ಶಾ || ಶ್ರೀಯಂ ಭವ್ಯಜನೋದಯಪ್ರಣುತಿಯಂ ಸರ್ವೋಪಕೃದದಿವ್ಯವಾಕ್
ಶ್ರೀಯಂ ಜೀವದಯಾದಮಪ್ರಶಮೆಯಂ ವಿಶ್ವ[ಪ್ರಭಾ]ಸ್ವದ್ಯಶ
ಶ್ಯ್ರೀಯಂ ಕರ್ಮರಿಪುಕ್ಷಯಪ್ರಭವಮಂ ತಾಳ್ದಿರ್ದ ನಿ[ರ್ವೃತ್ತಿಕಾ]
ಶ್ರೀಯಂ ಪ್ರಾರ್ಥಿಸಿ ವಂದಿಪೆಂ ತ್ರಿಭುವನೈಕಸ್ವಾಮಿಯಂ ನೇಮಿಯಂ ೧

ಮ || ಅತಿಬ[ದ್ಧೋ]ದ್ಧತ ಕರ್ಮಸಂಕುಳ ಮಹಾವಿದ್ವಿಷ್ಟರಂ ದುಷ್ಟರಂ
ಹತವಿಧ್ವಂಸನಮಾಗೆ ಮಾಡಿ ಪರಮಶ್ರೀಕಾಂತೆಯೊಳ್ ಕೂಡಿ ನಿ
ರ್ವೃತರಾಗಿರ್ದ ವಿಶುದ್ಧರಂ ಪ್ರವಿಪುಳಜ್ಞಾನೇದ್ಧರಂ ಸಿದ್ಧರಂ
ಸ್ತುತಿಗೆ[ಯ್ವೊಂ] ಗೆನಗೀಗವರ್ ದುರಿತಭೇದೋಪಾಯಮಂ ಶ್ರೇಯಮಂ ೨

ಪರಮಾತ್ಮಾನನ ನಿರ್ಗತಾಗಮ ಮಹಾಂಭೋರಾಶಿ ಪಾರಪ್ರಗ
ಲ್ಭರನತ್ಯಾಶ್ರಿತ ಭವ್ಯಪೋಷರ ಗುಣಪ್ರೋದ್ಯೋಗ ಸಂ[ಯೋಗ]ಭಾ
ಸುರರಂ ದುಷ್ಟಚತುಷ್ಕಷಾಯಹರರಂ ಸೌಜನ್ಯಸೌಂದರ್ಯರಂ
ದುರಿತಚ್ಛೇದನಕಾರ್ಯರಂ ವಿನಯ[ದಿಂ ವಂದಿಪ್ಪೆ] ನಾಚಾರ್ಯರಂ ೩

ಚಂ || ಅತಿಹಿತಮಂ ಜಿನೇಂದ್ರಮುಖನಿರ್ಗತಮಂ ಗಣನಾಥನಿರ್ಮಿತ
ಶ್ರುತಮನಶೇಷವಸ್ತುಯುತಮಂ ಪ್ರತಿಬೋಧಿಸುತಿರ್ಪರಂ ಬುಧ
ಸ್ತುತರನಸಂಚಳವೃತರನುನ್ನತರಂ ಸ್ತುತಿಗೆಯ್ವನೆಂದುಮ
ಪ್ರತಿಮಗುಣಪ್ರಕಾಶಕರನಾನುಪದೇಶಕರಂ ಸರಾಗದಿಂ ೪

ದುರಿತವಿಷೋತ್ಕಟೋಗ್ರತರ ಸರ್ಪಮನಿಂದ್ರಿಯದರ್ಪಮಂ ನಿರಂ
ತರ ಶುಭಭಾವನೋದ್ಯತ ವಿಸೂತ್ರ ಪವಿತ್ರ ಚರಿತ್ರಯುಕ್ತಪೋ
ಭರದಿನಂಡಗಿಸಿರ್ದಖಿಳ ಸಾಧುಗಳಂ ಸ್ತುತಿಯಿಪ್ಪೆನಾಂ ಗುಣೋ
ತ್ಕರದೊಡಗೂಡಿ ಬೇಡಿ ನುತಮುಕ್ತಿಯನುತ್ತಮಸೌಖ್ಯಯುಕ್ತಿಯಂ ೫

ಪರಮತತಾರೆಯೆಂ ಖಳವಿಕಾರೆಯನೋಡಿಸಿ ಗೆಲ್ದು ಗೆಲ್ಲದೊಳ್
ಪರಮಜಿನೇಂದ್ರಶಾಸನವಿಭಾಸನ ಕಾರ್ಯಸಮರ್ಥೆಯಾದ ಸುಂ
ದರಮುಖಿ ಯಕ್ಷದೇವಿ ಪರಿರಕ್ಷಿಸುಗುನ್ನತ ಜೈನಮಾರ್ಗಭಾ
ಸುರಗುಣರಂಜನೀಯೆ ಸುವಿ[ಧೇಯ ವಿನೇ]ಯ ಜನಂಗಳೆಲ್ಲಮಂ ೬

ಮ || ಜಿನಮಾರ್ಗಸ್ಥ ಮುನೀಂದ್ರರೀಯೆ ಪದೆದೊಂದಲ್ಪವ್ರತಂ ಯಕ್ಷನ
ಪ್ಪನಿತಂ ಮಾಡಿದುದಿಂ ಜಿನಾಶ್ರಯದಿನೇನೇನಾಗದೀ ದೈವ ಬಂ
ಧನವತ್ಯೋದ್ಧತ ಧರ್ಮಚಕ್ರಧರನಾಗಿರ್ದಂದು ತಾನೋಲಗಿ
ಪ್ಪೊನವಿಘ್ನಪ್ರದನಕ್ಕೆ ಮತ್ಕ್ರತಿಗೆ ತಾಂ ಸರ್ವಾಹ ಯಕ್ಷಾಧಿಪಂ ೭

ಉ || ಕಾಮಕಳಾನಿತಂಬಿನಿಯೆ ಪಾದಪಯೋಧರಯುಗ್ಮೆ ನಾಟ್ಯವಿ
ದ್ಯಾಮುಖಿ ರಾಜನೀತಿಪದಲಕ್ಷಣಲೋಚನೆ [ಸಾ]ರಹಸ್ತೆ ಧ
ರ್ಮಾಮೃತವಾಕ್ಯೆ ಕಾವ್ಯರಸಭಾವೆ ಸರಸ್ವತಿ ಬಂಧುವರ್ಮ ವ
ಕ್ತ್ರಾಮಳಕೋಮಳಾಂಬುರುಹದೊಳ್ ನೆಲಸಿರ್ಕೆ ಮನೋನುರಾಗದಿಂ ೮

ಕಂ || ಪದ್ಯಾಂಗಿ ವಚನೆ ಸನ್ಮುಖಿ
ಗದ್ಯ ಮಹಾರಚನೆ ವಿಳಸದುಭಯಾಳಂಕಾ
ರೋದ್ಯತ್ಕುಚೆ ಮತ್ಕೃತಿವಧು
ವಿದ್ಯಾವಿಜ್ಜನದ ಮನದೊಳಿರೆ ವಿರಚಿಸುವೆಂ ೯

ಉ || ಕಾರಕದೊಳ್ ಕ್ರಿಯಾಪದದೊಳಿರ್ಕೆ ತಗುಳ್ದಿರೆ ಶಬ್ದಮೆಂಬಳಂ
ಕಾರದೊಳರ್ಥಮೊಂದಿ ನಿಲೆ ಭಾಷೆಯೊಳೊಪ್ಪಿರೆ ದೇಸೆ ಬಲ್ಲರಿ
ದ್ದಾರಯೆ ಕಾವ್ಯಲಕ್ಷಣದೊಳೊಳ್ಪಳವಟ್ಟಿರೆ ಪೇೞ್ವುದಲ್ಲದೇ
ಕಾರಣವಯ್ಯ ಕೆಮ್ಮಗಿರಲಾಗದೆ ಕಬ್ಬ[ವ] ಬಿಟ್ಟಿವೇ[ೞ್ವು]ದೇ ೧೦

ಕಂ || ಆಲಿಸುತೆ ಬೇಗಮೋಹೋ
ಸಾಲಿಸಿಮೆನೆ ವಿರಸಮಪ್ಪ ಕಬ್ಬಂಬೇೞ್ದಾ
ಲೋಲತೆಯಿಂದಂ ಬ[ರೆ ಬರೆ]
ದೋಲೆಗಳಂ ಕಿಡಿಸುವಂತು ತಾೞೊಳು ಪಗೆಯೇ ೧೧

ಚಂ || ಪ್ರವಿದಿತ ಸಾಹಸೋರ್ಜಿತ ಮಹಾಪುರುಷೋದ್ಧತರಾ ರಸಂಗಳಂ
ಸವಿಗಿದೆ ಸೊಪ್ಪುವಟ್ಟ ಬಗೆಯಿಂದೞಿಗನ್ನಡಗಬ್ಬದೊಳ್ ತಗು
ಳ್ಚುವ ಬೆಸನೇಕೆ ಮಟ್ಟಮಿರಲಾಗದೆ ಮತ್ತೆ ನಿರರ್ಥಿಯಾದೊಡಂ
ತವರದ[ನಂದದಿಂದೊ]ರೆಯೆ ನೇಲಿಸಲುತ್ತಮ ಪದ್ಮರಾಗದೊಳ್ ೧೨

ಕಂ || ಅಱವಂ ಬುಧತತಿಗೆಲ್ಲಂ
ಮೆಱೆವಂತಪ್ಪುದು ಮನಕ್ಕೆವರಲಾವೆಡೆಯುಂ
ನೆಱೆವಂತಪ್ಪುದು ಪೆಱದೇಂ
ಮೆಱೆವಂತಪ್ಪುದು ವಿದಗ್ಧವಿರಚಿತ ಕಾವ್ಯಂ ೧೩

ಚಂ || ಕಿವಿ[ದೆಱೆ]ದಪ್ಪು [ದಾ ನಯದೊಳ]ರ್ಥದೊಳೊಂದಿದ ಬಂದದೋಜೆಯಿಂ
ಕವಿಯ ಮನಂಗೊಳಲ್ ನೆಱೆವುದಪ್ಪುದು ಕಾವ್ಯರಸಂ ತುಳುಂಕೆ [ಪಾ]
ಯ್ದ ವಿರಳದಿಂ ಪೊನಲ್ ಪರಿಗುಮೆಂಬಿನಿತಪ್ಪುದು ನೆಟ್ಟನೋತು ಕೇ
ಳ್ದವರ್ಗಳು ಕಾವ್ಯಬಂಧನಮಿದೆಂಬಿನಿತಪ್ಪುದು ಕಾವ್ಯಬಂಧನಂ ೧೪

ಕಂ || ಒಂದೆಡೆಯಲ್ಲದೆ ರಸವೊಡ
ಮೊಂದಿರೆ ಪದರಚನೆ ಕಿವಿಗೆ ವಂದಿರೆ ಬುಧರೊಳ್
ಸಂದಿರೆ ಪೇೞ್ದುದು ಕಬ್ಬದ
ದಂದುಗವಿಲ್ಲದೊನನಟ್ಟಿಕಳೆವರೆ ನಾಡಿಂ ೧೫

ಮ || ರಸದೊಳ್ ಬಿನ್ನಣದೊಳ್ಳು ಕೂಡೆ[ಪ]ದಮರ್ಥವ್ಯಕ್ತಿಯಂ ಮಾಡೆ ರಂ
ಜಿಸಿ ಪತ್ತಿರ್ದೆಣೆಮಾತು ಬಲ್ಲ[ರೆರ್ದೆದಾ]ಳ್ದಂತುಂ ಜನಂ ನಾಡೆ ಬೆ
ಕ್ಕಸಮಪ್ಪಂತುಮಿದೊಂದೆ ಸಾಲ್ವುದು ಜಗಕ್ಕೆಂಬಂತುಮಿಂ ಪೇೞ್ವೆನೆಂ
ದುಸುರಲ್ ಕಬ್ಬಿಗರಣ್ಮದಂತುಮಿದನಾಂ ಪೇೞ್ವೆಂ ಮಹಾಕಾವ್ಯಮಂ ೧೬

ಕಂ || ದುರಿತಕುಳವಿಜಯ ಸಮುದಿತ
ನಿರುಪಮಗುಣನಿಳಯ ಭಗವದಭಿಮತ ವಿಳಸ
ಚ್ಚರಸುಖಕರಮೆಂಬುವ [ಱಿಂ]
ಹರಿವಂಶಾಭ್ಯುದಯ ಕೃತಿಯನಾಂ ವಿರಚಿಸುವೆಂ ೧೮

ವ || ಅದೆಂತೆಂದೊಡನೇಕವಿಧ ಜಳಚರನಿಕರ ನಿಶಿತಾಂಕುರ ನಖದಾಡಪ್ರಹಿತ ವಿಭೀಷ್ಟ ಹರಿಶುಕ್ತಿಪುಟ ಸಮುಚ್ಚಳಿತ ಮುಕ್ತಾಫಳ ಕರಾಪಾಂಶು ವಿತಾನಾಳಂಕೃತ ವಿದ್ರುಮ ಲತಾಂಕುರ ಮಂಜರೀ ಪಿಂಜರಿತ ವೀಚೀಚಯನಿಚಿತ ಪೃಚ್ಛದಾಳಂಬಿತ ಕಂಬುರ್ಲಸಿತ ಬೇಳಾವನಪರಿವೃತ ಚತುರುದಧೀವಳಯವಳಯಿತ ಜಂಬೂದ್ವೀಪದ ಭರತಕ್ಷೇತ್ರದ ವಿನೀತಾಖಂಡದೊಳೆ ಮಗಧೆಯೆಂಬುದು ವಿಷಯಮ[ದೆಂ]ತಪ್ಪುದೆಂದೊಡೆ

ಚಂ || ಅತಿಬಲಗರ್ವದಿಂ ಕಲಿಯುಗಂ ಕವಿತಂದೊಡೆ ತನ್ನ ಪರ್ವಿದು
ನ್ನತಗುಣಮೆಲ್ಲಮಂ ಕೃತಯುಗಂ ಭಯದಿಂದೆ ತೆಮಳ್ದಿಕೊಂಡು ತಾಂ
ಕೃತಿಯೊಳೆ ಪುಂಜಿಸಿರ್ದಳವದೇತೆಱನಾ ತೆಱದಂತೆ ಶೋಭೆವೆ
ತ್ತತಿಶಯ ಮತ್ತೆ ಪೂರ್ವಮಭಿನಿಂ[ದ್ಯ] ಮತರ್ಕ್ಯಮಿದೆಂದುಮಕ್ಷಯಂ ೧೮

ವ || ಆ ವಿಷಯದ ವನತರುಗಳೆಲ್ಲಂ ವಿದ್ಯಾರ್ಥಿಗಳಂತೆ ಕಲ್ಪತರುಗಳೆ ಕೆಱೆಗಳೆಲ್ಲಂ ದಯಾಧರ್ಮದಂತಱಗೆಱೆಗಳ ನಂದನವನಂಗಳೆಲ್ಲಂ ವಿಷಸಂಧಿಯ ಪುಟ್ಟದಂತಾಱಡಿಯುಳ್ಳವೆ ಕೊಳಂಗಳೆಲ್ಲಂ ದಂಡಂಗೊಂಡ ನಲ್ಲರಂತೆ ತಿಳಿದ ಕೊಳಂಗಳೆ ಬೆಳಸೆಲ್ಲಂ ಸಮ್ಯಕ್ತ್ವಮುಳ್ಳರಂತೊಂದೆ ಸೆಗೆಱಗಿರ್ದವೆ ಗಂಡರೆಲ್ಲಂ ನೆಲ್ಲಕೆಯ್ಯಂತೆ ಪಾೞಿಯುಳ್ಳರೆ ಪೆಂಡಿರೆಲ್ಲಂ ಧನುರ್ವೇದಿಯ ಬಿಲ್ಲಿನಂತೆ ಗುಣಮುಳ್ಳರೆ ಮತ್ತಂತೆ ಬಗೆದು ನೋೞ್ಪಾಗಳ್

ರಗಳೆ || ಆನೆಯೊಳ್ ಬಂಧನದ ಹೇತು
ಮಾನಿನಿಯೊಳ್ ನಯದ ಮಾತು
ಪಕ್ಕಿಗಳ ನೆರವಿಯೊಳ್ ಬೆರ್ಚು
ಠಕ್ಕಿಸುವ ಮಂತ್ರದೊಳೆ ಪೆರ್ಚು
ಬೆಳಪ ಕೆಯ್ಗಳೊಳ್ ತಲೆಗೊಯಿಲು
ಮುಳಿದ ಕಡುನಲ್ಲರೊಳೆ ಪೊಯಿಲು
ಕುಚದೊಳ್ ನೆಲೆಯ ಕೇಡು
ಕತ್ತುರಿಯ ಪುಲ್ಲೊಳೆಳೆಸೂಡು
ಮುಸುಗಳ ಮೃಗಂಗಳೊಳೆ ಕಂದು
ಎಸೆವ ಶಶಿಯೊಳೆ ಕಳೆಯ ಕಂದು
ಕೆಱೆಗಳೊಳ್ ನಿರ್ಗುಣದ ಕಾಂತಿ
ಶ್ರುತದೊಳ್ ತಗುಳ್ದ ಕಡುಚಿಂತೆ
ದುರ್ವಾಜಿಗಳೊಳೆ ತೊಡರ್ವ ಸಿರ್ಕು
ನೆಗೞ್ದ ಕರಿಗಳೊಳೆ ಪಿಡಿಕುತ್ತು
ವರ ಭೂಷಣಂಗಳೊಳೆ ಮುತ್ತು ೧೯

ಕಂ || ಒಕ್ಕಲ್ತನಮುಮನಱಿವಿನ
ತಕ್ಕುಮನಱಿವವಗುಣಂಗಳೆಮಗೇವುವವೆಂ
ದೊಕ್ಕು ಮಿಗಿಲಪ್ಪ ಗುಣದೊಳ್
ಪೊಕ್ಕು ಮನಂಬೊಕ್ಕು ನೆಗೞ್ವರಾ ನಾಡವರ್ಗಳ್ ೨೦

ವ || ಅಂತಪ್ಪ ನಾಡೊಳ್ ರಾಜಧಾನಿ ರಾಜಗೃಹಮೆಂಬುದು ಪೊೞಲ್ ಆ ಪೊೞಲ ಬಹಿರ್ಭಾಗದೊಳ್

ಕಂ || ಪೊಳೆದೆಸೆವೆ ನ[ಳಿನ] ದಲರ್ಗಳ
ತೊಳಗುವ ಬಿಱಿಮುಗುಳ ಪಸಿಯ ನನೆಗಳ ಸೊಗಯಿ
ಪ್ಪಳವುಂ ನೀರ್ವಕ್ಕಿಯ ಗೊಂ
ದಳಮುಂ ಕಳಕಳಮುಮೊಳವು ಕೆಱೆಗಳೊಳೆಲ್ಲಂ ೨೧

 

ವ || ಅಲ್ಲಿಯ ಕೆಱೆಗಳೆಲ್ಲಂ ಬೆಳೆಗೆಯ್ಗಳೆ ಕೊಳಂಗಳೆಲ್ಲಂ ಪೂಗೊಳಂಗಳೆ ಬಾವಿಗಳೆಲ್ಲಂ ಬೊಡ್ಡಣವಾವಿಗಳೆ

ಕಂ || ಪಣ್ಮರಗಳೆ ಪೂಮರಗಳೆ
ತಣ್ಮಲೆದಲೆವೆಲರೆ ಮಿಱುಗಿಪರಳಲರೆ ಪೊದ
ೞ್ದುಣ್ಮುವ [ಕಂ]ಪೆ ಕರಂ ಕೈ
ಗಣ್ಮುವ ದಂಪತಿಯಲಂಪೆ ನಂದನವನದೊಳ್ ೨೨

ವ || ಅಂತೊಪ್ಪೊವ ಜನಂಗಳ ಕೆಲದೊಳ್ ನಾಲ್ಕುಂ ಜಾತಿಯೊಳ್ ಮೂಱುಂ ಪ್ರಚಾರದಾನೆಯಗ್ಗಳಮೊಳವಪ್ಪುದಱಿನಾನೆಯಗ್ಗಳಮೆಂದೆಂದು ಬನಬನದೊಳಂ ಕಿಱುಜಳದಿಂದಂ ಶುಭಲಕ್ಷಣೋಪೇತಮುಂ ಭೂಮಿಜಾತಮುಮಪ್ಪ ಕುದುರೆಗಳನಾರ್ಗ ಮಾಶ್ಚರ್ಯಮಾಗೆ ಸಮೆವಶ್ವಾಚಾರ್ಯರಿಂದಂ ಚತುರ್ವಿಧಾಯುಧ ವಿದ್ಯಾಭ್ಯಾಸ ಪ್ರದೇಶಂಗಳಿಂ ಸೊಗಯಿಸುವ ಪೊಱವೊೞಲಿಂ

ಮ || ಪುರದೊಳ್ ತಳ್ತೊಸೆದಿರ್ದ ತಮ್ಮ ಮಗಳಂ ಶ್ರೀದೇವಿಯಂ ನೋಡಲಾ
ದರದಿಂದಂಬುಧಿ ಬಂದುರಾಗರಸದಿಂದಾಶ್ಚರ್ಯಮೊಂದಾದುದಂ
ತಿರೆ ನೀರ್ಗಾದಿಗೆ ಕೋಟೆಯಂದಮೊಗೆದಿರ್ದತ್ಯುತ್ಸವಂ ಮೇಘದೊಳ್
ತೊರೆಯೆಂಬಂತಿರೆ ಸನ್ನುತಂ ಕೃತಿಸುಧಾಕರ್ಮಗಳಿಂದುನ್ನತಂ ೨೩

ವ || ಆ ಕೋಟೆಯಿಂದೊಳಗೆ ಮಾಡಿಸಿದೊಂಗೆ ಸ್ವರ್ಗಕೇಣಿಯು [ಮುಂ] ಮಾಡಿಸುವಂ ಗಾಣೆಯುಮಾಗಿರ್ದಾಯತನಂಗಳಿಂದನೇಕ ವಿಜಾತಿ ನಿಕೇತನಂಗಳಿಂ ಮತ್ತ ಮಲ್ಲಿಯಂಗಡಿಗಳೊಳೆ

ಕಂ || ಆವಾವಾ ವಾರ್ತೆಗಾವನು
ಮಾವಾವಳವಿಗಳೊಳಾವುದಾವುದನಾರೈ
ದೋವಾದಿ ಪೊತ್ತು ಕೋಳಡ
ಮಾವರದೆಡೆಯಾವ[ಣಂ]ಗಳೊಳಮೊಳವೆಂದುಂ ೨೪

ವ || ಅಲ್ಲಿಯೆ

ಕಂ || ಸಾರತರ ಸುವಸುಭಯಸಂ
ಧಾರಿ ಕನತ್ಕನಕ ರಚಿತ ಸುರವರಭವನಾ
ಕಾರಿ ಮನೋಜಾ[ಸ್ತ್ರಂಗಳ]
ಕೇರಿ ಮನೋಹಾರಿ ಸೂಳೆಗೇರಿ ನಿತಾಂತಂ ೨೫

ಚಂ || ಸುರನಿಕಾರದಿ ರಾಜನೊಸೆದಿರ್ಪಮರಾವತಿಯೆಂತುಟಂತೆ ಖೇ
ಚರವರ ರಾಜಧಾನಿಯ ಬೆಡಂಗಿನ ಮಾೞ್ಕೆಯದೆಂತುಟಂತೆ ಸ
[ನ್ನರ] ಉರಗೇಂದ್ರನಿಪ್ಪ ಪುರದೊಂದು ವಿಳಾಸಮದೆಂತುಟಂತೆ ಸುಂ
ದರ ವಿಭವಂಗಳಿಂ ಪ್ರಕಟವಿದ್ಯೆಗಳಿಂ ಮಹನೀಯಭೋಗದಿಂ ೨೬

ವ || ಇಂತತಿಶಯಮಪ್ಪ ಪೊೞಲನಾಳ್ವಂ ಶ್ರೇಣಿಕಮಾಹಾರಾಜನೆಂಬನಾತನ ಪಟ್ಟಮಹಾದೇವಿ ಚೇಳಿನಿಯೆಂಬೊಳಂತವರತಿಶಕ್ತರಾಗಿ ರಾಜ್ಯಂಗೆಯ್ವುತ್ತಿರ್ದೊಂದು ದಿವಸಂ ಪೂವಾಹ್ಣದೋಲಗದೊಳ್ ಸಿಹಾಸನಾಧಿಷ್ಠನಾಗಿರೆ ಋಷಿನಿವೇದಕಂ ಬಂದು ದೇವ ಬಿನ್ನಪಮೆಂದಿಂತೆಂದಂ

ಉ || ಪೂಮರನಿಂದೆ ಪೂತವು ತಳಿರ್ತವಶೋಕೆಗಳಿಂದೆ ರಾಗದಿಂ
ತಾಮೊಡನಿಂದೆ ಕೋಗಿಲೆಗ[ಳೂಳಿ] ದವಿಂದೆಸಗಿತ್ತು ತೆಂಬೆಲರ್
ಮಾಮರನಿಂದೆ ಬಂದವು ಬಸಂತಮುಮತ್ತದಱಂದಮಂತೊಸ
ರ್ವಾಮರವಂದಿತ ತ್ರಿಭುವನೇಶ್ವರನೀ ದೆಸೆಯತ್ತ ಬಂದನೋ ೨೭

ವ || ಎಂದುಂ ಪಶ್ಚಿಮಾಭಿಮುಖನಾಗಿ ನೋೞ್ಪನ್ನೆಗಂ ವಿಪುಳಗಿರಿಯ ಮೇಲೆ ಶ್ರೀ ವರ್ಧಮಾನ ಭಟ್ಟಾರಕರ ಸಮವಸರಣ ನಿಂದುದಂ ಕಂಡು ಬಂದೆನೆಂದಾಗಳ್ ಶ್ರೇಣಿಕ ಮಹಾರಾಜಂ ಸಿಂಹಾಸನದಿಂದಮಿೞಿದಾ ದೆಸೆಯತ್ತಲೇೞಡಿಯಂ ನಡೆದೆಱಗಿ ಪೊಡವಟ್ಟು ಪೇೞ್ದೊಂಗೆ ತುಷ್ಟಿದಾನಂಗೊಟ್ಟು ಪಡೆವರ [ರ]ನೆಲ್ಲಾ ದೆ[ಸೆಗ] ಮರ್ಚನೆಯಂ ತರಲ್‌ಸಾರವೇೞ್ದು ಕಯ್ಗೆಯ್ದುಮಂತಃಪುರಮಂ ಮಕುಟಬದ್ಧರುಂ ರಾಜಕುಮಾರರ್ಕಳುಂ ಬೆರಸು ತಾಂ ಪಟ್ಟವರ್ಧನ ಗಜೇಂದ್ರಮನೇಱಿ ಸುರೇಂದ್ರಲೀಲೆಯಂ ತನ್ನೊಳ್ ತೋಱೆ ವಂದನಾಭಕ್ತಿಯಿಂ ಪೊಱಮಟ್ಟು ಬಂದು ವಿಪುಳಗಿರಿಯನೆಯ್ತಂದು ಸಮವಸರಣಮಂ ಕಂಡು ವಾಹನದಿಂದಿೞಿದು ಅಷ್ಟವಿಧಾರ್ಚ ನಾಸಹಿತದಿಂ ರತ್ನತೋರಣಾಂತರಿತ ಮಣಿಮಯ ವಿಂಶತಿಹಸ್ರ ಸೋಪಾನಮನೇಱಿದಾಗಳ್

ಕಂ || ಘನನೀಲಮಯಂ ಮಹಿಮಣಿ
ಕನಕಮಯಂ ಭವನವೇದಿಕಾನಿಕರಂಗಳ್
ವಿನತಾಮರಮಯವೆಲ್ಲಿಯು
ಮೆನಿಸಿರ್ದುದು ಸಮವಸರಣಮಘಕುಳಹರಣಂ ೨೮

ವ || ಅಂತಪ್ಪದುಂ ದುರಿತರಿಪುಗಂತಪ್ಪುದಂ ನೋಡಿ ಮಹೋತ್ಸವಭಕ್ತಿಯುಮಗ್ಗಳಮಾಗೆ ಪೊಕ್ಕೊಳಗಣ ಪೀಠಮಂ ತ್ರಿಪ್ರದಕ್ಷಿಣಂಗೆಯ್ದು ಶ್ರೀವರ್ಧಮಾನಭಟ್ಟಾರಕರಂ ಕಂಡಭಿಮುಖ ದರ್ಶನಸ್ತುತ್ಯನೇಕ ಸ್ತೋತ್ರಕ್ರಿಯಾಭಿಪೂರ್ವಕಂ ಸ್ತುತಿಗೆಯಿಸುತ್ತುಮಷ್ಟಾಂಗದರ್ಚನೆ ಯಿಂದರ್ಚಿಸಿ ಬಂಧುಗಣಧರಾದ್ಯನೇಕ ಋಷಿಸಮುದಾಯಮಂ ಯಥಾಕ್ರಮದಿಂ ಬಂದಿಸಿ ಗೌತಮಸ್ವಾಮಿಗಳ ಮುಂದೆ ಕುಳ್ಳಿರ್ದು ಧರ್ಮಮಂ ಕೇಳ್ದು [ತ]ದನಂತರದೊಳ್ ಕೆಯ್ಯಂ ಮುಗಿದಿರ್ದು

ಕಂ || ಬಿನ್ನಪಮನುಪಮ ಹರಿವಂ
ಶೋನ್ನತ ಕಥೆಯಂ ಕೆಲರ್ ಕ್ರಿಯಾಶೂನ್ಯರ್ ಬೇ
ೞ್ಪನ್ನರೊಳರದನೆ ನಂಬಿ
ಪ್ಪನ್ನರುಮೊಳರಾದೋರಿಗಳೀ ಕಲಿಯುಗದೊಳ್ ೨೯

ವ || ಅದೆಂತೆದೊಡರ್ಧಚಕ್ರವರ್ತಿಯಪ್ಪ ವಿಷ್ಣುವಂ ಸರ್ವಜ್ಞಂ ಸರ್ವವ್ಯಾಪ್ತಿ ಭುವನತ್ರಯಪತಿಯೆಂದು ಲೋಕಂ ತಾಮೆ ಕೊಂಡಾಡುವುದೆತ್ತಾತಂ ಅರ್ಜುನಂಗೆ ರಥಮನೆಸಗಿದನೆಂಬುದೆತ್ತದಲ್ಲದೆಯುಂ ಜ್ಯೋತಿರ್ಲೋಕದ ದೇವನಪ್ಪಾದಿತ್ಯದೇವನೆತ್ತ ಕೊಂತಿಯೆತ್ತ ಕೊಂತಿ ತಲೆನೀರ್ಮಿಂದು ಆದಿತ್ಯನಂ ಬಯಸಿದೊಡೆ ಗರ್ಭಮಪ್ಪುದೆತ್ತ ಗರ್ಭಮಾಗಿ ಕಿವಿಯೊಳ್ ಕರ್ಣನಂ ಪೆತ್ತಳೆಂಬುದೆತ್ತ ಜವನೆತ್ತಾಕೆಯೆತ್ತ ಜವಂಗಮಾಕೆಗಂ ಧರ್ಮಪುತ್ರಂ ಪುಟ್ಟಿದನೆಂಬುದೆತ್ತ ಮತ್ತಮಾಕೆ ಗಾಳಿಯೊಳ್ [ಪುದುವಿ]ರ್ದಳೆಂಬುದೆತ್ತ ಗಾಳಿಗಮಾಕೆಗಂ ಭೀಮಂ ಪುಟ್ಟಿದನೆಂಬುದೆತ್ತ ಸ್ವರ್ಗಲೋಕದ ದೇವೇಂದ್ರನೆತ್ತಾಕೆಯೆತ್ತ ಆಕೆಗಮಿಂದ್ರಂಗಮರ್ಜುನಂ ಪುಟ್ಟಿದನೆಂಬುದೆತ್ತಲೆಂದಿಂತು ನಾಲ್ವರೊಳ್ ಮಱೆವಾೞ್ದು ಕೊಂತಿ ಪಾಂಡುರಾಜಂಗೆ ಕುಲಸ್ತ್ರೀಯೆಂದು ಮನ್ನಿಸಿಕೊಂಬುದೆತ್ತ ಅರ್ಜುನಂ ಸಜ್ಜನಂ ದ್ರೌಪತಿ ಪಾಂಡವರಯ್ವರೊಳ್ ಪುದುವಾೞ್ದಳೆಂಬುದೆತ್ತ ಗಾಂಗೇಯರುಂ ದ್ರೋಣರುಂ ಸ್ವೇಚ್ಛಾಮರಣಿಗಳೆಂಬುದೆತ್ತ ಅವರ್ ಮಾನಿಸರ ಕಯ್ಯೊಳ್ ಕಾದಿ ನೋವುದುಂ ಸಾವುದುಮೆತ್ತ ಅಭಿಮನ್ಯು ಬಸಿಱೊಳಿರ್ದು ಚಕ್ರಬ್ಯೂಹಮಂ ಕೇಳ್ವುದೆತ್ತ ನೆಱೆಯೆ ಕೇಳದೆ ತಾನೆ ಪೊಱಮಟ್ಟನೆಂಬುದೆತ್ತ

ಉ || ಇಂತು ಮಹಾತ್ಮರಪ್ಪ ಪುರುಷರ್ಕಳ ವೃತ್ತಿಯನೊಂದವಿಂದಿಯ
ಪ್ಪಂತು ತಗುಳ್ಚಿ ಪೇೞ್ವ ಕಥೆಯಂತಿರೆ ಪಾೞಿಯೊಳೊಂದಿ ನಿಂದು ವಿ
ಭ್ರಾಂತಿಸಿ ಬಂದೆನಾಂ ಬೆಸಸಿಮೀ ಹರಿವಂಶಮನೆಂದಚಿಂತ್ಯ ವಿ
ಕ್ರಾಂತಪರಂ ಕರಂ ಮುನಿಗಳಂ ಬೆಸಗೊಂಡನಿಳಾತಳಾಧಿಪಂ ೩೦

ವ || ಬೆಸಗೊಂಡಾಗಳೀ ಲೋಕದವರೆಂಬಂತು ವಿರುದ್ಧಮಲ್ತು ನೀಮೇಕಚಿತ್ತದಿಂ ಕೇಳಿಂ

ಕಂ || ಶ್ರೀಮದ್ಗೌತಮಗಣಧರ
ನಾಮ ಗದಾಧೀಶವಿಭುಗೆ ತಿಳಿದಿರೆ ಪೇೞ್ದು
ದ್ದಾಮ ಕಥಾರಸದೊಳತಿ
ಪ್ರೇಮೋದಯನಾದನದಱಿನನುವರ್ಣಿಸುವೆಂ ೩೧

ವ || ಮೊದಲೊಳಾದಿಭಟ್ಟಾರಕನಿಕ್ಷ್ವಾಕುವಂಶಮುಗ್ರವಂಶ ಕುರುವಂಶ ನಾಥವಂಶ ಭೋಜವಂಶಮೆಂಬಯ್ದುಂ ಕ್ಷತ್ರಿಯವಂಶಮಂ ಮಾಡಿದೊಡಂತೆ ನಡೆಯುತ್ತಿರ್ದು ಪತ್ತನೆಯ ತೀರ್ಥದಂದು ವಿದ್ಯಾಧರಶ್ರೇಢಿಯನಾಳ್ವ ಹರಿವಂಶಮೆಂಬ ಪುರಮನಾಳ್ದ ಪ್ರಭಂಜನನೆಂಬರಸಂಗಂ ಮೃಕಂಡುವೆಂಬರಸಿಗಂ ಪುಟ್ಟಿದಾತಂ

ಕಂ || ಖರಕಿರಣೋಪಮತೇಜಂ
ನಿರುಪಮ ಶುಭಲಕ್ಷಣಾಂಕಿತಂ ನಯನಮನೋ
ಹರಮಾಗೆ ನಾ[ಡೆ]ಸೊಗಯಿಸು
ತಿರೆ ಮಾರ್ಕಂಡೇಯನೆಂಬ ಪೆಸರಿಂದೆಸೆದಂ ೩೨

ವ || ಆತನಾರೂಢಯೌವನನಾದಂದು ವಜ್ರಚಾಪನೆಂಬ ಖೇಚರನ ಮಗಳ್ ವಿದ್ಯುನ್ಮಾಳೆಯಂ ಮದುವೆನಿಂದು ಪೂರ್ವಭವಸ್ನೇಹದಿಂದನ್ಯೋನ್ಯಾಸಕ್ತರಾಗಿ ವನಕ್ರೀಡೆಯೊ[ಳಿರ್ದಿ]ರ್ವ ರುಮಂ ಪೂರ್ವಭವವೈರಿಯಪ್ಪ ಚಿತ್ರಾಂಗದನೆಂಬ ದೇವಂ ಕಂಡು

ಕಂ || ಮುಳಿದೆತ್ತಿಕೊಂಡು ಪಾಱು
ತ್ತೊಳಗಾದಿರ್ ನಿಮ್ಮನೊಂದು ತೆಱದಿಂ ಕೊಂದಂ
ದಳವಿಗೞಿದೆನ್ನ ಕೋಪಾ
ನಳನಾಱುವುದಲ್ತು ಚಿತ್ರವಧದಿಂ ಕೊಲ್ವೆಂ ೩೩

ವ || ಎಂದು ಬಗೆವನ್ನೆಗಮಾ ಮಾರ್ಕಂಡೇಯನ ಮುನ್ನಿನ ಭವದ ಕೆಳೆಯಂ ತಪದ ಫಲದಿಂ ಸೂರ್ಯಪ್ರಭನೆಂಬ ದೇವನಾಗಿ ಪುಟ್ಟಿರ್ದಾತನಱಿದು ಬಂದು ತನ್ನ ಕೆಳೆಯನಂ ಪಿಡಿದೊಯ್ವ ಚಿತ್ರಾಂಗದನಂ ಕಂಡು

ಮ || ಅಮರಂಗಾಗ ಕೊಲಲ್ ಮನುಷ್ಯಗಣಮಂ ಸಂಸಾರ[ದಾ]ಪೂರ್ವವೈ
ರಮನಿಂ ಚಿಂತಿಸುವಂತುಟಾರೊಳಮದೇನಿಲ್ಲಾ ಕರಂ ಕ್ರೋಧದು
ದ್ಗಮಮಂ ಕೆಮ್ಮನೆ ಮಾಡಿಕೊಂಡು ವಧೆಯಂ ಕೈಕೊಂಡು ದುಃಖಾಬ್ಧಿಯೊಳ್
ನಮೆವಂತಪ್ಪುದು ಕಜ್ಜಮೇ ಬಿಸುಡು ನೀನೀ ದಂಪತಿದ್ವೇಷಮಂ ೩೪

ವ || ಎಂದೆನಿತಾನುಂ ತೆಱದಿನಾಱೆನುಡಿದೊಡನಿವರ್ಗೇನಂ ಗೆಯ್ಯಲಾಱೆ ನೀಂ ನಿನ್ನ ಮೆಚ್ಚುಕೆಯ್ಯೆಂದಾತಂಗೊಪ್ಪಿಸಿ ಚಿತ್ರಾಂಗದಂ ಪೋದಂ ಪೋದೊಡೆ ಸೂರ್ಯಪ್ರಭನಾ ಮಿಥುನಮಂ ಕಂಡು ಬಂದು ಚಂಪಾಪುರದ ಭೋಜವಂಶದ ಚಂದ್ರಕೀರ್ತಿಯೆಂಬೊನ ಪುತ್ರನಾಗಿ ರಾಜ್ಯಂಗೆಯುತ್ತಿರ್ದಡಾತನಲ್ಲಿಗೆವಂದು ನೀನಪುತ್ರಕನೈ ನಿನಗೀತಂ ಜ್ಯೇಷ್ಠಪುತ್ರನೀಕೆ ನಿನಗೆ ಪಿರಿಯ ಸೊಸೆಯೆಂದಪ್ಪೈಸಿ ಕೊಟ್ಟು ಪೋದನಾತನುಮವರ ಕೈಕೊಂಡು ಪಿರಿದುಮೊಸಗೆಯಂ ಮಾಡಿ ರಾಜ್ಯಂಗೆಯ್ವವಸಾನಕಾಲದೊಳಾತಂಗೆ ಪಟ್ಟಮಂ ಕಟ್ಟಿ ತಪಸ್ಥನಾದಂ ಬೞಿಯಮಾ ಮಾರ್ಕಂಡೇಯಂ

ಕಂ || ಹರಿವಂಶ ವಿಷಯದಿಂದೀ
ಪುರಕ್ಕೆ ತಂದೊದವಿದೆಂ ಮದೀಯಾನ್ವಯದಿಂ
ಹರಿವಂಶಮಾಗೆ ನೆಗೞ್ದಾ
ಧರಣಿಯೊಳಂದೆಸೆಯೆ ಮಾಡಿ ಸುಖದಿಂದಿರ್ದಂ ೩೫

ವ || ಅಂತು ಭೋಜವಂಶಂ ಕೆಟ್ಟು ಹರಿವಂಶಮಾಗೆ ಮಾಡಿ ಮಾರ್ಕಂಡೇಯನರಸುಗೆಯ್ದು ತನಗಂ ವಿದ್ಯುನ್ಮಾಳೆಗಂ ಪುಟ್ಟಿದ ಮಗಂಗೆ ಹರಿಯೆಂದು ಪೆಸರನಿಟ್ಟಾತಂ ತ[ನ್ನ]ವಸಾನದೊಳಾತಂಗೆ ಪಟ್ಟಗಟ್ಟಿ ಲೋಕಾಂತರಿತನಾದನಂತಾ ಹರಿ ರಾಜ್ಯಂಗೆಯ್ದನಾ ಹರಿಗಂ ಸುಮಾಲೆಗಂ ಪುಟ್ಟಿದೊಂ ಮಹಾಗಿರಿ ಮಹಾಗಿರಿಯ ಮಗಂ ಹಿಮಗಿರಿ ಹಿಮಗಿರಿಯ ಮಗಂ ವಸುಗಿರಿ ವಸುಗಿರಿಯ ಮಗಂ ನೀಲಗಿರಿಯ ಮಗಂ ಮಹೇಂದ್ರಗಿರಿ ಮಹೇಂದ್ರಗಿರಿಯ ಮಗಂ ಶುಭಗಿರಿ ಎಂದಿಂತೆನಿಬರಾನುಮರಸುಗಳ್ ಪೋದಿಂಬೞಿಕ್ಕೆ ನೇಮಿಜಿನತೀರ್ಥದೊಳ್ ಹರಿವಂಶದೊಳ್ ಶೂರವೀರನೆಂಬರಸನಾ ಸೂರ್ಯಪ್ರಭದೇವಾಯತ್ತಮೆಂದು ರಮ್ಯಪ್ರದೇಶದೊಳ್ ಸೂರ್ಯಪುರಮೆಂಬ ಪೊೞಲಂ ಮಾಡಿ ರಾಜ್ಯಂಗೆಯ್ಯುತಿರ್ದನಾತನ ಮಗಂ

ಕಂ || ಅಂಧಕವೃಷ್ಟಿಯುಮಭಿಮತ
ಬಂಧುಕೋದರೆ ಸುಭದ್ರೆಯುಂ ಸುಕೃತ ಮಹಾ (?)
ಬಂಧೋದಯಫಲ ರತಿಸುಖ
ಸಂಧಾರಿತರಾಗಿ ಕೂಡಿ ಸುಖದಿಂದಿರ್ದರ್ ೩೬

ವ || ಆ ಇರ್ವರ್ಗಂ ಪುಟ್ಟಿದಂ ಸಮುದ್ರವಿಜಯಂ ಅಕ್ಷೋಭನುಂ ಸ್ತಿಮಿತನುಂ ಹಿಮಗಿರಿಯಂ ಅವದಂಶನುಂ ವಿಜಯನುಂ ಧಾರಣನುಂ ಪೂರಣನುಂ ಅಭಿಚಂದ್ರನುಂ ವಸುದೇವನುಮೆಂದಿಂತು ಪದಿಂಬರ್ ಮಕ್ಕಳಾದಿಂಬೞಿಯ[೦] ಕೊಂತಿಯು ಮಾದ್ರಿಯು ಮೆಂಬಿರ್ವರ್ ಪೆಂಗೂಸುಗಳ್ ಪುಟ್ಟಿದರಂತು ಸುಖದಿಂದಂಧಕವೃಷ್ಟಿ ರಾಜ್ಯಂಗೆಯ್ಯುತ್ತಿರೆ

ಚಂ || ಅತಿಶಯ ಗಂಧಮಾದನ ವನಾಂತರದೊಳ್ ಬುಧನೂತ ಸುಪ್ರತಿ
ಷ್ಠಿತ ಮುನಿಪುಂಗವರ್ಗೊಗೆದ ಕೇವಳಬೋಧದ ಪೂಜೆಗೆಂದು ವಿ
ಸ್ತೃತ ವಿಭವಾನ್ವಿತ ಪ್ರಕಟದೇವನಿಕಾಯಮೆ ಪೋಗೆ ಕಂಡು ತ
ತ್ಕ್ಷಿತಿಪತಿಯುಂ ಸರಾಗದೊಡವೋದನಸಂಚಳ ಧರ್ಮಚಿತ್ತದಿಂ ೩೭

ವ || ಅಂತು ದೇವನಿಕಾಯದೊಡವೋಗಿ ಕೇವಳಿಗಳಂ ಪೂಜಿಸಿ ಪೊಡವಟ್ಟು ಗಣ ಧರರಂ ಬಂದಿಸಿ ಮುಂದೆ ಕುಳ್ಳಿರ್ದು ಧರ್ಮಮಂ ಕೇಳ್ದು ನಿರ್ವೇಗಂ ಪುಟ್ಟಿ ಸಮುದ್ರವಿಜಯನಂ ಬರಿಸಿ ರಾ[ಜ್ಯಮ]ನೊಪ್ಪಿಸಿ ಮಹಾವಿಭೂತಿಯಿಂದಂಧಕವೃಷ್ಣಿ ದೀಕ್ಷೆಯಂ ಕೈಕೊಂಡು ಪೋದಿಂಬೞಿಯಂ ಸಮುದ್ರವಿಜಯಂ ಜಿನಮಹಾಮಹಿಮೆಗಳಂ ಮಾಡಿಸಿ ತನ್ನ ಪೂರ್ವಜನ್ಮೋಪಾರ್ಜಿತಮಪ್ಪಗಣ್ಯ ಪುಣ್ಯಫಳೋದಯದಿನಷ್ಟಸಹಸ್ರ ಮಕುಟಬದ್ಧ ಮಹೀಪಾಳ ಕಿರೀಟಘಟಿತರತ್ನದ್ಯುತಿ ವಿಚುಂಬಿತ ಪಾದಪದ್ಮೋತ್ತಮನಾಗಿ ಮಹಾಮಂಡಳಿಕಶ್ರೀ ಯನನುಭವಿಸುತ್ತಿರ್ದನಂತಿಪ್ಪಿನಮಾತನ ತಮ್ಮಂದಿರೆಲ್ಲರಿಂ ಕಿಱಿಯಂ ವಸುದೇವನೆಂಬೊಂ ಗರ್ಭಾದ್ಯಷ್ಟಕ ಸಂವತ್ಸರದಿಂ ತಗುಳ್ದುಪಾಧ್ಯಯಾಂತಿಕದೊಳಕ್ಷರಾದಿ ಚತುಃಪಷ್ಟಿಕಳಾಪರಿಣತ ನುಮಭಿನುತನುಮಾಗಿ ಯವ್ವನ ಮದೋನ್ಮತ್ತಚಿತ್ತನಾಗಿ

ಕಂ || ಪರಮ ಪರಾಕ್ರಮಮನುಪಮ
ಗುರುತ್ವಮನವರತ ದಾನಮೆಂಬಿವಱೊಳ್ ಕೇ
ಸರಿಗಂ ಸುರಗಿರಿಗಂ ದಿ
ಕ್ಕರಿಗಂ ಮಿಗಿಲಾದನೆನಿಸಿದಂ ವಸುದೇವಂ ೩೮

ನಿರತಿಶಯತೇಜದಿಂ ಸುಂ
ದರ ಕಾರು[ಣ್ಯ]ದಿನನೂನ ವೈಭವದಿಂ ಭಾ
ಸ್ಕರನೆನೆ ಶಶಧರನೆನೆ ಸುರ
ವರನೆನೆ ಸಲೆ ನೆಗೞ್ದ ನಮಿತಗುಣ ವಸುದೇವಂ ೩೯

ವ || ಇಂತಪ್ಪ ನೆಗೞ್ತೆಯ ಪೊಗೞ್ತೆಯುಮುಂ ಪ್ರತ್ಯಕ್ಷಂ ಮಾಡುವೆನೆಂದೊಂದು ದಿವಸಂ ಕೌಸುಂಭಾಂಬರಂಗಳನುಟ್ಟು ಪದ್ಮರಾಗಮಯಮಪ್ಪಾಭರಣಂಗಳಂ ತೊಟ್ಟು ಕುಂಕುಮ ಮಣಿಗಣಕಿರಣಾರುಣೀಕೃತ ಯೋಗಾಳಂಕಾರ ಅರುಣವರ್ಣ ಹಯಮನೇಱಿ ಸೂತವೈತಾಳಿಕ ವಂದಿಮಾಗಧರ್ಕಳ್ ಪೊಗೞೆ ಪೊೞಲ[ಜೇಂಕಾ]ರದ ವಾದ್ಯಂಗಳ್ ನೆಗೞೆ ಬವಣಿಗೆಗೆ ಪೊಱಮಟ್ಟು

ಕಂ || ಎಳನೇಸಱಂದದಿಂ ತೊಳ
ಪಳವಡೆ ನೇರ್ವಡೆ ಬೆಡಂಗೊಡಂಬಡೆ ಬಪ್ಪ
ಗ್ಗಳಿಕೆಗೆ ಪೊೞಲಚ್ಚರಿವಡೆ
ವಿಳಾಸಮಂ ಮೆಱೆದು ನೆಱೆಯೆ ಸೊಗಯಿಸಿ ತೋರ್ಕುಂ ೪೦

ವ || ಮಱುದಿವಸಂ ದುಕೂಲವಸ್ತ್ರಮನುಟ್ಟು ಮುತ್ತಿನಾಭರಣಮಂ ತೊಟ್ಟು ಮಲ್ಲಿಗೆಯಪೂವಂ ತುಱುಂಬಿ ಚಂದನಮಂ ಪೂಸಿ ರಜತಯೋಗಾಳಂಕೃತಮಪ್ಪ ಶ್ವೇತಾಶ್ವಮನೇಱಿ

ಕಂ || ತಾರಾಗಣ ಪರಿವೃತಮೀ
ಧಾರಿಣಿಗಿೞಿತಂದ ಚಂದ್ರನೆನೆ ಧವಳಾಳಂ
ಕಾರನುದಾರಂ ಸುಜನಾ
ಧಾರಂ ಬವಣಿಗೆಗೆ ಬರ್ಕುಮೊರ್ಮೆ ಕುಮಾರಂ ೪೧

ವ || ಅಲ್ಲಿ ಮಱುದಿವಸಂ ಪೀತಾಂಬರಮನುಟ್ಟು ಮರಕತಮಣಿಮಯ ವಿಭೂಷಣಂಗಳಂ ತೊಟ್ಟು ಜಾಜಿಯ ನನೆಯಂ ತುಱುಂಬಿ ಯಕ್ಷಕರ್ದಮಮಂ ಪೂಸಿ ಹರಿನ್ಮಣಿ ಖಚಿತ ವಿರಾಜಿತ ಹರಿದಶ್ವಮನೇಱೆ ಸೀಗುರಿಗ[ಳಂ]ತಳ್ತು ಪಿಡಿಯೆ

ಕಂ || ರಕ್ಷಿಸುವ ಸಕಳಜನ ಲೋ
ಲಾಕ್ಷಿಗಮವರ್ಗಳ ಮನಕ್ಕಮಾ ವಸುದೇವಂ
ಸಾಕ್ಷಾದತಿಶಯ ವಿಳಸಿತ
ಯಕ್ಷೇಂದ್ರಂ ಬರ್ಪ ತೆಱದೆ ಸೊಗಯಿಸಿ ತೋರ್ಕುಂ ೪೨

ವ || ಅಲ್ಲಿಂ ಮಱುದಿವಸಂ ನೀಲಾವಳಿಯನುಟ್ಟುಮಿಂದ್ರನೀಲಪತ್ರಂಗಳಂ ತೊಟ್ಟು ಮೇಘಮಾಲೆಯಂ ಕಟ್ಟಿ ಕತ್ತುರಿಯಂ ಪೂಸಿ ಹರಿನೀಲ ಪ್ರಭಾಭಾಸಿತ ಕರೀಂದ್ರಮನೇಱಿ ಮಯೂರಪಿಂಛಾತಪತ್ರಸಂಛನ್ನಾಕಾಶ ವಿರಾಜಿತನುಮಾಗಿ

ಕಂ || ಇಂಬಾ[ಗೆ] ಕರಿಯ ಪಸದನ
ಮಿಂಬಾಗೇಱಿರ್ದ ಕರಿಯ ಪಸದನಮಮರೇಂ
ದ್ರಂ ಬರ್ಪಂತಿರೆ ವಸುದೇ
ವಂ ಬರುತಿರೆ ಚೋದ್ಯಮಾಯ್ತು ಪೊೞಲೊಳಗೆಲ್ಲಂ ೪೩

ವ || ಪೆಱತೊಂದು ದಿವಸಂ ಹರಿದ್ರಾ[ಲೇಶ್ಯಾಂ]ಗನಾಗಿ ಸುವರ್ಣವಲ್ಲಿಯನುಟ್ಟು ಕನತ್ಕನಕ ವಿಭೂಷಣರಂಜಿತನಾಗಿ ಪೊಂಜಾಜಿಯಂ ತುಱುಂಬಿ ಹೇಮಮಯ ಯೋಗ ಶೋಭನೀಯಮಪ್ಪ ವೇಸರಿಯನೇಱಿ ಕಳಧೌತಚ್ಛಾಯಾತಪತ್ರಂಗಳ ನಡುವೆ ಬರ್ಪಾಗಳ್

ಕಂ || ಸುರನೋ ಸುರನಲ್ಲಂ ಖೇ
ಚರನೋ ಖೇಚರನುಮಲ್ಲನಭಿನುತ ಚಕ್ರೇ
ಶ್ವರನೋ ಚಕ್ರಿಯುಮಲ್ಲಂ
ನಿರತಿಶಯಾಕಾರನಾತನಾವಂ ಪೇೞಿಂ ೪೪

ವ || ಎಂದಿಂತು ತಮ್ಮೊ[ಳೋರೋ]ರ್ವರಂ ಬೆಸಗೊಳ್ವಾಗಳೀತಂ ಪೆಱನೊರ್ವನಲ್ಲಂ ವಸುದೇವನೆಂದು ನುಡಿಯುತ್ತಿರೆ ದಿವ್ಯವಿದ್ದಿವ್ಯಮಾನುಷ್ಯವಿದ್ಮನುಷ್ಯವಿದಮೆಂದಿಂತು ಮೂಱುಂ ತೆಱದಿಂ ಕಯ್ಗೆಯ್ದು ಬಪ್ಪುದೆಲ್ಲಮಂ ಕಂಡರೆಲ್ಲಂ ಮರುಳ್ಗೊಂಡಂತೆ ಮತಿಗೆಟ್ಟು ಬಾಯಂಬಿಟ್ಟು ಬೞಿಯಂ ತಗುಳೆ ಕೇಳ್ದವರೆಲ್ಲಂ ತಂತಮ್ಮ ನೂಳ್ದಂತೆ ತಮ್ಮವಸ್ಥೆಗಳಂ ಬಗೆಯದೆ ಪರಿಪರಿದು ನೋಡಿ ನಟ್ಟದೃಷ್ಟಿಯನೊಡಂಬಟ್ಟ ಮನಮಂ ತೆಗೆಯಲಾಱದಾತನೆತ್ತೆತ್ತ ಪೋಕುಮತ್ತಲತ್ತಲ್ ಪೋಗುತ್ತಿರಲ್ ಮತ್ತೊಂದು ಬೀದಿಯೊಳೊರ್ವಳ್

ಕಂ || ನೆಲೆಮೊಲೆಗಳಲುಮೆ ಮೇಲುದು
ತೊಲಗೆ ಕುರುಳ್ ಮಿಳಿರ್ದು ಪೊಳೆಯೆ ಮುಡಿ ಬೆನ್ನೊಳ್ ಬಂ
ದಲೆಯೆ ಖಳರುಲಿಯೆ ಪಲರುಂ
ಲಲನೆಯರೊಡನೊಡನೆ ಹರಿದು ನೋಡಿದರಾಗಳ್ ೪೫

ಒಡನಿರ್ದ ನಲ್ಲನಂ ಬಿಸು
ಟುಡುಪಾನನೆ ಪರಿಯೆ ಪರಿದು ಮೇಲುದನೋಪಂ
ಪಿಡಿದೊಡದನಂತೆ ಬಿಸುಟು
ಳ್ದೊಡೆಯ ಸಡಿಲ್ದುಡೆಯನಣಮೆ ಬಗೆಯದೆ ಪರಿದಳ್ ೪೬

ಅತ್ತೆ ಮನೆಯಿದಿರೊಳಿರೆ ಸೊಸೆ
ಪಿತ್ತಿಲ ಪೆರ್ಮ[ದಿಲನೇಱಿ]ಭಯಮಱಿಯದೆ ಪಾ
[ಯ್ವುತ್ತೊಂದುಂ]ಬಗೆಯದೆ ಕ
ಣ್ಬೆತ್ತ ಪಲಂ ಸಫಲಮೆಂದು ನೋಡಲ್ ಬಂದಳ್ ೪೭

ವ || ಪೆಱತೊಂದು ಪೆರ್ಮ[ದಿ]ಲೊಳೊರ್ವಳ್ ಕಯ್ಗೆಯ್ಯಲೆಂದು ತನ್ನ ತುಡಿಗೆಯಂ ತರಿಸಿ ಕೆಲದೊಳಿಟ್ಟಿರ್ದು ವಸುದೇವನ ಬರವಂ ಕೇಳ್ದವಳಲ್ಲಿಯೆ ಬಿಸುಟೆರ್ದು ಪರಿಯೆ ಮನೆಯವಳವಳಂ ಕಂಡಾಕೆಗಡ್ಡಂ ಬಂದಿಂತೆಂಗುಂ

ಕಂ || ಕೈಪಿಡಿಯೆನೆ [ನೀನೆನ್ನಂ
ಕೈಪಿಡಿದಿರು] ನೆಟ್ಟನೆಂದವ [ಳನವಳಾ]ಗಳ್
ಬೈ ಪೋಗದಿ[ರೆಂದೆ]ನೆ ನೀಂ
ಬೈ ಪೋಗೆಂದಂತೆ ಪರಿದು ನೋಡಿದಳೊರ್ವಳ್ (?)

ವ || ಮತ್ತಮಂತೆ ಪೊೞಲೊಳಗೆಲ್ಲ ಪೋಗಿವೋಗಿ ನೋೞ್ಪವರ್ಗಳ್

ಕಂ || ಪರಿದವು ಕಣ್ ಕಂಡಾಗಳೆ
ಪರಿದವು ಮನಮಂತೆ ತಾಮುಮಾತನ ಬಗೆಯಂ
ಪರಿಯುತಿರೆ ಮುಳಿದು ಮದನನ
ಪ[ರಿಯಿಂ]ಪರಿದಂತುಟಾಯ್ತು ಪೊೞಲೊಳಗೆಲ್ಲಂ ೪೯

ವ || ಇಂತು ಪೊೞಲೊಳಗೆಲ್ಲ ಪೆಂಡಿರೆಲ್ಲಂ ಮನೆಯೊಳಿಪ್ಪುದುಮಂ ಮನೆವಾರ್ತೆಗೆ ಮನಂದಪ್ಪುದುಮಂ ಮಕ್ಕಳೊಳಪ್ಪ ಮೋಹಮುಮಂ ಗಂಡನೊಳಪ್ಪ ನೇಹಮುಮಂ ದ್ರವ್ಯದೊಳಪ್ಪ ಶ್ರದ್ಧೆಯುಮಂ ಕಣ್ಗಳೊಳಪ್ಪ ನಿಟ್ಟೆಯುಮಂ ವಿಭವದೊಳಪ್ಪಲಂಕಾರಮುಮಂ ಪಸುವಿಂಗಪ್ಪಾ ಹಾರಮುಮಂ ಬಿಸುಟಿರೆ ಕುಂದದಾತನ ರೂಪು ಕಣ್ಗಳೊಳಂ ಮನದೊಳಂ ತೊೞಲೆ ಮೆಯ್ ಕೞಲೆ ಸೈರಣೆ ಬೞಲೆ ತಮ್ಮುಮಂ ಪೆಱರುಮನಱಿಯದಿರೆ ಮತ್ತೊಂದೆಡೆಯೊಳೊರ್ವಳಿಂತೆನುತಿರ್ದಳ್

ಕಂ || ನೋಯಿಸುವಂ ವಸುದೇವಂ
ನೋಯಿಸುವಂ ಕಾಮದೇವನಲ್ಲೆದೆ[ಯಾ]ಣ್ಮಂ
ನೋಯಿಸುವನಂತು ಮುನ್ನಂ
ನೋಯಿಸಿದುದೆ ನೋವು ಬೞಿಕಿದಾದುದು ನೋವೇ ೫೦

ವ || ಎಂಬುದನಾಕೆಯಾಣ್ಮಂ ಕೇಳ್ದು ಬೆಱಗಾಗಿ ಬೇಸತ್ತಾಗಳೆ ಮನೆಯಿಂ ಪೊಱಮಟ್ಟು ಬಂದು ಬೀದಿಯೊಳೊರ್ವಂ ತನ್ನ ವಂದಿಗನಂ ಕಂಡಿಂತೆದಂ

ಪಿರಿಯಕ್ಕರ ||

ಖಿನ್ನನಾಗಿರ್ದು ಬೆಕ್ಕಸಂಬಟ್ಟು ದೆಸೆಗಳಂ ನೋೞ್ಪಣ್ಣ ಕೇ[ಳಾಂ ಪೇಱುವೆಂ]
ಎನ್ನ ಪೆಂಡತಿ ವಸುದೇವನಂ ಕಾಣುತ್ತೆ ಮರುಳಾದ[ಳಾ]ಗಳಾತನೆಂಗುಂ
ನಿನ್ನ ಪೆಂಡತಿಯೆಂತಾದೊಳಾದಂತೆಯಾಗಿರ್ದಳೆಮ್ಮಾ ಕೆಯೇಗೆಯ್ವೆಮೋ
ಮುನ್ನಮಿನ್ನವಿಂತೆಂಬುವೊಳವೆ ಪೋಪಂ ಬಾ ತಪದತ್ತ ಮನೆಯೊಳೇನೋ ೫೧

ವ || ಎಂದಾತಂಗಾತಂ ಮಱುಮಾತಿತ್ತು ಬೇಸತ್ತು ಮನ್ಯುಕೆತ್ತು ನುಡಿಯುತ್ತಿರ್ದನತ್ತ ಬ್ರಹ್ಮಪುರಿಗೇರಿಯಲ್ಲಿಯೊರ್ವ ಸೋಮಯಾ[ಜಿ] ತನ್ನ ಪಾರ್ವಂತಿ ವಸುದೇವನಂ ಕಂಡಂದಿಂದಿತ್ತ ಮನೆಗೆವಾರದಿರೆ ಮನೆವಾರ್ತೆ ಕಿಡೆ ಸೈರಿಸದೆ ಪೊಱಮಟ್ಟು ಬಂದು ಸಭಾಮಂಟಪದೊಳ್ ಮುನ್ನಂ ತನ್ನಂತೆ ಬೇಸಱಿನೊಳ್ ಬಂದಿರ್ದೊರ್ವ ಭಟ್ಟನಂ ಕಂಡಾತನಿರವಿಂದಾತನ ಚಿಂತೆಯನಱಿದಿಂತೆಂಗುಂ

ಪಿರಿಯಕ್ಕರ ||

ಓದುವಿಸುಟು ಚಿಂತಿಪ್ಪುದೇಕೆನೆ ಭಟ್ಟನೆಂಗುಂ ಬೀದಿಯೊಳಲ್ಲಿ ವಸುದೇವಂ[ಗಂ
ಪೋದುದಂ ಕಂಡೊಡನವನಿಗಾ]ದೆಮ್ಮ ಭಟ್ಟಣಿ ಮರುಳಾಗಿ ತಾಂ ಶೂನ್ಯಮಿಂ
ತಾದೊಳೆಂದೊಡೆ ನಿಮ್ಮಾ[ಕೆ]ಪಾರ್ವಂತಿ ಪೆರ್ಮರುಳ್ ಪತ್ತಿದಂತೆ ಮರುಳಾಗಿ
ಪೋದೊಡಾಕೆಯ ಪೋ[ದುದ]ದೆಸೆಗಾಣೆನೆಂದಡೆ ಸೋಮಯಾಜಿ ಮೂರ್ಛೆಯೋದಂ ೫೨

ವ || ಆಗಳೆಲ್ಲಂ ನೆಱೆದಾತನನೆಚ್ಚಱಿಸಿ ಎಮ್ಮ ಮನೆವಾರ್ತೆಗಳೆಲ್ಲಮಿಂತೆ ಕೆಟ್ಟಿರ್ದುವೆಂದಾಱೆನುಡಿಯುತಿರ್ದರಂತಂತೆ ಮತ್ತಮಲ್ಲಿಯ ಸೂಳೆಗೇರಿಯಲೊಂದೊಂದು ಕಿಱಿಯ ಕುಂಟಣಿಯರಲ್ಲಿಗೆವಂದಿಂತೆಂಬರ್

ಪಿರಿಯಕ್ಕರ ||

ಎಮ್ಮ ಕೇರಿಯ ಸೂಳೆಯರೆಲ್ಲರುಂ ವಸುದೇವಂಗಾಣುತ್ತೆ ಬುದ್ಧಿಗೆಟ್ಟು
ತಮ್ಮ ಗಂಡರಂ ಗಂಡರೆಂದಱಿಯರ್ ಮನೆಯುಮಂ ತಮ್ಮ ದೆಂದು ಬಗೆಯರ್
ನಿಮ್ಮ ಕೂಸುಗಳಾತಂಗೆ ಸೋಲ್ತರೊ ಪೇೞಿಮೆಂದೊ[ಡವರೆಂಬ
ರೆ]ಮ್ಮ ಮಕ್ಕಳನೇವೇೞ್ವೆವೆಮ್ಮೆಮ್ಮ ಚಿತ್ತಮುಂ ಪೋಗೀರ್ದುವಾತನತ್ತಂ ೫೩

ವ || ಎನುತಮಿರ್ದರ್ ಮತ್ತಮಲ್ಲಿಯ ಪರದರ್ ತಮ್ಮ ಪೆಂಡಿರ ಮನಂ ವಸುದೇವನತ್ತಲ್ ಪೋಗಿರ್ದುದುಮಂ ವಿಕಳರಾದುದುಮನಱಿದು ಬೆಱಗಾಗಿರ್ದಲ್ಲಿಯೊರ್ವ ನಿರಲಾಱದಂತಂತೆ ಬಂದು ಚೌವಟದಲ್ಲಿ ತನ್ನ ಮಱುಕದಂತೆ ಚಿಂತೆವೆರಸಿರ್ದ ಸೆಟ್ಟಿಯಂ ಕಂಡಿಂತೆಂದಂ

ಪಿರಿಯಕ್ಕರ ||

ಪರದುವಿಸುಟು ಚಿಂತಿಸುತಿರ್ಪುದೇಕಯ್ಯ ಸೆಟ್ಟಿ ನೀನೆಂದಾಗಳಾತನೆಂಗುಂ
ಸ್ಮರ[ನೆ]ಬರ್ಪಂತೆ ವಸುದೇವಂ ಬರೆ ಕಂಡಾ ಸೆಟ್ಟಿತಿ ಮರುಳಾದೊಳೆಂದೊಡೆನ್ನ
ಪರದಿ ತಾನುಂ ಸೊ[ಸೆ]ದಿರುಮಾತನಂ ಕಂಡಡೆ ಚಿಂತಿಸಿ ವಿಕಳೆಯರಾ
ದರು ಪರದಿನಂದಮೆನಗೀಗಳಿಮ್ಮಡಿಯಾಯ್ತಂತು ನಿಮ್ಮಿರವೆ [ಲೇಸಲ್ತೇ] ೫೪

ವ || ಎಂದಾಗಳಾ ಸೆಟ್ಟಿ ಮತ್ತಮಿಂತೆಂದಂ ಪೊೞಲೊಳಗೆಲ್ಲಮಿಂತಾದೊಡೆಂತಿಲ್ಲಿ ಬಾೞ್ವಮಿದನರಸಂಗೆ ಪುಯ್ಯಲಿಡುವಮದಂ ಕೇಳದಂದು ಪೋಪಮೆಂಬ ಮಾತಂತೆ ಪರೆದೊಡಲ್ಲಿಯ ಪ್ರಭುಗಳೆಲ್ಲಂ ನೆರೆದು ಬಂದು ರಾಜಮಂದಿರಮಂ ಪೊಕ್ಕು ಸಮುದ್ರವಿಜಯನಂ ಕಂಡು ದೇವಾ ಬಿನ್ನಪಮೆಂದಿಂತೆಂದರ್

ಉ || ನಿನ್ನ ಮಹಾಪ್ರಸಾದದಿನನೂನ ಮಹೋನ್ನತ ಚಿತ್ತವೃತ್ತಿಯಿಂ
ದಿನ್ನೆಗಮೊಳ್ಳಿತಿರ್ದೆಮೆಮಗಿನ್ನಿರವಾರದು ನಾಡೆ ದುಃಖಮುಂ
ಬನ್ನ[ಮದ]ಕ್ಕುಮಿಂ ಪಲವು ಮಾತಿನೊಳೇಂ ನಮಗಿಲ್ಲಿ ಬಾೞ್ವಡಂ
ನಿನ್ನಯ ಧರ್ಮಮೆಂದೆ ಬಗೆ ಬೀೞ್ಕೊಳವಂದೆಮಿಳಾತಳಾಧಿಪಾ ೫೫

ವ || ಎಂದೊಡರಸನಂತೆಂಬುದೇನದಱಂದಮನಱಿಯೆ ಪೇೞಿಮೆಂ ದೊಡವರಿಂತೆಂಬರ್

ಮ || ವಸುದೇವಂ ಬರೆ ಕಂಡು ಪೆಂಡಿರೆರ್ದೆಯಂ ಪುಷ್ಪಾಯುಧಂ ಸಾರ್ದು ಪೊ
ರ್ದಿಸೆ ನೊಂದಳ್ಕಿ ಬೞಲ್ದೆಳಲ್ದು ಬಿಸುಸುಯ್ದೋರಂತಳಲ್ವರೆಂದಿ
ಪ್ಪರೆಮ್ಮ ಪೆಂಡಿರ ಕಣ್ಣೊಳು ತೊೞಲುತಿರ್ದಪನದಱಿಂದಳಿದುದು
ಮನೆವಾಳಚಾಳಮೊಪ್ಪುವನಾಣಂ (?) ೫೬

ವ || ಅದಲ್ಲದೆಯುಂ ಪರಮಾತ್ಮಂ ಧ್ಯಾನಿಸುವೊಡಂತರಾತ್ಮನೊ ಪರಮಾತ್ಮನಕ್ಕುಮೊಯೆಂಬ ಸಮಯತ್ವಮಂ ನನ್ನಿಮಾೞ್ಪೆನೆಂಬಂತೆ ಪಗಲುಮಿರುಳುಂ ವಸುದೇವನನೇ ಧ್ಯಾನಿಸುತ್ತಿದೆ ಪುಟ್ಟುವ ಕೂಸುಗಳೆಲ್ಲಮಾತನನೆ ಪೋಲ್ತು ಪುಟ್ಟಿದಪ್ಪುಮೆಮಗಿನ್ನೊಕ್ಕಲ್ತನಕ್ಕೆ ಮೆಯ್ದೆಱಲುಮಿರುಲುಂ ಬಾರದೆಂದೊಡರಸನಿಂತೆಂದಂ

ಮ || ಪ್ರಜೆಯಂ ನೋಯಿಸೆ ಬೇೞ್ಪರಂ ಪೊಗಳಿಪೆಂ ಮುನ್ನಾದ ಧರ್ಮಂಗಳಂ
ಸುಜನರ್ ಜೀಯೆನೆ ಮೋಹದಿಂದಮಳಿದಾಂ ಧರ್ಮಂಗೆಯುತ್ತಿರ್ಪೆನಿಂ
ನಿಜಮಪ್ಪಾಯಮನೋವದೋದಿ ತುೞಿಲಾಳಾಗಿರ್ಪೆನೆಂ[ಬರ್] ಮಹಾ
ವಿಜಯಶ್ರೀಗೆ ಪರತ್ರೆಗುಜ್ವಳಯಶಕ್ಕಕ್ಕಾಟಿ[ಸಿರ್ ಪೇ]ೞೆರೇ ೫೭

ಕಂ || ನ್ಯಾಯಮನೞಿದಳಿಪೊದವಿರೆ
[ಮಾಯಿಸಿ]ಸುಜನರಡುರ್ತು ನೋಯಿಸಿ ಸೆಱೆಯಿ
ಟ್ಟೋಯೆನಿಸಿರ್ದರ್ಥದಿನಾ
ದಾಯಮದನ್ಯಾಯಮೊಳ್ಪಿನಾಸೆಗಪಾಯಂ ೫೮

ವ || ಅದಱಿನೀ ಮನೆವಾರ್ತೆಗೆ ನಿಮ್ಮ ಮನಕ್ಕೆ ನೋವಾಗಲುಂ ಬೇಡೆನ್ನಾತನ ನರಮನೆಯಂ ಪೊಱಮಡಲೀಯೆನಂಜದೆ ನಿಶ್ಚಿಂತಮಿರಿಮೆಂದವರಂ ಪೋಗವೇೞ್ದುಂ ಬೞಿಯಂ

ಮ || ಅೞಿಗೆಯ್ದಂ ವಸುದೇವನೊಳ್ ಪೊರೆಗಮೋ ರೂಪಿಂಗೆ ಸೋಲ್ತೀಗಳೀ
ಪೊೞಲೆಲ್ಲಂ ನುಡಿವಾಗಳಿಲ್ಲದೊಡಮುಂಟಾಗಿರ್ಕುಮಂತುಂ ಜನಂ
ಪೞಿಗುಂ ಪೆಂಪೞಿಗುಂ ನಿತಾಂತಮದಱಿಂದೆಂತಾಗಿಯುಂ ತಮ್ಮನಂ
ತೊೞಲಲ್ಕೆತ್ತಲುಮೀಯೆನೆಂಬ ಬಗೆಯಿಂದಿರ್ದಂ ನರೇಂದ್ರೋತ್ತಮಂ ೫೯

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಕುಮಾರೋದಯವರ್ಣನಂ

ಪ್ರಥಮಾಶ್ವಾಸಂ