ಹಿಂದುಸ್ತಾನೀ ಸಂಗೀತದ ಅಭಿಮಾನಿಗಳಲ್ಲಿ ಉಸ್ತಾದ್ ಬಡೇ ಗುಲಾಂ ಅಲೀಖಾನರ ಹೆಸರನ್ನು ಕೇಳದೇ ಇರುವವರು ಅಪರೂಪ. ಉಸ್ತಾದ್ ಅಂದರೆ ನಮ್ಮಲ್ಲಿ ಸಂಗೀತ ವಿದ್ವಾನ್ ಎಂದು ಕರೆಯುತ್ತಾರಲ್ಲ. ಹಾಗೆ, ಬಡೇ ಅಂದರೆ ಹಿಂದೂಸ್ತಾನೀ ಭಾಷೆಯಲ್ಲಿ ದೊಡ್ಡದು ಎಂದು ಅರ್ಥ. ಗುಲಾಂ ಅಲೀಖಾನರಿಗೆ ಈ ಬಡೇ ಶಬ್ದವು ತುಂಬಾ ಒಪ್ಪುವ ಹಾಗಿತ್ತು. ಅವರು ಸ್ವಭಾವದಲ್ಲಿ ದೊಡ್ಡವರು. ವಿದ್ಯೆಯಲ್ಲಿಯೂ ಅಷ್ಟೇ. ಆಕಾರದಲ್ಲಿಯೂ ಅಷ್ಟೇ. ಅವರು ವೇದಿಕೆಯ ಮೇಲೆ ಕುಳಿತಾಗ ಅರ್ಧಭಾಗವನ್ನೆಲ್ಲಾ ತುಂಬಿಕೊಳ್ಳುವರು.

ವ್ಯಕ್ತಿ ಬಡೇ ದನಿ ಎಷ್ಟು ಮೃದು!

ಗುಲಾಂ ಅಲೀಖಾನರು ಹೆಸರುವಾಸಿಯಾಗಲು ಆರಂಭವಾದಾಗ, ಇನ್ನೂ ಒಬ್ಬ ಗುಲಾಂ ಅಲೀಖಾನರು ಹಾಡುತ್ತಿದ್ದರಂತೆ. ವಯಸ್ಸಿನಲ್ಲಿ ಹಿರಿಯರಾಗಿದ್ದ ಈ ಗುಲಾಂ ಆಲೀಖಾನರನ್ನು ಜನ ಬಡೇ ಗುಲಾಂ ಆಲೀಖಾನ್ ಎಂದು ಕರೆಯಲಾರಂಭಿಸಿದರು.

ಇಲ್ಲಿ ಒಂದು ಸ್ವಾರಸ್ಯವಿದೆ. ಈ ಹೆಸರಿಗೆ ತಕ್ಕಂತೆ ಗುಲಾಂ ಆಲೀಖಾನರು ದಢೂತಿ ವ್ಯಕ್ತಿಯಾದರೂ ಅವರ ದನಿ ಮಾತ್ರ ಬಹು ಮೃದು. ಆ ದೊಡ್ಡ ಸ್ವರದಲ್ಲಿ ಇಷ್ಟು ಸೂಕ್ಷ್ಮವಾದ, ರೇಷ್ಮೆ ಎಳೆಯಂತಹ ದನಿ ಇರಲು ಸಾಧ್ಯವೇ ಎಂದು ಆಶ್ಚರ್ಯವುಂಟಾಗುತ್ತಿದ್ದಿತು. ಆ ನಿವರಾದ ಸಣ್ಣ ದನಿಯಿಂದ ಗುಲಾಂ ಆಲೀಖಾನರು ಹಾಡುವಾಗ ಒಂದೊಂದು ರಾಗವೂ ಅದರದೇ ವಿಶೇಷವಾದ ಕಳೆಯಿಂದ ಕೂಡಿದ ಹಾಗೆ ಅನುಭವವಾಗುತ್ತಿತ್ತು. ಅವರು ಹಾಡಿದ ಕೃತಿಗಳೆಲ್ಲ ಲಲಿತವಾಗಿಯೂ ಕಿವಿಗೆ ಇಂಪಾಗಿಯೂ ಇರುತ್ತಿದ್ದವು. ಕೇಳುವವರಿಗೆ ತೃಪ್ತಿ ಉಂಟು ಮಾಡುತ್ತಿದ್ದುವು. ಅಲ್ಲದೆ ಮನಸ್ಸಿಗೂ ಒಂದು ಸುಖ ಮತ್ತು ನೆಮ್ಮದಿಯುಂಟು ಮಾಡುವ ಗುಣವೂ ಇದ್ದಿತು. ಪ್ರೌಢವಾದ ಖ್ಯಾಲ್ ಮುಂತಾದ ಕೃತಿಗಳೇ ಅಲ್ಲದೆ ಲಲಿತವಾದ ಠುಮ್ರಿ, ಭಜನ್ ಮುಂತಾದವುಗಳನ್ನೂ ಬಹು ಭಾವಪೂರಿತವಾಗಿ ಹಾಡುತ್ತಿದ್ದರು. ಇದರಲ್ಲಿ ಅದ್ವಿತೀಯರೆನಿಸಿಕೊಂಡಿದ್ದರು.

ಮನೆತನವೇ ಸಂಗೀತದ ತವರು

ಬಡೇ ಗುಲಾಂ ಆಲೀಖಾನರು ೧೯೦೨ನೆಯ ಇಸವಿಯಲ್ಲಿ ಲಾಹೋರಿನಲ್ಲಿ ಹುಟ್ಟಿದರು. ಗುಲಾಂ ಆಲೀಖಾನರ ತಂದೆಯವರಾದ ಉಸ್ತಾದ್ ಅಲೀಬಕ್ಸ್ ಮತ್ತು ಸೋದರ ಮಾವನಾದ ಉಸ್ತಾದ್ ಕಾಲೇಖಾನರೂ ಒಳ್ಳೆಯ ಸಂಗೀತ ವಿದ್ವಾಂಸರು. ಇಬ್ಬರೂ ಪಾಟಿಯಾಲಾ ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಗುಲಾಂ ಆಲೀಖಾನರಿಗೆ ಸಂಗೀತದಲ್ಲಿ ಬಾಲ್ಯಪಾಠವೆಲ್ಲಾ ತಂದೆಯವರಿಂದಲೇ ಕಲಿಸಲ್ಪಟ್ಟಿತು. ಆದರೆ ಕಾಲೇಖಾನರಿಗೆ ಸೋದರಳಿಯ ಗುಲಾಂ ಆಲೀಯನ್ನು ಕಂಡರೆ ಬಹು ವಿಶ್ವಾಸ. ತಮಗೆ ಗೊತ್ತಿದ್ದ ಅಮೂಲ್ಯ ವಿಷಯಗಳನ್ನೆಲ್ಲಾ ಹೇಳಿಕೊಟ್ಟು ಅಭ್ಯಾಸ ಮಾಡಿಸುತ್ತಿದ್ದರು. ಕಾಲೇಖಾನರು ಪಾಟಿಯಾಲಾ ಘರಾನೆಯ ದೊಡ್ಡ ಉಸ್ತಾದರೆಂದು ಮಾನ್ಯ ಮಾಡಲ್ಪಟ್ಟವರು. ಘರಾನೆ ಎಂದರೆ ಹಾಡುವ ಒಂದು ಶೈಲಿಗೆ ಸಂಬಂಧಪಟ್ಟ ಹೆಸರು.

ಹಿಂದೂಸ್ತಾನೀ ಸಂಗೀತವು ಪ್ರಚಲಿತವಾಗಿರುವ ಪ್ರದೇಶಗಳಲ್ಲಿ ಕೆಲವು ನಗರಗಳಲ್ಲಿದ್ದ ಉಸ್ತಾದರು ಹಾಡುವುದರಲ್ಲಿ ಅವರವರದೇ ಒಂದು ವಿಶೇಷ ಶೈಲಿಯನ್ನು ರೂಪಿಸಿಕೊಂಡು ಬಂದರು. ಆ ಶೈಲಿಗಳಿಗೆ ಆಯಾ ಊರಿನ ಹೆಸರುಗಳೇ ಬಂದುವು. ಹೀಗೆ ಹಿಂದೂಸ್ಥಾನೀ ಸಂಗೀತದಲ್ಲಿ ಗ್ವಾಲಿಯರ್ ಘರಾನೆ, ಆಗ್ರಾ ಘರಾನೆ, ಪಾಟಿಯಾಲಾ ಘರಾನೆ ಮುಂತಾದ ಸಂಪ್ರದಾಯಗಳಿವೆ ಗುಲಾಂ ಆಲೀಖಾನರು ಈ ಪಾಟಿಯಾಲಾ ಘರಾನೆಗೆ ಸೇರಿದವರು.

ಮನೆತನದ ಮರ್ಯಾದೆ ಉಳಿಸಬೇಕು

ಗುಲಾಂ ಆಲೀಖಾನರ ಹದಿಮೂರನೆಯ ವರ್ಷದಲ್ಲಿ ಅವರ ಸೋದರಮಾವ ಕಾಲೇಖಾನರು ತೀರಿಕೊಂಡರು. ಬಹು ಮಮತೆಯಿಂದ ಕಾಣುತ್ತಿದ್ದ ಸೋದರಮಾವನು ಹೋದುದಕ್ಕೆ ಬಹು ದುಃಖಪಡುತ್ತಿದ್ದ ಬಾಲಕ ಗುಲಾಂ ಆಲೀ. ಒಂದು ಕೊಠಡಿಯೊಳಗೆ ಮಲಗಿಕೊಂಡು ಅಳುತ್ತಿದ್ದ. ಹೊರಗೆ ಅಂಗಳದಲ್ಲಿ ಕಾಲೇಖಾನರ ಬಂಧುಗಳಲ್ಲಿ ಒಬ್ಬ, ಈ ಮನೆತನದಲ್ಲಿ ಬೆಳೆದು ಬಂದ ಸಂಗೀತದ ಬಗೆಗೆ ಮಾತನಾಡಲಾರಂಭಿಸಿದನು. ಕೂಡಲೇ ಇನ್ನೊಬ್ಬ, ’ಅದರ ವಿಷಯ ಏಕೆ ಮಾತಾಡುತ್ತೀರಿ? ಕಾಲೇಖಾನ್ ಹೋದ ಮೇಲೆ ಈ ಮನೆಯಲ್ಲಿ ಸಂಗೀತವೆಲ್ಲಿ ಬಂತು? ಅವರೊಂದಿಗೆ ಸಂಗೀತವೂ ಸತ್ತು ಹೋಯಿತು’ ಎಂದು ಹೇಳಿದನು. ಈ ಮಾತುಗಳು ಕಿಟಕಿಯಿಂದ ತೂರಿ ಗುಲಾಂ ಆಲೀಯ ಕಿವಿಗೆ ಬಿದ್ದುವು. ಅವನಿಗೆ ಚೂರಿಯಿಂದ ಚುಚ್ಚಿದಂತಾಯಿತು. ’ಕಾಲೇಖಾನರು ಸತ್ತರೆ ಮನೆತನದ ಸಂಗೀತವೂ ಸಾಯಬೇಕೆ ನಾವೆಲ್ಲಾ ಇಲ್ಲವೆ?’ ಎಂದುಕೊಂಡು,”ಏನೇ ಆಗಲಿ ಅದನ್ನು ಕಷ್ಟಪಟ್ಟು ಉಳಿಸಬೇಕು. ಮನೆತನದ ಮರ್ಯಾದೆಯನ್ನು ಕಾಪಾಡಬೇಕು’ ಎಂದು ನಿರ್ಧಾರ ಮಾಡಿಕೊಂಡನು. ಅದಕ್ಕೆ ತಕ್ಕಂತೆ ಕೆಚ್ಚಿನಿಂದ ಸಾಧನೆ ಮಾಡಿದನು.,

’ಏನೇ ಆಗಲಿ, ಮನೆತನದ ಮರ್ಯಾದೆಯನ್ನು ಕಾಪಾಡಬೇಕು’

ಅಲೆದಾಟ – ಬಡತನ

ಇದೇ ಸಮಯದಲ್ಲಿ ಗುಲಾಂ ಆಲೀಖಾನರಿಗೆ ಇನ್ನೊಂದು ಕಷ್ಟ ಒದಗಿ ಬಂದಿತು. ಅವರ ತಂದೆ ಆಲೀಬಕ್ಸ್ ಇನ್ನೊಂದು ಮದುವೆ ಮಾಡಿಕೊಂಡು ಗುಲಾಂ ಆಲೀಯವರ ತಾಯಿಯನ್ನೂ ಐದು ಮಕ್ಕಳನ್ನೂ ಬಿಟ್ಟು ಊರು ಬಿಟ್ಟು ಹೊರಟು ಹೋದರು. ಕಾಲೇಖಾನರು ಸತ್ತ ಮೇಲೆ ಆ ಮನೆಯಲ್ಲಿಯೂ ಇರಲು ಸಾಧ್ಯವಿರಲಿಲ್ಲ. ಗುಲಾಂ ಆಲೀ ತಾಯಿ ಮತ್ತು ತಮ್ಮಂದಿರೊಂದಿಗೆ ಲಾಹೋರ್ ನಗರಕ್ಕೆ ಬಂದರು. ಅಲ್ಲಿ ಸಾರಂಗಿ ನುಡಿಸುವ ವೃತ್ತಿ ಹಿಡಿದು ತಾಯಿ ಮತ್ತು ತಮ್ಮಂದಿರನ್ನು ಸಾಕಬೇಕಾಗಿ ಬಂದಿತು. ಅಂದು ಸಾರಂಗಿ ನುಡಿಸುವವರನ್ನು ಕಂಡರೆ ಬಹು ಹೀನಾಯ.

ಲಾಹೋರಿನಲ್ಲಿ ಜೀವನ ನಡೆಯುವುದು ಕಷ್ಟವಾಗಿ ಮುಂಬಯಿಗೆ ಬಂದರು. ಅಲ್ಲಿಯೂ ಕಷ್ಟ ಜೀವನ. ಆದರೆ ಅಲ್ಲಿ ಹೆಸರುವಾಸಿಯಾದ ಅನೇಕ ಸಂಗೀತ ವಿದ್ವಾಂಸರೊಂದಿಗೆ ಕಲೆತು ತಮ್ಮ ಸಂಗೀತ ಕಲೆಯನ್ನು ವೃದ್ಧಿಪಡಿಸಿಕೊಳ್ಳಲು ಅವಕಾಶವಾಯಿತು. ಹೀಗೆ ಪಾಡುಪಡುತ್ತಿದ್ದಾಗ ಆಲೀಬಾಕ್ಸ್ ರವರು ಬಂದು ಗುಲಾಂ ಆಲೀ ಮತ್ತು ಕುಟುಂಬದವರನ್ನೆಲ್ಲಾ ಪುನಃ ಲಾಹೋರಿಗೆ ಕರೆದುಕೊಂಡು ಹೋದರು.

ತಂದೆಯ ಶಿಷ್ಯ

ಲಾಹೋರಿನಲ್ಲಿ ಗುಲಾಂ ಅಲೀಯ ಸಂಗೀತ ಮುಂದುವರಿಯಿತು. ಅವರ ತಂದೆ ಹಳೆಯ ಸಂಪ್ರದಾಯದವರು. ಒಂದೊಂದು ಅಂಶವನ್ನೂ ಖಚಿತವಾಗಿ ಕಲಿತಿದ್ದಾನೆಂದು ನಂಬಿಕೆಯಾದ ನಂತರವೇ ಮುಂದಿನ ಅಂಶವನ್ನು ಕಲಿಸುತ್ತಿದ್ದರು. ಜೊತೆಗೆ ಹೊರಗಡೆ ಹಾಡಲು ಬಿಡುತ್ತಿರಲಿಲ್ಲ. ಸಾಕಷ್ಟು ಕಲಿತಿದ್ದಾನೆಂದು ಮನಸ್ಸಿಗೆ ಒಪ್ಪಿಗೆಯಾದ ಮೇಲೆ ಆಲೀಬಕ್ಸ್ ರವರು ಮಗ ಗುಲಾಂ ಆಲೀಯನ್ನೂ ತಮ್ಮ ಸಂಗೀತ ಕಛೇರಿಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಕ್ರಮೇಣ ಹಿಂದುಗಡೆ ಕುಳಿತು ಹಾಡಲು ಅವಕಾಶ ಕೊಡಲಾರಂಭಿಸಿದರು. ಆ ವೇಳೆಗೆ ಗುಲಾಂ ಆಲೀಯವರಿಗೆ ಸುಮಾರು ೨೦ ವರ್ಷ.

ಸ್ವತಂತ್ರವಾಗಿ ಸಂಗೀತ ಕಛೇರಿ ಮಾಡಲು ಪ್ರಾರಂಭಿಸಿದಾಗ ಗುಲಾಂ ಆಲೀಯವರಿಗೆ ಸುಮಾರು ೨೨-೨೩ ವರ್ಷ. ಲಕ್ನೋ ನಗರದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು ಆಲೀಬಕ್ಸ್ ರವರೂ ಹೋಗಿದ್ದರು. ಮಗನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಸ್ವತಂತ್ರವಾಗಿ ಹಾಡಲು ಅವಕಾಶ ಮಾಡಿಬಿಟ್ಟರು. ಹಿಂದೂಸ್ತಾನೀ ಸಂಗೀತದ ಘಟಾನುಘಟಿಗಳೆಲ್ಲಾ ಅಲ್ಲಿ ನೆರೆದಿದ್ದರು. ತರುಣ ಗುಲಾಂ ಆಲೀಯ ಹಾಡುಗಾರಿಕೆಯನ್ನು ಕೇಳಿ ಅವರೆಲ್ಲಾ ಸಂತೋಷಪಟ್ಟರು. ಆದರೆ ಗುಲಾಂ ಆಲೀ ಪ್ರಪಂಚದ ದೃಷ್ಟಿಗೆ ಬಿದ್ದು ಕೀರ್ತಿಯ ಮೆಟ್ಟಿಲನ್ನು ಹತ್ತುವುದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಯಿತು.

ಜನರ ಮನಸ್ಸನ್ನು ಸೆಳೆದರು

೧೯೩೯ನೆಯ ಇಸವಿಯ ವಂಗ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು ಗುಲಾಂ ಆಲೀಖಾನ್ ಕಲ್ಕತ್ತೆಗೆ ಬಂದರು. ಆಗ ಅವರಿಗೆ ವಯಸ್ಸು ೩೭. ಉಸ್ತಾದ್ ಗುಲಾಂ ಆಲೀಖಾನರೂ ಆಗಿದ್ದರು. ಆದರೆ ಜನತೆಯು ಅವರನ್ನು ಹತ್ತಾರು ಉಸ್ತಾದರಲ್ಲಿ ಒಬ್ಬರು ಎಂದು ಮಾತ್ರ ಪರಿಗಣಿಸಿತ್ತು. ಅಷ್ಟೆ. ಅವರ ಸರದಿ ಬಂದಾಗ ರಾತ್ರಿಯಾಗಿತ್ತು. ವೇದಿಕೆಯನ್ನು ಹತ್ತಿ ಕುಳಿತರು. ಗುಲಾಂ ಆಲೀಖಾನ್. ಸ್ವರಮಂಡಲವನ್ನು ಅವಚಿಕೊಂಡು ಎಳೆ ಎಳೆಯಾಗಿ ಮೀಟುತ್ತಾ ಅದರಿಂದ ಹೊರಡುವ ಸುನಾದದ ಜೊತೆಗೆ ತಮ್ಮ ದನಿಯನ್ನು ಸೇರಿಸಿ ಹಾಡಲಾರಂಭಿಸಿದರು. ಅಂದು ಹಾಡಲು ಅವರು ಆರಿಸಿದುದು ಕೇದಾರ ರಾಗ. ಸಾವಕಾಶವಾಗಿ ಹಾಡುತ್ತಾ ರಾಗದ ಒಂದೊಂದು ಸುಂದರ ಅಂಶವನ್ನೂ ಆ ಮೃದುವಾದ ಮತ್ತು ನವಿರಾದ ದನಿಯಿಂದ ಬಹು ಹಿತವಾಗುವಂತೆ ನಿರೂಪಿಸುತ್ತಾ ಕೇದಾರ ರಾಗವನ್ನು ಬಹು ವಿಸ್ತಾರವಾಗಿ ಪೋಷಿಸಿದರು. ಅಲ್ಲಿ ನರೆದಿದ್ದವರಿಗೆಲ್ಲಾ ಮೈಯಲ್ಲಿ ವಿದ್ಯುಚ್ಛಕ್ತಿಯು ಹರಿದಂತಾಯಿತು. ಇಂತಹ ಸುಂದರವಾದ ಕೇದಾರ ರಾಗದ ನಿರೂಪಣೆಯನ್ನು ಕೇಳಿರಲಿಲ್ಲ. ಅದರದೇ ಒಂದು ವಿಶೇಷ ಸೊಬಗು, ಒಂದು ವಿಶೇಷ ರುಚಿ. ಜನರೆಲ್ಲಾ ಮುಗ್ಧರಾದರು. ಈ ಸುದ್ದಿಯು ಶೀಘ್ರದಲ್ಲಿಯೇ ಉತ್ತರ ಭಾರತದ ಮುಖ್ಯ ಪಟ್ಟಣಗಳಿಗೆಲ್ಲಾ ಹರಡಿತು. ಗುಲಾಂ ಆಲೀಖಾನರಿಗೆ ಸಂಗೀತ ಕಛೇರಿ ಮಾಡಲು ಆಹ್ವಾನಗಳ ಸುರಿಮಳೆ, ಒತ್ತಾಯ, ಯಾವ ಸಂಗೀತೋತ್ಸವವಾಗಲೀ ಅಥವಾ ಯಾವ ಸಂಗೀತ ಸಮ್ಮೇಳನವಾಗಲೀ ಬಡೇ ಗುಲಾಂ ಆಲೀಖಾನರು ಇದ್ದೇ ಇರಬೇಕು. ಇಲ್ಲದಿದ್ದರೆ ಉತ್ಸವಕ್ಕೆ ಆಕರ್ಷಣೆ ಇಲ್ಲ. ಕಳೆ ಇಲ್ಲ ಎಂಬ ರೀತಿಯ ಭಾವನೆಯು ಉತ್ತರ ಭಾರತದ ಕಲಾಭಿಮಾನಿಗಳಲ್ಲಿ ಉಂಟಾಯಿತು.

ಸುಮಾರು ೧೯೩೭ರಲ್ಲಿ ಬಡೇ ಗುಲಾಂ ಆಲೀಖಾನರು ದಕ್ಷಿಣಕ್ಕೆ ಬಂದರು. ಇಲ್ಲಿ ದಕ್ಷಿಣವೆಂದರೆ ಮುಂಬಯಿ ನಗರದಿಂದ ದಕ್ಷಿಣ ಭಾಗಕ್ಕೆ ಎಂದು ಅರ್ಥ ಮಾಡಬೇಕು. ಏಕೆಂದರೆ ಉತ್ತರ ಭಾರತದಿಂದ ಬರುವ ಹಿಂದೂಸ್ತಾನೀ ಸಂಗೀತಗಾರರಿಗೆ ಮುಂಬಯಿ ಅಥವಾ ಹೈದರಾಬಾದ್ ನಗರಗಳಿಗೆ ಅವರ ಸಂಗೀತ ಪದ್ಧತಿಯ ಎಲ್ಲೆ ಮುಗಿದಂತೆ ಅವರು ದಕ್ಷಿಣಕ್ಕೆ ಬಂದ ಸಂದರ್ಭವು ಸ್ವಾರಸ್ಯವಾಗಿದೆ.

ಯಾವ ಮಹಾ ಸಂಗೀತಗಾರರಿದ್ದಾರೆ?

ಮುಂಬಯಿಯಲ್ಲಿ ಅಮೋಘವಾಗಿ ಹಾಡಿದ ಗುಲಾಂ ಆಲೀಖಾನರನ್ನು ಕೆಲವು ರಸಿಕರು”ದಕ್ಷಿಣಕ್ಕೆ ಇರುವ ಪೂನಾ, ಕೊಲ್ಲಾಪುರ ಮುಂತಾದ ನಗರಗಳಿಗೆ ಬರಲು ಇಷ್ಟ ಪಡುವುದಿಲ್ಲವೇ’ ಎಂದು ಕೇಳಿದರು. ಅದಕ್ಕೆ, ’ಅಲ್ಲಿ ಯಾವ ಮಹಾ ಸಂಗೀತವಿದೆ, ಯಾವ ಮಹಾ ಸಂಗೀತಗಾರರಿದ್ದಾರೆ ಎಂದು ಬರಬೇಕು? ಅಂತಹ ಜಾಗಕ್ಕೆ ಬಂದು ನಾನು ಮಾಡುವುದಾದರೂ ಏನಿದೆ?’ ಎಂದು ಹೇಳಿದರು. ಆದರೆ ಬಂದರು. ಆಗ ಗುಲಾಂ ಆಲೀಖಾನರಿಗೆ ತುಂಬು ಯೌವನ. ಈ ಮಾತನ್ನು ಅವರು ಹುಡುಗಾಟಿಕೆಯಾಗಿ ಹೇಳಿರಬಹುದು. ಆದರೆ ಅದನ್ನು ಕೇಳಿದ ಅಲ್ಲಿದ್ದ ಮಹಾರಾಷ್ಟ್ರದವರಿಗೆ ಚುಚ್ಚಿದಂತಾಯಿತು. ಅವರು ಅದನ್ನು ಹುಡುಗಾಟಿಕೆಯೆಂದು ಅಲ್ಲಿಗೆ ಮರೆಯಲಿಲ್ಲ. ಗುಲಾಂ ಆಲೀಖಾನರು ಮೂದಲಿಸಿದ್ದ ಭಾಗದಲ್ಲಿಯೂ ಎಂತಹ ಉತ್ತಮ ಸಂಗೀತವಿದೆ ಎಂಬುದನ್ನು ಅವರಿಗೆ ಮನದಟ್ಟಾಗುವಂತೆ ಮಾಡಬೇಕೆಂದು ನಿರ್ಧರಿಸಿದರು.

ಸ್ಪರ್ಧೆ

ಇದಕ್ಕೆ ಪರಸ್ಪರ ಪೈಪೋಟಿ ಇರುವಂತಹ ಒಂದು ಸಂಗೀತ ಕಛೇರಿಯೇ ಸರಿ ಎಂದು ತೀರ್ಮಾನ ಮಾಡಿ ಸ್ಥಳದ ಕೆಲವು ಸಂಗೀತ ವಿದ್ವಾಂಸರನ್ನೂ ಭಾಗವಹಿಸಲು ಕರೆದರು. ಆದರೆ ಅವರಾರೂ ಒಪ್ಪಲಿಲ್ಲ. ಏಕೆಂದರೆ ಗುಲಾಂ ಆಲೀಖಾನರ ಪ್ರೌಢಿಮೆ ಮತ್ತು ಕೀರ್ತಿ ಅವರಿಗೆ ತಿಳಿದಿತ್ತು. ಕೊನೆಗೆ ಈ ರಸಿಕರೆಲ್ಲಾ ಕೊಲ್ಲಾಪುರಕ್ಕೆ ಹೋಗಿ ಉಸ್ತಾದ್ ಅಲ್ಲಾದಿಯಾಖಾನ್ ಎಂಬ ಸಂಗೀತಗಾರರಿಗೆ ಈ ಸಂದರ್ಭವನ್ನೆಲ್ಲಾ ವಿವರಿಸಿದರು. ಆಗ ಅಲ್ಲಾದಿಯಾ ಖಾನರು ಹಣ್ಣು ಮುದುಕರು. ಜೊತೆಗೆ ಅವರ ಗಂಡು ಮಕ್ಕಳಿಬ್ಬರೂ ಅವರ ಕಣ್ಣು ಮುಂದೆಯೇ ತೀರಿಹೋಗಿದ್ದು ಇನ್ನೂ ಕುಗ್ಗಿ ಹೋಗಿದ್ದರು.

ಅಲ್ಲಾದಿಯಾಖಾನರಿಗೆ ವಿಷಯವನ್ನೆಲ್ಲಾ ಕೇಳಿ ವ್ಯಸನವಾಯಿತು. ತಾವು ಏನೂ ಮಾಡಲು ಶಕ್ತಿ ಇಲ್ಲವಲ್ಲ ಎಂದು ವಿಷಾದಪಟ್ಟರು. ಕೊನೆಗೆ ಸ್ವಲ್ಪ ಯೋಚನೆ ಮಾಡಿ ಕೊಲ್ಲಾಪುರದಲ್ಲಿಯೇ ಈ ರೀತಿಯ ಪೈಪೋಟಿ ಕಚೇರಿಯನ್ನು ಏರ್ಪಾಡು ಮಾಡುವಂತೆ ಸಲಹೆ ಮಾಡಿದರು. ಈ ಕಚೇರಿಯ ಕ್ರಮವಿಷ್ಟೆ. ಮೊದಲು  ಒಬ್ಬರು ಹಾಡುವುದು. ಎರಡೂ ಕಚೇರಿಗಳನ್ನು ಕೇಳಿದ ಸಭಾಸದರು ಯಾವುದು ಉತ್ತಮವಾಗಿತ್ತೆಂದು ತೀರ್ಮಾನ ಮಾಡುವುದು.

ಗುಲಾಂ ಆಲೀಖಾನರಿಗೆ ಪ್ರತಿಯಾಗಿ ಹಾಡುವವರು ಯಾರು? ಇದಕ್ಕೆ ಉಸ್ತಾದ್ ಅಲ್ಲಾಧಿಯಾಖಾನರು ಆರಿಸಿದುದು ತಮ್ಮ ಶಿಷ್ಯನಾದ ಧಾರವಾಡದ ತರುಣ ಗಾಯಕ ಮಲ್ಲಿಕಾರ್ಜುನ ಮನ್ಸೂರರನ್ನು. ತಂತಿಯನ್ನು  ಕೊಟ್ಟು ಊರಿಗೆ ಕರೆಸಿಕೊಂಡು ಅಲ್ಲಾದಿಯಾಖಾನ್ ಮಲ್ಲಿಕಾರ್ಜುನ ಮನ್ಸೂರರಿಗೆ ಈ ಕಾರ್ಯಕ್ರಮದ ಹಿನ್ನೆಲೆಯನ್ನೆಲ್ಲಾ ವಿವರಿಸಿದರು. ತಮಗೆ ದೇಹದಾರ್ಢ್ಯವಿದ್ದಿದ್ದರೆ ಬೇರೆ ಯಾರಿಗೂ ಈ ಕಚೇರಿಯನ್ನು ಬಿಡುತ್ತಿರಲಿಲ್ಲವೆಂದು ಹೇಳಿ, ಮಹಾರಾಷ್ಟ್ರದ ಸಂಗೀತ ಸಂಪ್ರದಾಯದ ಗೌರವವನ್ನು ಕಾಪಾಡಲು ಧೈರ್ಯ ಮಾಡಿ ಹಾಡಬೇಕೆಂದು ಸೂಚನೆಯಿತ್ತರು. ’ಗುಲಾಂ ಆಲೀ ಪ್ರಖ್ಯಾತನಾದ ಉಸ್ತಾದನೇ ಹೌದು. ನೀನಿನ್ನೂ ಈಗ ಬೆಳಕಿಗೆ ಬರುತ್ತಿರುವ ಕಲಾವಿದನಿರಬಹುದು. ಅದು ಒಂದು ಭಾಗಕ್ಕೆ ಒಳ್ಳೆಯದೇ ಆಯಿತು. ಒಂದು ವೇಳೆ ಈ ಸ್ಪರ್ಧೆಯಲ್ಲಿ ಸೋತರೂ ನಿನಗೆ ಅಂತಹ ನಷ್ಟವೇನೂ ಆಗಲಾರದು. ಒಂದು ಅನುಭವ ಬಂದಂತೆ ಆಯಿತು. ಇನ್ನೂ ಹುಡುಗನೆಂದು ಜನಗಳೂ ಕ್ಷಮಿಸುವರು. ಆದರೆ ನೀನು ಗೆದ್ದರೆ ಜನಾನುರಾಗ ಮತ್ತು ಕೀರ್ತಿ ಹೆಚ್ಚುವುದು., ಧೈರ್ಯದಿಂದ ಹಾಡು’ ಎಂದು ಬುದ್ಧಿವಾದ ಹೇಳಿದರು.

ಹುಡುಗ ಹಾಡಿದ

ರಾತ್ರಿ ಕಾರ್ಯಕ್ರಮ ಎಂದರೆ ಸಾಯಂಕಾಲವೇ ಸಭಾಂಗಣವೆಲ್ಲಾ ತುಂಬಿ, ಜನ ಹೊರಗೂ ಸೇರಿದ್ದರು.

ಮೊದಲು ಮಲ್ಲಿಕಾರ್ಜುನ ಮನ್ಸೂರ್ ರವರ ಗಾಯನ. ಅವರು ಪ್ರಾರಂಭಿಸಿದ ರಾಗ ನಂದ್. ಅದನ್ನು ಆನಂದಿ ಅಥವಾ ಆನಂದಿ ಕಲ್ಯಾಣ್ ಎಂದೂ ಕರೆಯುತ್ತಾರೆ. ನಿಧಾನವಾಗಿ ಉಯ್ಯಾಲೆಯಂತೆ ತೂಗಾಡುತ್ತಾ ಇನ್ನು ಕೆಲವು ವೇಳೆ ಹಾವಿನ ಹಾಗೆ ನುಲಿದುಕೊಂಡು ಹೋಗುವಂತೆ ಅನುಭವವಾಗುತ್ತದೆ. ಆದರೆ ಕಿವಿಗೆ ಬಹು ಇಂಪು. ಈ ರಾಗದ ರುಚಿಕರವಾದ ಅಂಶಗಳನ್ನೆಲ್ಲಾ ಚೆನ್ನಾಗಿ ಪ್ರದರ್ಶಿಸಿ ಹಾಡಿದರು. ಮಲ್ಲಿಕಾರ್ಜುನ ಮನ್ಸೂರ್. ಅದಾದ ನಂತರ ನಾಯಕಿ ಕಾನಡಾ ರಾಗ. ಅದನ್ನೂ ಚೆನ್ನಾಗಿ ವಿಸ್ತಾರವಾಗಿ ಪೋಷಿಸಿ ಹಾಡಿದರು. ಸಭೆಯೆಲ್ಲಾ ಸಂತೋಷಗೊಂಡು ಪುಳಕಿತವಾಗಿ ಚಪ್ಪಾಳೆ ಶಬ್ದದಿಂದ ತುಂಬಿ ಹೋಯಿತು.

ಹೀಗೇಕಾಯಿತು?

ಮನ್ಸೂರ್ ಅವರ ಸಂಗೀತದ ನಂತರ ಗುಲಾಂ ಆಲೀಖಾನರ ಸಂಗೀತ. ಅಂದಿನ ಕಾರ್ಯಕ್ರಮಕ್ಕೆ ಮೊದಲು ಈ ಇಬ್ಬರೂ ಸಂಗೀತ ವಿದ್ವಾಂಸರನ್ನು ಒಟ್ಟಿಗೆ ನೋಡಿದಾಗ ಸಭೆಯಲ್ಲಿ ಅನೇಕರಿಗೆ ನಗೆ ಬಂದದ್ದೂ ಉಂಟು. ಊದಿದರೆ ಗಾಳಿಗೆ ತೂರಿ ಹೋಗಬಹುದೋ ಏನೋ ಎನ್ನುವಷ್ಟು ಸಣಕಲಾಗಿದ್ದ ಮಲ್ಲಿಕಾರ್ಜುನ ಮನ್ಸೂರ್. ಅವರಿದ್ದೆಡೆಯೆಲ್ಲಾ ತುಂಬಿ ಹೋದಂತೆ ಅನುಭವವಾಗುತ್ತಿದ್ದ ಧಡೂತಿ ಆಕಾರದ ಬಡೇ ಗುಲಾಂ ಆಲೀಖಾನ್ ಜಗ್ಗುತ್ತಾ ವೇದಿಕೆಯ ಮೇಲಕ್ಕೆ ಬಂದರು. ವಿಶಾಲವಾಗಿ ಹರಡಿಕೊಂಡು ಕುಳಿತುಕೊಂಡ ನಂತರ ತೊಡೆಯ ಮೇಲೆ ಅವರ ಸಂಗಾತಿಯಂತಿದ್ದ ಸ್ವರಮಂಡಲವನ್ನಿಟ್ಟುಕೊಂಡು ಸಾವಕಾಶವಾಗಿ ಸವರುತ್ತಾ ಅದರಲ್ಲಿ ಮಿಣಮಿಣನೆ ಹೊರಡು ನಾದವನ್ನು ಆಲಿಸುತ್ತಾ ಅದರೊಂದಿಗೆ ತಮ್ಮ ದನಿಯನ್ನು ಹಿತವಾಗಿ ಬೆರಸಿ ಹಾಡತೊಡಗಿದರು.

ಬಡೇ ಗುಲಾಂ ಆಲೀಖಾನರು ತಮ್ಮ ಕಚೇರಿಯನ್ನು ಬಹಾರ್ ರಾಗದಿಂದ ಪ್ರಾರಂಭ ಮಾಡಿದರು.  ರಾತ್ರಿ ಆ ಸಮಯಕ್ಕೆ ಬಹು ಒಪ್ಪುವಂತಹ ರಾಗವದು. ಅದು ಗುಲಾಂ ಆಲೀಖಾನರಿಗೆ ಇಷ್ಟವಾದ ರಾಗವು ಸಹ. ಅದರ ಸೊಗಸನ್ನು ಅವರ ಹಾಡುಗಾರಿಕೆಯಲ್ಲೇ ಕೇಳಬೇಕು. ಅದೇ ಒಂದು ಬಗೆಯ ಆನಂದ. ಸಾವಕಾಶವಾಗಿ ರೇಷ್ಮೆ ಎಳೆಯಂತಹ ನಾದದ ತುಣುಕಿನಿಂದ ಬಹಾರ್ ರಾಗವನ್ನು ವಿಸ್ತಾರವಾಗಿ ಹಾಡಿದರು. ಆದರೂ ಅವರಿಗೆ ಏನೋ ತೃಪ್ತಿಯಿದ್ದಂತೆ ಕಾಣಬರಲಿಲ್ಲ. ಕೇಳುವವರಿಗೂ ಹಾಗೇ ಅನ್ನಿಸುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ಆ ರಾಗವನ್ನು ನಿಲ್ಲಿಸಿ ಮಾಲ್ ಕೌಂಸ್ ರಾಗವನ್ನು ಹಾಡಲಾರಂಭಿಸಿದರು. ಅದೂ ಹೀಗೆಯೇ ಆಯಿತು. ಅದರ ನಂತರ ಅವರಿಗೆ ಪ್ರಿಯವಾದ ಒಂದು ಠುಮ್ರಿಯನ್ನು ವಿಸ್ತಾರವಾಗಿ ಹಾಡಿದರು. ಆದರೂ ಸಪ್ಪೆ ಅನ್ನಿಸುತ್ತಿತ್ತು. ಅವರಿಗೆ ಮನಸ್ಸಿಗೆ ಸಮಾಧಾನವಿಲ್ಲ.

ಠುಮ್ರಿ ಆದ ನಂತರ ಗುಲಾಂ ಆಲೀಖಾನರು ಅವರ ಮಂಡಲವನ್ನು ಕೆಳಗಿಟ್ಟು ಅಂದಿನ ಕಾರ್ಯಕ್ರಮದ ವ್ಯವಸ್ಥಾಪಕರಾಗಿದ್ದ ಚೌಘುಲೆ ಅವರನ್ನು ಕರೆದರು. ಸ್ವಲ್ಪಕೋಪದಿಂದ ’ನೀವು ಇಂದು ಮಾಡಿದ್ದೇನು? ಯಾವನೋ ಚೋಟುದ್ದದ ಹುಡುಗನನ್ನು ಕರೆಸಿ ಹಾಡಿಸಿ ನನ್ನ ಕಚೇರಿಯನ್ನು ಕೆಡಿಸಿ ನನಗೆ ಅವಮಾನ ಮಾಡಬೇಕೆಂದು ಯೋಚಿಸಿದ್ದೀರಾ?’ ಎಂದು ಕೇಳಿದರು.

ಅದಕ್ಕೆ ’ಇಲ್ಲ, ತಾವು ಕೋಪ ಮಾಡಿಕೊಳ್ಳಬಾರದು. ಇಂದಿನ ಕಾರ್ಯಕ್ರಮವೆಲ್ಲಾ ಸೌಹಾರ್ದ ವಾತಾವರಣದಲ್ಲಿಯೇ ನಡೆದಿದೆ. ನಮ್ಮಲ್ಲಿಯೂ ಒಳ್ಳೆಯ ಸಂಗೀತಗಾರರಿದ್ದಾರೆ ಎಂಬುದನ್ನು ತಮಗೆ ತೋರಿಸಿಕೊಡುವುದೇ ನಮ್ಮ ಉದ್ದೇಶ ಅಷ್ಟೆ’ ಎಂದರು ಚೌಘುಲೆಯವರು.

ಬಡೇ ಗುಲಾಂ  ಅಲೀಖಾನರ ಹಾಡುಗಾರಿಕೆ ಕಳೆ ಕಟ್ಟದಿದ್ದುದಕ್ಕೆ ಇಷ್ಟೇ ಕಾರಣ. ನಾವು ನಮ್ಮನ್ನು ಹುರಿದುಂಬಿಸುವಂತಹ ಒಳ್ಳೆಯ ಸಂಗೀತವನ್ನು ಕೇಳಿದರೆ ಅದು ಸ್ವಲ್ಪ ಕಾಲ ನಮ್ಮ ಮನಸ್ಸಿನಲ್ಲಿಯೇ ಉಳಿದು ಅದನ್ನೇ ನೆನೆಸಿಕೊಂಡು ಮೆಲುಕುಹಾಕುವಂತೆ ಮಾಡುತ್ತದೆ. ಬೇರೆ ಯೋಚನೆಗಳು ಬಂದರೂ ಈ ಸಂಗೀತದ ನೆನಪೂ ಮಧ್ಯೆ ಮಧ್ಯೆ ಬರುತ್ತಲೇ ಇರುತ್ತದೆ. ಬಡೇ ಗುಲಾಂ ಅಲೀಖಾನರಿಗೆ ಆದುದೂ ಹಾಗೆಯೇ. ಮಲ್ಲಿಕಾರ್ಜುನ ಮನ್ಸೂರರ ಹಾಡುಗಾರಿಕೆ ಅವರ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಿತ್ತು. ತಮ್ಮ ಸಂಗೀತದ ಕಲ್ಪನೆಗಳು ಹುಲುಸಾಗಿ ಹೊರಗೆ ಬರಲು ಸಾಧ್ಯವಾಗದಷ್ಟು ಪರಿಣಾಮಕಾರಿಯಾಗಿತ್ತು. ಆದುದರಿಂದ ಅವರಿಗೆ ಎಂದಿನಂತೆ ಸರಾಗವಾಗಿ ತಾವೂ ಸಂತೋಷಪಟ್ಟು ಇತರರಿಗೂ ಸಂತೋಷ ಉಂಟು ಮಾಡುವಂತಹ ರೀತಿಯಲ್ಲಿ ಮತ್ತು ಆ ಮಟ್ಟದಲ್ಲಿ ಹಾಡಲು ಸಾಧ್ಯವಾಗಲಿಲ್ಲ. ಮಾರನೆಯ ಬೆಳಿಗ್ಗೆ ಅದೇ ದೇವಲ್ ಕ್ಲಬಿನಲ್ಲಿ ಉಪಾಹಾರ ಕೂಟ. ಈ ಇಬ್ಬರು ಗಾಯಕರೂ ಬಂದಿದ್ದರು. ಮನ್ಸೂರರ ಬಳಿಗೆ ಗುಲಾಂ ಅಲೀಖಾನರು ಬಂದು, ’ನೀವು ನಿನ್ನೆ ಬಹಳ ಚೆನ್ನಾಗಿ ಹಾಡಿದಿರಿ’ ಎಂದು ವಿಶ್ವಾಸದಿಂದ ಹೇಳಿದರು. ಆದರೆ ಮನ್ಸೂರರಿಗೆ ಸಮಾಧಾನವಾಗಲಿಲ್ಲ. ಪ್ರತಿಯಾಗಿ ಬಿರುಸು ಮಾತನಾಡಿದರು. ತಮ್ಮ ಗುರುಗಳಾದ ಅಲ್ಲಾ ದಿಯಾಖಾನರಿಗೆ ಅವಮಾನ ಮಾಡಲು ಯತ್ನಿಸಿದರೆಂದು ಅವರಿಗೆ ಗುಲಾಂ ಅಲೀಖಾನರ ಮೇಲೆ ಕೋಪ ಇನ್ನೂ ಇಳಿದಿರಲಿಲ್ಲ. ಆದರೆ ಈ ಬಿರುಸು ಜವಾಬಿಗೆ ಗುಲಾಂ ಅಲೀಖಾನರೇನೂ ಕೋಪ ಮಾಡಿಕೊಳ್ಳಲಿಲ್ಲ. ನಕ್ಕು ಮನ್ಸೂರರ ಬೆನ್ನು ಸವರಿ, ತಟ್ಟಿ ತಮ್ಮ ಜಾಗದಲ್ಲಿ ಹೋಗಿ ಕುಳಿತುಕೊಂಡರು.

ಜಿ.ಎನ್. ಬಾಲಸುಬ್ರಹ್ಮಣ್ಯಂ ಬಡೇ ಗುಲಾಂ ಆಲೀಖಾನರಿಗೆ ಜರತಾರಿ ವಲ್ಲಿಯನ್ನು ಹೊದಿಸಿದರು.

ಮದರಾಸಿನಲ್ಲಿ

ದಕ್ಷಿಣ ಭಾರತದಲ್ಲಿ ಅಂದರೆ ಕರ್ನಾಟಕ ಸಂಗೀತದ ವ್ಯಾಪ್ತಿಯಿರುವ ಭಾಗಗಳಲ್ಲಿ ಅವರು ಜನಪ್ರಿಯವಾದ ಸಂದರ್ಭವು ಸ್ವಾರಸ್ಯವಾಗಿದೆ.

೧೯೫೪ರವರೆಗೆ ಬಡೇ ಗುಲಾಂ ಆಲೀಖಾನರು ಹೈದರಾಬಾದಿನಿಂದ ದಕ್ಷಿಣಕ್ಕೆ ಬಂದಿರಲಿಲ್ಲ. ಆ ವರ್ಷ ಬಂದರು. ಈ ಪ್ರದೇಶ ಅವರಿಗೆ ಹೊಸದು. ಸಂಗೀತ ಪದ್ಧತಿ ಹೊಸದು. ಉತ್ತರ ಭಾರತದಲ್ಲಿ ಆಗಿಷ್ಟು ಈಗಿಷ್ಟು ಕರ್ನಾಟಕ ಸಂಗೀತವನ್ನು ಕೇಳಿದ್ದರು. ಆದರೆ ಈಗ ಅದರ ತವರಿಗೇ ಬಂದರು. ಅವರು ಮದರಾಸಿಗೆ ಬರಲು ಮೆಹನತ್ತು ಮಾಡಿದವರು ಕರ್ನಾಟಕ ಸಂಗೀತದ ಸುಪ್ರಸಿದ್ಧ ಗಾಯಕರಾದ ವಿದ್ವಾನ್ ಜಿ.ಎನ್. ಬಾಲಸುಬ್ರಹ್ಮಣ್ಯಂ ಅವರು. ಮೊದಲ ಮೊದಲು ಜನರು ಬಡೇ ಗುಲಾಂ ಅಲೀಖಾನರ ಬಗೆಗೆ ಸ್ವಲ್ಪ ಸಂಶಯದಿಂದಲೇ ನಡೆದು ಬಂದರು. ಕೆಲವು ಭಾಗಗಳಲ್ಲಿ ವಿರೋಧವೂ ಕಂಡು ಬಂದಿತು. ಇದಕ್ಕೆ ಸ್ವಲ್ಪ ಕಾರಣವೂ ಇದ್ದಿತೆನ್ನಬಹುದು.

ಮದರಾಸಿಗೆ ಗುಲಾಂ ಅಲೀಖಾನರು ಬಂದ ಮೇಲೆ ನಡೆದ ಅವರ ಮೊದಲನೆಯ ಸಂಗೀತ ಕಚೇರಿಯಲ್ಲಿ ಜಿ.ಎನ್. ಬಾಲಸುಬ್ರಹ್ಮಣ್ಯಂರವರೂ ಇದ್ರು. ಗುಲಾಂ ಅಲೀಖಾನರ ಸಂಗೀತದಿಂದ ಬಹು ಸಂತೋಷಪಟ್ಟರು. ಕಛೇರಿಯಾದ ನಂತರ ಸಂಭ್ರಮದಿಂದ ಎದ್ದು ಗುಲಾಂ ಅಲೀಖಾನರಿಗೆ ಮರ್ಯಾದೆಯಿಂದ ಒಂದು ಜರತಾರಿ ವಲ್ಲಿಯನ್ನು  ಹೊದಿಸಿ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಬಾಲಸುಬ್ರಹ್ಮಣ್ಯಂ ಅವರ ಈ ನಡವಳಿಕೆಯಿಂದ ಕಛೇರಿಗೆ ಬಂದಿದ್ದ ಅನೇಕ ಸ್ಥಳೀಯ ಸಂಗೀತ ವಿದ್ವಾಂಸರಿಗೆ ಆಶ್ಚರ್ಯವಾಯಿತು. ಸಂಪ್ರದಾಯವಾದಿಗಳಿಗೆ ಕೋಪವೂ ಬಂದಿತ್ತು. ಇದು ಪರೋಕ್ಷವಾಗಿ ಗುಲಾಂ ಅಲೀಖಾನರ ಬಗೆಗೆ ವಿರೋಧಕ್ಕೆ ತಿರುಗಿತು. ಅವರ ಸಂಗೀತ ಕಛೇರಿಗಳು ಪ್ರಾರಂಭವಾದುದು ಇಂತಹ ವಿರೋಧದ ವಾತಾವರಣದಲ್ಲಿಯೇ. ಉದಾಹರಣೆಗೆ, ಬೆಂಗಳೂರಿನ ಪ್ರಸಿದ್ಧ ಸಂಸ್ಥೆಯೊಂದು ಅವರ ಮೊದಲನೆಯ ಸಂಗೀತ ಕಛೇರಿಯನ್ನು ಏರ್ಪಡಿಸಿತು. ತನ್ನ ಸದಸ್ಯರಿಗೆ ಸಭಾಂಗಣದ ಒಂದು ಭಾಗವನ್ನೆಲ್ಲ ಮೀಸಲಾಗಿಟ್ಟು ಉಳಿದ ಸ್ಥಳಕ್ಕೆ ಟಿಕೇಟು ಮೂಲಕ ಪ್ರವೇಶದಂತೆ ಏರ್ಪಡಿಸಿತು. ಆದರೆ ಕಛೇರಿ ಪ್ರಾರಂಭವಾಗುವ ವೇಳೆಗೆ ಸದಸ್ಯರಿಗೆ ಕಾದಿರಿಸಿದ್ದ ಭಾಗದಲ್ಲಿ ಮುಕ್ಕಾಲು ಭಾಗಕ್ಕೂ ಮೀರಿ ಖಾಲಿಯಾಗಿತ್ತು. ಅನೇಕ ಸದಸ್ಯರು ಬೇಕೆಂದೇ ಬರಲಿಲ್ಲ. ಆದರೆ ಟಿಕೇಟು ಹಾಕಿದ ಭಾಗಕ್ಕೆ ಮಿತಿಮೀರಿ ನೂಕುನುಗ್ಗಲು. ಸ್ಥಳವಿಲ್ಲದೆ ಅನೇಕರು ಹಿಂದಿರುಗಬೇಕಾಯಿತು.

ವಿರೋಧವನ್ನು ಸಂಗೀತ ಕರಗಿಸಿತು

ಬಡೇ ಗುಲಾಂ ಆಲೀಖಾನರ ವಿಷಯ ಮನಸ್ಸಿನಲ್ಲಿ ಏನೇ ತಿಳಿದುಕೊಂಡಿದ್ದರೂ ಅವರ ಹಾಡುಗಾರಿಕೆಯನ್ನು ಎದುರಿಗೆ ಕೇಳಿದ ಮೇಲೆ ಆ ವಿರೋಧವೆಲ್ಲಾ ಮಾಯವಾಯಿತು. ಅಂತಹ ಹಾಡುಗಾರಿಕೆ ಗುಲಾಂ ಅಲೀಖಾನರದು. ದನಿ ಎಷ್ಟು ಮಧುರವಾಗಿತ್ತೆಂಬ ಅಂಶವನ್ನು ಆಗಲೇ ಹೇಳಿಯಾಗಿದೆ. ಆದರ ದನಿಯ ಜೊತೆಗೆ ಅವರ ಹಾಡುಗಾರಿಕೆಯ ವೈಖರಿ ಜನಗಳಿಗೆ ಹೊಸದಾಗಿತ್ತು. ಜೇನುತುಪ್ಪವನ್ನು ನೆನಪಿಗೆ ಬರುವಂತೆ ಮಾಡುತ್ತಿತ್ತು. ಎಲ್ಲವೂ ಮಿತ, ಆದರೆ ಬಹು ಹಿತ. ಹಿಂದೂಸ್ತಾನೀ ಪದ್ಧತಿಯ ಖ್ಯಾಲ್ ಕೃತಿಗಳೇ ಅಲ್ಲದೆ ಲಲಿತವಾದ ಠುಮ್ರಿ. ಗಜಲ್ ಇವುಗಳ ಜೊತೆಗೆ ಭಜನ್ ಗಳನ್ನು ಸುಲಲಿತವಾಗಿ ಬೆಣ್ಣೆಯು ಕರಗಿದ ರೀತಿಯಲ್ಲಿ ಹಾಡಿದರು. ಅದಕ್ಕೂ ಹೆಚ್ಚಾಗಿ ಸಂಸ್ಕೃತದ ಗೀತಗೋವಿಂದವನ್ನು ಸ್ವಚ್ಛವಾಗಿ ಹಾಡಿದರು.

ಕರ್ನಾಟಕ ಸಂಗೀತದಲ್ಲಿ ಕಾಣ ಬರುವ ಒಂದು ಮುಖ್ಯ ಅಂಶವೆಂದರೆ ಸ್ವರ ಪ್ರಸ್ತಾರ. ಆಯಾ ರಾಗಗಳು ಹರಿವ ರೀತಿಯಲ್ಲಿ ಅದರ ಸ್ವರಗಳನ್ನು ರಾಗ ಮತ್ತು ತಾಳ ಬದ್ಧವಾಗಿ ಸರಾಗವಾಗಿ ಹಾಡುತ್ತಾರೆ. ಹಿಂದೂಸ್ತಾನೀ ಸಂಗೀತದಲ್ಲಿಯೂ ಈಚೀಚೆಗೆ ಹೀಗೆ ಸ್ವರಗಳನ್ನು ಹಾಡುವ ಪದ್ಧತಿಯಿದೆ. ಆದರೆ ಅವರ ಸ್ವರ ಪ್ರಸ್ತಾರದಲ್ಲಿ ಕರ್ನಾಟಕ ಸಂಗೀತದ ಅಚ್ಚುಕಟ್ಟು ಕಾಣಬರುವುದಿಲ್ಲ. ಬಡೇ ಗುಲಾಂ ಅಲೀಖಾನರು ಹಾಡುತ್ತಾ ಸ್ವರ ಪ್ರಸ್ತಾರ ಮಾಡಲು ಪ್ರಾರಂಭ ಮಾಡಿದರು. ಮೊದಲ ಮೊದಲು ಸಾವಕಾಶವಾಗಿ ಹರಿದಾಡುವ ಹಿಂದೂಸ್ತಾನೀ ಶೈಲಿಯಲ್ಲಿ ಹಾಡಿದರು. ಆನಂತರ ಕಟ್ಟುನಿಟ್ಟಾದ ಕರ್ನಾಟಕ ರೀತಿಯಲ್ಲಿಯೂ ಸ್ವರಗಳನ್ನು ಹಾಡಲು ಪ್ರಾರಂಭಿಸಿದರು. ಅದರಲ್ಲಿ ತಾಳದ ಬಿಗಿಯಿದ್ದರೂ ಲಲಿತವಾಗಿ ಜೇನು ಹರಿದಂತೆ ಅನುಭವವಾಗುತ್ತಿತ್ತು. ಕೆಲವು ಕಡೆ ಸಾಲಾಗಿ ಪ್ರಕೃತಿ ವಿಕೃತಿ ಸ್ವರಗಳನ್ನೂ ಹಾಡುತ್ತಿದ್ದರು. ಪ್ರಕೃತಿ – ವಿಕೃತಿ ಸ್ವರಗಳೆಂದರೆ ಇಷ್ಟೇ – ಏಳು ಸ್ವರಗಳಲ್ಲಿ ಸ ಮತ್ತು ಪ ಎರಡನ್ನು ಬಿಟ್ಟು ಮಿಕ್ಕ ಐದು ಸ್ವರಗಳಲ್ಲಿ ಎರಡೆರೆಡು ಭೇದಗಳಿವೆ. ಇದರಲ್ಲಿ ಮೊದಲನೆಯದು ಪ್ರಕೃತಿ. ಎರಡನೆಯದು ವಿಕೃತಿ. ರಾಗಗಳಲ್ಲಿ ಪ್ರಾಯಶಃ ಈ ಸ್ವರಗಳ ಒಂದೊಂದು ಮಾದರಿಯನ್ನು ಮಾತ್ರ ಉಪಯೋಗಿಸುತ್ತಾರೆ. ಎರಡು ಭೇದಗಳೂ ಅಕ್ಕಪಕ್ಕದಲ್ಲಿ ಬರುವಂತೆ ಹಾಡುವುದಿಲ್ಲ. ಇದಕ್ಕೆ ಕಾರಣವೆಂದರೆ ಎರಡರಡೂ ಧ್ವನಿಯ ಅಂತರ ಬಹು ಸ್ವಲ್ಪ. ಅಕ್ಕಪಕ್ಕದಲ್ಲಿ ಬರುವಂತೆ ಹಾಡಿದರೆ ಹಿತವೆನಿಸದು. ಅಲ್ಲದೆ ಖಚಿತವಾಗಿ ಆ ಧ್ವನಿ ಅಂತರವನ್ನು ಹಿಡಿದು ಹಾಡುವುದೂ ಕಷ್ಟವೇ. ಬಡೇ ಗುಲಾಂ ಅಲೀಖಾನರು ಸ್ವರ ಪ್ರಸ್ತಾರ ಮಾಡುತ್ತಾ ಈ ಹನ್ನೆರಡು ಸ್ವರಗಳನ್ನೂ ಲೀಲಾಜಾಲವಾಗಿ ಸರ ಪೋಣಿಸಿದಂತೆ ಹಾಡಿಕೊಂಡು ಹೋಗುತ್ತಿದ್ದರು. ಇದೂ ಅಲ್ಲದೆ ಧ್ವನಿಯಲ್ಲಿ  ಇಲ್ಲಿಯವರೆಗೆ ಅಸಾಧ್ಯವೆನಿಸಿದ ಅನೇಕ ವಿನ್ಯಾಸಗಳನ್ನೂ, ಸಂಚಾರಗಳನ್ನೂ ಲೀಲಾಚಾಲವಾಗಿಯೂ, ಹಿತಕರವಾಗಿಯೂ ರೂಪಿಸುತ್ತಿದ್ದರು. ಇದನ್ನು ಕೇಳಿದ ಕರ್ನಾಟಕ ಸಂಗೀತದ ವಿದ್ವಾಂಸರು ಮತ್ತು ರಸಿಕರು ಮುಗ್ಧರಾದುದರಲ್ಲಿ ಆಶ್ಚರ್ಯವಿಲ್ಲ. ಗುಲಾಂ ಅಲೀಖಾನರ ಬಗೆಗೆ ಇದ್ದ ವಿರೋಧ ಮತ್ತು ತಪ್ಪು ಭಾವನೆ ಎಲ್ಲಾ ಮಾಯವಾದವು.

ಎಲ್ಲ ರೀತಿಗಳಲ್ಲಿ ಉದಾರಿ

ಬಡೇ ಗುಲಾಂ ಅಲೀಖಾನರ ಆಕಾರವೆಷ್ಟು ವಿಶಾಲವೋ ಅವರ ಮನಸ್ಸೂ ಅಷ್ಟೇ. ಅವರು ಊಟ ಮಾಡಲು ಎದ್ದಾಗ ಅವರೊಂದಿಗೆ ಮಾತನಾಡಲು ಬಂದಿದ್ದವರೂ ಕೊನೆಗೆ ಅದೇ ಹಜಾರದಲ್ಲಿಯೇ ಕೊಠಡಿಯಲ್ಲಿಯೋ ಕುಳಿತಿದ್ದವರೂ ಊಟ ಮಾಡಬೇಕು. ತಾವು ತಿನ್ನುವ ಮೃಷ್ಟಾನ್ನವನ್ನೇ ಎಲ್ಲರಿಗೂ ಬಡಿಸಬೇಕು. ಅದು ಅವರ ನಿಯಮ.

ಅವರು ಪ್ರಾಯಶಃ ಮನೆ ಬಿಟ್ಟು ಹೊರಗಡೆ ನಡೆದುಕೊಂಡು ಹೋಗುವುದೇ ಅಪರೂಪ. ಅಪರೂಪಕ್ಕೆ ಹೊರಗಡೆ ನಡೆದುಕೊಂಡು ಹೋದರೆ ಎರಡು ಜೇಬಿನಲ್ಲಿಯೂ ಚಿಲ್ಲರೆ ಹಣ ಹಾಕಿಕೊಂಡು ಹೊರಡುತ್ತಿದ್ದರು. ಭಿಕ್ಷುಕರಾಗಲಿ ಯಾರೇ ಆಗಲಿ ಕೈಚಾಚಿದಲ್ಲಿ ಅದರಲ್ಲಿ ಅಷ್ಟು ಹಣ ಬೀಳುತ್ತಲೇ ಇದ್ದಿತು. ಗುಲಾಂ ಅಲೀಖಾನರು ಜೇಬಿಗೆ ಕೈ ಹಾಕಿ ಎಷ್ಟು ಬಂದರೆ ಅಷ್ಟು ಹಣವನ್ನು ಕೊಡುತ್ತಿದ್ದರು. ಜೇಬುಗಳು ಖಾಲಿಯಾದ ಮೇಲೆ ನೇರವಾಗಿ ಮನೆಗೆ ಹಿಂತಿರುಗುತ್ತಿದ್ದರು. ಹೀಗಾಗಿ ಅವರು ಲಕ್ಷಾಂತರ ರೂಪಾಯಿ ಸಂಪಾದಿಸಿದರೂ ಕೊನೆಯಲ್ಲಿ ಏನೂ ಉಳಿಯಲೇ ಇಲ್ಲ.

ಸ್ವಭಾವದಲ್ಲಿ ಹೇಗೆ ಉದಾರವೋ ಸಂಗೀತದಲ್ಲಿಯೂ ಅಷ್ಟೇ. ಅವರ ಮನೆಗೆ ಹೋಗಿ ಯಾರಾದರೂ ಸ್ವಲ್ಪ ಸಂಗೀತವನ್ನು ಕೇಳಬೇಕೆಂದರೆ ಇಲ್ಲ ಎಂದು ಹೇಳುತ್ತಿರಲಿಲ್ಲ. ಅವರನ್ನು ಸಾಧ್ಯವಾದರೆ ಸತ್ಕರಿಸಿ, ಸಂಗೀತದಿಂದಲೂ ತೃಪ್ತಿಪಡಿಸಿ ಕಳುಹಿಸುತ್ತಿದ್ದರು. ಹಾಡುವುದರ ಜೊತೆಗೆ ಸಂಗೀತಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಸ್ವಾರಸ್ಯವಾಗಿ ಹೇಳುತ್ತಿದ್ದರು. ಮಾತು ಅನುಭವದಿಂದ ಕೂಡಿದ್ದು, ಹಾಗೆಯೇ ವಿಚಾರಪರವಾಗಿದ್ದಿತು. ನಿಮ್ಮ ಸಂಗೀತದಲ್ಲಿ ಜನಗಳನ್ನು ಆಕರ್ಷಿಸುವಂತಹ ವಿಶೇಷ ಗುಣಗಳೇನಿವೆ ಎಂದು ಕೇಳಿದರೆ, ’ಅದರಲ್ಲಿ ಅಂತಹ ಅತಿಶಯವೇನಿಲ್ಲ. ನನ್ನ ದನಿಗೆ, ನನ್ನ ದೇಹ ಧರ್ಮಕ್ಕೆ ಅನುಕೂಲವಾದ ಹಾಡುಗಾರಿಕೆಯ ಶೈಲಿಯನ್ನು ರೂಢಿಸಿಕೊಂಡಿದ್ದೇನೆ. ಹಾಡುವಾಗ ರಾಗದಲ್ಲಿ ಆಗಲೀ, ಲಯದಲ್ಲಿ ಆಗಲೀ, ಸಾಹಿತ್ಯದಲ್ಲಿ ಆಗಲೀ ಇರುವ ಸುಂದರಾಂಶಗಳನ್ನು ನಾನೂ ಅನುಭವಿಸಿ ಹಾಡುತ್ತೇನೆ. ತಾನೇ ಅನುಭವಿಸಿ ಸಂತೋಷಪಡಲಾರದ ಸಂಗೀತಗಾರನು ಜನಗಳನ್ನು ಏನು ಸಂತೋಷಪಡಿಸಬಲ್ಲನು? ನಾನು ಹೀಗೆ ಹರ್ಷದಿಂದ ಹೃತ್ಪೂರ್ವಕವಾಗಿ ಹಾಡುವುದು ಜನಗಳಿಗೂ ಸಂತೋಷ ಉಂಟುಮಾಡುತ್ತಿರಬಹುದು ಅಷ್ಟೇ’ ಎನ್ನುತ್ತಿದ್ದರು.

ಪವಾಡಗಳಲ್ಲಿ ನಂಬಿಕೆ ಇಲ್ಲ

’ಸಂಗೀತವು ಜನಗಳ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಬಹುದು ಎಂದು ಒಪ್ಪುತ್ತಿದರೇ ವಿನಾ ಅದಕ್ಕೆ ಸಂಬಂಧಿಸಿದ ಪವಾಡಗಳನ್ನು ನಂಬುತ್ತಿರಲಿಲ್ಲ. ಅಂತಹ ಪ್ರಸ್ತಾಪ ಬಂದಾಗಲೆಲ್ಲಾ ತಾನ್ ಸೇನರು ರಾಗಗಳನ್ನು ಹಾಡಿ ಮಳೆ ಬರಿಸುತ್ತಿದರು. ದೀಪ ಹತ್ತಿಸುತ್ತಿದ್ದರು ಮುಂತಾಗಿ ಜನಜನಿತವಾದ ಕತೆಗಳಿವೆ ನಿಜ. ಆದರೆ ಅವರು ಹಾಗೆ ಮಳೆ ಬರಿಸಿದ್ದಾಗಲೀ, ಬೆಂಕಿ ಹತ್ತಿಸಿದ್ದಾಗಲೀ ನೋಡಿದವರಾರಿದ್ದಾರೆ? ತಾನ್ ಸೇನರೂ ಇನ್ನೂ ಅಂತಹ ದೊಡ್ಡ ದೊಡ್ಡ ಸಂಗೀತಗಾರರೂ ಎಷ್ಟೊ ಜನ ಇದ್ದರು. ಅವರ ಸಂಗೀತ ಅಮೋಘವಾದುದು. ಜನಗಳಿಗೆಲ್ಲಾ ಭ್ರಮೆ ಹುಟ್ಟಿಸಿತು. ಅವರಿಗೆಲ್ಲಾ ಬಹು ಕಾಲ ಮರೆಯಲು ಆಗದಂತಹ ಅನುಭವವುಂಟಾಯಿತು. ಕಿವಿಯಿಂದ ಕಿವಿಗೆ ಹರಡುತ್ತಾ ಅದು ಕತೆಯ ರೂಪ ತಾಳಿತು. ಕತೆಯಲ್ಲಿ ಆ ಸಂಗೀತಕ್ಕೆ ದೇವಲೋಕದ ಗುಣಗಳನ್ನೂ ಶಕ್ತಿಗಳನ್ನೂ ಕಲ್ಪಿಸಲಾಯಿತು. ಅಷ್ಟೆ’ ಎಂದು ಅವರ ಅಭಿಪ್ರಾಯ.

ಅವರ ಜೀವನದಲ್ಲಿಯೇ ಅಂತಹ ಕೆಲವು ಘಟನೆಗಳೂ ನಡೆದಿದ್ದುವು. ಆದರೆ ಅದು ಒಂದು ರೀತಿಯ ಕಾಕತಾಳೀಯವೇ ವಿನಾ, ನನ್ನ ಸಂಗೀತದಲ್ಲಿ ಅಂತಹ ವಿಶೇಷ ಗುಣವೇನೂ ಇರಲಿಲ್ಲವೆಂದು ವಿನಯದಿಂದ ಹೇಳುತ್ತಿದ್ದರು. ಒಮ್ಮೆ ಗುಲಾಂ ಅಲೀಖಾನರು ಕಲ್ಕತ್ತೆಯಲ್ಲಿ ಸಂಗೀತ ಕಛೇರಿಗೆ ಹೋಗಿದ್ದರು. ಅಲ್ಲಿ ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದರು. ರಾತ್ರಿ ನಿದ್ರೆ ಬರದೆ ಅವರೇ ಹಾಡಿಕೊಳ್ಳಲಾರಂಭಿಸಿದರು. ಹಾಡುತ್ತಾ ಎಷ್ಟು ಹೊತ್ತು ಹೋಯಿತೋ ತಿಳಿಯಲಿಲ್ಲ. ಈ ಮಧ್ಯೆ ಮನೆಯ ಅಂಗಳದಲ್ಲಿ ಕೊಟ್ಟಿಗೆಯಲ್ಲಿದ್ದ ಹಸು ಎದ್ದು ಮಧ್ಯೆ ಮಧ್ಯೆ ಕೂಗಲಾರಂಭಿಸಿತು. ಮನೆಯವರಿಗೆ ಆಶ್ಚರ್ಯ. ಆ ಹಸು ಹಾಗೆ ಎಂದೂ ಮಾಡಿರಲಿಲ್ಲ. ಬೆಳಗ್ಗೆ ಹಾಲು ಕರೆಯುವ ಹೊತ್ತಿನಲ್ಲಿ ಮಾತ್ರ, ಬೇಗ ಬಂದು ಕರೆಯಲೆಂದು ಕೂಗುತ್ತಿತ್ತು. ಈಗ ಏಕೆ ಹೀಗೆ ಒದ್ದಾಡುತ್ತಿದೆ ಎಂದು ಆಶ್ಚರ್ಯಪಟ್ಟರು. ಆನಂತರ ಮನೆಯ ಯಜಮಾನರು ಗುಲಾಂ ಆಲೀಖಾನರು ಹಾಡುತ್ತಿದ್ದುದನ್ನು ಕೇಳಿದರು. ಅವರಿಗೆ ಸ್ವಲ್ಪ ಅನುಮಾನ ಪರಿಹಾರವಾದಂತಾಯಿತು.

ಗುಲಾಂ ಅಲೀಖಾನನು ಹಾಡುತ್ತಿದ್ದುದು ಕಲಿಂಗಡಾ ರಾಗ. ಉಷಃಕಾಲದಲ್ಲಿ ಹಾಡುವಂತಹುದು. ಹೆಚ್ಚು ಕಡಿಮೆ. ಆ ಹಸುವಿನ ಹಾಲು ಕರೆಯುತ್ತಿದ್ದ ಗಂಟೆಗೆ ಉಚಿತವಾದ ರಾಗವದು. ಆ ರಾಗವನ್ನು ಕೇಳುತ್ತಾ ಹಾಲು ಕರೆಯುವ ಸಮಯವಾಯಿತೆಂದು ಹಸುವು ಚಡಪಡಿಸಿರಬಹುದೆಂದು ನಿರ್ಧರಿಸಿದರು. ಈ ವಿಷಯವನ್ನು ಗುಲಾಂ ಅಲೀಖಾನರು ವಿವರಿಸುತ್ತಾ ’ಒಂದೊಂದು ರಾಗಕ್ಕೂ ಒಂದೊಂದು ವೇಳೆ ನಿಗದಿ ಮಾಡಲ್ಪಟ್ಟಿದೆ.  ಇದರ ಹಿಂದೆ ಇರುವ ತತ್ವವು ಸ್ವಲ್ಪ ಅರ್ಥಬದ್ಧವಾಗಿದೆ ಎಂಬುದನ್ನು ಈ ಸನ್ನಿವೇಶವು ಸಮರ್ಥನೆ ಮಾಡುತ್ತದೆ ’ಎನ್ನುತ್ತಿದ್ದರು.

ಇಂತಹದೇ ಇನ್ನೊಂದು ಘಟನೆ ನಡೆದುದು ಕಾಬೂಲಿನಲ್ಲಿ. ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಗರ. ಅಲ್ಲಿನ ಬಾದಷಾರವರು ಗುಲಾಂ ಅಲೀಖಾನರನ್ನು ಆಹ್ವಾನಿಸಿದರು. ಗುಲಾಂ ಅಲೀಖಾರನ್ನೂ, ಅವರ ಪರಿವಾರವನ್ನೂ ಅರಮನೆಯಲ್ಲಿಯೇ ಇಳಿಸಿದ್ದರು.

ಒಂದು ಮಧ್ಯಾಹ್ನ ಗುಲಾಂ ಅಲೀಖಾನರ ಹಾಡುಗಾರಿಕೆ ಏರ್ಪಡಾಗಿತ್ತು. ಅರಮನೆಯ ಒಂದು ವಿಶಾಲವಾದ ಸಭಾಂಗಣ. ಅದರಲ್ಲಿ ಒಂದು ಕಡೆ ಗುಲಾಂ ಅಲೀಖಾನರು ಅವರ ಸ್ವರಮಂಡಲವನ್ನು ತೊಡೆಯ ಮೇಲಿಟ್ಟುಕೊಂಡು ಮೀಟುತ್ತಾ ಹಾಡುತ್ತಿದ್ದಾರೆ. ರಾಜಮನೆತನದವರು ಅಲ್ಲಲ್ಲಿ ಸುಪ್ಪತ್ತಿಗೆಯ ಮೇಲೆ ಕುಳಿತೋ ಅಥವಾ ಗೋಡೆಗೆ ಒರಗಿಕೊಂಡೋ ಅವರ ಹಾಡುಗಾರಿಕೆ ಕೇಳುತ್ತಿದ್ದಾರೆ. ಗುಲಾಂ ಅಲೀ ಆ ವೇಳೆಗೆ ಉಚಿತವಾದ ಭೀಮ್ ರಾಗವನ್ನು ನಿಧಾನವಾಗಿ ಬಿಡಿಸಿಬಿಡಿಸಿ ಹಾಡುತ್ತಿದ್ದಾರೆ. ಎಲ್ಲರೂ ಈ ಹಾಡುಗಾರಿಕೆಯಲ್ಲಿಯೇ ಒಂದು ರೀತಿ ಹಿತಪಡುತ್ತ ಮೈಮರೆತಿದ್ದಾರೆ. ಆಗ ಒಂದು ಸೋಜಿಗ ನಡೆಯಿತು.

ಗರಿಕೆದರಿ ನವಿಲು ಕುಣಿಯಿತು

ಸಭಾಂಗಣದ ಒಂದು ಮೂಲೆಯಲ್ಲಿ ಏನೋ ಚಲಿಸಿದಂತಾಯಿತು. ನೋಡಿದರೆ ನವಿಲು. ಅಚ್ಚನಾದ ಬಿಳಿಯ ಬಣ್ಣ. ಸಭಾಂಗಣದ ಗೋಡೆಗಳಿಗೆ ಅಮೃತ ಶಿಲೆಯ ಹೊದ್ದಿಕೆ. ಗೋಡೆಯದೂ ನವಿಲಿನದೂ ಒಂದೇ ಬಣ್ಣ. ಆದುದರಿಂದ ಅದು ಅಲ್ಲಿದ್ದದು ಯಾರಿಗೂ ಗೊತ್ತಾಗಲಿಲ್ಲ. ಮಲಗಿದ್ದ ನವಿಲು ತಲೆಯೆತ್ತಿ ಗುಲಾಂ ಅಲೀಖಾನವರ ಕಡೆಯೇ ನೋಡಲಾರಂಭಿಸಿತು. ಹಾಗೆಯೇ ನೋಡುತ್ತಾ ನಿಧಾನವಾಗಿ ಎದ್ದು ಮೆಲ್ಲಮೆಲ್ಲನೆ ನಡೆಯುತ್ತ ಅವರ ಕಡೆಯೇ ಬರಲಾರಂಭಿಸಿತು. ಗುಲಾಂ ಅಲೀಖಾನರೂ ಮುಂದೆ ಏನೂ ಮಾಡುವುದೋ ಎಂದು ಅದರ ಕಡೆಯೇ ನೋಡುತ್ತಾ ಹಾಡುತ್ತಿದ್ದರು. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟುಕೊಂಡು ನಡೆದು ಬಂದ ನವಿಲು ಗುಲಾಂ ಅಲೀಖಾನರ ಮುಂದೆ ನಿಂತಿತು.

ಇದಕ್ಕಿದ್ದ ಹಾಗೆ ಗರಿಗೆದರಿ ಬಿಳಿಯ ಬಣ್ಣದ ದೊಡ್ಡ ಬೀಸಣಿಗೆಯ ಹಾಗೆ ಮಾಡಿಕೊಂಡು ನವಿಲು ಕುಣಿಯಲಾರಂಭಿಸಿತು. ಗುಲಾಂ ಅಲೀಖಾನರು ಹಾಡುತ್ತಿದ್ದ ಕೃತಿಯ ಲಯಕ್ಕನುಸಾರವಾಗಿ ಹೆಜ್ಜೆ ಇಡುತ್ತಾ ಕುಣಿಯುತ್ತಿತ್ತು. ಅವರ ತಾಳದ ನಡೆಗಳು ಬದಲಾದ ಹಾಗೆಲ್ಲಾ ನವಿಲೂ ಹೆಜ್ಜೆಯ ಗತಿಯನ್ನು ಬದಲಾಯಿಸಿ ಕುಣಿಯುತ್ತಿತ್ತು. ಹೀಗೆಯೇ ಎಷ್ಟು ಹೊತ್ತು ಕಳೆಯಿತೋ ತಿಳಿಯದು. ಗುಲಾಂ ಅಲೀಖಾನರ ಹಾಡುಗಾರಿಕೆ ಮುಗಿಯಿತು. ನವಿಲಿನ ಕುಣಿತವೂ ನಿಂತಿತು. ಮುಂದೇನಾಗುವುದೋ ಎಂದು ಎಲ್ಲರೂ ನೋಡುತ್ತಿದ್ದರು. ದಿಗ್ಬ್ರಮೆ ಹಾಡಿದಂತೆ ನವಿಲು ಸ್ವಲ್ಪ ಹೊತ್ತು ಗುಲಾಂ ಅಲೀಖಾನರನ್ನೇ ನೋಡುತ್ತಾ ನಿಂತಿದ್ದಿತು. ಅವರು ಪುನಃ ಹಾಡಲು ಪ್ರಾರಂಭಿಸಲಿಲ್ಲ. ನವಿಲು ನಿಧಾನವಾಗಿ ಗರಿಗಳನ್ನು ಮುದುರಿಕೊಂಡು ಹೊರಟುಹೋಯಿತು. ಈ ಸಂದರ್ಭವನ್ನು ವಿವರಿಸುವಾಗ ಅವರು, ’ನನ್ನ ಹಾಗೆಯೇ ಅನೇಕ ಸಂಗೀತಗಾರರ ಜೀವನದಲ್ಲಿ ಈ ಬಗೆಯ ಘಟನೆಗಳಾಗಿರಬಹುದು. ಹಕ್ಕಿಗಳು ಯಾವುದೋ ಕಾರಣದಿಂದ ಆಕರ್ಷಿತವಾಗಿರಬಹುದು. ಆದರೆ ಅವಕ್ಕಿಂತ ಹೆಚ್ಚು ಬುದ್ಧಿಶಕ್ತಿಯುಳ್ಳ ಮನುಷ್ಯರ ಮನಸ್ಸಿಗೆ ನೆಮ್ಮದಿಯನ್ನೂ ಶಾಂತಿಯನ್ನೂ ಕೊಡಲು ಸಾಧ್ಯವಾದಲ್ಲಿ ಸಂಗೀತಗಾರರು ವಿದ್ಯೆ ಕಲಿತುದಕ್ಕೆ ಸಾರ್ಥಕ’ ಎನ್ನುತ್ತಿದ್ದರು.

ಸಂಗೀತ ಎಂದರೆ

ಬಡೇ ಗುಲಾಂ ಅಲೀಖಾನರಿಗೆ ಸಂಗೀತ ಕ್ಷೇತ್ರದಲ್ಲಿ ತಮ್ಮ ಸ್ಥಾನವೇನು ಎಂಬುದು ಚೆನ್ನಾಗಿ ತಿಳಿದಿದ್ದರೂ ಆ ಕಲೆಯ ಮಹತ್ವವೆಂತಹದು ಎಂಬುದನ್ನು ಇನ್ನೂ ಚೆನ್ನಾಗಿ ಅರಿತಿದ್ದರು. ಹಾಗೆಯೇ ಇತರರಿಗೂ ಅದನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಒಮ್ಮೆ ಅವರನ್ನು ನೋಡಲು ಒಬ್ಬ ದೊಡ್ಡ ವಿದ್ವಾಂಸರು ಬಂದರು. ಅವರು ಸಂಗೀತವನ್ನು ಕುರಿತು ನೂರಾರು ಲೇಖನಗಳನ್ನು ಪುಸ್ತಕಗಳನ್ನೂ ಬರೆದಿದ್ದರು. ಬಂದವರೇ ಗುಲಾಂ ಅಲೀಖಾರನ್ನು ಕುರಿತು, ’ ಉಸ್ತಾದ್ ಜಿ, ತಮ್ಮಲ್ಲಿ ಸಂಗೀತದ ಬಗೆಗೆ ಸ್ವಲ್ಪ ಮಾತನಾಡಲು ಬಂದಿದ್ದೇನೆ’ ಎಂದರು. ಗುಲಾಂ ಅಲೀಖಾನರು ಅವರನ್ನು ಕುಳಿತುಕೊಳ್ಳಲು ಹೇಳಿ, ’ಏನು ವಿಷಯ?’ ಎಂದು ಕೇಳಿದರು.

’ಸಂಗೀತದ ೨೨ ಶ್ರುತಿಗಳ ವಿಷಯವನ್ನು ಸ್ವಲ್ಪ ಚರ್ಚೆ ಮಾಡಬೇಕಾಗಿದೆ” ಎಂದರು ಆ ವಿದ್ವಾಂಸರು.

ಸ್ವಲ್ಪ ಯೋಚನೆ ಮಾಡಿ

’ನಿಮಗೆ ಸಂಗೀತ ಗೊತ್ತಿದೆಯೇ?’ ಎಂದರು ಗುಲಾಂ ಅಲೀಖಾನ್.

”ಓಹೋ, ಚೆನ್ನಾಗಿ ಅಭ್ಯಾಸ ಮಾಡಿದ್ದೇನೆ. ನೋಡಿ, ಇಂತಿಂತಹ ಪುಸ್ತಕಗಳನ್ನು ಬರೆದಿದ್ದೇನೆ’ ಎಂದು ತಾವು ಬರೆದ ಪು‌‌ಸ್ತಕಗಳ ಹೆಸರುಗಳನ್ನೆಲ್ಲಾ ಹೇಳಿದರು ಆ ವಿದ್ವಾಂಸರು.

ಅದಕ್ಕೆ ಉತ್ತರವಾಗಿ,”ನಿಮಗೆ ಎಂದಾದರೂ ಅಳು ಬಂದು ಕಣ್ಣೀರು ಸುರಿಸಿದ್ದೀರಾ?’ ಎಂದು ಕೇಳಿದರು ಗುಲಾಂ ಅಲೀಖಾನ್.

ವಿದ್ವಾಂಸರು ಆಶ್ಚರ್ಯದಿಂದ ’ಇಲ್ಲ’, ಯಾಕೆ ಹೀಗೆ ಕೇಳುತ್ತೀರಿ” ಎಂದರು.”ಹಾಗಾದರೆ ನಿಮಗೆ ಅಂತಃಕರಣವಿಲ್ಲವೆಂದಾಯಿತು. ಅಂತಃಕರಣವಿಲ್ಲದಿದ್ದರೆ ನಿಮಗೆ ಸಂಗೀತವೇನು ಅನುಭವವಾಗುತ್ತೆ? ಅರ್ಥವಾಗುತ್ತೆ? ಅದರ ಬಗೆಗೆ ಆಡುವ ಮಾತೆಲ್ಲಾ ಕೇವಲ ಒಣ ವಾದ ಅಷ್ಟೆ. ಆದುದರಿಂದ ಅದಕ್ಕೆ ನನಗೆ ಸಮಯವಿಲ್ಲ’ ಎಂದು ಹೇಳಲಿ ಅವರನ್ನು ಕಳಿಸಿಕೊಟ್ಟರು ಗುಲಾಂ ಅಲೀಖಾನ್.

ಇಂಥದೇ ಇನ್ನೊಂದು ಸಂದರ್ಭ ದೆಹಲಿಯ ಆಕಾಶವಾಣಿ ಕಛೇರಿಯಲ್ಲಿ ನಡೆಯಿತು. ಅವರದೊಂದು ಸಂದರ್ಶನವನ್ನು ಪ್ರಸಾರ ಮಾಡಬೇಕಿತ್ತು. ಈ ಸಂದರ್ಶನವನ್ನು ನಡೆಸಿಕೊಡಲು ಅಧಿಕಾರಿಗಳು ಒಬ್ಬ ಹಿರಿಯ ಸಾಹಿತಿಯನ್ನು ಕರೆದಿದ್ದರು. ಆ ಸಾಹಿತಿಯು ಸಂಭ್ರಮದಿಂದ ’ಉಸ್ತಾದ್ ಜಿ, ಸಂಗೀತದಲ್ಲಿ ಶಾಸ್ತ್ರೀಯ, ಲಘು ಶಾಸ್ತ್ರೀಯ ಮತ್ತು ಜಾನಪದ ಸಂಗೀತಗಳಿಗೆ ಏನು ವ್ಯತ್ಯಾಸ?’ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಗುಲಾಂ ಅಲೀಖಾನರು ಸ್ವರಮಂಡಲವನ್ನು ಮೀಟುತ್ತಾ ’ನಿಮ್ಮ ಪ್ರಶ್ನೆ ನಿಮಗೇ ಅರ್ಥವಾಗಿದೆಯೋ ಇಲ್ಲವೋ ತಿಳಿಯದು. ನನಗಂತೂ ಅರ್ಥವಾಗಿಲ್ಲ. ಈಗ ನೋಡಿ’ ಎಂದರು ಯಾವುದೋ ಮೆಟ್ಟನ್ನು ಹಿಡಿದು ಹಾಡಲಾರಂಭಿಸಿದರು. ಹಾಗೆಯೇ ಅದರಲ್ಲಿ ಒಂದು ಜಾನಪದ ಗೀತೆಯನ್ನು ಹಾಡಿದರು. ಆನಂತರ, ’ಈಗ ನಾನು ಹಾಡಿದ ರಾಗದ ತುಣುಕು ನಾಲ್ಕು ಐದು ಸ್ವರಗಳು ಸೇರಿ ಆಗಿದೆ.  ಇದನ್ನು ಭ್ರಜಭೂಮಿಯ ಗ್ರಾಮ್ಯ ಜನರೆಲ್ಲಾ ಹಾಡುತ್ತಾರೆ. ಇಂಪಾಗಿ, ಲಯಬದ್ಧವಾಗಿ ಹಾಡುತ್ತಾರೆ. ಅದರ ಸ್ವರಗಳಾಗಲೀ, ರಾಗ ತಳಗಳಾಗಲೀ ಏನೆಂಬುದೇ ಅವರಿಗೆ ತಿಳಿಯದು. ಅವರ ಸಂತೋಷದ ಸಂಕೇತವಾಗಿ ಈ ರಾಗ ಮತ್ತು ಹಾಡು ಅವರ ಕೊರಳಿನಿಂದ ಹರಿದು ಬರುತ್ತದೆ’ ಎಂದು ಹೇಳಿ ಮುಂದೆ ಇನ್ನೊಂದು ಗೀತೆಯನ್ನು ಹಾಡಲಾರಂಭಿಸಿದರು. ಅಲ್ಲಿ ಅದೇ ಮಟ್ಟು, ಇನ್ನೂ ಹೆಚ್ಚಿನ ಇಂಪಾದ ಛಾಯೆಗಳು ಕೇಳಿ ಬಂದವು. ಹಾಡುವುದನ್ನು ನಿಲ್ಲಿಸಿ, ’ ಈಗ ನೋಡಿ, ನಾನು ಹಾಡಿದ್ದು ಠುಮ್ರಿ. ಅದೇ ಮಟ್ಟು ಇನ್ನೂ ಹೆಚ್ಚಾಗಿ ಪೋಷಿಸಲ್ಪಟ್ಟಿದೆ. ಈ ಠುಮ್ರಿಯ ಸಾಹಿತ್ಯಕ್ಕೆ ಮೆರಗು ಕೊಟ್ಟಿದೆ’ ಎಂದು ಅದೇ ರಾಗವನ್ನು ತೆಗೆದುಕೊಂಡು ಸ್ವಲ್ಪ ವಿಸ್ತಾರವಾಗಿ ಹಾಡಿ ಒಂದು ಕೃತಿಯನ್ನು ತಾನು ಮತ್ತು  ಸ್ವತಃ ಪ್ರಸ್ತಾರದ ಸಹಿತವಾಗಿ ನಿರೂಪಿಸಿದರು. ಆನಂತರ, ’ನೋಡಿ, ಈಗ ನಾನು ಆರಿಸಿದುದು ಒಂದೇ ಸ್ವರದ್ರವ್ಯ, ಅದು ಸರಳವಾಗಿ ತಾನೇ ಅನುಭವಿಸಿಕೊಂಡು ಬಂದಿತು. ಅದು ಜಾನಪದ ಸಂಗೀತ. ಎರಡನೆಯದರಲ್ಲಿ ಇನ್ನೂ ಸ್ವಲ್ಪ ರುಚಿಕರವಾಗಿ ಸಾಹಿತ್ಯದ ಸವಿಯನ್ನು ಎತ್ತಿ ತೋರಿಸುವಂತಿತ್ತು. ಅದು ಲಘು ಶಾಸ್ತ್ರೀಯ ಸಂಗೀತವಾಯಿತು. ಮೂರನೆಯದರಲ್ಲಿ ಅದು ವಾದಿ ಸಂವಾದಿ ಮುಂತಾದ ನಿಯಮಕ್ಕೊಳಪಟ್ಟು, ಅಪರೂಪವಾದ ಅಂಶಗಳಿಂದ ಕೂಡಿ, ನಿಯುಕ್ತವಾದ ತಾಳದ ಕಟ್ಟುಪಾಡಿಗೆ ಬದ್ಧವಾಗಿ ಕೇಳಿ ಬಂದಿತು. ಅದು ಶಾಸ್ತ್ರೀಯ ಸಂಗೀತವಾಯಿತು. ಒಂದೇ ಸ್ವರದ್ರವ್ಯ ಮೂರು ರೀತಿಯಲ್ಲಿ ಕೇಳಿ ಬಂದಿದೆ. ಅದು ಹಾಡುವವರ ಕಲ್ಪನೆಯ ಪ್ರತಿಭೆ ಮತ್ತು ಅದರ ಮಟ್ಟವನ್ನೂ ಕೇಳುವವರ ಸಂಸ್ಕಾರ ಬಲವನ್ನೂ ಅವಲಂಬಿಸಿ ಬೇರೆ ಬೇರೆ ರೀತಿಯಲ್ಲಿ ಅರಳಿ ಬಂದಿದೆ. ಈ ಭೇದವೆಲ್ಲಾ ಮನುಷ್ಯರು ಮಾಡಿದುದು. ಸಂಗೀತವೆಲ್ಲಾ ಒಂದೇ, ಅದಕ್ಕೆ ‌ಸ್ವಾಭಾವಿಕವಾಗಿ ಭೇದವಿಲ್ಲ’ ಎಂದರು.

ಪಾಕಿಸ್ತಾನದಿಂದ ಭಾರತಕ್ಕೆ

೧೯೪೭ರಲ್ಲಿ ಭಾರತ ಎರಡು ಹೋಳುಗಳಾಗಿ ಪಾಕಿಸ್ತಾನದ ಸ್ಥಾಪನೆಯಾದ ಮೇಲೆ ಗುಲಾಂ ಅಲೀಖಾನರು ತಮ್ಮ ಊರಾದ ಲಾಹೋರಿನಲ್ಲಿಯೇ ನೆಲೆಸಿದರು. ಪಾಕಿಸ್ತಾನದ ಪ್ರಜೆಯಾದರು. ಆದರೆ ಅವರ ಮನಸ್ಸೆಲ್ಲಾ ತಾವು ಬಹುಪಾಲು ಸಂಗೀತ ಜೀವನ ನಡೆಸಿದ ಭಾರತದಲ್ಲಿಯೇ ಇದ್ದಿತು. ವರ್ಷಕ್ಕೊಮ್ಮೆ ರಹದಾರಿ ಪಡೆದು ಭಾರತಕ್ಕೆ ಬರುತ್ತಿದ್ದರು. ಅವರ ಬರುವಿಕೆಯನ್ನು ಇಲ್ಲಿನ ಕಲಾಭಿಮಾನಿಗಳು ಬಹು ಆಸೆಯಿಂದ ಎದುರು ನೋಡುತ್ತಿದ್ದರು. ೧೯೬೧ರಲ್ಲಿ ಹೀಗೆ ಬಂದ ನಂತರ ಇಲ್ಲಿಯ ಪ್ರಜೆಯಾಗಿಯೇ ಭಾರತ ಸರ್ಕಾರದ ಅಪ್ಪಣೆ ಪಡೆದು ನಿಂತರು.

ಹೃದಯ ವೈಶಾಲ್ಯ

ಸಂಗೀತದಲ್ಲಿ ಒಳ್ಳೆಯ ಸಂಪ್ರದಾಯದಲ್ಲಿ ಬೆಳೆದು ಬಂದರೂ ಗುಲಾಂ ಅಲೀಖಾನರಿಗೆ ಬೇರೆಯ ಸಂಗೀತ ಪದ್ಧತಿಗಳ ಬಗೆಗೆ ತಾತ್ಸಾರವಿರಲಿಲ್ಲ. ಪಾಶ್ಚಾತ್ಯ ಸಂಗೀತದ ವಿಷಯದಲ್ಲಿ ಮಾತನಾಡುತ್ತಾ, ’ಅದಕ್ಕೂ ಒಂದು ನಿಯಮವಿದೆ. ಪರಂಪರೆಯಿದೆ. ಅದು ಸತ್ವವನ್ನು ತಿಳಿದುಕೊಂಡು ಅದರ ನಿಜ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾದಲ್ಲಿ ನಾವು ಸಹೃದಯತೆಯಿಂದ ಸ್ವಲ್ಪ ಕೃಷಿ ಮಾಡಬೇಕು. ಆದರೆ ಅದಕ್ಕೆ ನನಗೆ ಕಾಲಾವಕಾಶವಿಲ್ಲ. ನಮ್ಮ ಸಂಗೀತದಲ್ಲಿಯೇ ನಾನು ತಿಳಿದುಕೊಳ್ಳಬೇಕಾದುದು ಮತ್ತು ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ಆದುದರಿಂದ ಬೇರೆಯ ಸಂಗೀತ ಪದ್ಧತಿಗಳ ಬಗೆಗೆ ಚಿಂತಿಸುವುದಿಲ್ಲ’ ಎನ್ನುತ್ತಿದ್ದರು.

ಕರ್ನಾಟಕ ಸಂಗೀತದ ಬಗೆಗೆ ಅವರಿಗೆ ಬಹು ಗೌರವ. ’ಹಿಂದೂಸ್ತಾನೀ ಮತ್ತು ಕರ್ನಾಟಕ ಎರಡೂ ಸಂಗೀತ ಪದ್ಧತಿಗಳಿಗೆ ಸಮಾನವಾದ ಅಂಶಗಳು ಬೇಕಾದಷ್ಟಿವೆ. ಎರಡೂ  ಪದ್ಧತಿಗಳನ್ನು ಬೆರೆಸಬೇಕಾದುದಿಲ್ಲ. ಆದರೆ ಪರಸ್ಪರ ಉತ್ತಮಾಂಶಗಳನ್ನು ತೆಗೆದುಕೊಂಡು ಇನ್ನೂ ಆಕರ್ಷಣೀಯವಾಗಿ ಕಲೆಯನ್ನು ಬೆಳೆಯಿಸಬಹುದು. ಎನ್ನುತ್ತಿದ್ದರು. ಅದಕ್ಕನುಗುಣವಾಗಿ ಕರ್ನಾಟಕ ಪದ್ಧತಿಯ ಕೆಲವು ರಾಗಗಳನ್ನು ಹಿಂದೂಸ್ತಾನೀ ಶೈಲಿಯಲ್ಲಿ ಇಂಪಾಗಿ ಹಾಡಿ ಪ್ರಚಾರ ಮಾಡಿದರು.

ಇದರ ಮಧ್ಯೆ ಅವರ ಮನಸ್ಸಿನಲ್ಲಿದ್ದ ಇನ್ನೂ ಒಂದು ಕೊರತೆಯನ್ನು ತೋಡಿಕೊಳ್ಳುತ್ತಿದ್ದರು. ಅದೇನೆಂದರೆ

”ನಮ್ಮಲ್ಲಿ ಹಿಂದೂಸ್ತಾನೀ ಮತ್ತು ಕರ್ನಾಟಕ ಸಂಗೀತ ಪದ್ಧತಿಗಳು ಚೆನ್ನಾಗಿ ಬೆಳೆದು ಬಂದಿವೆ. ನಿಜ. ಆದರೆ ಯಾರಾದರೂ ಪರಕೀಯರು ಭಾರತದ ರಾಷ್ಟ್ರೀಯ ಸಂಗೀತ ಯಾವುದು, ಅದು ಹೇಗಿದೆ ಎಂದು ಕೇಳಿದರೆ ನಾವು ಹಿಂದೂಸ್ತಾನೀ ಸಂಗೀತವನ್ನು ಪ್ರದರ್ಶಿಸಬೇಕೆ? ಪ್ರಪಂಚದಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಮೂಲದ್ರವ್ಯ ಮತ್ತು ಸಾಮಗ್ರಿಗಳು ಒಂದೇ ಆದರೂ ಆಯಾ ರಾ‌ಷ್ಟ್ರದ ವರ್ಚಸ್ಸು ಕಾಣಬರುವಂತಹ ಸಂಗೀತವೂ ರೂಪಿತವಾಗಿದೆ. ಸ್ವತಂತ್ರ ಭಾರತದಲ್ಲಿಯೂ ಹಾಗೆ ಆಗಬೇಕಾದುದು ಅವಶ್ಯಕ. ಈಗ ಎರಡು ಪದ್ಧತಿಗಳಲ್ಲಿಯೂ ಇರುವ ಸಮಾನಾಂಶಗಳನ್ನು ತೆಗೆದುಕೊಂಡು ಅವುಗಳಿಗೆ ಒಂದೇ ರೀತಿಯ ನಿಯಮಾವಳಿಯನ್ನು ರಚಿಸಿಕೊಂಡು ಭಾರತಾದ್ಯಂತ ಒಂದು ರಾಷ್ಟ್ರೀಯ ಸಂಗೀತವನ್ನು ರೂಪಿಸಲು ಪ್ರಯತ್ನ ಮಾಡಬೇಕು. ಇದು ಮುಂದಿನ ಜನಾಂಗದ ಹಿತದೃಷ್ಟಿಯಿಂದಲೂ ರಾಷ್ಟ್ರದ ಐಕಮತ್ಯಕ್ಕೆ ಪೂರಕವಾಗಿಯೂ ಅವಶ್ಯಕವೆನಿಸುತ್ತದೆ, ಆದರೆ ಇದು ನನ್ನ ಅಭಿಪ್ರಾಯ  ಮಾತ್ರ’ ಎಂದು ಹೇಳುತ್ತಿದ್ದರು.

ಬೆಳಕಿಗೆ ಬರುತ್ತಿರುವ ತರುಣ ಸಂಗೀತಗಾರರಿಗೆ ಅವರ ಬುದ್ಧಿವಾದವಿಷ್ಟೆ: ’ನಿಮ್ಮ ದನಿ, ನಿಮ್ಮ ಶಕ್ತಿ, ನಿಮ್ಮ ಮನಸ್ಸು ಅವುಗಳಿಗನುಗುಣವಾಗಿ ನಿಮ್ಮ ಸಂಗೀತವನ್ನು ಬೆಳೆಸಿಕೊಳ್ಳಿ. ಇನ್ನೊಬ್ಬರನ್ನು ಅನುಕರಣೆ ಮಾಡಬೇಡಿ. ನಿಮ್ಮ ಬುದ್ಧಿ ಮತ್ತು ನಿಮ್ಮ ಒಲವನ್ನು ಅವಲಂಬಿಸಿ ನಿಮ್ಮ ಕಲೆಯನ್ನು ಬೆಳೆಸಿಕೊಂಡು ಗೌರವನ್ನು ಉಳಿಸಿಕೊಂಡು ಬನ್ನಿ’.

ಜೀವನದ ಕಡೆಯ ದಿನಗಳಲ್ಲಿ ಬಡೇ ಗುಲಾಂ ಅಲೀಖಾನರು ಬಹು ಕಷ್ಟಪಟ್ಟರು. ಪಾರ್ಶ್ವವಾಯುವಿನಿಂದ ಕೆಲವು ತಿಂಗಳ ಕಾಲ ಹಾಸಿಗೆಯಲ್ಲಿಯೇ ಮಲಗಿರಬೇಕಾಗಿತ್ತು. ಆ ನೋವನ್ನು ಮರೆಯಿಸಿ ಹೊತ್ತು ಕಳೆಯಲು ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುತ್ತಿದರು. ಹಾಗೆಯೇ ೧೯೬೮ನೆಯ ಇಸವಿ ಏಪ್ರಿಲ್ ತಿಂಗಳಲ್ಲಿ ಹೈದರಾಬಾದಿನಲ್ಲಿ ನಿಧನರಾದರು. ಅಲ್ಲಿಯೇ ಅವರ ಗೋರಿಯಿದೆ.

ಬಡೇ ಗುಲಾಂ ಅಲೀಖಾನರು ಈ ಪ್ರಪಂಚದಲ್ಲಿಲ್ಲದಿದ್ದರೂ ಅವರ ಸಂಗೀತ ಮಾತ್ರ ಮರೆಯಾಗಿಲ್ಲ. ಅವರ ಹಾಡುಗಾರಿಕೆಯನ್ನು ಪ್ರತ್ಯಕ್ಷ ಕೇಳಿದ್ದ ಅನೇಕರ ಮನಸ್ಸಿನಲ್ಲಿ ಅವರ ನೆನಪುಗಳು ಅಳಿಯದೆ ಇನ್ನೂ ಉಳಿದಿವೆ. ಆಕಾಶವಾಣಿಯ ನಾನಾ ಕೇಂದ್ರಗಳಲ್ಲಿ ಅವರ ಗಾಯನದ ಮುದ್ರಿಕೆಗಳು ಆಗಾಗ ಪ್ರಸಾರವಾಗುತ್ತಿವೆ. ಅಲ್ಲದೆ ಅವರು ಹಾಡಿರುವ ರಸಭರಿತವಾದ ಠುಮ್ರಿಗಳ ರಿಕಾರ್ಡುಗಳೂ ದೊರೆಯುತ್ತವೆ.