪ್ಪುದಱಿಂ ರಾಜಕುಮಾರಾ ಕಾರನಾಗಿರ್ಪೆಮೆಂದಳೀಕವ್ಯಾಜದಿಂ ನಂಬಿಸಿ ಸುಖಸಂಕಥಾವಿನೋದದೊಳ್ ಪಲವುಕಾಲಮಿರೆಯಿರೆ

ಕಂ || ಇಂತು ವಸುದೇವನನುಪಮ
ಕಾಂತೆಯರೊಡನಿರ್ದು ಕೆಲವು ದಿವಸದಿನಾನೇ
ಕಿಂತೀ ಪೆಂಡಿರ ವಶ[ನಾ
ಗಿಂತಿರ್ಪೆನೊ] ಹೀನಪುರುಷರಿರವಿನ ತೆಱದಿಂ ೩೬

ಮ || ಪುರುಷಂಗೊಪ್ನಿರೆ ತನ್ನ ಬಾಹುಬಲದಿಂದಾದೊಂದು ಕಾಲ್ಬೀಸಮುಂ
ದೊರೆ ಚಿಃ ಪುರ್ವಿನ ಸನ್ನೆಯಿಂ ಜವಯವಂಗೆಯ್ದೊಳ್ಪುಗೆಟ್ಟಿತ್ತು ಸಾ
ಗರ ಪರ್ಯಂತ ಮಹಾಧರಿತ್ರಿ ದೊರೆಯೇ ವಿಕ್ರಾಂತಮಂ ಕುಂದಿಸಿ
ಟ್ಟಿರವಿಂದೇನೆಸೆಗುಂ ಪರೋಪಹಿತಮಪ್ಪೌದಾರ್ಯಮುಂ ಶೌರ್ಯಮುಂ ೩೭

ವ || ಎಂದು ಬಗೆದೆನಗುಳ್ಳ ಪುಣ್ಯದಳವುಮಂ ದೋರ್ವಲದಗುರ್ವುಮನೇಕಾಕಿಯಾಗಿ ತೊೞಲ್ದೊಡಲ್ಲದಲೀಯಲ್ ಬಾರದೆಂದು ಪೋಗಲ್ ಬಗೆದಿರ್ವರ್ ಪೆಂಡಿರುಮನಱಿ ಯಲೀಯದೆ ನಿಮಗಮೋಘಂ ಬೞಿಯನಟ್ಟುವೆನೆಂದು ತನ್ನ ಸೆಜ್ಜೆಮನೆಯ ನಾಗವೇದಿಕೆಯೊಳ್ ಕಾಣಲಪ್ಪೆಡೆ ಯೊಳ್ ಬರದು ಪೋಗಲಿಂ ಪೊಱಮಟ್ಟೊರ್ವನೆ ಪಯಣಂಬೋಗಿ ನಾಡೆಯಂತರಮಂ ಪೋಪುದುಂ ಬೆಳಗಪ್ಪಾಗಳ್

ಉ || ಪೂಗಳೊಳೊಲ್ದು ಕೆಂದಳಿರ್ಗಳೆಚ್ಚಱೆ ಪಂಕರುಹೋತ್ಕರಂ ಕರಂ
ರಾಗದಿನಾಗಳುಳ್ಳಲರೆ ಮನ್ಮಥತಾಪದ ಜಕ್ಕವಕ್ಕಿ ಸಂ
ಯೋಗವಿಮೋಹದಿಂದೊಸೆದು ಬೀಗೆ ದಿಗಂತರದೊಳ್ ತಮೋಮಯಂ
[ಪೋಗಿ]ಪಳಚ್ಚನಾಗೆ ರವಿ ಬಂದುದಯಾದ್ರಿಯೊಳೊಪ್ಪಿ ತೋಱಿದಂ ೩೮

ವ || ಅಂತು ನೇಸಱ್ ಮೂಡಿದಾಗಳೊಮದು ಮಹಾರಣ್ಯಮನೆಯ್ದಿ ನೋೞ್ಪನಲ್ಲಿ ಮಹೇಶ್ವರಾಲಯದಂತೆ ಗೊರವು ಮನೆಗಳಂತೆ ಕೇರು ಬಿತ್ತುವ ಕೆಯ್ಗಳಂತಾರು ಅಳಿ ಮಾನಸನ ಬಗೆಯಂತೆ ಬಿಲ್ಲು ತಣಿಯುಂಡನಂತೆ ತೇಗು ಬಟ್ಟಡುವೆಡೆಯಂತೆ ಬಿಳಿಲು ಹೊಱಸಿನಂತೆಕ್ಕೆ ಕಮ್ಮಿತರಂತೆ ಬೇಳಂ ಭೂಮಿ ಪರ್ವದಂತೆ ಸೀಗೆ ಪುಟ್ಟಿಯನಳವನಂತೆ ಮೊಳಗೆ ಕುರುಕಲ್ಕಿಕ್ಕುವ ಪಯಣದಂತರ್ವೀಡು ನೃತ್ಯದಂತೆ ತಾಳ ಚಿಂತಿಸದೆ ಪೇೞ್ದ ಕಬ್ಬದಂತಾಸು ಪ್ರಿಯದೊಳ್ ಕರೆವಂತೆ ಬನ್ನಿ ಒಕ್ಕಲುದುಡಿಗೆಯಂತೆ ತಾಳಿ ಕೂರಿಗೆಯೊಳ್ ಬಿತ್ತಿದನಂತೆ ಸಾಲು ಮೀಂಗುಲಿಗನಂತೆ ಜಾಲ ಸಾಲಿಗನಂತೆ ಬೇವು ಮತ್ತ ಮೆನಿತಾನುಂ ತೆಱದ ಮರದುಱುಗಲ್ಗಳೊಳಗೆ ಸುೞಿವ ಕರುಮಾಡದಂತೆ ಮತ್ತವಾರಣಂ ನೇಣಿಚರಿತಪ್ರಧಾನಪುರುಷನಂತೆ ಹರಿ ವೃಕ್ಷಜಾತಿಯಂತೆ ಹರಿ ವೃಕ್ಷಜಾತಿಯಂತೆ ಕಡವು ಸೂಳೆಯ ಮುಡಿಯಂತೆ ಚವುರಿ ಪ್ರಸಾದದಂತೆ ನಿಕರ ರಾಮರಪಡೆಯಂತೆ ಕಪಿ ಕಾರ್ಕೋಳಿಯಂತೆ ಪುಲ್ಲೆ ಕೈಲಾಸದಂತಷ್ಟಾಪದ ಪಲರ್ ನೆರೆದು ಸೆಱೆವಿಡಿದಂತೆ ಪೆರ್ವಂದಿ ನಾರಾಯಣನ ಬಿಲ್ಲಂತೆ ಸಾರಂಗ ಮತ್ತಮಂತೆ ಪಲವು ತೆಱದ ಸಮೂಹದಂ ದುರ್ಯೋಧನವಾಡಿಯಂತೆ ಕೀಜೆಗ ಜಾವದೋತನಂತೊಱಗಂ ಪಾಱುವೆಂಡತಿಯಂತೆ ಪೊಱಸು ಬಡಗಿಯಂತೆ ಮರಕುಟಿಗಂ ಬುದ್ಧಿಗೆಟ್ಟಳಂತೆ ಮರಳಿ ಸುಳ್ಳಿವಂದನೆ ರವಿಯಂತೆ ಬಱುಳಿ ಸುಗ್ರೀವನ ಪೊೞಲಂತೆ ಕಿಷ್ಕಿಂದ ನಾಲಗೆಗೆಟ್ಟಾಕೆಯಂತೆ ಮೂಗಿ ನೆರನುಳ್ಳಂ ಪ್ರಿಯಂಗೆಯ್ವಂತೆ ಪಂಗಾಗೆ ಮುಳಿದು ನೋೞ್ಪನಂತೆ ಕೆಂಗಣ್ಣ ಜಲಗಾಱನಂತೆ ಮೀಂಗುಲಿ ಬೈಕಂಗೊಂಡೋಲಗಿಸುವನಂತೆ ಕಪ್ಪಡಿ ದ್ರುಪದಪುತ್ರನಂತೆ ಶಿಖಂಡಿ ಕೂಸುಗಳ ಕೈಯ ಪಾಸೆಯಂತೆ ಕೊಟ್ಟುಕನೆಂದಿಂತುಮನೇಕ ಪಕ್ಷಿಜಾತಿಗಳಿಂ ತೆಕ್ಕನೆ ತೀವಿದ ಪೞುವಂ ಪೊಲ್ಲಮಾಸನರ್ಗೊಡ್ಡಿದದಿವ್ಯದಂತೆ ಕೞಿದು ಪೋಗಲರಿದಪ್ಪುದಱಿಂ ವಿಶ್ರಮಿಪ ಬಗೆಯಿಂ ಬಪ್ಪೊಂ

ಮಂದಾನಿಲ ರಗಳೆ ||

ಕೊಳರ್ವಕ್ಕಿಯ ಸೊಗಯಿಪ ಮೆಲ್ಲುಲಿಯಿಂ
ಪೊಳೆದಾಡುವ ತೋಯಚರಾವಳಿಯಿಂ
ಬಿಸರುಹದ ಪಸುರ್ತೊಲಗದ ನನೆಯಿಂ
ಪಸು[ರಿನಿಸಿನಿ] ಸಾಡಿದ ಬಲ್ನನೆಯಿಂ
ಬಿ[ರಿದಿ]ರ್ದೆನೆ ತಾನುಂ ಬಲ್ಮುಗಳಿಂ
ಬಿರಿಯಲ್ಕೊಡನೊಡರಿಪ ಬಿರಿಮುಗುಳಿಂ
ದೆಸೆದೊಯ್ಯನೆ ತೆಱೆದೆಸೆವುಳ್ಳಲರಿಂ
ಪೊಸಗಂಪಿಂ ಪಸರಿಸುವಲರ್ದಲರಿಂ
[ದೊ]ಸೆದೂದವಿದ ಕಂಪಿನ ಮೃದುರಜದಿಂ
ನಲಿದಲ್ಲಿಯೆ ಮುಸುರಿಪ್ಪಳಿವ್ರಜದಿಂ
ದೆಸೆದೆಲೆಗಳ ಪಸುರೆಸೆದಿರ್ದೆಲೆಯಿಂ
ಕಳಹಂಸೆಗಳೊಪ್ಪುವ ಮೆಲ್ನಡೆಯಿಂ
ಬಳಸಿರ್ದ ತಮಾಳದ ತಣ್ನೆೞಲಿಂ
ದಳವಲ್ಲದೆ ಕೋಡುವ ನು[ಣ್ಣು]ೞಿಲಿಂ
ಗಭಿಮತನಿಂತು ಮನೋಹರಂ ವನಮಂ
ಪ್ರಭುಕಂಡನಪೂರ್ವ ಸರೋವರಮಂ ೩೯

ಕಂ || ಕಂಡಾ ಕೊಳದೊಳ್ಪು ಮನಂ
ಗೊಂಡಿರೆ ಪೊಕ್ಕಲ್ಲಿ ಪಾದಶುದ್ಧಿಯನಾಗಳ್
ದಂಡಿತದಿನೋದಿ ವಿಳಸನ
ಖಂಡಿತ ಗುಣನುತ್ತರಾಭಿಮುಖದೊಳ್ ನಿಂದಂ ೪೦

ವ || ಅಂತು ಜಿನೇಶ್ವರನಂ ಚತುರ್ಭಕ್ತಿ ಪೂರ್ವಕಂ ಸ್ತುತಿಯಿಸಿಯಾ ವನದೊಳೊಂದಶೋಕ ವೃಕ್ಷದ ತಣ್ನೆೞಲೊಳ್ ಕುಳ್ಳಿರ್ದು ಪಥಪರಿಶ್ರಮಮಾಱಿದಿಂ ಬೞಿಯಂ ಮತ್ತಮಂತೆಎ ಪಯಣಂಬೋಪನೊಂದೆಡೆಯೊಳ್

ತರಳ || ಕರಿಯ ಮೆ[ಯ್ ಸೆರೆಯೆರ್ದ]ಕೈ ಮುರಿದಿರ್ದ ಬಾಯ್ ಕವಿಲಪ್ಪ ಕ
ಣ್ಬೆರ[ಳುಗಳ್] ಮುಱಿದಿರ್ದ ಕಾಲ್ ನಳಿ ಮೂಗು ಪುಟ್ಟದ [ಪು]ರ್ಬುಕೇ
ಸುರಿಯ ಮೂಳೆಯ ಕೇಶಮೆಂಬಿವು ತಮ್ಮೊಳೊಂದಿರೆ ನಾರಕರ್
ನರಕದಿಂ ಪೊಱಮಟ್ಟು ಬರ್ಪವೊಲಾಗೆ ಬರ್ಪ ಕಿರಾತರಂ ೪೧

ವ || ಅವರ ಪೆಱಗೆ ತಳಿರ್ಗಳನುಟ್ಟು ನನೆಯೊಳಂ ಮುಗುಳೊಳಂ ಗುರುಗುಂಜೆ ಯೊಳಮೊಡಂಬಡೆ ಮಾಡಿದಾಭರಣಂಗಳಂ ತೊಟ್ಟು ನೆಯ್ದಿಲಪೂವನತಂಸಮಿಟ್ಟು ಬೆಡಂಗೊಡಂಬಡೆ ಪೋಪ ಪುಳಿಂದಿಯರಂ ಕಂಡು

ಮ || ಮಿಳಿದೊಪ್ಪಿರ್ದ ಕರುಳ್ ಪೊದೞ್ದ ಬೆಳರ್ವಾಯ್ಗೆಂದೆಯ್ದೆ ಪರ್ವಿರ್ದ ಕಣಂ
ನಳಿತೋಳ್ ಪೆರ್ಮೊಲೆ ದೊಡ್ಡಿತಪ್ಪ ಜಘನಂ ನುಣ್ಪಂ ಕರಂ ನುಣ್ಪಗೊಂ
ಡೊಳಕೆಯ್ದುಳ್ದೊ[ಡೆ]ಮೆಲ್ಲನಪ್ಪಡಿ ಮನಂಗೊಳ್ವೊಂದು ಕೆಯ್ತಂ ಬೆಡಂ
ಗಮರ್ದಿರ್ದೊಪ್ಪಿವರಂ ವಿಧಾತ್ರನಿವರೊಳ್ ಕೂಡಲ್ಕಿದೇಂ ತಕ್ಕುದೇ (?) ೪೨

ವ || ಎನುತಮಂತೆ ಕಿಱಿದಂತರಮಂ ಪೋಪಾಗಳ್ ಬೆಟ್ಟುಗಳೊಳೊಗೆದ ಕೋಡುಂಗಲ್ಲ ತಣ್ಪುಮಂ ಕೆಲದೊಳ್ ಪರಿವ ತೊಱೆಯ ಮಣಲ ದೀಂಟೆಗಳ ನುಣ್ಪುಮಂ ಮೇಲಕ್ಕೊಗೆದ ಪೆರ್ಮರಂಗಳ ನೆೞಲ ತಣ್ಪುಮಂ ತಂದಿದೇನತಿಶಯಮೋ ಹಸ್ತಿಸಂಭವನ ಪ್ರದೇಶದಂತೆಂದದು ಬಗೆಯುತ್ತಂ ಬರ್ಪೊಂ ಕೆಲದೊಳೊಂದು ಗಜಯೂಥಮಂ ಕಂಡು ನೋಡುತ್ತಮಲ್ಲಿಯೊಂದಾ ನೆಯಿರ್ದವಸ್ಥಾಂತರಮನನಱಿದು ತನ್ನೊಳಿಂತೆಂದಂ

ಕಂ || ಪದವಿಡಿಯನಱಸಿ ಪಾಱ
ಯ್ಸಿದಪುದು ಪರಿ ಪೆಱವನೊಲ್ಲದದು ತಾಂ ಮೃಗಮೇ
ಪದನಱಿಯದಂತೆ ಮೃಗಂ ಪ
[ರಿದು]ದುರ್ಗಂಬೊಕ್ಕಡದುವೆ ಪೞುವಿದು ಪೞುವೇ ೪೩

ವ || ಎಂದು ತನಗೆ ತಾನೆ ನಿಸ್ಸಹಾಯನಪ್ಪುದಱಿಂ ತನ್ನೊಳ್ ನುಡಿಯುತ್ತಂ ಬರ್ಪಾಗಳ್ ಮತ್ತೊಂದೆಡೆಯೊಳೊಂದು ಭದ್ರಗಜಂ ನಾಡೆ ಗೆಂಟರೊಳಿರ್ದುದದಱುಗ್ರ ಭಾವಮನಱಿದಿಂತೆಂದಂ

ಕಂ || ಬಂಧ ಕಳಂಕೋದಯ ವಿಷ
ಯಾಂಧಂ ಕೆಟ್ಟೊರ್ವನಿರ್ದವೊಲ್ ಜಾತಿಸಂ
ಬಂಧವಿದೂರಂ ವಿಚಕಿಳ
ಬಂಧ ಮಹಗಂಧ ಸಿಂಧುರಂ ತಾನಕ್ಕುಂ ೪೪

ವ || ಎಂದು ಮತ್ತಮಲ್ಲಿಂ ತಳರ್ದು ಪೋಪನೊಂದಾನೆ ನಡೆಯಲಱಿಯದೆ ನಿಂದುದಂ ಕಂಡು ಭಯರಸದನಿರ್ದುದೆಂದು

ಮ || ಕರಿದಪ್ಪೊಂದು ಮಹಾಭ್ರಮಂ ದಿಗಿಭಮೆಂಬಾಶಂಕೆಯಿಂ ತಾನೆ ನಿ
ರ್ಭರನಾಗಿರ್ಪುದು ತನ್ನ ಮೆಯ್ಯಱಿಯದಂತಪ್ಪೊಂದು ಸೊಕ್ಕಿಂ ತಗು
ಳ್ದಿರೆ ತಾಂ ನೆಗ್ಗಿಲ ಮುಳ್ಗೆ ಬೆಚ್ಚಿದಪುದೆಂತೆಂತಪ್ಪ ಬಲ್ಲಾಳ್ಗಳ
ಪ್ಪರುಮತ್ಯಂತ ಮದಾಂಧರಾದವರ್ಗಳಂತೇನೂನರಿಂ ನೋಯರೇ ೪೫

ವ || ಅದಱಿಂ ಪಿರಿದಪ್ಪ ಮೆಯ್ಯಂ ಪಡೆದಲ್ಲಿ ಪ್ರಯೋಜನಮಿಲ್ಲ [ಮೆಂ]ದಱಿದು ನಡೆವನಲ್ಲಿತ್ತೇಕಜ್ಜಮೆಂದಲ್ಲಿಂದಂ ಪೋಪನೊಂದೆಡೆಯೊಳ್

ಮ || ಪಿಡಿ ನೀ[ರ್ಗಾಟಸಲೊಂ]ದಿಭೇಂದ್ರಮೊಡಗೊಂಡೆತ್ತಂ ತೊೞಲ್ತಂದು ನೀ
ರ್ನಡುವಾಗಿರ್ದುದಱಿಂ ಪರೀಕ್ಷಿಸಿ ಗಜಂ ಮುಂಪೊಕ್ಕು ಹಸ್ತಾಗ್ರದಿಂ
ಪಿಡಿಗಾ ನೀರನೆ ನಿಳ್ಕಿ ನೀಡುತುಮಡುರ್ತಂತಂತೆ ಪೊಕ್ಕಿರ್ದಿಭಂ
ಮಡಿದತ್ತಕ್ಕಟ ತಮ್ಮ ಕೂರ್ತರೆಡರಂ ಕಂಡಾರು [ಮ]ಳ್ಕಿಪ್ಪರೇ ೪೬

ಅಕ್ಕರ ||

ಪಿಡಿಯ ನೀರೞ್ಕೆಯೆನಿತಕ್ಕೆ ಮೃಗಜಾತಿಯಾಗಿರ್ದೀಯಾನೆಯುಮೆಲ್ಲಂ
ತನ್ನಂ ಬಗೆಯದೆ ಸತ್ತುದೆಂದಡೆ ಕೂರ್ತರೆಡರುವಂ ಪೆಂಡಿ
ರೆಡರುವಂ ತನ್ನಾಳ್ತು ಪೊಱೆದಾಳ್ದನೆಡರುವಂ ಪಸುಗೆಯಮನರಿದು
ಕಡೆಗಣಿಸುವರೆನುತಂ ಪೋಪನಾಯೆಡೆಯೊಳು ಮತ್ತೊಂದಾನೆಯಂ ಕಂಡೂ(?) ೪೭

ಹರಿಣೆ ||

ವಿಪುಳವದನಂ ಸ್ಥೂಳಂ ದಂತಂ ಪೃಥೂದರಪೇಚಕಂ
ಕಪಿಳನಯನಂ ಲಂಬಂ ಮಾಂಸಂ ಬೃಹತ್ಪದಸಂಯುತಂ
ಚಪಳುರಹಿತಂ ಸ್ವಾಂತಂ ಮೆಲ್ಲಿತ್ತು ಮೆಲ್ಲಿ [ತದಪ್ಪು]ದಾ
[ದ್ವಿಪಮಿದುರಿ]ದೇಂ ದೇವಪ್ರಖ್ಯಾತ ಜಾತಿಸಮುದ್ಭವಂ ೪೮

ವ || ಎಂತಂತೆ ನೋೞ್ಪನಾಯೆಡೆಯೊಳ್ ಬೇಗಂ ನಡೆವಾನೆಯಂ ಕಂಡು

ಹರಿಣಿ ||

ಪದಸಮಿತಿಯುಂ ಹಸ್ತಂಗ್ರೀವಂಗಳುಂ ಕೃಶವೊಪ್ಪೆ ದೊ
ಡ್ಡಿದವು ನಯನಂ ಹ್ರಸ್ವಂ ತಾಳ್ವೋಷ್ಠಮುಂ ಹನುಸಂಕುಲಂ
ವದನದೆ[ಡೆ ಕೇಶಾಲ್ಪಂ] ಸಂಕ್ಷಿಪ್ತಮಾಗುವ ಗುಜ್ಜುಮಂ
ನಿಧುವನ ಸಮುದ್ಭೂತಂ ನೂತಂ ಮೃಗಾನ್ವಯಸಿಂಧುರಂ ೪೯

ವ || ಎಂದುಮಲ್ಲಿಯೆ ಮತ್ತಂ ಪೆಱತೊಂದಾನೆಯಂ ಕಂಡದಱಂದಮನುಪಲಕ್ಷಿಸಿ

ಹರಿಣಿ ||

ಉದರದಳವುಂ ಬೆನ್ನುಂ ಮಂದಾನ್ವಯಾಕೃತಿಸನ್ನಿಭಂ
[ಪದ] ಸಮುದಯಂ ಭಾವಿಪ್ಪಾಗಳ್ ಮೃಣಕ್ತಿ ಸುಲಕ್ಷಣಂ
ವದನದ ತೆಱಂ ಭದ್ರಂ ಸಂಕೀರ್ಣಜಾತಿಯಿದೆಂದು [ಮ
ತ್ತದನೆ ನ]ಯದಿಂ ನೀಡುಂ ನೋಡುತ್ತಮಿರ್ದನಿಳಾಧಿಪಂ ೫೦

ವ || ಮತ್ತಮಲ್ಲಿ ಪಲವುಮಾನೆಗಳ ನಡುವೆ ಹರಿನೀಲಾಚ್ಛಾಯ ಮಹಾಕಾಯ ಮಹಾಸತ್ವೋತ್ತಮ ಗಜೇಂದ್ರಮಂ ಕಂಡು ಸಾರೆವಂದು ನೋಡಿ

ಹರಿಣಿ ||

ಅನತಿಕೃಶಲಂ ಸ್ಥೂಲಂ ಸಮ್ಯಗ್ವಿಭಕ್ತ ನಿಯುಕ್ತ ಸಂ
ಹನನಮತನುಗ್ರೀವಂ ವೃ[ತ್ತಂ]ಪರಾಂಘ್ರಿವಿರಾಜಿತಂ
ವನರುಪಚಿತಂ ವಂಶಂ ಮಧ್ವಾಭವಂತವಿಳೋಚನಂ
ವಿನುತಮುಖಸಂಸ್ಕಾರಂ ತಾಂ ಭದ್ರಜಾತಿಯಿದೆಂಬುದಂ ೫೧

ವ || ಅದಱಿನೀ ಭದ್ರಗಜಮನೇಱಿ ಬಲ್ಕಣಿಯಪ್ಪುದಂ ತೋಱಿದೊಡ್ಡದಲ್ಲದೆನ್ನ ನಾರ್ ಮೆಚ್ಚುವರೆಂದಾ ಗಜೇಂದ್ರಕ್ಕೆ ಸರಂದೋಱುವುದುಮಾ ಧ್ವನಿಗೇಳ್ದು ಕೋಪಾನಳನಿಂ ಕಣ್ಗಾಣದೆಯ್ತಪ್ಪಾನೆಗಾಸೆಗೊಟ್ಟು ಪರಿದು ಪರಿಯೊಳ್ ನಿಲ್ದಡೆ ಕಡುಮುಳಿದೆಯ್ದಿ ಪಿಡಿದು ಮೊಗಮಿಕ್ಕಿದೊಡೆ ಪೊಳೆದು ಪೋಗಿ ಠಕ್ಕನಿಕ್ಕಿದಡೆ ನಿರ್ವರ್ತಿಸಿ ಕಳೆದು ಕಾಲುರ್ದಿಂಗೆ ಪೊರಳ್ದು ಭ್ರಮರಿ ಮೊದಲಾಗೊಡೆಯ ಕರಚಾರಂಗಳೊಳ್ ಪರಿಣತ ನಪ್ಪುದಱಿಂ ನಖದಂತಂಗಳ್ ತನ್ನನೆನಸುಂ ತಾಗಲೀಯದೆ ಕಱಿದು ಪೋಪುದುವಾನೆ ಜವಜವನಾಗಿ ಜವಂಗೆಟ್ಟು ಸೇದೆವಟ್ಟು ಬೇಸತ್ತು ನಿಲೆ ಪತ್ತೆವಂದು ಲಂಘಿಸಿ ನೆಗೆದಗ್ರ ಪಲ್ಲವಮಂ ಪಿಡಿದು ಬೇಗಂ ಬರ್ಪಾಗಳರ್ವರ್ ವಿದ್ಯಾಧರಕುಮಾರರ್ ತೊಟ್ಟನೆಬಂದು ಕಂಡಿಂತೆಂಬರ್

ಕಂ || ಈ ಮುನಿಸಿನೊಳೀ ಕಾಯ್ಪಿನೋ
ಳೀ ಮದದುದ್ರೇಕದೊಳ್ ಜವಂಗೆಣೆಯಾಗಿ
ರ್ದೀ ಮಹನೀಯ ಗಜೇಂದ್ರಮ
ನೀ ಮಾೞ್ಕೆಯೊಳೇಱುವನ್ನನುನ್ನತನೊಳನೇ ೫೨

ವ || ಎಂದು ಪೊಗೞ್ದಿಂತಪ್ಪ ಮಹಾಪುರುಷನೈ ನೀನೆಮಗೆ ಆದೇಶಪುರುಷನಪ್ಪೆಯೈ ಬಿಜಯಂಗೆಯೈಂಬುದುಮಾನೆಯಿಂದಿೞಿದವರ್ಗಳ ಸಮೀಪಕ್ಕೆ ವಂದು ನೀಮಾರ್ಗೇನಿಮಿತ್ತದಿಂದಮಿ ಕಾನನದೊಳಗಿರ್ದಿರೆಂದೊಡವರಿಂತೆಂಬರಾಮುಂ ವಿದ್ಯಾಧರರೆ ವಿಜಯಾರ್ಧಪರ್ವತದ ದಕ್ಷಿಣಶ್ರೇಢಿಯ ನಿಕುಂಜರಾವರ್ತಮೆಂಬ ಪೊೞಲನಾಳ್ವಶನಿವೇಗನ ಮಗಳ್ ಶಾಲ್ಮಲಿದತ್ತೆಯೆಂಬೊಳೀ ಗಜೇಂದ್ರಮನಾವನಾನುಂ ವಶಂ ಮಾಡಿ ಕಾಲ್ಗೋದು ಬರ್ಕುಮಾತಂಗಲ್ಲದೆ ಪೆಂಡತಿಯನಾಗೆನೆಂದಿರ್ಪಳದೇ ಕಾರಣಮೆನೆ ಮುನ್ನ ಮೊರ್ಮೆ ಸುವರ್ಣಪರ್ವತದ ಚೈತ್ಯಾಲಯವಂದನಾ ಭಕ್ತಿನಿಮಿತ್ತವಶನಿವೇಗಂ ಪೋಗಿರೆ ಸಾಗರಸೇನರೆಂಬ ಚಾರಣ ಋಷಿಯರ್ಕಳಂ ಕಂಡು ಬಲಂಗೊಂಡು ಪಂಚಮುಷ್ಟಿಯಿಂಬಂದಿಸಿ ಕುಳ್ಳಿರ್ದು ಧರ್ಮಕಥನಾ ನಂತರಮೆನ್ನ ಮಗಳ್ ಶಾಲ್ಮಲಿದತ್ತೆಗೆ ವರನಾವನಕ್ಕುಮೆನೆ ವಿಂದ್ಯಾಟವೀ ಪ್ರದೇಶಕರಮ್ಯ ಕವನದೊಳ್ ಭೂಚರನೊರ್ವಂ ಮದಾಂಧನಪ್ಪ ಗಂಧಸಿಂಧುರಮನೇಱುಗು ಮಾತಂಗೆ ಭಾರ್ಯೆಯಕ್ಕುಮೆಂದು ಬೆಸಸಿದರಂದಿಂದಿತ್ತಲಾಮೀ ಬನಮಂ ಕಾದಿರ್ದೆವಿಂದು ಫಲ ಪ್ರಾಪ್ತರಾದೆವೆನೆ ಸಂತೋಷಂಬಟ್ಟು ಮನದೊಳ್ ಮೆಚ್ಚಿಪ್ಪುದುಮಿ ವಿಮಾನಮನೇಱಿಮೆನೆ ತಾನುಮದೃಷ್ಟಪೂರ್ವಕಮಂ ಬಯಸುವನಪ್ಪುದಱಿನಂತೆಗೆಯ್ವೆನೆಂದು

ಕಂ || ಮಾನಿತ ಸಮಸ್ತ ಗುಣಗಣ
ನಾನಾಳಂಕಾರ ವಿರಚಿತೋಜ್ವಳ ರಮ್ಯ
ಸ್ಥಾನಮನಭಿನುತ ಪುಣ್ಯನಿ
ಧಾನಮನವಯವದಿನಾ ವಿಮಾನಮನಾಗಳ್ ೫೩

ವ || ತಾನುಮವರುಮೇಱಿ ಪೋಪಾಗಳ್ ವಿಮಾನಮಾಕಾಶಕೆನಿತೆನಿತು ನೆಗೆಗುಮನಿತನಿತೆ ಕರ್ಮನಿರ್ಜರದೊಲ್ ಊರ್ಧ್ವಗತಿ ಸ್ವಭಾವನಪ್ಪಾಸನ್ನಭವ್ಯಂಗೀ ಸಂಸಾರ ಚಕ್ರಂ ಕಿಱಿದಪ್ಪಂತೆ ವಸುದೇವಂಗೆ ನೆಲನುಂ ಕುಲಗಿರಿಗಳುಂ ಮಹಾನದಿಗಳುಂ ಕಿಱಿಯವಾಗಿ ತೋಱಿ ನೋಡುತ್ತಂ ಪೋಗವೋಗೆ

ಮ || ಕುಲಭೂಭೃತ್ಕುಲಮುಂ ಮಹಾನದಿಗಳುಂ ಭೋಗಾಭಿಧಾನಕ್ಷಮಾ
ತಳಮುಂ ಕರ್ಮಮಹೀಪತಿಸ್ಥಿತಿಗಳುಂ ಮಚ್ಛಪ್ರಖಂಡಂಗಳುಂ
ಜಳಧಿದ್ವೀಪಪಯಂಗಳುಂ ಪೆಱವುಮಂ ನೋಡುತ್ತದೇನಾವುದಾ
ದಲೆಯಾ ತೋರ್ಪುದದಾವುದೆಂದು ಬೆಸಗೊಂಡುತ್ಸಾಹಮಂ ತಾಳ್ದಿದಂ ೫೪

ವ || ಅದೆಂತುತ್ಸಾಹಮಂತನಾದೊಡರುಹಚ್ಛಾಸನದೊಳೆ ಪ್ರತ್ಯಕ್ಷಮನುಮಾನ ಮಾಗಮಮೆಂಬ ಮೂಱು ತೆಱದೊಳಾಗಮಸಿದ್ಧಮಪ್ಪ ಸಂಗಾಣಿವಿಭಾಗಂಗಳ್ ಪ್ರತ್ಯಕ್ಷಮಾದೊಡಾ ಪ್ರತ್ಯಕ್ಷ[ಮ] ನುಮಾನಮಾದೊಡನುಮೇಯಮಪ್ಪ ಸ್ವರ್ಗಾಪವರ್ಗ ಗಳೊಳವೆಂದವಂ ಸಾಧಿಸಿದುದೆಂದು ವಸುದೇವನಧಿಗಮಸಮ್ಯಕ್ತವಮುಮಾ ಕಾಣ್ಕೆಯು ಮುತ್ಸಾಹಮಂ ಮಾಡೆ ಸುಖದಿಂ ಪಯಣಂಬೋಗಿ ವಿಜಯಾರ್ಧಪರ್ವತಮನೆಯ್ದಿ

ಮ || ಸುರಲೋಕಕ್ಕನುಸಾರಿಯಂ ಬಹುವಿನೋದೈಶ್ಚರ್ಯ ಸಂದಾರಿಯಂ
ಧರಣೇಂದ್ರಾಸ್ಪದಹಾರಿಯಂ ಬುಧನುತ ಶ್ರೀಮಜ್ಜಿನಾವಾಸಿಯಂ
ಪರಮೋತ್ಸಾಹಸಮೇತಮಂ ಮಣಿಮಯಪ್ರಾಸಾದಸಂಘಾತಮಂ
ಧರಣೇಂದ್ರಸ್ತುತರೂಢಿಯಂ ಪ್ರವಿಲಸದ್ವಿದ್ಯಾಧರ ಶ್ರೇಢಿಯಂ ೫೫

ವ || ಕಂಡರ್ತಿಯೊಳ್ ನೋಡುತ್ತಮಂತೆ ಪೋಗಿ ತತ್ಪುರದ ಬಹಿರುದ್ಯಾನವನದೊಳ್ ತನ್ನನಿರಿಸಿ ಪೋಗಿ ತಮ್ಮರಸನಂ ಕಂಡಾದೇಶಪುರುಷನಂ ತಂದೆಮೆಂದಾಗಳಶನಿ ವೇಗಂ ಮೆಚ್ಚಿಯಾ ವಿದ್ಯಾಧರಚರರ್ಗೆ ಮೆಚ್ಚುಗೊಟ್ಟು ಮಂಗಳಕಾರ್ಯ ವಿಭೂತಿಯಿನಿ ದಿರ್ವಂದೊಡಗೊಂಡು ಬಂದದುವೆ ಸುಮುಹೂರ್ತಮಾಗೆ ವಸುದೇವನುಮಂ ಶಾಲ್ಮಲಿದತ್ತೆಯುಮನೊಂದೆ ಪಸೆಯೊಳಿರಿಸಿ ಮಹೋತ್ಸಾಹದಿಂ ಪಾಣಿಗ್ರಹಣಂಗೆಯ್ದು ಸುಖದಿನಿರೆ ಕೆಲವು ದಿವಸದಿಂ

ಕಂ || ಶಾಲ್ಮಲಿದತ್ತೆಯ ವಿದ್ಯಾ
ಬಲ್ಮೆಯುಮಂ ನಲ್ಮೆಯುಂ ಕರಂ ಪತ್ತಿದ ಕಾ
ದಲ್ಮೆಯುಮೊಲ್ದತಿರಾಗದಿ
[ನೊಲ್ಮೆ]ಮನಂ ಮಾಡೆ ಮೆಚ್ಚಿದಂ ವಸುದೇವಂ ೫೬

ವ || ಅಂತು ಪಲವು ದಿವಸಮಿರ್ಪಿನಮೊಂದು ದಿವಸಂ ಶಾಲ್ಮಲಿದತ್ತೆ ವಸುದೇವಂಗೇಕಾಂತ ದೊಳಿಂತೆಂಗುಮಿರುಳುಂ ಪಗಲುಮೆನ್ನನಗಲದಿರೆನೆ ಅದೇ ಕಾರಣಮದಱಂದಮಂ ಪೇೞೆಂದು ಪಿರಿದುಮಾಗ್ರಹದಿಂ ಬೆಸಗೊಂಡೊಡೆಮ್ಮಜ್ಜನಪ್ಪ ಸಾಗರಚಂದ್ರ ಮಹಾರಾಜನಾತಂಗೆ ಜ್ವಲನವೇಗನುಮಶನಿವೇಗನುಮೆಂಬಿರ್ವರ್ ಮಕ್ಕಳಾದೊಡ್ಡೆಮ್ಮಜ್ಜಂ ತಪಂಬಡುತ್ತಂ ಪ್ರಜ್ಞಪ್ತಿವಿದ್ಯೆಯುಮಂ ರಾಜ್ಯಮುಮಂ ಜ್ವಲನವೇಗಂಗಿತ್ತೊಂಡೆ ಪಲಕಾಲಂ ರಾಜ್ಯಂಗೆಯ್ದು ಬಿೞಿಯಂ ತಪಸ್ಥನಪ್ಪಂದು ತನ್ನ ಮಗನಪ್ಪಂಗಾರವೇಗಂಗೆ ರಾಜ್ಯಮಂ ಕೊಳ್ ಮೇಣ್ ಪ್ರಜ್ಞಪ್ತಿವಿದ್ಯೆಯಂ ಕೊಳ್ಳೆಂಬುದು ಮಾತನಾ ವಿದ್ಯೆಯನೆ ಮೆಚ್ಚಿಕೊಂಡಂ ಎಮ್ಮಯ್ಯನಪ್ಪ ಶನಿವೇಗಂಗೆ ರಾಜ್ಯಮಂ ಕೊಟ್ಟಡೆ ಪಲಕಾಲ ದಿನಂಗಾರ ವೇಗಂ ವಿದ್ಯಾಬಲದಿನೆಮ್ಮಯ್ಯನ ರಾಜ್ಯಮನೆಳದುಕೊಂಡು ಬಲಗರ್ವದಿನಾಳು ತ್ತಿರ್ದಮಿತ್ತಲೊರ್ವ ದಿವ್ಯಜ್ಞಾನಿಗಳನೆಮ್ಮಯ್ಯನಪ್ಪಶನಿವೇಗಂ ಕಂಡು

ಕಂ || ಇಂತುಮೆನಗೆನ್ನ ರಾಜ್ಯಮ
[ದಂತನುನಯ]ದಕ್ಕುಮಾಗದೋ ಮುನಿ ಬೆಸಸಿಂ
[ಎಂತೆಂ] ದೊಡವರ್ ಕೇಳ್ ನಿ
[ನ್ನಂತಾ]ತ್ಮಜೆಗಾಣ್ಮನಾದ ಭೂಚರಸುತನಿಂ ೫೭

ವ || ಅಕ್ಕುಮೆಂಬುದನಾಯಂಗಾರವೇಗನಱಿದು ಎನ್ನ ಮದುವೆಯಾದಿಂಬೞಿಯಂ ನಿನ್ನಂ ಛಿದ್ರಿಸಲೆಂದು ಪಾರ್ದಿದಪ್ಪನಾತಂಗಾನೆನಸುಂ ಬಲ್ಲಿದೆನಪ್ಪುದಱಿಂ ನಿನ್ನಂ ಛಿದ್ರಿಸಲ್ಪಡೆ ಯನೆಂಬುದುವಾದೊಡೇನೆಂದು ಕೈಕೊಳ್ಳದಿರ್ದು ವೈಶಾಖದ ಶುಕ್ಲಪಕ್ಷದ ಚಂದ್ರೋದಯಮತಿ ರಮಣೀಯಮಾದೊಡೆ ಮಾಡದ ಮೇಗೆ ವಿಶ್ರಮಿಸಿದನನಂಗಾರವೇಗಂ ನಿಟ್ಟಿಸಿ ಬಂದು ವಸುದೇವನ ನೆತ್ತಿಕೊಂಡು ವಿನಾಮದೊಳಿಟ್ಟಾಕಾಶದೊಳ್ ನೆಗೆದು ಪೋಪುದುಂ ಶಾಲ್ಮಲಿದತ್ತೆ ನಿದ್ರೆಯಿನೆೞ್ಚತ್ತು ವಸುದೇವನನಲ್ಲಿ ಕಾಣದೆ ಪೆಱದಲ್ಲಿರ್ದಾತನ ಗೊಡ್ಡಮೆಂದು ಬಾಳುಮತ್ತ ಪರಮುಮಂ ಕೊಂಡು ವಾಯುವೇಗದಿನೆಯ್ದಿ ಪೋಗಲ್ ಪೋಗಲೆಂದೊದಱಿದಾಗಳಂಗಾರವೇಗಂ ಪೊಕ್ಕುಕೊಳ್ ನಿನ್ನ ಗಂಡನನೆಂದು ವಸುದೇವನಂ ನೆಲಕ್ಕೆ ನೂಂಕಿ ಪೋದನಾಗಳ್ ವಸುದೇವಂ ಬಿೞ್ವುದನಾಕೆ ಕಂಡತಿ ಜವದಿನೆಱಗಿ ಪಿಡುದತಪ್ಪಾಗಳೀತನಂ ನೀನೊಯ್ವುದೊಳ್ಳಿತಲ್ಲು ನಿಱಿಸಿಪೋದೊಡೆ ಮಾಹಭ್ಯುದಯವಾಗಿ ಕೆಲವು ದಿವಸದಿಂ ನಿನ್ನೊಳ್ ಕೂಡಿ ಸುಖಮಿರ್ದಪನೆಂದು ದಿಶಾ ದೇವತೆಗಳ್ ನುಡಿದೊಡೆಲ್ಲಾ ದೆಸೆಯುಮುಂ ನೋಡಿಯಾರುಮಂ ಕಾಣದೆ ದೇವತಾವಚನ ಮಲಂಘನೀಯಮೆಂದು ಮನೋಗತಿಯೆಂಬ ವಿದ್ಯಾದೇವತೆಯಂ ಬರಿಸಿ ನೀನೀತನನು ಚಿತಮಪ್ಪೆಡೆಯೊಳಿೞಿಪಿ ಬಾಯೆಂದು ಪೋದಳಿತ್ತಲಾ ವಿದ್ಯೆ ವಸುದೇವನಂ ತಂದು ಚಂಪಾಪುರದ ಬಹಿರುದ್ಯಾನದ ರಮ್ಯಪ್ರದೇಶದೊಳಿೞಿಪಿದೊಡಿನಿಸುವೇಗದಿಂ ನಿದ್ರೆಯಿನೆೞ್ಚತ್ತು ಬೆಳಗಪ್ಪಿನಮಿರ್ದು ಮುನ್ನಂ ತನ್ನಿರ್ದೆಡೆಯಲ್ಲುದುದಮನೇವೈಸಿದ ವಿದ್ಯಾಧರನಗೆಯ್ದ ಯೋಗಮಪ್ಪುದುಮನಱಿದು ಕಡಮುಳಿದು ತನಗಾಕ್ಷೇಪಮಗಮ್ಯಮಪ್ಪುದು ಮನಱಿದು ಮುಳಿಸನುೞೆದು ಬಂದೊಂದು ಕೊಳದೊಳ್ ಪಾದಪ್ರಕ್ಷಾಳನಂಗೆಯ್ದು ಮರ್ಹತ್ಸರ್ವಜ್ಞ ಪದಾಂಬುಜಕ್ಕೆ ನಿರ್ಭರಭಕ್ತಿಯಿನೆಱಗಿ ಬಂದಿಸಿದನಂತರವಾ ಪುರಮಂ ಪೊಕ್ಕು ಸೇವನೆಗೇರಿಯೊಳಗನೆ ಬಪ್ಪಾಗಳ್ ವಾಸುಪೂಜ್ಯಭಟ್ಟಾರಕರ ನಿರ್ವಾಣಭೂಮಿಯಲ್ಲಿ ಮಾಡಿಸಿದುತ್ತುಂಗ ಜಿನೇಂದ್ರಮಂದಿರಮಂ ಕಂಡು ಮೂಱುಸುೞು ಬಲವಂದೊಳಗೆ ಪೊಕ್ಕು ನೊಸಲ್ಗೆ ಕೈಗಳಂ ತಂದು

ಮ || ತ್ರಿಜಗನ್ನಾಥ ಮುನೀಂದ್ರ ನೂತ್ನ ಸಕಳ ಪ್ರಖ್ಯಾತ ದುಷ್ಟೌಘಶ
ತ್ರುಜಯೋಪೇತ ಸುರೇಂದ್ರಗೀತ ನತದೇವವ್ರಾತ ಸಂ[ಸೇವ್ಯ ಭ]
ವ್ಯಜನಾಧೀಶ ಗುಣಪ್ರಕಾಶ ಪರಮಶ್ರೀಗೀಶನೀ ವಾಸುಪೂ
ಜ್ಯಜಿನಂ ಮಾೞ್ಕೆನಗಿಷ್ಟಸಿದ್ಧಿಸುಖಮಂ ಸಂಸ್ತುತ್ಯಮಂ ನಿತ್ಯಮಂ ೫೮

ವ || ಎಂದು ದರ್ಶನಸ್ತುತಿಯಂ ಪೇೞ್ದು ಚತುರ್ಭಕ್ತಿಸಹಿತಂ ದೇವರಂ ವಂದಿಸಿ ತದನಂತರಂ ಋಷಿಸಮುದಾಯಮಂ

ಚಂ || ಪರಮತಪಶ್ಚರಿತ್ರಯುತರಂ ಹಿತರಂ ಗುಣರತ್ನರಂ ಪ್ರಭಾ
ಸುರರನಾವಾರ್ಯವೀರ್ಯಪರರಂ ಮದಸಂಹರರಂ ತ್ರಿಶುದ್ಧಿಯೊಳ್
ಗುರು ಪರಿಪಾಡಿಯಿಂದೊಸೆದು ಬಂದಿಸಿ ಧರ್ಮಮನೋತು ಕೇಳ್ದು ತಾಂ
ಸ್ಥಿರತರ ಚಿತ್ತನಿರ್ದನಭಿನೂತ ಸುವೃತ್ತನುದಾತ್ತ ಚಿತ್ತದಿಂ ೫೯

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ದೇಶತ್ಯಾಗವರ್ಣನಂ

ದ್ವಿತೀಯಾಶ್ವಾಸಂ