ಬಟ್ಟೆಯಂಗಡಿಯಲ್ಲಿ ದೀಪಗಳ ಬೆಳಕು
ಒಂದೊಂದು ಬಟ್ಟೆಯೊಳು ಏನೆಂಥ ಹೊಳಪು !

ಹೂವೆಲ್ಲ ಕೈಹಿಡಿದು ಕಿಲಕಿಲನೆ ನಕ್ಕು
ಬಟ್ಟೆಗಳ ದಾರಿಯಲಿ ಹೆಜ್ಜೆಗಳನಿಟ್ಟು
ಈಗ ತಾನೇ ಎಲ್ಲೊ ಹೋದಂತಿದೆ !

ಗಾಳಿಗೂ ಬಗೆ ಬಗೆಯ ಬಣ್ಣಗಳ ಬೆರಸಿ
ಬೆಳಕುಗಳ ಮಗ್ಗದಲಿ ಹಗಲಿರುಳು ಶ್ರಮಿಸಿ
ನೈಲಾನು ಬಟ್ಟೆಗಳ ನೆಯ್ದಂತಿದೆ !

ಇದೋ ಇಲ್ಲಿ ಹಾಲುಬಿಳಿ, ಅಲ್ಲಿ ಮಳೆಬಿಲ್ಲು !
ಇಲ್ಲಿ ರೇಸಿಮೆ ನುಣುಪು. ಅತ್ತ ಮಕಮಲ್ಲು,
ಕಣ್ಣು ಕಾಲಿಟ್ಟೆಡೆಗೆ ಮೆದು ಜಾರುಗಲ್ಲು !

ಕಣ್ಣು ಹೊರಳಿದ ಕಡೆಗೆ ಬಣ್ಣಗಳ ದಾಳಿ
ಯಾವ ಚೈತ್ರನ ಸುಲಿದು ತಂದುದೀ ಮೋಡಿ !
ಬಣ್ಣದರಮನೆಯಿಂದ ಬಂದ ವೈಹಾಳಿ !

‘ಬಟ್ಟೆ ಕೊಂಡದ್ದಾಯ್ತು ದುಡ್ಡುಕೊಡಿ ಮತ್ತೆ’
ಹೀಗೆನಲು ಅರ್ಧಾಂಗಿ, ಬೆಚ್ಚಿ ಎಚ್ಚತ್ತೆ
ಕನಸೊಡೆದು ತಳಮಳಿಸಿ ಹಣವನು ತೆತ್ತೆ.

ಬಟ್ಟೆಯಂಗಡಿಯಲ್ಲಿ ದೀಪಗಳ ಬೆಳಕು
ಒಂದೊಂದು ಬಟ್ಟೆಯೂ ಎದೆಗೊಂದು ತಿರುಪು !