ಬೆಟಗೇರಿ ಕೃಷ್ಣ ಶರ್ಮರು ಜನಿಸಿದ್ದು ೧೯೦೦ ಏಪ್ರಿಲ್‌ ೧೬ ರಂದು, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಗ್ರಾಮವಾದ ಬೆಟಗೇರಿಯಲ್ಲಿ. ಅಂದು ಯಾವ ನಾಗರಿಕ ಸೌಲಭ್ಯಗಳೂ ಇಲ್ಲದ ಕಾಡುಹಳ್ಳಿ. ತಂದೆ ಶ್ರೀನಿವಾಸರಾಯರು ವೃತ್ತಿಯಿಂದ ಗ್ರಾಮದ ಕರಣಿಕರಾದರೂ ಮನೆತನದ ಹೆಸರು ‘ಪಾಟೀಲ’ ಎಂದಿತ್ತು. ‘ಹುದಾರ’ ಎಂದೂ ಕರೆಯುತ್ತಿದ್ದರು. ‘ಕೃಷ್ಣ’ ಎಂದು ಮಗುವಿಗೆ ಮನೆಯವರಿಟ್ಟ ತೊಟ್ಟಿಲ ಹೆಸರು. ಮನೆಯಲ್ಲಿ ಎಲ್ಲರೂ ಅಚ್ಛಾದಿಂದ  ‘ಈಶ’ ಎಂದು ಕರೆಯುತ್ತಿದ್ದರು. ಅನಂತರ ಬೆಟಗೇರಿಯವರು ಲೇಖಕರಾದ ಬಳಿಕ ‘ಆನಂದಕಂದ’ ಎಂಬ ಕಾವ್ಯನಾಮದ ಜತೆ ‘ಜಯಂತಿ’ಯಲ್ಲಿ ಇನ್ನೂ ಅನೇಕ ಹೆಸರಿನಿಂದ ಬರೆಯುತ್ತಿದ್ದರು.

ಇವರು ಹುಟ್ಟಿದ ತಿಥಿ ಚೈತ್ರವದ್ಯ ಪ್ರತಿಪದೆ, ಒಂದಿಷ್ಟು ಜ್ಯೋತಿಷ್ಯ ಶಾಸ್ತ್ರ ಬಲ್ಲ ಶ್ರೀನಿವಾಸರಾಯರದು ಮಗುವಿನ ಬಗ್ಗೆ ವಿಶೇಷ ಕಾಳಜಿ. ಇನ್ನಿತರ ಮಕ್ಕಳಿಗಿಂತ ಕೃಷ್ಣನ ಮೇಲೆ ಅಧಿಕ ಮಮತೆ.ತಾಯಿ ರಾಧಾಬಾಯಿ “ಇವನಿಗೇಕೆ ಇಷ್ಟು ವಿಶೇಷ ಉಪಚಾರ?” ಎಂದು ಕೇಳಿದರೆ. “ನಿಮಗೆ ಗೊತ್ತಿಲ್ಲ. ಈತ ಮನೆತನಕ್ಕೆ ಹೆಸರು ತರುತ್ತಾನೆ” ಎಂದು ಅವರು ಹೇಳುತ್ತಿದ್ದರಂತೆ. ಶ್ರೀನಿವಾಸರಾಯರು ತುಂಬಾ ರಸಿಕರು. ಅವರು ಸುಂದರವಾಗಿ ಚಿತ್ರಗಳನ್ನು ರಚಿಸುತ್ತಿದ್ದರು. ಗಣೇಶ ಚತುರ್ಥಿಯಲ್ಲಿ ಅನೇಕ ಭಾವಭಂಗಿಗಳ ಗಣಪತಿ ವಿಗ್ರಹಗಳನ್ನು ನಿರ್ಮಿಸುತ್ತಿದ್ದರು. ಸಂಗೀತದಲ್ಲಿಯೂ ತುಂಬಾ ಪರಿಶ್ರಮವುಳ್ಳವರಾಗಿದ್ದರು. ಗ್ರಾಮದ ಜಾನಪದ ವಾದ್ಯಗಾರರಾದ ಹಲಿಗೆ-ಕರಡಿ ಬಾರಿಸುವವರು ಇವರಿಗೆ ತುಂಬಾ ಗೌರವ ಕೊಡುತ್ತಿದ್ದರು. ಬೆಟಗೇರಿ ಅವರಲ್ಲಿ ಕಾಣುವ ಸಂಗೀತ ಪ್ರಜ್ಞೆ, ಜೀವನ ರಸಿಕತೆ, ಜಾನಪದ ಅಭಿರುಚಿಗಳು ತಂದೆಯ ಕೊಡುಗೆಗಳೇ ಆಗಿವೆ.

ಬಾಲ್ಯದಲ್ಲಿ ತಾಯಿ ರಾಧಾಭಾಯಿಯ ಪ್ರಭಾವದಿಂದ ಆನಂದಕಂದರು ಒಂದು ಬಗೆಯ ಶಿಸ್ತಿಗೆ ಒಳಪಟ್ಟರು. ತಾಯಿಯ ಕಟ್ಟುನಿಟ್ಟಿನ ಆಚಾರ ವಿಚಾರಗಳು ಇವರ ವ್ಯಕ್ತಿತ್ವಕ್ಕೆ ಬದ್ಧತೆಯನ್ನು ನೀಡಿದವು. ಆನಂದಕಂದರು ಹನ್ನೆರಡು ವರ್ಷದ ಬಾಲಕನಿದ್ದಾಗಲೇ ತಂದೆ ತೀರಿಕೊಂಡರು. ಮಕ್ಕಳ ಲಾಲನೆ-ಪಾಲನೆಯ ಹೊಣೆಗಾರಿಕೆ ರಾಧಾಬಾಯಿಯ ಮೇಲೆ ಬಿದ್ದಿದ್ದು, ಅಷ್ಟೇ ಜವಾಬ್ದಾರಿಯಿಂದ ಆಕೆ ನಿರ್ವಹಿಸಿದಳು. ಓದು-ಬರಹ ಅರಿಯದ ಆಕೆ ವೈದ್ಯ ವೃತ್ತಿಯನ್ನು ಬಲ್ಲ ವಳಾಗಿದ್ದಳು. ಆಗ ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ಶಿಕ್ಷಣ ಪಡೆದ ಯಾವ ವೈದ್ಯರೂ ಇಲ್ಲದ ಕಾಲದಲ್ಲಿ ರಾಧಾಬಾಯಿ ತನಗೆ ತಿಳಿದ ಉಪಚಾರ ಮಾಡುತ್ತಿದ್ದಳು. ಬೆಟಗೇರಿ ಅಲ್ಲದೆ ನೆರೆಹೊರೆ ಗ್ರಾಮಗಳಿಂದಲೂ ಉಪಚಾರಕ್ಕಾಗಿ ಜನರು ಬರುತ್ತಿದ್ದರು. ಅದೊಂದು ಸೇವೆಯೆಂದು ರಾಧಾಬಾಯಿ ಹಣಪಡೆಯದೇ ಉಪಚರಿಸುತ್ತಿದ್ದಳು. ಒಮ್ಮೆಮ್ಮೆ ರೋಗಿಗಳ ಸಂಖ್ಯೆ ಅಧಿಕವಾದರೆ, ಆ ಆರೈಕೆಯಲ್ಲಿ ಸ್ನಾನ. ಅಡುಗೆ ತಡವಾಗಿ ಮಕ್ಕಳು ಬಹಳ ಹೊತ್ತು ಉಪವಾಸ ಇರಬೇಕಾದ ಪ್ರಸಂಗ ಬರುತ್ತಿತ್ತು. ಆದರೆ ರಾಧಾಬಾಯಿಗೆ ಜನಸೇವೆಯೇ ಜನಾರ್ಧನ ಸೇವೆಯಾಗಿತ್ತು. ಎಂದೂ ಬೇಸರಿಸಿಕೊಂಡವಳಲ್ಲ.

ಆಕೆ ದೈವಭಕ್ತೆ. ಸಂಪ್ರದಾಯ-ಸಂಸ್ಕೃತಿಗಳನ್ನರಿತವಳು. ವಿಶಾಲ ಮನಸ್ಸಿನವಳು. ಸೇವಾಭಾವಗಳಿಂದ ಆ ಪ್ರದೇಶದ ಜನರಿಗೆ ಮಾತೃಸ್ಥಾನದಲ್ಲಿದ್ದವಳು. ಆನಂದಕಂದರಿಗೆ ತಿಳಿವಳಿಕೆ ಮೂಡಿದಂತೆ ತಾಯಿಯ ಮಹತ್ವ, ಆಕೆಯ ದೊಡ್ಡಸ್ತಿಕೆ ಅರಿವಾಗತೊಡಗಿತು. ಆಕೆಯಲ್ಲಿದ್ದ ವಿಶೇಷ ಗುಣವನ್ನು ಜನ ಅರಿತಿದ್ದರೇನೋ, ಶುಭಕಾರ್ಯಗಳಿಗೆ, ಮಹತ್ವದ ಕೆಲಸಗಳಿಗೆ ಗ್ರಾಮಸ್ಥರು ಹೊರಟು ನಿಂತರೆ ರಾಧಾಬಾಯಿಯ ಹರಕೆಯನ್ನು ಪಡೆಯುತ್ತಿದ್ದರು. ಬಿತ್ತಲು ಹೊಲಕ್ಕೆ ನಡೆದಾಗ ಕೂರಿಗೆಗೆ, ಬೀಜಗಳಿಗೆ ಆಕೆಯ ಕೈಯನ್ನು ಮುಟ್ಟಿಸಿಕೊಳ್ಳುತ್ತಿದ್ದರು. ಅದೊಂದು ನಂಬಿಕೆ.

ರಾಮಾಯಣ, ಮಹಾಭಾರತ, ಭಾಗವತದಲ್ಲಿಯ ಉಪಕಥೆಗಳನ್ನು ರಾಧಾಬಾಯಿ ಬಲ್ಲವಳಾಗಿದ್ದು, ಅವುಗಳನ್ನು ಮಕ್ಕಳಿಗೆ ಹೇಳುತ್ತಿದ್ದಳು. ಬೆಳಗಿನ ಮನೆವಾಳ್ತೆಯಲ್ಲಿ ತೊಡಗಿದಾಗ, ಅವಳ ಬಾಯಿಂದ ಭಕ್ತಿಗೀತೆಗಳು, ಪದಗಳು ಸರಾಗವಾಗಿ ಹೊಮ್ಮುತ್ತಲಿದ್ದವು. ಹಳ್ಳಿಯ ಲಾವಣಿಗಳು ಆಕೆಗೆ ಗೊತ್ತು. ಹೀಗಾಗಿ ಆನಂದಕಂದರು ಶಿಷ್ಟಸಾಹಿತ್ಯ ಹಾಗೂ ಜನಪದ ಸಾಹಿತ್ಯವನ್ನು ತಾಯಿಯಿಂದಲೂ ಬಳುವಳಿಯಾಗಿ ಪಡೆದುಕೊಂಡವರಾಗಿದ್ದಾರೆ. ತಾಯಿ ಹೇಳುತ್ತಲಿದ್ದ ಅಂಥ ಹಾಡುಗಳನ್ನು ಬೇರೆ ಇನ್ನಾರ ಬಾಯಿಂದಲೂ ಕೇಳಲು ಸಿಕ್ಕಿಲ್ಲ ಎಂದು ಆನಂದಕಂದರೇ ಹೇಳಿದ್ದಾರೆ. ಆನಂದಕಂದರ ಹದಿನೆಂಟನೆಯ ವಯಸ್ಸಿನಲ್ಲಿ ತಾಯಿ ತೀರಿಕೊಂಡಳು. ತಾಯಿಯ ಬಾಯಿಂದ ಬರುತ್ತಿರುವ ಹಾಡುಗಳನ್ನು ಸಂಗ್ರಹಿಸಲಾರದಕ್ಕೆ ಅನಂತರ ಆನಂದಕಂದರು ವ್ಯಥೆ ಪಟ್ಟಿದ್ದಾರೆ.

ಮನೆಯಲ್ಲಿ ಎಂಥ ಬಡತನವಿದ್ದರೂ ರಾಧಾಬಾಯಿ ನೊಂದಿರಲಿಲ್ಲ. ಆದರೆ ಮನೆಯಲ್ಲಿ ಮಕ್ಕಳು, ಮಲಮಕ್ಕಳು, ಅವರ ಕುಟುಂಬವನ್ನು ಜೋಪಾನ ಮಾಡುವ ಸಂದರ್ಭದಲ್ಲಿಯೇ ದಾಯಾದಿಗಳ ಅಸಹನೆಯನ್ನು ಸಹಿಸಬೇಕಾಗುತ್ತಿತ್ತು. ಇತರ ಆಪತ್ತುಗಳು ಬೇರೆ. ಪತಿಯ ಮರಣ, ಹಿರಿಯ ಮಗಳ ಬಾಲ್ಯ ವೈಧವ್ಯ, ಹಿರಿಯ ಮಗನ ಸಾವು, ಆನಂದಕಂದರಿಗೆ ಎರಡು ಸಲ ಒದಗಿದ ಮರಣಾಂತಿಕ ಅಪಾಯಗಳು-ಇವುಗಳನ್ನೆಲ್ಲ ನುಂಗಿಕೊಂಡು ಆಕೆ ಉಳಿದ ಮಕ್ಕಳ ಅಭ್ಯುದಯಕ್ಕೆ ಪ್ರಯತ್ನಿಸಿದಳು. ಹೋರಾಟ ನಡೆಸಿದಳು.

೧೯೧೮ ರಲ್ಲಿ ಇಡೀ ದೇಶವನ್ನೇ ನಡುಗಿಸಿದ ಫ್ಲೂ ಬೇನೆಯಿಂದ ಮನೆಯಲ್ಲಿ ಒಮ್ಮೆಲೆ ಹತ್ತಾರು ಜನ ಹಾಸುಗೆ ಹಿಡಿದಿದ್ದರು. ಆಗ ಒಂದೂವರೆಸಾವಿರ ಜನವಸತಿಯಿದ್ದ ಬೆಟಗೇರಿಯಲ್ಲಿ ನಿತ್ಯ ೨೦-೨೫ ಜನ ಫ್ಲೂ ಬೇನಗೆ ಬಲಿಯಾಗುತ್ತಿದ್ದರು. ಆ ಸಮಯ ಎಡೆಬಿಡದೆ ರಾಧಾಬಾಯಿ ಮನೆಯ ರೋಗಿಗಳನ್ನು ಉಪಚರಿಸುತ್ತ, ಹೊರ ರೋಗಿಗಳನ್ನು ನೋಡಬೇಕಾಗುತ್ತಿತ್ತು. ಊರಿಗೆಲ್ಲ ಉಪಕಾರ ಮಾಡಿದ ಮೇಲೆ, ಸೇಡು ತೀರಿಸಿಕೊಂಡಂತೆ ಆ ಫ್ಲೂ ರಾಧಾಬಾಯಿಯನ್ನೇ ಬಲಿ ತೆಗೆದುಕೊಂಡಿತು. ಆನಂದಕಂದರನ್ನು ಅನಾಥರನ್ನಾಗಿ ಮಾಡಿತು. ಹನ್ನೆರಡನೆಯ ವರ್ಷಕ್ಕೆ ತಂದೆಯ ಅಗಲಿಕೆ, ತಾರುಣ್ಯಕ್ಕೆ ಕಾಲಿಡುತ್ತಿರುವ ವಯಸ್ಸಿಗೆ ತಾಯಿಯ ವಿದಾಯ ಆನಂದಕಂದರಿಗೆ ದಿಕ್ಕು ತೋರದ ದಾರಿ.

ತಾಯಿಯ ಬಗ್ಗೆ ಆನಂದಕಂದರು ಹೇಳುತ್ತಾರೆ: “ತಾಯಿಯ ನೆನಪಾದಾಗಲೆಲ್ಲ ಪಾಂಡವರ ತಾಯಿ ಕುಂತಿದೇವಿಯ ಕರುಣಾಪೂರ್ವ ಪವಿತ್ರ ಪ್ರತಿಮೆ ನನ್ನ ಕಣ್ಣೆದುರು ನಿಲ್ಲುವುದು. ಆಕೆ ಚಂದ್ರವಂಶದ ರಾಣಿಯಾಗಿ ಪಟ್ಟ ಕಷ್ಟ ಪರಂಪರೆಗೆ ಹಳ್ಳಿಯೂರಿನ ಒಬ್ಬ ಕುಲಕರ್ಣಿಯ ಸಹಧರ್ಮಿಣಿಯಾಗಿ ಬಾಳಿದ ನಮ್ಮ ತಾಯಿಯ ಕಷ್ಟ ಪರಂಪರೆಯನ್ನು ಹೋಲಿಸಿದರೆ ಸ್ವಲ್ಪವೂ ಅನುಚಿತವಾಗದೆಂದು ನಾನು ಭಾವಿಸುವೆ. ಕೇವಲ ಘಟನೆಗಳಲ್ಲಿ ಸ್ವಲ್ಪ ಭಿನ್ನತೆ ಕಾಣಬಹುದಷ್ಟೆ. ಆದರೆ ಇಬ್ಬರ ಜೀವನ ನಾಟಕದಲ್ಲಿಯ ಸ್ಥಾಯಿ-ಸಂಚಾರೀ ಭಾವಗಳು ಒಂದೇ ಮಾದರಿಯವು…”

ಆನಂದಕಂದರು ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆ ತಾಯಿಯ ನೆನಪು ಕಾಡುತ್ತಲೇ ಇತ್ತು. ತಾಯಿಯ ಸುಖದುಃಖಗಳು ತಮ್ಮ ಸಾಹಿತ್ಯ ಕೃಷಿಗೆ ಮೂಲಬೀಜವೆಂದು ಹೇಳುತ್ತಾರೆ. ಭವಿಷ್ಯತ್ತಿನ ಯಶೋಭಿವೃದ್ಧಿಗೆ ಅವಳೇ ಕಾರಣವೆಂದು ಆನಂದಕಂದರ ನಂಬಿಕೆ. ಮಾತೃವಾತ್ಸಲ್ಯಕ್ಕೆ ಮಕ್ಕಳ ಋಣ ಇದೇ ರೀತಿಯ ಶ್ರದ್ಧಾ-ಭಕ್ತಿಯಿಂದ ತೀರಬಹುದೇನೋ?

ರಾಧಾಬಾಯಿ ಆಗಾಗ ಆನಂದಕಂದರಿಗೆ ಹೇಳುತ್ತಿದ್ದಳಂತೆ. “ನೀ ಮುಂದ ಕೀರ್ತಿಶಾಲಿಯಾಗಿ ಬಾಳ್ತಿಯಂತ ಪಾ…!”

“ಅವ್ವಾ, ನಿನಗ ಈ ಭವಿಷ್ಯ ಹೇಳಿದವರ‍್ಯಾರು?” ಎಂದು ಒಮ್ಮೆ, ಈ ಮಾತಿಗೆ ಆನಂದಕಂದರು ಕೇಳಿದರು.

“ಇನ್ಯಾರು ಅಲ್ಲ, ಹಿರ್ಯಾರsಅಂತಿದ್ರು, ನೀ ಕೂಸ ಇದ್ದಾಗ ನೀ ಬರೀಮೈಲೇ ಇದ್ರ ಅವ್ರ ಓಡಿ ಬಂದ ನಿನ್ನ ಮೈಮ್ಯಾಲ ಧೊತ್ರಾ ಹೊಚ್ಚತಿದ್ರು. “ಈ ಕೂಸಿನ ಮ್ಯಾಲ ಇಷ್ಟ್ಯಾಕ ನಿಮ್ಮ ಆಸಕ್ತಿ? ಹೆತ್ತರ ಜೋಡಿ ಇದ ಹನ್ನೊಂದ ಇದ್ದಾಂಗ…’ ಅಂತ ನಾ ನಕ್ಕ ಹೇಳಿದೆ. ಆಗ ಅವ್ರು’ ಇಂವಾ ಎಲ್ಲಾ ಮಕ್ಕಳಾಂಗಲ್ಲ! ಇವನಿಂದ ನಮ್ಮ ಮನೆತನಕ್ಕೆ ಹೆಸರ ಬರ್ತsದ’ ಅಂತ ಅಂತಿದ್ರು. ಅವರಿಗೇನು ತಿಳಿದಿತ್ತೊ ಯಾರ ಬಲ್ರು!” ಎಂದು ತಾಯಿ ಉತ್ತರಿಸುತ್ತಿದ್ದಳು.

ಈ ಮಾತೃಮಮತೆಯ ಭವಿಷ್ಯತ್ತಿನ ನುಡಿಯಿಂದ ಬಾಲಕ ಆನಂದಕಂದರ ಹೃದಯ ಪುಲಕಿತಗೊಳ್ಳುವುದು ಸ್ವಾಭಾವಿಕ. ಆದರೆ ತಂದೆಯವರ ಭವಿಷ್ಯವಾಣಿ ನಿಜವಾಗುವಂಥ ಯಾವ ಅವಕಾಶಗಳೂ ಆಗ ಆನಂದಕಂದರಿಗೆ ಒದಗಿರಲಿಲ್ಲ. ಅಂಥ ಯಾವ ಸಂಕೇತಗಳೂ ಕಂಡಿರಲಿಲ್ಲ. ಪ್ರಾಥಮಿಕ ಹಂತಗಳಲ್ಲಿ ತುಂಬ ಜಾಣ ವಿದ್ಯಾರ್ಥಿಯೆಂದು ಆನಂದಕಂದರು ಹೆಸರು ಗಳಿಸಿದ್ದರು. ಅದಾಗಲೇ ಕಾವ್ಯಾಂಕುರವಾಗುತ್ತಲಿತ್ತು. ಅಣ್ಣ ಬಲರಾಮಪ್ಪನ ಜತೆ ಯಾವುದಾದರೂ ಧಾಟಿಗೆ ಹೊಸ ಹಾಡುಗಳನ್ನು ಕಟ್ಟುತ್ತಿದ್ದರು. ತಮ್ಮ ಒಂದು ಸಾಲು ಹಾಡುಕಟ್ಟಿ ಹೇಳಿದರೆ, ಅಣ್ಣ ಅದಕ್ಕೆ ಮುಂದಿನ ಸಾಲು ಜೋಡಿಸುತ್ತಿದ್ದರು. ಪಾರಿಜಾತ ಬೈಲಾಟವನ್ನು ನೋಡಿ, ಅದರಲ್ಲಿಯ ಎಲ್ಲ ಹಾಡುಗಳನ್ನು ಆನಂದಕಂದರು ಹೇಳುತ್ತಿದ್ದರು.

ಆಗ ಬೆಟಗೇರಿಯಲ್ಲಿ ಬಿನ್‌ ಇಯತ್ತೆಯಿಂದ ಐದನೆಯ ವರ್ಗದವರೆಗೆ ಒಬ್ಬರೇ ಶಿಕ್ಷಕರು. ಈ ಶಾಲೆಯಲ್ಲಿ ಕೂಡ ಉಳಿದ ಏಕೋಪಾಧ್ಯಾಯ ಶಾಲೆಗಳಂತೆ ಕಲಿಸುವ ರೀತಿಯಿತ್ತು. ಕೆಳವರ್ಗದ ಬಾಲಕರಿಗೆ ಅಕ್ಷರ ಹೇಳಿಕೊಟ್ಟು, ಅವುಗಳನ್ನು ತೀಡುವ ಕಾರ್ಯಕ್ಕೆ ಅವರನ್ನು ತೊಡಗಿಸಿ, ಮೇಲಿನ ವರ್ಗದವರಿಗೆ ಪಾಠ-ಲೆಕ್ಕ ಹೇಳುವುದು, ಕೆಳವರ್ಗದ ವಿದ್ಯಾರ್ಥಿಗಳ ಬರಹ ತಿದ್ದುವುದು, ಲೆಕ್ಕ ಹೇಳುವುದು, ಮೇಲ್ವರ್ಗದ ಜಾಣ ವಿದ್ಯಾರ್ಥಿಗಳ ಹೊಣೆಗಾರಿಕೆಯೂ ಆಗಿರುತ್ತಿತ್ತು. ಈ ರೀತಿ ಕೆಳವರ್ಗದ ವಿದ್ಯಾರ್ಥಿಗಳಿಗೆ ಗುರುಗಳಾಗಿ ಕಾರ್ಯ ನಿರ್ವಹಿಸುವುದು ಆನಂದಕಂದರ ಮೇಲೆ ಬೀಳುತ್ತಿತ್ತು. ತಮಗೆ ಮೇಲಿನ ವರ್ಗದ ಲೆಕ್ಕ ತಿಳಿಯದಿದ್ದರೆ, ಊರಲ್ಲಿಯ ಇನ್ನಿತರ ಸುಶಿಕ್ಷಿತರ ಕಡೆಗೆ ಹೋಗಿ ಅವುಗಳನ್ನು ತಿಳಿದುಕೊಳ್ಳುತ್ತಿದ್ದರು. ಆ ಸಮಯ ಆನಂದಕಂದರು ಶಾಲೆಯಲ್ಲಿ ಕಲಿತುದಕ್ಕಿಂತ ಕಲಿಸಿದ್ದೇ ಹೆಚ್ಚು. ಶಾಲೆಗಿಂತ ಮನೆಯಲ್ಲಿ, ಹೊರಪ್ರಪಂಚದಲ್ಲಿ ಕಲಿತದ್ದೇ ಅಧಿಕ.

ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಆಚರಿಸುವ ಬಾಲಕ ಹಬ್ಬ ಹರಿದಿನಗಳು, ಧಾರ್ಮಿಕ ವಿಧಿಗಳು, ಜಾತ್ರೆ-ಓಕುಳಿ ಮುಂತಾದ ಪ್ರಸಂಗಗಳಲ್ಲಿ ಆನಂದಕಂದರು ಹಿರಿಯರ ಜತೆ ಸೇರಿ ಎಲ್ಲ ರೀತಿಯ ಹಾಡುಗಳನ್ನು ಹೇಳುತ್ತಿದ್ದರು. ಈ ರೂಢಿಯಿಂದ ಆನಂದಕಂದರಲ್ಲಿ ಭಾಷಾಜ್ಞಾನ, ಕವಿತ್ವಶಕ್ತಿ ವಿಕಾಸಗೊಂಡಿತು. ಪ್ರಾಥಮಿಕ ಮೂರನೆಯ ವರ್ಗದಲ್ಲಿದ್ದಾಗಲೇ ಇವರು ಕವಿತೆ ರಚಿಸುವ ಸಾಮರ್ಥ್ಯ ಹೊಂದಿದ್ದರು. ಆ ವಯಸ್ಸಿನಲ್ಲಿ ಆನಂದಕಂದರ ರಚಿಸಿ ಹೇಳಿದ-

ಅಣ್ಣಿ ನೋಡಿದು ಕಣ್ಣು ಕಿಸಿವುದು!
ಮಣ್ಣು ಹತ್ತಿದ ದೋತ್ರವನ್ನ ತಾನು ತಿನ್ನುದು!!

ಎಂಬ ಈ ಪದ್ಯದ ಬಗೆಗೆ ನೆನಪಿಸಿಕೊಂಡು ಆನಂದಕಂದರ ಸಹಪಾಠಿಯಾಗಿದ್ದ ಕನ್ನಡ ವಿದ್ವಾಂಸ ಶ್ರೀ. ಪ್ರ.ಗೋ. ಕುಲಕರ್ಣಿಯವರು ಒಂದು ಪ್ರಸಂಗದಲ್ಲಿ ನೆನಪಿಸಿಕೊಂಡಿದ್ದಾರೆ.

ಜನಪದ ಸಾಹಿತ್ಯ, ಜನಪದದ ಕಲೆ ಆನಂದಕಂದರ ಬಾಲ್ಯದಿಂದಲೂ ಅಚ್ಚುಮೆಚ್ಚಿನವು. ಮನೆಯಲ್ಲಿ ಸ್ವಂತ ಬೇಸಾಯವಿದ್ದು, ಆ ಕೃಷಿಕಾರ್ಯಗಳ ಪರಿಸರದಲ್ಲಿಯೇ ಬೆಳೆದರು. ದುಡಿಯುವ ಎತ್ತುಗಳು, ಕಟ್ಟಿಮೇಯಿಸುವ ಹೋರಿಗಳು, ಹೈನದ ದನಗಳು, ಎಳೆಗರುಗಳು,ಲ ನೀರಿಗಾಗಿ ಲಗಳಿ ಹೇರುವ ಕೋಣ-ಇವೆಲ್ಲವುಗಳ ಪರಿಚಯ-ಗೆಳೆತನದಿಂದ ತಮ್ಮ ಮನಸ್ಸು ಅದೆಷ್ಟೋ ಸಂಸ್ಕಾರ ಪಡೆದಿರಬಹುದು. ಮನೆಯಲ್ಲಿ ಕೆಲಸಕ್ಕೆ ಇರುವ, ಆಗಾಗ ಕೆಲಸಕ್ಕೆ ಬರುವ ಆಳುಗಳು, ಹೊಲಮಾಡಿದ ರೈತರು, ಹತ್ತಿ ಬಿಡಿಸಲಿಕ್ಕೆ ಅರೆಯಲಿಕ್ಕೆ ಬರುವ ಹಳ್ಳಿಯ ಹೆಂಗಸರು, ನಟ್ಟು ಕಡಿಯಲಿಕ್ಕೆ ಬರುವ ಕೂಲಿಯಾಳುಗಳು-ಇವರೊಂದಿಗೆ ಕಳೆದ ಕಾಲ ತಮ್ಮ ಅಂತಃಕರಣದ ಅರಳಿಕೆಗೆ ಕಾರಣವಾಗದೇ ಇಲ್ಲ ಎಂದು, ಆನಂದಕಂದರು ಒಂದೆಡೆ ಹೇಳಿಕೊಂಡಿದ್ದಾರೆ.

ಆನಂದಕಂದರು ೧೯೧೨ನೆಯ ಇಸ್ವಿಯಲ್ಲಿ ಪ್ರಾಥಮಿಕ ಆರನೆಯ ವರ್ಗದಲ್ಲಿ ಉತ್ತೀರ್ಣರಾಗಿ, ಮುಂದೆ ಇಂಗ್ಲೀಷ್‌ ಕಲಿಯಲು ಹೋಗುವ ಹವಣಿಕೆಯಲ್ಲಿದ್ದಾಗಲೇ ತಂದೆ ತೀರಿಕೊಂಡಿದ್ದರು. ಶಿಕ್ಷಕ ವೃತ್ತಿಗಾಗಿ ಟ್ರೇನಿಂಗ್‌ ಕಾಲೇಜಿಗೆ ಹೋಗಿದ್ದ ಹಿರಿಯಣ್ಣನ ನೌಕರಿ ಪ್ರಾರಂಭವಾಗಿ ಇನ್ನು ಮುಂದಿನ ಶಿಕ್ಷಣಕ್ಕೆ ಹೋಗಬೇಕೆಂಬಗ ಉತ್ಸುಕತೆಯಿದ್ದಾಗಲೇ ೧೯೧೪ ರಲ್ಲಿ ಪ್ಲೇಗ ಬೇನೆ ಆವರಿಸಿ ಆನಂದಕಂದರು ಸಾವುಬದುಕಿನ ಹೋರಾಟದಲ್ಲಿ ಸಿಕ್ಕು ನಲುಗಬೇಕಾಯಿತು. ಆ ಬೇನೆಯಿಂದ ಪಾರಾಗಿ ಒಂದಿಷ್ಟು ಚೇತರಿಸಿಕೊಳ್ಳುತ್ತಿರುವಲ್ಲಿ ಆನಂದಕಂದರ ಆಶಾದೀಪವಾದಂತಿದ್ದ ಹಿರಿಯಣ್ಣ ಎಲ್ಲರನ್ನಗಲಿ ಹೋದರು. ವಿಪತ್ತುಗಳು ಒಂಟಿಯಾಗಿ ಬಾರದೇ ಸಾಲುಸಾಲಾಗಿ ಬರುತ್ತವೆಂಬುದಕ್ಕೆ ಸಾಕ್ಷಿಯಾಗಿ ಆನಂದಕಂದರು ಬಾಲ್ಯದಲ್ಲಿ ಆಘಾತಗಳ ಮೇಲೆ ಆಘಾತಗಳನ್ನು ಅನುಭವಿಸಬೇಕಾಯಿತು. ತುಂಬಿದ ಮನೆ, ದೊಡ್ಡ ಬಳಗ, ಆದಾಗಲೇ ತಾಯಿ ರಾಧಾಬಾಯಿ ಹಿರಿಯಕ್ಕ ಮನೆತನದ ಹೊಣೆಯನ್ನು ಹೊತ್ತು ಸಂಸಾರವನ್ನು ನಿರ್ವಹಿಸುತ್ತಿದ್ದರು.

ಆನಂದಕಂದರು ಮನೆಯಲ್ಲಿ ಅಕ್ಕ, ಅಮ್ಮನಿಗಾಗಿ ಕಥೆ-ಕಾದಂಬರಿ, ಪುರಾಣಗಳನ್ನು ಓದಿ ಹೇಳುತ್ತಿದ್ದರು. ಆನಂದಕಂದರ ಸಾಹಿತ್ಯಾಭಿರುಚಿಗೆ ಪೂರಕವಾಗಿ-ಪ್ರೇರಕವಾಗಿ ಈ ಪಠಣ ಸಾಗುತ್ತಿತ್ತು. ಪ್ರತಿದಿನ ಸಂಜೆ ಈ ಓದು ಸಾಗಬೇಕು. ಪ್ರ.ಗೋ. ಕುಲಕರ್ಣಿ ಅವರು ಸೋದರಮಾವನೂ, ಆನಂದಕಂದರ ಅಣ್ಣನೂ ಧಾರವಾಡದ ಟ್ರೇನಿಂಗ್‌ ಕಾಲೇಜಿನಲ್ಲಿದ್ದಾಗಲೇ ಸಾಕಷ್ಟು ಕಥೆ-ಕಾದಂಬರಿಗಳನ್ನು ಕೊಂಡು ಸಂಗ್ರಹಿಸಿದ್ದರಂತೆ, ಹೀಗಾಗಿ ನೂರಾರು ಪುಸ್ತಕಗಳು ಬೆಟಗೇರಿಯ ಇವರಿಬ್ಬರ ಮನೆಗಳಲ್ಲಿದ್ದವು. ಆನಂದಕಂದರು ಈ ಪುಸ್ತಕಗಳ ಉಪಯೋಗವನ್ನು ಕೇವಲ ಮನೆಯವರಿಗಾಗಿ ಮಾಡಿಕೊಳ್ಳದೆ ಸಾರ್ವಜನಿಕರಿಗೂ ಉಪಯೋಗವಾಗಲೆಂದು ಊರಲ್ಲಿ ತಮ್ಮ ಬಳಗದವರ ನೆರವಿನಿಂದ ಒಂದು ಚಿಕ್ಕ ವಾಚನಾಲಯವನ್ನು ಆರಂಭಿಸಿದ್ದರು. ಇನ್ನೂ ಅನಕ್ಷರತೆ, ಅಜ್ಞಾನ, ತುಂಬಿದ ಆ ಕಾಲದಲ್ಲಿ ಹಳ್ಳಿಗರ ಜ್ಞಾನಾಭಿವೃದ್ಧಿಗಾಗಿ ಆನಂದಕಂದರು ಕೈಗೊಂಡ ಆ ಕಾರ್ಯ ಒಂದು ಬಗೆಯ ಅಕ್ಷರ-ಸಾಹಿತ್ಯ-ಸಾಹಿತ್ಯ ಪ್ರಸಾರದ ಮೌನಕ್ರಾಂತಿ ಎಂತಲೇ ಹೇಳಬೇಕು. ಕೇವಲ ಗ್ರಂಥಗಳಲ್ಲದೆ ಆ ವಾಚನಾಲಯಕ್ಕೆ ನಾಲ್ಕಾರು ಮಾಸ ಪತ್ರಿಕೆಗಳು, ಒಂದೆರಡು ವಾರಪತ್ರಿಕೆಗಳು ಬರುತ್ತಿದ್ದುವಂತೆ. ಈ ಎಲ್ಲ ಬಗೆಯ ಓದು ಆನಂದಕಂದರ ಭವಿಷತ್ತಿನ ಬರಹಗಳಿಗೆ ಒಂದು ಬಗೆಯ ಸಂಸ್ಕಾರವನ್ನೇ ನೀಡಿತ್ತು. ೧೯೧೭ ರಲ್ಲಿ ಆನಂದಕಂದರು ಮುಲ್ಕಿ ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಪಾಸಾಗಿದ್ದರು.