ಭಾಷೆಯನ್ನು ನಾವು ಹಲವು ಉದ್ದೇಶಗಳಿಗಾಗಿ ಬಳಸುತ್ತೇವೆ. ದಿನನಿತ್ಯದ ಹತ್ತಾರು ವ್ಯವಹಾರಗಳಿಗೆ, ವ್ಯಾಪಾರ ವ್ಯವಹಾರಗಳಿಗೆ, ತರ್ಕಬದ್ಧ ವಿಚಾರ ಮಂಡನೆಗೆ, ಮಾಹಿತಿ ರವಾನೆಗೆ ಹೀಗೆ ಬೇರೆ ಬೇರೆ ಉದ್ದೇಶಗಳಿಗಾಗಿ ಭಾಷೆಯನ್ನು ಬಳಸುವುದು ನಮ್ಮ ಅನುಭವದ ಭಾಗವೇ ಆಗಿದೆ. ಇಂಥ ಬಳಕೆಗಳಲ್ಲಿ ಆಡುಮಾತಿನಂತೆ ಲಿಖಿತ ಭಾಷೆಯೂ ಉಪಯೋಗಕ್ಕೆ ಬರುವುದು. ಈ ಬಳಕೆಗಳು ಕೆಲವೊಮ್ಮೆ ಒಂದೆರೆಡು ವಾಕ್ಯಗಳಲ್ಲಿ ಮುಗಿದರೆ ಮತ್ತೆ ಕೆಲವು ಕಡೆ ಬಹು ದೀರ್ಘ ಸಂಕಥನಗಳಾಗಿರುತ್ತವೆ. ಬಸ್‌ನಲ್ಲಿ ಟಿಕೆಟ್ ಪಡೆಯಲು ನಡೆಸುವ ಸಂಭಾಷಣೆ ಒಂದು ಮಾದರಿಯಾದರೆ ತಾತ್ತ್ವಿಕ ಗ್ರಂಥವೊಂದಕ್ಕೆ ಬರೆದ ಸಾವಿರಾರು ಪುಟಗಳ ವ್ಯಾಖ್ಯಾನ ಮತ್ತೊಂದು ಮಾದರಿ.

ಭಾಷೆಯ ಈ ವಿವಿಧ ಬಳಕೆಗಳನ್ನು ಗಮನಿಸಿದರೆ ಅವೆಲ್ಲವೂ ಬೇರೆ ಬೇರೆಯಾಗಿರುವುದು ನಮಗೆ ಗೊತ್ತಾಗುತ್ತದೆ. ಒಂದು ಇನ್ನೊಂದರಿಂದ ಹೇಗೆ ಬೇರೆ ಎಂಬುದನ್ನು ವಿವರಿಸಲು ನಾವು ಅಸಮರ್ಥರಾಗಿರಬಹುದು. ಆದರೆ ಅವು ಬೇರೆ ಎಂದು ತಿಳಿಯಲು ಮಾತ್ರ ನಮಗೆ ಖಂಡಿತಾ ಸಾಧ್ಯ. ಒಂದೊಂದು ಶಬ್ದ, ಪದರಚನೆ, ವಾಕ್ಯರಚನೆ, ವಾಕ್ಯೋತ್ತರ ಘಟಕಗಳು ಇವೆಲ್ಲವೂ ಬೇರೆ ಬೇರೆ ಪ್ರಮಾಣದಲ್ಲಿ ಭಿನ್ನವಾಗಿರುತ್ತವೆ. ವಿಶೇಷ ರೀತಿಯ ವಾಗ್ರೂಢಿಗಳು ಆಯಾ ಬಳಕೆಗೇ ಮೀಸಲಾಗಿರುವುದೂ ನಮ್ಮ ಗಮನಕ್ಕೆ ಬರುತ್ತದೆ.

ಬಳಕೆಗಳ ನಡುವೆ ಇರುವ ವ್ಯತ್ಯಾಸ ನಮ್ಮ ಗಮನಕ್ಕೆ ಬರುವುದೊಂದು ಬಗೆಯಾದರೆ ಕೆಲವೊಮ್ಮೆ ನಿರ್ದಿಷ್ಟ ಆವರಣದಲ್ಲಿ ಬಳಕೆಯಾದ ಭಾಷೆ ನಮಗೆ ಅರ್ಥವೇ ಆಗುವುದಿಲ್ಲವೆಂದೂ ಅನ್ನಿಸುತ್ತದೆ. ಎಲ್ಲ ಕಡೆಯೂ ಕನ್ನಡವೇ ಬಳಕೆಯಾದರೂ ನಮಗೆ ಕೆಲವು ಪ್ರಸಂಗಗಳ ಕನ್ನಡ ಕಬ್ಬಿಣದ ಕಡಲೆಯಂತೆ ತೋರುತ್ತದೆ. ಸರಕಾರದ ಆದೇಶಗಳು, ಕಾನೂನು ವ್ಯವಹಾರದ ದಾಖಲೆಗಳು, ವಿಜ್ಞಾನದ ಲೇಖನ, ಸಾಹಿತ್ಯ ವಿಮರ್ಶೆಯ ಬರೆಹ, ಅರ್ಥಶಾಸ್ತ್ರದ ಬರೆಹ ಇವೆಲ್ಲವೂ ಕನ್ನಡದಲ್ಲಿದ್ದಾಗಲೂ ನಮಗೆ ಅರ್ಥ ವಾಗದೇ ಹೋಗುವುದನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಇಂಥ ಪ್ರಸಂಗ ಗಳಿಗೆ ನಮ್ಮ ಪ್ರತಿಕ್ರಿಯೆಗಳು ಬಗೆಬಗೆಯಾಗಿರಬಹುದು. 1. ಕನ್ನಡದ ಎಲ್ಲ ಬಳಕೆಗಳೂ ವಿಶಿಷ್ಟವಾಗಿರುವುದರಿಂದ ನಾವು ಎಲ್ಲ ಆಯಾ ಬಳಕೆಯ ವಿಶಿಷ್ಟತೆಗಳನ್ನು ಅರಿಯದ ಹೊರತು ಅವು ನಮಗೆ ಅರ್ಥವಾಗುವುದಿಲ್ಲವೆಂದು ತಿಳಿಯಬಹುದು. 2. ಹೀಗೆ ಬಳಕೆಗಳು ಅತಿ ವಿಶಿಷ್ಟಗೊಳ್ಳುವುದು ತಪ್ಪೆಂದು ವಾದಿಸಬಹುದು. ಅಥವಾ 2. ವಿಶಿಷ್ಟತೆಯನ್ನು ಕಡಿಮೆ ಮಾಡಿ, ಭಾಷಾ ಬಳಕೆಯನ್ನು ಸರಳಗೊಳಿಸಿ ಎಲ್ಲರಿಗೂ ಅರ್ಥವಾಗುವಂತೆ ಮಾಡಬೇಕೆಂದು ಹೇಳಬಹುದು. ಸಾಮಾನ್ಯ ವ್ಯವಹಾರದಲ್ಲಿ ಮೂರನೆಯ ಪ್ರತಿಕ್ರಿಯೆ. ಸಾಧ್ಯತೆ ಹೆಚ್ಚು. ಇದು ಅಧಿಕೃತವಾಗಿ ಸರಕಾರದ, ಭಾಷಾ ಯೋಜಕರ ನಿಲುವೂ ಆಗಿರುತ್ತದೆ. ಅದಕ್ಕಾಗಿಯೇ ವಿವಿಧ ಆವರಣಗಳ ಾಷಾ ಬಳಕೆಯನ್ನು ಹೆಚ್ಚು ಸಂವಹನಶೀಲವನ್ನಾಗಿ ಮಾಡಲು ‘ಸರಳೀಕರಿಸ’ಬೇಕೆಂದು ಅವರು ತಿಳಿಯುತ್ತಾರೆ. ಇಂಥ ಸರಳೀಕರಣಕ್ಕಾಗಿ ಯೋಜನೆಗಳನ್ನು ರೂಪಿಸುತ್ತಾರೆ.

ಭಾಷಾ ಬಳಕೆಯ ವಿವಿಧ ಸನ್ನಿವೇಶಗಳಲ್ಲಿ ವಿಶಿಷ್ಟತೆಯನ್ನು ಕಾಯ್ದು ಕೊಳ್ಳಬೇಕೆಂದೂ ಸಂವಹನಶೀಲತೆಗಾಗಿ ಆ ವಿಶಿಷ್ಟತೆಯನ್ನು ಕೈಬಿಡಲು ಸಾಧ್ಯವಿಲ್ಲವೆಂದೂ ವಾದಿಸುವವರಿದ್ದಾರೆ. ಸರಳೀಕರಣ ಯತ್ನಗಳು ಇಂಥವರ ದೃಷ್ಟಿಯಿಂದ ನಿರುಪಯುಕ್ತ.

ಮತ್ತೊಂದು ಹೊಸ ಪ್ರವೃತ್ತಿಯೂ ಈಗ ಕಾಣತೊಡಗಿದೆ. ತಜ್ಞ ಬಳಕೆಯ ಜತೆಗೆ ಆಯಾ ಕ್ಷೇತ್ರದಲ್ಲಿ ಸಂವಹನಶೀಲವಾದ ಮತ್ತೊಂದು ರೀತಿಯ ಭಾಷಾ ಬಳಕೆಯನ್ನು ರೂಪಿಸಬೇಕೆಂಬುದು ಈ ಪ್ರವೃತ್ತಿಯ ಲಕ್ಷಣ. ವಿಜ್ಞಾನದ ತಜ್ಞ ಬರೆಹಗಳ ಭಾಷಾ ಮಾದರಿಯು ಒಂದಾದರೆ ಜನಪ್ರಿಯ ವಿಜ್ಞಾನದ ಬರೆಹಗಳ ಭಾಷಾ ಮಾದರಿ ಇನ್ನೊಂದು. ಮೊದಲನೆಯದು ಕೇವಲ ತಜ್ಞರಿಗಾಗಿ ಇದ್ದು. ಬಳಕೆಯ ವಿಶಿಷ್ಟತೆಗಳನ್ನು ಕಾಯ್ದುಕೊಳ್ಳುತ್ತವೆ. ಎರಡನೆಯದು ಸಂವಹನಶೀಲತೆಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿದ್ದು ಭಾಷಾ ಬಳಕೆಯಲ್ಲಿ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ.

ಕಾನೂನು ಭಾಷೆ

ನ್ಯಾಯಾಲಯದಲ್ಲಿ ಬಳಕೆಯಾಗುವ ಭಾಷೆಯಲ್ಲಿ ಅತಿ ನಿಖರತೆಗೆ ಹೆಚ್ಚು ಒತ್ತು ಬೀಳುತ್ತದೆ. ದಂಡ ಸಂಹಿತೆಗಳು, ಅಧಿನಿಯಮಗಳು, ತೀರ್ಪುಗಳು, ವಾದಗಳು ಇವೆಲ್ಲವೂ ಸಂಕೀರ್ಣವಾದ ಭಾಷಾ ರಚನೆಯನ್ನು ಹೊಂದಿರುತ್ತವೆ. ಈ ಸಂಕೀರ್ಣತೆಗೆ ವಿಷಯದ ಗಹನತೆ ಅಥವಾ ಮಂಡಿಸುವುದರ ತಜ್ಞತೆ ಮಾತ್ರ ಕಾರಣವಲ್ಲ. ವಾಕ್ಯಾರ್ಥಗಳನ್ನು ಹೆಚ್ಚು ನಿಖರಗೊಳಿಸಲೆಂದು ವಾಕ್ಯ ರಚನೆ ಯನು್ನ ವಿಶಿಷ್ಟವಾಗಿ ರೂಪಿಸುವುದು ಅವಶ್ಯವಾಗುತ್ತದೆ. ಭಿನ್ನ ವಾಖ್ಯೆಗಳಿಗೆ ಅವಕಾಶವಿಲ್ಲದಂತೆ, ಅರ್ಥ ಸಂದಿಗ್ಧತೆಯನ್ನು ಉಂಟು ಮಾಡದ ವಾಕ್ಯ ರಚನೆ ಅನಿವಾರ್ಯವಾಗುತ್ತದೆ.

ಹೀಗಿದ್ದರೂ ಕಾನೂನು ಭಾಷೆಯ ಸಂಕೀರ್ಣತೆಯು ಎಲ್ಲ ಸಂದರ್ಭದಲ್ಲೂ ಸಹಜವೇ ಆಗಿರುತ್ತದೆಂದು ವಾದಿಸಲು ಬರುವುದಲ್ಲ. ಸೋಗಿನ ಸಂಕೀರ್ಣ ತೆಯೂ ಸಾಧ್ಯ. ಇಂಥ ಸಂದರ್ಭದಲ್ಲಿ ಆ ಭಾಷೆಯ ಮುಖ್ಯ ಕೊರತೆಗಳನ್ನು ಗುರುತಿಸಲು ತಜ್ಞರು ಯತ್ನಿಸಿದ್ದಾರೆ. ಅವರ ಪ್ರಕಾರ ಪದಗಳ ಅತಿಬಳಕೆ, ಅಸ್ಪಷ್ಟತೆ, ಅತಿ ಅಲಂಕರಣ ಮತ್ತು ಅನಾಕರ್ಷಕತೆಗಳು ಈ ಭಾಷಾ ಬಳಕೆಯ ಅವಗುಣಗಳು.

ಪದಗಳ ಅತಿಬಳಕೆ : ಕಡಿಮೆ ಶಬ್ದಗಳಲ್ಲಿ ಹೇಳಬಹುದಾದ್ದನ್ನು ಹೆಚ್ಚು ಶಬ್ದಗಳಲ್ಲಿ ಹೇಳುವುದು ಮತ್ತು ಹೇಳಿದ್ದನ್ನೇ ಮತ್ತೆ ಹೇಳುವುದು. 

ಅಸ್ಪಷ್ಟತೆ : ದೀರ್ಘವಾಕ್ಯಗಳಿಂದಾಗಿ ಅರ್ಥ ಸಂಯೋಜನೆ ಕ್ಲಿಷ್ಟವಾಗುವುದು. ಹಾಗಾಗಿ ಅರ್ಥ ಅಸ್ಪಷ್ಟವಾಗುತ್ತದೆ.

ಅತಿ ಅಲಂಕರಣ : ನೇರವಾಗಿ ಹೇಳುವ ಬದಲು, ಬಳಕೆಯಲ್ಲಿಲ್ಲದ ಪದರಚನೆಗಳನ್ನು ಬಳಸಿ ಹೇಳುವುದು. 

ಅನಾಕರ್ಷಕತೆ : ಅತಿ ಸೂಕ್ಷ್ಮ ವಿವರಗಳನ್ನು ಹೇಳಲೇಬೇಕೆಂಬ ಛಲದಿಂದಾಗಿ ಇಡೀ ಬರೆವಣಿಗೆಯೇ ಓದುವಂತಿರುವುದಿಲ್ಲ. ಓದು ಬೇಸರವನ್ನು ಆಯಾಸವನ್ನು ಉಂಟುಮಾಡುತ್ತದೆ.

ಕಾನೂನಿನ ಭಾಷೆ : ಕನ್ನಡದಲ್ಲಿ ಕಾನೂನಿನ ಭಾಷೆ ಎರಡು ರೀತಿಯಲ್ಲಿದೆ. ಜನರಿಗೆ ಅರ್ಥವಾಗುವ ರೀತಿಯಲ್ಲಿ ವಿವರಗಳನ್ನು ನೀಡುವ ಬರೆವಣಿಗೆಗಳ ರೀತಿಯೊಂದು. ಪತ್ರಿಕೆಗಳ ಅಂಕಣದಲ್ಲಿ, ಪುಸ್ತಿಕೆಗಳಲ್ಲಿ ಮಾದರಿ ಕಾಣಸಿಗುತ್ತದೆ. ನಿದರ್ಶನಗಳನ್ನು ಅವಲಂಬಿಸಿದ ಇಂಥ ಬರೆಹಗಳ ಭಾಷೆಗೆ ಸಂವಹನಶೀಲತೆಯೇ ಮುಖ್ಯ ಗುರಿ. ತೀರ್ಪುಗಳು, ವಾದವಿವಾದಗಳು, ವಿಶ್ಲೇಷಣೆಗಳು. ದಂಡ ಸಂಹಿತೆಗಳು, ಅಪರಾಧ ಪ್ರಕ್ರಿಯಾ ಸಂಹಿತೆಗಳು ಇವೆಲ್ಲವೂ ಬಹುಮಟ್ಟಿಗೆ ಅನುವಾದಗಳು. ತೀರ್ಪುಗಳನ್ನು ಕೇಳಿ ಕೋರ್ಟುಗಳಲ್ಲಿ ಕನ್ನಡದಲ್ಲಿಯೇ ನೀಡಲು ಅವಕಾಶವಿದೆ. ಅವುಗಳನ್ನು ಹೊರತುಪಡಿಸಿದರೆ ಉಳಿದ ಬರೆವಣಿಗೆಯೆಲ್ಲ ಅನುವಾದ. ಅನುವಾದದಲ್ಲಿ ಯಾವ ರೀತಿಯ ಪದರಚನೆಗಳನ್ನು ಪ್ರಮಾಣೀಕೃತವೆಂಬಂತೆ ತೆಗೆದುಕೊಳ್ಳುವುದೆಂಬ ಪ್ರಶ್ನೆ ಅನಿಶ್ಚಿತವಾಗಿದೆ.

ಧರ್ಮ ಮತ

ಪುರಾಣಗಳು ಮತ ಧರ್ಮಗಳ ಒಂದು ಮುಖ್ಯ ಭಾಗ. ಜತೆಗೆ ಧಾರ್ಮಿಕ ತತ್ತ್ವಗಳು ಆಚರಣೆಗಳು ಕೂಡಾ ಸೇರುತ್ತವೆ. ಇಲ್ಲೆಲ್ಲಾ ಭಾಷಾ ಬಳಕೆ ಅನಿವಾರ್ಯ. ಈ ಉದ್ದೇಶಕ್ಕಾಗಿ ಬಳಸುವ ಭಾಷೆ. ಪದಕೋಶ ಮತ್ತು ರಚನೆ ವಿಶಿಷ್ಟವಾಗಿರುತ್ತವೆ. ಆಯಾ ಮತ ಧರ್ಮದವರು ಆ ಭಾಷೆಯನ್ನು ಪವಿತ್ರ ವೆಂದು ತಿಳಿಯುತ್ತಾರೆ. ಪ್ರತಿಧರ್ಮವೂ ಕನಿಷ್ಠ ಒಂದು ಪರಮ ಶ್ರೇಷ್ಠ ಗ್ರಂಥವನ್ನು ಹೊಂದಿರುತ್ತದೆ. ಅಲ್ಲಿನ ಭಾಷೆಯಂತೂ ಆ ಧರ್ಮೀಯರಿಗೆ ಪರಮಪವಿತ್ರ. ಹೆಚ್ಚು ಧರ್ಮಗಳಲ್ಲಿ ಅಲ್ಲಿನ ಮಾತುಗಳಲ್ಲಿ ದೇವರು ಅಥವಾ ದೈವಾಂಶ ಸಂಭವರು ನುಡಿದರೆಂಬ ನಂಬಿಕೆ ಇರುವುದು. ಕೆಲವು ಧರ್ಮಗಳು ಆ ಧರ್ಮ ಗ್ರಂಥಗಳ ಮಾತು ಅಪೌರುಷೇಯವೆಂದೂ ತಂತಾನೇ ಸಂಭವಿಸಿದವು ಎಂದು ನಂಬುತ್ತವೆ. ಸಿಖ್ ಧರ್ಮದಲ್ಲಿ ‘ಗ್ರಂಥ್ ಸಾಹಿಬಾ’ ಎಂಬ ಧರ್ಮ ಗ್ರಂಥವೇ ನಿತ್ಯ ಪೂಜೆಯ ವಸ್ತು. ಪರ್ಯಾಯವಾದ ಯಾವ ಪೂಜಾರ್ಹ ವಸ್ತುವೂ ಆ ಧರ್ಮದಲ್ಲಿಲ್ಲ.

ಈ ಧರ್ಮಗ್ರಂಥಗಳಲ್ಲಿ ಭಾಷೆಯ ಶಬ್ದಸ್ತರಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ. ಶಬ್ದ ರೂಪದಲ್ಲಿ ಯಾವ ವ್ಯತ್ಯಾಸವನ್ನೂ ಮಾಡಬಾರದೆಂಬ ನಿಯಮವೊಂದು ಬಹುಪಾಲು ಧರ್ಮಗಳಲ್ಲಿರುತ್ತದೆ. ಅಂದರೆ ಶಬ್ದ ರೂಪದಲ್ಲಿ ವ್ಯತ್ಯಾಸ ಮಾಡುವುದು; ಸಮಾನಾರ್ಥಕ ಪದಗಳಿಂದ ಭಿನ್ನ ಶಬ್ದರೂಪವನ್ನು ಬಳಸುವುದು ಇವೆಲ್ಲವೂ ನಿಷಿದ್ಧ. ಈ ನಂಬಿಕೆಯ ಇನ್ನೊಂದು ತುದಿಯೆಂದರೆ ನಿರುಪಯುಕ್ತವೆಂದು ತಿಳಿಯುವುದು. ವೇದಗಳ ಮಂತ್ರಗಳನ್ನು ಇದಕ್ಕೆ ನಿದರ್ಶನಗಳನ್ನಾಗಿ ನೋಡಬಹುದು. ಮಂತ್ರಗಳು ಕಟ್ಟುನಿಟ್ಟಾದ ಶಬ್ದ ಕಟ್ಟಡಗಳು. ಅವುಗಳ ಸಾಮರ್ಥ್ಯವೆಲ್ಲ ಶಬ್ದ ರಚನೆಯಲ್ಲೇ ಇದೆ. ಮಂತ್ರಗಳ ಅರ್ಥವೆಂಬುದು ಅಪ್ರಸ್ತುತ.

ಮತಧರ್ಮಗಳು ತಮ್ಮ ಧರ್ಮಗ್ರಂಥಗಳು ಯಾವ ಭಾಷೆಯಲ್ಲಿ ರಚಿತವಾಗಿರುತ್ತವೆಯೋ ಆ ಭಾಷೆಗಳನ್ನು ಪವಿತ್ರವೆಂದು ತಿಳಿಯುತ್ತವೆ. ಆ ಭಾಷೆಯಲ್ಲಿಲ್ಲದೆ ಅನ್ಯ ಭಾಷೆಗಳಲ್ಲಿ ತಂತಮ್ಮ ಧರ್ಮ ಗ್ರಂಥಗಳು ಇರುವುದು ದೈವದ್ರೋಹವೆಂಬ ನಂಬಿಕೆಯೂ ಇದೆ. ವೇದಗಳ ಸಂಸ್ಕೃತ, ಝಂಡಾ ಅವೆಸ್ತಾದ ಅವೆಸ್ತನ್, ಕೊರಾನ್‌ನ ಅರಾಬಿಕ್ ಬೈಬಲ್‌ನ ಲ್ಯಾಟಿನ್ ಹೀಗೆ ಪವಿತ್ರ ಭಾಷೆಗಳು. ಆದರೆ ವುತಧರ್ಮಗಳು ಚರಿತ್ರೆಯ ಗತಿಯೊಡನೆ ತಮ್ಮ ನಂಬಿಕೆಯನ್ನೂ ಬದಲಾಯಿಸಿಕೊಂಡಿವೆ. ಜನರ ಭಾಷೆಯಲ್ಲಿ ಧರ್ಮ ಪ್ರವಚನ ನಡೆಸಲು ಹೊರಟ ಧರ್ಮಗಳು ಈ ಭಾಷಾ ಪಾವಿತ್ರ್ಯದ ಚೌಕಟ್ಟನ್ನು ಮುರಿದವು, ಬೌದ್ಧಧರ್ಮ ಪಾಲಿಯನ್ನು, ಜೈನ ಧರ್ಮ ಪ್ರಾಕೃತವನ್ನು ಬಳಸಿದ್ದು ಹೀಗೆ. ಪ್ರಾಚೀನ ಧರ್ಮಗಳ ಪವಿತ್ರ ಗ್ರಂಥಗಳೂ ಅನ್ಯ ಭಾಷೆಗಳಿಗೆ ತರ್ಜುಮೆಯಾಗುವುದು ಅನಿವಾರ್ಯವಾಯ್ತು. ಧರ್ಮ ಪ್ರಸಾರದೊಡನೆ ಧರ್ಮಾನುಯಾಯಿಗಳು ಜಾಗತಿಕವಾಗಿ ವಿವಿಧ ಭಾಷೆಗಳನ್ನಾಡುವವರಾದ್ದರಿಂದ ಇಂಥ ಭಾಷಾಮರ್ಯಾದೆಯನ್ನೂ ಧರ್ಮಗಳು ಬಿಟ್ಟುಕೊಟ್ಟವು. ಬೈಬಲ್ ಈಗ ಜಗತ್ತಿನ ಅತಿ ಹೆಚ್ಚು ಭಾಷೆಗಳಿಗೆ ಅನುವಾದ ವಾಗಿರುವ ಗ್ರಂಥ. ಮೂಲಭಾಷೆಯಿಂದ ಅನ್ಯಭಾಷೆ ಗಳಿಗೆ ಈ ಧರ್ಮಗ್ರಂಥಗಳು ಅನುವಾದಗೊಂಡಿದ್ದರೂ ಅಧಿಕೃತತೆಯ ದೃಷ್ಟಿಯಿಂದ ಮೂಲಭಾಷಾ ಆವೃತ್ತಿಯೇ ಈಗಲೂ ಪವಿತ್ರವೆನಿಸುತ್ತದೆ. ಅಲ್ಲದೆ ಹಲವು ಅನುವಾದಗಳು ಒಂದೇ ಭಾಷೆಯಲ್ಲಿ ಸಾಧ್ಯ. ಬೇರೆ ಬೇರೆ ಅನುವಾದಗಳು ಮೈ ತಳೆದಿವೆ. ಹೀಗಿರುವಾಗ ಅಧಿಕೃತತೆ ಮೂಲಭಾಷಾ ಆವೃತ್ತಿಗೆ ಸಂದಿರುವುದರಲ್ಲಿ ಆಶ್ಚರ್ಯವಿಲ್ಲ. ಧರ್ಮಗಳಲ್ಲಿ ಕೆಲವು ತಮ್ಮ ಧರ್ಮಗ್ರಂಥಗಳ ಅನುವಾದದ ಮೇಲಣ ಹಿಡಿತವಿರಿಸಕೊಳ್ಳಬಯಸುತ್ತವೆ. ಧರ್ಮಗುರುಗಳು ಒಪ್ಪಿಗೆ ನೀಡಿದ ಅನುವಾದಗಳನ್ನು ಧರ್ಮಗಳು ಬಳಸಬಾರದೆಂಬ ಸೂಚನೆಯಿದೆ. ಅನುವಾದಗಳಲ್ಲಿ ಮೂಲದ ಯಾವ ಅರ್ಥಗಳನ್ನು ವ್ಯತ್ಯಯಗೊಳಿಸಲಾಗಿದೆ ಅಥವಾ ಅನುವಾದದ ಭಾಷಾ ಬಳಕೆಗೆ ಧಾರ್ಮಿಕ ಸಂದರ್ಭದ ಗಹನತೆಗೆ ತಕ್ಕುದಾಗಿ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿಯೇ ಅನಂತರ ಧರ್ಮಗುರುಗಳು ಅನುವಾದಗಳಿಗೆ ತಮ್ಮ ಒಪ್ಪಿಗೆ ನೀಡುತ್ತಾರೆ.

ಧರ್ಮಗಳಿಗೆ ಸಂಬಂಧಿಸಿದ ಭಾಷಾ ಬಳಕೆಗಳಲ್ಲಿ ಹಲವು ಬಗೆಗಳಿರುತ್ತವೆ. ಪವಿತ್ರ ಗ್ರಂಥಗಳು, ವ್ಯಾಖ್ಯಾನ ಗ್ರಂಥಗಳು, ಪುರಾಣಗಳು, ಆಚರಣೆ ಸಂಬಂಧದ ವಿವರಗಳು, ವ್ರತಾಚರಣೆ ವಿಧಿಗಳು, ಸ್ತೋತ್ರಗಳು, ಮಂತ್ರಗಳು ಹೀಗೆ ಹಲವಾರು ಬಗೆಗಳು. ಕೆಲವು ಭಾಷಾ ಬಳಕೆಗಳು ಪ್ರಭುಸಂಮಿತ ಮಾದರಿಯಲ್ಲಿರುತ್ತವೆ. ಅಂದರೆ ಅಲ್ಲಿ ಹೇಳಲಾದುದೆಲ್ಲ ಅನುಸರಣೀಯ. ಪ್ರಶ್ನಾರ್ಹವಾದುದೇನೂ ಅಲ್ಲಿ ಇಲ್ಲ. ಮತ್ತೆ ಕೆಲವು ಭಾಷಾ ಬಳಕೆಗಳು ಕಥನದ ಮಾದರಿಯಲ್ಲಿದ್ದು ಧಾರ್ಮಿಕ ಭಾವನೆಯನ್ನು ಉದ್ದೀಪಿಸುವ ಬೆಳೆಸುವ, ಪೋಷಿಸುವ ಉದ್ದೇಶವನ್ನು ಹೊಂದಿರುತ್ತವೆ. ಅದಕ್ಕೆ ತಕ್ಕಂತೆ ಭಾಷಾ ರೂಪಗಳನ್ನು, ಭಾಷಾ ರಚನೆಗಳನ್ನು ಬಳಸುತ್ತವೆ. ಧರ್ಮದ ಭಾಷೆ ಬಹುಮಟ್ಟಿಗೆ ಸಂಸ್ಕೃತಿ ವಿಶಿಷ್ಟವಾಗಿರುತ್ತವೆ. ಆಯಾ ಸಂಸ್ಕೃತಿಗೆ ಸಂಬಂಧಿಸಿದ ವಿವರಗಳು ಅದರಲ್ಲಿ ಇರುವುದರಿಂದ ಈ ವಿಶಿಷ್ಟತೆ ಮೈಗೂಡಿರುತ್ತದೆ. ಆದರೆ ಅದಕ್ಕಿ ಮಿಗಿಲಾಗಿ ಧರ್ಮದ ಪರಿಭಾಷೆಯೇ ಆಯಾ ಭಾಷೆಗೆ ವಿಶಿಷ್ಟ. ಆದ್ದರಿಂದಲೇ ಧರ್ಮಗ್ರಂಥಗಳ ಅನುವಾದಗಳು ಕ್ಲಿಷ್ಟಕರ. ಸಮಾನಾರ್ಥಕ ಗಳನ್ನು ಬಳಸುವುದು ಅಸಾಧ್ಯವೆನಿಸುವ ಸಂದರ್ಭಗಳೇ ಅಧಿಕ. ಇಂಥ ವೇಳೆಗಳಲ್ಲಿ ಆಯಾ ಧಾರ್ಮಿಕ ಪರಿಭಾಷೆಯನ್ನು ಇನ್ನೊಂದು ಭಾಷೆ ಎರವಲು ಪಡೆಯುವುದೇ ಸಹಜ ಮಾರ್ಗವಾಗುತ್ತದೆ.

ಶಾಸ್ತ್ರಗಳ ಭಾಷೆ

ವಿವಿಧ ಶಾಸ್ತ್ರಗಳು ತಮ್ಮ ಜ್ಞಾನವನ್ನು ಲಿಖಿತವಾಗಿ ದಾಖಲು ಮಾಡಲು ಭಾಷೆಯನ್ನು ಬಳಸುತ್ತವೆ. ಶಾಸ್ತ್ರಗಳು ಮತ್ತು ಆಚರಣೆಗಳು ಬೇರ್ಪಡದಿದ್ದ ಸಂದರ್ಭದಲ್ಲಿ ಜ್ಞಾನವನ್ನು ಲಿಖಿತವಾಗಿ ದಾಖಲಿಸುವ ಅವಶ್ಯಕತೆ ಇರಲಿಲ್ಲ. ಆದರೆ ಸಾಂಸ್ಕೃತಿಕ ಪಲ್ಲಟಗಳಿಂದಾಗಿ ಶಾಸ್ತ್ರಜ್ಞಾನವನ್ನು ಭಾಷಾ ರೂಪದಲ್ಲಿ ಸಂಯೋಜಿಸುವುದು ಅನಿವಾರ್ಯವಾಯಿತು. ಅನಂತರ ಅದನ್ನೇ ಲಿಪೀಕರಣ ಗೊಳಿಸುವ ಹಂತವನ್ನೂ ತಲುಪಿದ್ದೇವೆ.

ಶಾಸ್ತ್ರಜ್ಞಾನ : ಕೇವಲ ಸಿದ್ಧಾಂತ ನಿರೂಪಣೆಯಾಗಿರಬಹುದು ಅಥವಾ ಕಾರ್ಯಸೂಚಿಯಾಗಿರಲೂಬಹುದು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಹೀಗೆ ಎರಡು ಮಾದರಿಗಳನ್ನು ಪ್ರತಿನಿಧಿಸುವುವು. ವಿಜ್ಞಾನದಲ್ಲಿ ಸಿದ್ಧಾಂತ ನಿರೂಪಣೆಯೊಡನೆ ಪ್ರಾಯೋಗಿಕ ವಿವರಗಳೂ ಸೇರುತ್ತವೆ. ತಂತ್ರಜ್ಞಾನ ಶುದ್ಧಾಂಗವಾಗಿ ಪ್ರಾಯೋಗಿಕತೆಯನ್ನು ಅನುಸರಿಸುತ್ತದೆ. ಅಂದರೆ ಈ ಬೇರೆ ಬೇರೆ ಉದ್ದೇಶಗಳಿಗೆ ಅನುಗುಣವಾಗಿ ಭಾಷಾ ಬಳಕೆಯೂ ಬದಲಾಗುತ್ತದೆ.

ಸಿದ್ಧಾಂತ ನಿರೂಪಣೆ ಭಾಷೆ : 1. ವಸ್ತುನಿಷ್ಠ. 2. ನಿರ್ವಿಕಾರ;  ಅಂದರೆ ಯಾವುದೇ ಬಗೆಯ ಭಾವನೆಗಳನ್ನು ಹೊರಹಾಕದಿರುವುದು. ಆಶ್ಚರ್ಯ, ಉದ್ವೇಗಗಳನ್ನು ನಿರಾಕರಿಸುವುದು. ಮತ್ತು 3. ಖಚಿತ. ಈ ಲಕ್ಷಣಗಳನ್ನು ಹೊಂದುವುದು ಈ ಭಾಷಾ ಬಳಕೆಯಲ್ಲಿ ಅನಿವಾರ್ಯ. ಸಿದ್ಧಾಂತ ನಿರೂಪಕರು ತಮ್ಮ ನಿರೂಪಣೆಯಲ್ಲಿ ಸ್ವಂತದ್ದೆಂಬಂತೆ ಹೇಳುವ ವಿಧಾನವನ್ನು ಅನುಸರಿಸು ವಂತಿಲ್ಲ. ಜ್ಞಾನದ ಹರಿವಿನ ಒಂದು ಹಂತದಲ್ಲಿರುವವರಂತೆ ಅದನ್ನು ವಸ್ತು ನಿಷ್ಠವಾಗಿ ವಿವರಿಸಬೇಕಾಗುತ್ತದೆ. ನಿರ್ವಿಕಾರತೆಯೂ ಈ ಕಾರಣದಿಂದಲೇ ಅನಿವಾರ್ಯ. ಅನುಭವ ಕಥನಕ್ಕೆ ಮತ್ತು ಪರಿಣಾಮ ವಿವರಣೆಗೆ ಇಲ್ಲಿ ಅವಕಾಶ ಗಳಿಲ್ಲ. ಹಾಗಾಗಿ ಭಾವನೆಗಳಿಗೆ ಜಾಗವಿಲ್ಲ. ಈ ನಿರೂಪಣೆಯು ಇವರ ಜ್ಞಾನಾಪೇಕ್ಷೆಗಳಿಗೆ ಸರಿಯಾಗಿ ಸಂವಹನವಾಗಬೇಕಾದರೆ ನಿಖರತೆಯೂ ಅನಿವಾರ್ಯ.

ಶಾಸ್ತ್ರ ಮುಖ್ಯವಾಗಿ ‘ಹೆಸರಿಸುವ’ ಕೆಲಸವನ್ನು ಮಾಡುತ್ತದೆ. ಆ ಕಾರಣ ಅಸಂಖ್ಯ ನಾಮಪದಗಳು ಅದರ ನಿರೂಪಣೆಯಲ್ಲಿ ಅನಿವಾರ್ಯ. ಎಷ್ಟೋ ವಸ್ತುಗಳಿಗೆ ಬಳಕೆಯ ಹೆಸರುಗಳಿಗಿಂತ ಭಿನ್ನವಾದ ಹೆಸರುಗಳನ್ನಿಟ್ಟು ವಿಜ್ಞಾನ ವ್ಯವಹರಿಸುತ್ತದೆ. ಜೀವಶಾಸ್ತ್ರದಲ್ಲಿ ನಮಗೆ ಪರಿಚಿತವಿರುವ ಎಷ್ಟೋ ಗಿಡಮರಗಳಿಗೆ ಬೇರೆಯೇ ವೈಜ್ಞಾನಿಕ ಹೆಸರುಗಳಿರುವುದನ್ನು ಕಾಣುತ್ತೇವೆ. ಜಗತ್ತಿನ ಸೀಮಾತೀತ ಜೀವ ವೈವಿಧ್ಯ ವಸ್ತು ವೈವಿಧ್ಯವನ್ನು ಶಾಸ್ತ್ರ ಹೀಗೆ ಹೆಸರಿಸುತ್ತದೆ. ತನ್ನದೇ ಆದ ಅಸಂಖ್ಯ ನಾಮಪದಗಳನ್ನು ರೂಪಿಸಿಕೊಳ್ಳುತ್ತಾರೆ. ಹೊಸದಾಗಿ ಸಂಯೋಜನೆಗೊಳ್ಳುವ ವಸ್ತುಗಳೂ ಅಧಿಕ. ಅವುಗಳಿಗೂ ಹೆಸರಿಡಬೇಕು. ಇದೇ ರೀತಿ ಹಲವಾರು ಶಾಸ್ತ್ರೀಯ ಪ್ರಕ್ರಿಯೆಗಳಿದ್ದು ಅವನ್ನು ವರ್ಣಿಸುವ ಪದಗಳನ್ನು ರೂಪಿಸಬೇಕಾಗುತ್ತದೆ. ಸಾಮಾನ್ಯ ಪದಕೋಶದಿಂದ ಪದಗಳನ್ನು ಆಯ್ದುಕೊಂಡರೂ ಅವುಗಳಿಗೊಂದು ಶಾಸ್ತ್ರೀಯ ಪರಿವೇಷವನ್ನು ನೀಡಿ ಬಳಸುವುದು ಶಾಸ್ತ್ರ ಭಾಷೆಯ ಒಂದು ಲಕ್ಷಣ.

ಬರೆವಣಿಗೆಯಲ್ಲಿ ಪರ್ಯಾಯ ಲಿಪೀಕರಣ  

ತಾಂತ್ರಿಕ ಬರೆವಣಿಗೆ ನಾವು ಬಲ್ಲ ಮಾನವ ಭಾಷೆಗಳಲ್ಲಿ ಬಳಸಲೇಬೇಕೆಂದಲ್ಲ. ಭಾಷೆಯ ಜೊತೆಗೆ ಹೆಚ್ಚು ಅಡಕವಾಗಿಸಲು ಮತ್ತು ನಿಖರವಾಗಿಸಲು ಪರ್ಯಾಯ ವಿಧಾನಗಳನ್ನು ಬಳಸುವುದು ಸಾಧ್ಯ.

ಗಣಿತದಲ್ಲಿ ವಿಧಾನ ಹೆಚ್ಚು ಬಳಕೆಯಲ್ಲಿದೆ. ಸಂಖ್ಯೆಗಳನ್ನು ಬಳಸಿ ಯಾವ ಗಣಿತ ಪ್ರಕ್ರಿಯೆಯನ್ನು ಜರುಗಿಸಬೇಕು ಎಂಬುದನ್ನು ಹೇಳಲು ಯಾವುದೇ ಭಾಷೆಯ ಪದಕೋಶ ಗಣಿತಕ್ಕೆ ಅವಶ್ಯವಿಲ್ಲ. ಹಾಗೆ ಬಳಸಿದರೂ ಪ್ರಾಸಂಗಿಕವಾಗಿ ಒಂದೆರಡು ಪದಗಳನ್ನು ಮಾತ್ರ ಬಳಸಬಹುದು.

25 + 52 18
36 7 3

ಮೇಲಿನ ಗಣಿತ ವಾಕ್ಯವನ್ನು ಭಾಷೆಯಲ್ಲಿ ಬರೆದರೆ ಅದು ಅತಿ ದೀರ್ಘವಾಗುತ್ತದೆ. ಮತ್ತು ವಾಕ್ಯ ಅಸ್ಪಷ್ಟವಾಗುವುದೂ ಸಾಧ್ಯ. ಗಣಿತದಲ್ಲಿ ಇದೆಲ್ಲವನ್ನೂ ನಿವಾರಿಸಲು ಮೇಲಿನ ರೀತಿಯ ಸಂಕ್ಷಿಪ್ತೀಕರಣ ಮಾದರಿಯನ್ನು ಅನುಸರಿಸುತ್ತಾರೆ.

ಶಾಸ್ತ್ರಗಳು ಹೆಸರಿಸುವಾಗ ಹೆಚ್ಚು ವಿವರಣೆಯ ನೆಲೆಯನ್ನು ಆಶ್ರಯಿಸುತ್ತವೆ. ಅಂದರೆ ವಸ್ತುವಿನ, ಜೀವಿಯ ಕೆಲವು ಪ್ರಮುಖ ಲಕ್ಷಣಗಳು ರಚನಾ ಸ್ವರೂಪಗಳು ಹೆಸರಿನಲ್ಲೇ ಸೂಚಿತವಾಗುವಂತೆ ಮಾಡುವರು. ಆದ್ದರಿಂದ ಶಾಸ್ತ್ರದ ಹೆಸರುಗಳು ಅದರಲ್ಲೂ ವಿಜ್ಞಾನದ ವಿವಿಧ ಶಾಖೆಗಳಲ್ಲಿ ಬರುವ ಹೆಸರು ಬಹುದೀರ್ಘವಾಗಿರುತ್ತದೆ. ಅಲ್ಲದೆ ಈ ಹೆಸರುಗಳನ್ನು ಮೇಲಿಂದ ಮೇಲೆ ಬಳಸುವ ಪ್ರಸಂಗಗಳೂ ಒದಗುತ್ತದೆ. ಈ ದೀರ್ಘತೆಯನ್ನು ನಿವಾರಿಸಲು ಹೆಸರುಗಳು ಸಂಕ್ಷಿಪ್ತರೂಪಗಳನ್ನು ಶಾಸ್ತ್ರೀಯ ಬರೆವಣಿಗೆಯಲ್ಲಿ ಬಳಸುವುದು ರೂಢಿ. ಮತ್ತು ಈ ಸಂಕ್ಷಿಪ್ತ ರೂಪಗಳನ್ನು ಶಾಸ್ತ್ರೀಯ ಬರೆವಣಿಗೆಯಲ್ಲಿ ಬಳಸುವುದು ರೂಢಿ. ಈ ಸಂಕ್ಷಿಪ್ತರೂಪಗಳೂ ವಿಶ್ವಾದ್ಯಂತ ಒಂದೇ ರೀತಿಯಲ್ಲಿರುವುದು ನಿಯಮ. ಹೈಡ್ರೋಕ್ಲೋರಿಕ್ ಆಸಿಡ್ ಎಂಬುದನ್ನು HCI ಎಂದು ಬರೆಯುವುದು ಈ ಸಂಕ್ಷಿಪ್ತ ರಚನೆಗೆ ಒಂದು ಮಾದರಿ. ಇಲ್ಲಿ ಹೆಸರು ಚಿಕ್ಕದಾಗಿರುವುದು ಮಾತ್ರವಲ್ಲ; ಆ ವಸ್ತುವಿನ ರಚನೆಯೂ ತಿಳಿಯುತ್ತದೆ. ಡಿಸಿಟಲ್ ವರ್ಸ್‌ಟೈಲ್ ಡಿಸ್ಕ್ – DVD ರ್ಯಾಡಂಮ್ ಆಕ್ಸಸ್ ಮೆಮೊರಿ – RAM, ರೀಡ್ ಓನ್ಲಿ ಮೆಮೊರಿ – ROM, ಲೈಟ್ ಎಮಿಟಿಂಗ್ ಡೈಯೋಡ್ – LED  ಇವೆಲ್ಲ ಮತ್ತೊಂದು ಬಗೆಯ ಸಂಕ್ಷಿಪ್ತ ರೂಪಗಳು. ಇವುಗಳಲ್ಲಿ ಹೆಸರು ಪದ ಪ್ರಥಮಾಕ್ಷರಗಳ ಜೋಡಣೆ ಮೂಲಕ ಸಂಕ್ಷಿಪ್ತಗೊಂಡಿದೆ.

ಶಾಸ್ತ್ರ ವಿಷಯಗಳನ್ನು ಅನ್ವಯ ನೆಲೆಯ ಬರೆಹಗಳು ಅಥವಾ ತಂತ್ರಜ್ಞಾನದ ಬರೆಹಗಳು ಬಳಸುವ ಭಾಷೆಯ ಲಕ್ಷಣವೇ ಬೇರೆ. ಇದರಲ್ಲೂ ಹಲವು ಬಗೆಗಳಿವೆ. ಉದಾಗೆ ವಾಷಿಂಗ್ ಮಷೀನನ್ನು ತಯಾರಿಸುವ ಸಂಸ್ಥೆ ತಯಾರಿಕೆ ಘಟಕಕ್ಕೆ, ನಿರ್ವಹಣೆಯ ತರಬೇತಿಗೆ, ಮಾರಾಟ ವಿಭಾಗಕ್ಕೆ ಹಾಗೂ ಬಳಕೆದಾರರಿಗೆ ಒದಗಿಸುವ ವಿವರಗಳು ಬೇರೆಬೇರೆ. ಜತೆಗೆ ಆ ವಿವರಗಳನ್ನು ಭಾಷಿಕವಾಗಿ ಮಂಡಿಸುವ ಕ್ರಮವೂ ಬೇರೆ ಬೇರೆ. ತಯಾರಿಕ ಘಟಕದ ಕೈಪಿಡಿಯಲ್ಲಿ ತಾಂತ್ರಿಕ ವಿವರಗಳು ಅಧಿಕ, ಸೂಚನೆಗಳು ಖಚಿತ ವಾಗಿರುತ್ತವೆ. ವಿವರಗಳು ಎಷ್ಟು ಬೇಕು ಅಷ್ಟಿರುತ್ತವೆ. ಹೇಳುವ ಕ್ರಮದಲ್ಲಿ ದ್ವಿತೀಯ ಪುರುಷ ನಿರೂಪಣೆ ಇರುತ್ತದೆ. (ಮಾಡಿ, ತೆಗೆಯಿರಿ, ಸುತ್ತಿರಿ, ಮುಚ್ಚಿರಿ) ಇತ್ಯಾದಿ ನಿರ್ವಹಣೆ. ತರಬೇತಿದಾರರಿಗೆ ತಾಂತ್ರಿಕ ವಿವರಗಳ ಬಾಹುಳ್ಯ ಇರುವುದಿಲ್ಲ. ಎಲ್ಲಿ ಬಳಸುವಾಗ ತೊಂದರೆಗಳಾಗಬಹುದೋ ಆ ಬಗ್ಗೆ ಹೆಚ್ಚು ವಿವರಗಳಿರುತ್ತವೆ. ಮಾರಾಟ ವಿಭಾಗದ ಮಾಹಿತಿಯಲ್ಲಿ ನಿಖರತೆ ಕನಿಷ್ಠ. ಸಂಗತಿಯನ್ನು ಹೆಚ್ಚು ಆಕರ್ಷಕವನ್ನಾಗಿ ಮಂಡಿಸುವ ಪ್ರಯತ್ನವಿರುತ್ತದೆ. ಅದಕ್ಕೆ ತಕ್ಕ ಭಾಷಾರೂಪ ಸಿದ್ದವಾಗುತ್ತದೆ. ‘ZPOT ಇರುವ ಏಕೈಕ ಶಾಂಪೂ’ ಎಂಬ ವಾಕ್ಯವನ್ನು ಗಮನಿಸಿ, ಇದು ಜಾಹೀರಾತಿನ ಭಾಗ. ZPOT ಎಂದರೇನು? ಅದು ಶಾಂಪೂಗೆ ಏಕೆ ಉಪಯುಕ್ತ ಎಂಬೆಲ್ಲ ವಿವರಗಳು ಮತ್ತು ಅವುಗಳ ಸತ್ಯಾಸತ್ಯತೆ ಆ ಜಾಹಿರಾತಿನ ಕಾಳಜಿಯಲ್ಲ. ಇನ್ನುಳಿದ ಶಾಂಪೂಗಳಲ್ಲಿ ಇದು ಇಲ್ಲ ಎನ್ನುವುದೇ ಮುಖ್ಯವಾಗುತ್ತದೆ. ಇದು ಈ ಭಾಷೆಯ ಲಕ್ಷಣ. ಅಲಂಕಾರಿಕತೆ, ನಿರರ್ಗಳತೆ ಮತ್ತು ಒಪ್ಪಿಸುವ ವಿವಿಧ ತಂತ್ರಗಳು ಈ ಭಾಷೆಯ ಬಳಕೆಯಲ್ಲಿ ಅಪಾರ. ಬಳಕೆದಾರನಿಗೆ ಒದಗಿಸುವ ಮಾಹಿತಿಯಲ್ಲಿ ಅವಶ್ಯ ತಾಂತ್ರಿಕತೆಯ ವಿವರಣೆ ಇರುತ್ತದೆ. ಆದರೆ ತಂತ್ರಜ್ಞರಲ್ಲದ ಬಳಕೆದಾರರಿಗೆ ಅರ್ಥವಾಗುವ ಮಾದರಿಯಲ್ಲಿ ವಿವರಿಸುವುದು ಈ ಭಾಷಾಬಳಕೆಯಲ್ಲಿ ಅತ್ಯವಶ್ಯ.