ನಿಮ್ಮ ಬಣ್ಣಗಳನ್ನು ಕುರಿತು
ನಾನು ಮಾತಾಡಿದರೆ
ನಿಮಗೆ ಕೋಪ.
ಬಹುಶಃ ನಿಮ್ಮ ಬಣ್ಣ ಬಯಲಾದೀತೆಂಬ
ಭಯ ನಿಮಗೆ,
ನನಗೆ ಆ ಭಯವಿಲ್ಲ ;
ಈ ಬಣ್ಣಗಳ ಮೂಲವನ್ನೆ ಕೆದಕಿ ನೋಡುವ ಆಸೆ
ನನಗೆ.

ನನ್ನ ಬಣ್ಣಕ್ಕೆ ಶತಮಾನಗಳ ಕತ್ತಲು,
ನಿರಕ್ಷರ ಮೂಕ ವೇದನೆ ; ಬೆವರು ; ಮಣ್ಣಿನ
ವಾಸನೆ ;
ಸಹಸ್ರ ಪದಾಘಾತಕ್ಕೆ ಸಿಕ್ಕಿ ನರಳುತ್ತ
ಎಚ್ಚರುವ ಯಾತನೆ.

ನನ್ನ ಬಣ್ಣವನ್ನು ಕುರಿತು ನಾನು ಬಿಚ್ಚುವ ಹಾಗೆ
ಬಿಚ್ಚಲಾರಿರಿ ನೀವು, ನನಗೆ ಗೊತ್ತು ;
ನಾನೇನಾದರೂ ನಿಮ್ಮ ಬಣ್ಣಗಳ ಬಗ್ಗೆ
ಮಾತಾಡಿದರೆ, ನಮ್ಮ-ನಿಮ್ಮ ನಡುವೆ
ದಟ್ಟಡವಿಯೆದ್ದು
ಅಜಗರ ಮೌನ !

ಆದರೆ ನೋಡಿ-
ನಾವೂ ನೀವೂ ಮುಕ್ತವಾಗಿ ಈ ಬಣ್ಣಗಳ ಬಗ್ಗೆ
ಈ ಬಣ್ಣಗಳ ಹಿಂದಿರುವ ಅಕರಾಳ ವಿಕರಾಳಗಳ ಬಗ್ಗೆ
ಬಣ್ಣಗಳ ಹೆಸರಲ್ಲಿ ನಡೆದಿರುವ ಅಮಾನವೀಯ
ಅನ್ಯಾಯ ಹಾಗೂ ಶೋಷಣೆಯ ಬಗ್ಗೆ
ಮಾತನಾಡುತ್ತ
ಪರಸ್ಪರ ತೊಳೆದುಕೊಳ್ಳುತ್ತ
ತಿಳಿದುಕೊಳ್ಳುತ್ತ ಬದುಕದಿದ್ದರೆ,
ಸುಮ್ಮನೆ ಬೆಳೆಯುತ್ತದೆ
ನಮ್ಮ ನಿಮ್ಮ ನಡುವಣಡವಿಯ ತುಂಬ
ಸಂಶಯದ ಹುತ್ತ.