ಜಾನ್ ಡಾಲ್ಟನ್ ಸುಪ್ರಸಿದ್ಧ ರಸಾಯನ ವಿಜ್ಞಾನಿ. ಎಲ್ಲ ವಸ್ತುಗಳೂ ಸಹ ಕಣ್ಣಿಗೆ ಕಾಣದಂತಹ ಪರಮಾಣುಗಳಿಂದ ಆಗಿವೆ ಎನ್ನುವ ಸತ್ಯವನ್ನು ಜಗತ್ತಿಗೆ ಸಾರಿದ ಈ ವಿಜ್ಞಾನಿ ತನ್ನ ಕಣ್ಣಿನ ವಿಶೇಷ ದೋಷದಿಂದಲೂ ಪ್ರಸಿದ್ಧ. ಡಾಲ್ಟನ್ನನಿಗೆ ಕೆಂಪು ಬಣ್ಣ ಕಾಣುತ್ತಲೇ ಇರಲಿಲ್ಲ. ಕೆಂಪು ಬಣ್ಣ ಆತನಿಗೆ ಕಂದು ಬಣ್ಣವಾಗಿ ತೋರುತ್ತಿತ್ತು. ಅನುವಂಶೀಯವಾಗಿ ಬರುವ ಇಂತಹ ಬಣ್ಣಗುರುಡುತನಕ್ಕೆ ಚಿಕಿತ್ಸೆ ಇಲ್ಲವೆಂದೇ ಭಾವನೆ ಇದೆ. ಈ ಭಾವನೆಯನ್ನು ತೊಡೆದೋಡಿಸುವ ಸಂಶೋಧನೆಯೊಂದನ್ನು ಕಳೆದ ತಿಂಗಳು ನೇಚರ್ ಪತ್ರಿಕೆ ವರದಿ ಮಾಡಿದೆ. ವೈರಸ್ಗಳ ಬೆನ್ನೇರಿದ ಜೀನ್ಗಳನ್ನು ಕಣ್ಣಿನ ಹಿಂಭಾಗದಲ್ಲಿರುವ ರೆಟಿನಾ ಎನ್ನುವ ಪರದೆಯ ಜೀವಕೋಶಗಳೊಳಗೆ ಚುಚ್ಚಿದರೆ ಬಣ್ಣಗುರುಡುತನವನ್ನು ಕಳೆಯಬಹುದು ಎನ್ನುವ ಆಶೆಯನ್ನು ಅಮೆರಿಕೆಯ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ನೇತ್ರವಿಜ್ಞಾನಿ ಕೇಥರಿನ್ ಮಾಂಚುಸೋ ಮತ್ತು ಸಂಗಡಿಗರ ಈ ಸಂಶೋಧನೆ ಹುಟ್ಟಿಸಿದೆ.

ನಮ್ಮ ಸುತ್ತಲಿನ ಜಗತ್ತು ವರ್ಣಮಯವಾಗಿರುವುದಕ್ಕೆ ಕಣ್ಣೊಳಗಿನ ಕೆಲವು ಅಣುಗಳೇ ಕಾರಣ ಎಂದರೆ ಬಹುಶಃ ನೀವು ನಂಬಲಿಕ್ಕಿಲ್ಲ. ಆದರೆ ಇದು ವಿಚಿತ್ರವಾದರೂ ಸತ್ಯ. ನಮ್ಮ ಕಣ್ಣ ಹಿಂಭಾಗದಲ್ಲಿರುವ ರೆಟಿನಾ (ಅಕ್ಷಿಪಟಲ) ಎನ್ನುವ ಕಣ್ಣಪರದೆಯೊಳಗೆ ಮೂರು ಬಗೆಯ ಜೀವಕೋಶಗಳಿವೆ. ಇವುಗಳನ್ನು ಶಂಕುಕೋಶ (ಕೋನ್ ಸೆಲ್ಸ್) ಎಂದು ಹೇಳುತ್ತಾರೆ. ಒಂದೊಂದು ಬಗೆಯ ಕೋಶವೂ ಕೆಂಪು, ನೀಲಿ ಮತ್ತು ಹಸಿರು ಬೆಳಕುಗಳಲ್ಲಿ ಯಾವುದಾದರೂ ಒಂದು ವರ್ಣದ ಬೆಳಕಿಗೆ ಸ್ಪಂದಿಸುತ್ತದೆ. ಈ ಮೂರೂ ಬಣ್ಣಗಳೂ ಕೂಡಿ ನಮ್ಮ ದೃಷ್ಟಿ ವರ್ಣಮಯವಾಗುತ್ತದೆ. ಪ್ರಪಂಚವೆಲ್ಲ ರಂಗೇರುತ್ತದೆ. ಈ ಮೂರೂ ಕೋಶಗಳ ವೈವಿಧ್ಯಕ್ಕೆ ಅವುಗಳಲ್ಲಿರುವ ಆಪ್ಸಿನ್ ಎನ್ನುವ ವರ್ಣಕವೇ ಕಾರಣ. ಮೂರು ಭಿನ್ನ ಕೋಶಗಳಲ್ಲಿರುವ ವರ್ಣಕಗಳಲ್ಲಿಯೂ ವ್ಯತ್ಯಾಸವಿದೆ. ಕೆಂಪು ಕೋಶದ ಆಪ್ಸಿನ್ ಕೆಂಪು ಬಣ್ಣದ ಅಂದರೆ ಉದ್ದ ತರಂಗಾಂತರದ ಬೆಳಕಿಗೆ ಸ್ಪಂದಿಸುತ್ತದೆ. ಹಸಿರು ಕೋಶದ ಆಪ್ಸಿನ್ ಮಧ್ಯಮ ತರಂಗಾಂತರದ ಬೆಳಕಿಗೆ ಸ್ಪಂದಿಸುತ್ತದೆ. ನೀಲಿ ಕೋಶದ ಆಪ್ಸಿನ್ ಅತಿ ಕಡಿಮೆ ತರಂಗಾಂತರದ ಬೆಳಕಿಗೆ ಸ್ಪಂದಿಸುತ್ತದೆ. ಟೆಲಿವಿಷನ್ನಲ್ಲಿ ಈ ಮೂರೂ ಬಣ್ಣಗಳು ಕೂಡಿ ಲಕ್ಷಾಂತರ ರಂಗು ಕಾಣುವಂತೆ, ಮೂರೇ ಮೂರು ಬಣ್ಣದ ಕೋಶಗಳು ನಮಗೆ ಬಣ್ಣ, ಬಣ್ಣದ ಜಗತ್ತನ್ನು ಕಾಣಿಸುತ್ತವೆ.

ಬಣ್ಣದ ಜಗತ್ತನ್ನು ನೋಡಿ ಆನಂದಿಸುವ ಅದೃಷ್ಟ ಎಲ್ಲರಿಗೂ ಇಲ್ಲವೆನ್ನುವುದು ದುರದೃಷ್ಟ. ದೃಷ್ಟಿ ಗೋಚರಿಸುತ್ತಿದ್ದರೂ, ಬಣ್ಣ ಕಾಣಸಿದ ಡಾಲ್ಟನಿಗರು ಬಹಳಷ್ಟು ಮಂದಿ ಇದ್ದಾರೆ. ಒಂದು ಅಂದಾಜಿನ ಪ್ರಕಾರ ಶೇಕಡ 5ರಿಂದ 8ರಷ್ಟು ಮಂದಿ ಗಂಡಸರು ಬಣ್ಣಗುರುಡರು. ಮಹಿಳೆಯರಲ್ಲಿ ಬಣ್ಣಗುರುಡುತನ ಶೇಕಡ 1 ರಷ್ಟು ಅಷ್ಟೆ.  ಬಣ್ಣಗುರುಡು ಇರುವವರಲ್ಲಿ ಬಹುತೇಕ ಜನರಿಗೆ ಕೆಂಪು ಮತ್ತು ಹಸಿರು ಬಣ್ಣಗಳೆರಡೂ ಒಂದೇ ರೀತಿ ಗೋಚರಿಸುತ್ತವೆ. ಇದಕ್ಕೆ ಕಾರಣ ಇವರ ಕಣ್ಣಪರದೆಯಲ್ಲಿರುವ ಶಂಕುಕೋಶಗಳಲ್ಲಿ ಹಸಿರು ಬಣ್ಣವನ್ನು ಗುರುತಿಸುವ ಆಪ್ಸಿನ್ ಇಲ್ಲದುದೇ ಕಾರಣ. ಈ ಆಪ್ಸಿನ್ ತಯಾರಿಸುವ ಜೀನ್ ಒಂದೋ ದೋಷಪೂರ್ಣವಾಗಿರುತ್ತದೆ, ಇಲ್ಲವೇ ಕಾಣೆಯಾಗಿರುತ್ತದೆ. ಒಟ್ಟಾರೆ ಎಂ-ಆಪ್ಸಿನ್ ಎನ್ನುವ ಈ ಪ್ರೊಟೀನ್ನ ಕೊರತೆಯಿಂದಾಗಿ ಕಣ್ಣಿಗೆ ಕೆಂಪು ಮತ್ತು ಹಸಿರು ಬಣ್ಣಗಳೆರಡೂ ಒಂದೇ ರೀತಿ ಕಾಣುತ್ತವೆ.

ದಕ್ಷಿಣ ಅಮೆರಿಕದ ಕಾಡುಗಳಲ್ಲಿರುವ ಅಳಿಲುಗಳಂತೆ ತೋರುವ ಅಳಿಲುಮಂಗಗಳಲ್ಲಿ ಬಹುತೇಕ ಗಂಡುಗಳು ಬಣ್ಣಗುರುಡು. ಅವುಗಳ ಕಣ್ಣಪರದೆಯ ಶಂಕುಕೋಶಗಳಲ್ಲಿ ಕೇವಲ ನೀಲಿ ಮತ್ತು ಹಳದಿ ಬೆಳಕಿಗೆ ಸ್ಪಂದಿಸುವ ಆಪ್ಸಿನ್ಗಳಿವೆ. ಮೂರನೆಯ ಬಣ್ಣ ಇಲ್ಲ. ಹೀಗಾಗಿ ಇವುಗಳಿಗೆ ಕೆಂಪು ಮತ್ತು ಹಸಿರು ಬಣ್ಣಗಳು ಕಾಣುವುದೇ ಇಲ್ಲ. ಆದರೆ ಹೆಣ್ಣುಮಂಗಗಳಲ್ಲಿ ಮೂರು ಬಗೆಯ ಆಪ್ಸಿನ್ಗಳೂ ಇರುತ್ತವೆ. ಅವುಗಳಿಗೆ ಸಪ್ತವರ್ಣಗಳೂ ಸ್ಪಷ್ಟವಾಗಿ ಗೋಚರ. ಮಾಂಚುಸೋ ಮತ್ತು ಸಂಗಡಿಗರು ಈ ಗಂಡು ಅಳಿಲುಮಂಗಗಳ ಜಗತ್ತನ್ನೂ ವರ್ಣಮಯವಾಗಿಸಲು ಸಾಧ್ಯವೇ ಎಂದು ಪ್ರಯತ್ನಿಸಿದ್ದಾರೆ. ಗಂಡುಮಂಗಗಳ ಕಣ್ಣಪರದೆಯ ಕೋಶಗಳೊಳಗೆ ಮಾನವನ ಕಣ್ಣಿನಲ್ಲಿ ಕಾಣಸಿಗುವ ಹಾಗೂ ಮಧ್ಯಮ ತರಂಗಾಂತರದ ಬೆಳಕಿಗೆ (ಹಸಿರು ಬಣ್ಣಕ್ಕೆ) ಸ್ಪಂದಿಸುವ ಪ್ರೊಟೀನು ತಯಾರಿಸುವ ಜೀನ್ ಚುಚ್ಚಿ ಅವುಗಳಿಗೆ ಬಣ್ಣ ಕಾಣಿಸಬಹುದೇ ಎಂದು ಪ್ರಯತ್ನಿಸಿದ್ದಾರೆ.  ಈ ಪ್ರಯತ್ನದ ಫಲಿತಾಂಶಗಳನ್ನು ನೇಚರ್ ಪ್ರಕಟಿಸಿದೆ.

ಎರಡು ವರ್ಷಗಳ ಕಾಲ ಗಂಡು ಮಂಗಗಳಿಗೆ ವಿವಿಧ ಬಣ್ಣಗಳನ್ನು ಗುರುತಿಸುವ ಪರೀಕ್ಷೆ ನೀಡಲಾಯಿತು. ಈ ಪರೀಕ್ಷೆಗಳ ಫಲಿತಾಂಶ ಏನೆಂದರೆ ಎಷ್ಟೇ ತರಬೇತಿ ಕೊಟ್ಟರೂ ಗಂಡು ಮಂಗಗಳು ಹಳದಿ ಮತ್ತು ನೀಲಿ ಬಣ್ಣಗಳನ್ನು ಗುರುತಿಸುತ್ತಿದ್ದುವೇ ಹೊರತು ಕೆಂಪು ಬಣ್ಣವನ್ನು ಗಮನಿಸುತ್ತಲೇ ಇರಲಿಲ್ಲ. ಅರ್ಥಾತ್ ಇವುಗಳಿಗೆ ಕೆಂಪು ಬಣ್ಣ ಕಾಣಿಸುವುದೇ ಇಲ್ಲ. ಗಂಡುಗಳೆಲ್ಲವೂ ಕೆಂಪುಬಣ್ಣಗುರುಡು ಎನ್ನುವುದನ್ನು ಹೀಗೆ ಖಚಿತಪಡಿಸಿಕೊಂಡ ಮಾಂಚುಸೋ ತಂಡ, ಅವುಗಳಿಗೆ ಕೆಂಪು ಬಣ್ಣ ಕಾಣುವಂತೆ ಮಾಡುವ ಪ್ರಯತ್ನವನ್ನು ಮಾಡಿದುವು. ವೈರಸ್ಗಳ ಜೊತೆಗೆ ಮಾನವನ ಕಣ್ಣಿನಲ್ಲಿ ಇರುವ ಎಂ-ಆಪ್ಸಿನ್ ಪ್ರೊಟೀನು ತಯಾರಿಸುವ ಜೀನ್ ಅನ್ನು ಜೋಡಿಸಿ ಗಂಡು ಮಂಗಗಳ ಕಣ್ಣಿನ ಅಕ್ಷಿಪಟಲಕ್ಕೆ ಚುಚ್ಚಲಾಯಿತು. ಕೆಲವು ಮಂಗಗಳಿಗೆ ಆಪ್ಸಿನ್ ಜೀನ್ ಬದಲಿಗೆ ಮೀನಿನಿಂದ ಪ್ರತ್ಯೇಕಿಸಿದ ಹಸಿರು ಬಣ್ಣ ಸೂಸುವ ಪ್ರೊಟೀನ್ನ ಜೀನ್ ಅನ್ನು ಚುಚ್ಚಲಾಯಿತು. ಇವುಗಳ ಕಣ್ಣಿನಪರದೆಯ ಕೋಶಗಳಲ್ಲಿ ಹಸಿರು ಬಣ್ಣದ ಪ್ರೊಟೀನ್ ತಯಾರಾಗುತ್ತದೆಯೋ, ತಯಾರಾಗುತ್ತದೆಯೆಂದಾದರೆ ಯಾವ ಪ್ರಮಾಣದಲ್ಲಿ ಎಂಬುದನ್ನು ನಿರ್ಧರಿಸಲು ಈ ಪ್ರಯೋಗ ಮಾಡಲಾಯಿತು. ವೈರಸ್ ಚುಚ್ಚಿ 16 ವಾರಗಳ ಅನಂತರ ಕಣ್ಣಪರದೆಯ ಕೋಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಪ್ರೊಟೀನು ಹೊಳೆಯುವುದು ಕಂಡಿತು. ಈ ಫಲಿತಾಂಶವನ್ನು ಆಧರಿಸಿಕೊಂಡು ಮಾನವ ಆಪ್ಸಿನ್ ಜೀನ್ ಚುಚ್ಚಿದ 16 ವಾರಗಳ ಅನಂತರ ಗಂಡುಮಂಗಗಳ ಕಣ್ಣಪರದೆಯ ಕೋಶಗಳನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಹಾಗೂ ವಿವಿಧ ಬೆಳಕಿನ ತರಂಗಗಳಿಗೆ ಒಡ್ಡಿ ಪರೀಕ್ಷಿಸಲಾಯಿತು. ಆರಂಭದಲ್ಲಿ ಬೆಳಕಿನ ಮಧ್ಯಾವಧಿ ತರಂಗಗಳಿಗೆ ಪ್ರತಿಕ್ರಿಯೆ ತೋರದಿದ್ದ ಕೋಶಗಳು 24 ವಾರಗಳ ಅನಂತರ ಆ ತರಂಗಗಳಿಗೂ ಸ್ಪಂದಿಸಲು ತೊಡಗಿದುವು. ಅರ್ಥಾತ್, ಗಂಡು ಮಂಗಗಳ ಕಣ್ಣಿನಲ್ಲಿ ಜನ್ಮತಃ ಇಲ್ಲದ ಸಾಮಥ್ರ್ಯವನ್ನು ಈ ಚಿಕಿತ್ಸೆ ನೀಡಿತ್ತು. ಅನಂತರ ವಿವಿಧ ಬಣ್ಣಗಳನ್ನು ಗುರುತಿಸುವ ಪರೀಕ್ಷೆಗಳನ್ನೂ ಮಂಗಗಳಿಗೆ ಒಡ್ಡಲಾಯಿತು. ಈ ಪರೀಕ್ಷೆಗಳಲ್ಲೂ ಮಂಗಗಳು ಕೆಂಪು ಬಣ್ಣವನ್ನು ಗುರುತಿಸಿದುವು.  ಈ ಮಂಗಗಳು ಹಳದಿ, ನೀಲಿಯ ರಂಗೋಲಿಯ ಮಧ್ಯೆ ಕೆಂಪು ಬಣ್ಣದ ಚಿತ್ರಗಳಿದ್ದರೂ ಅದನ್ನು ಸ್ಪಷ್ಟವಾಗಿ ಪತ್ತೆ ಹಚ್ಚುತ್ತಿದ್ದುವು.  ಎರಡೇ ಬಣ್ಣಗಳನ್ನು ಗುರುತಿಸುತ್ತಿದ್ದ ಮಂಗಗಳು ಹೀಗೆ ಮೂರು ಬಣ್ಣಗಳನ್ನು ಪತ್ತೆ ಮಾಡಲಾರಂಭಿಸಿದುವು.

ಇದೇ ತಂತ್ರವನ್ನು ಬಳಸಿ ಆಪ್ಸಿನ್ ತಯಾರಿಕೆ ಕುಂಠಿತವಾಗಿರುವ ಬಣ್ಣಗುರುಡರಿಗೆ ಚಿಕಿತ್ಸೆ ನೀಡಬಹುದೆನ್ನುವ ಆಸೆಯನ್ನು ಈ ಪ್ರಯೋಗ ಹುಟ್ಟಿಸಿದೆ. ಜೊತೆಗೇ ಬಣ್ಣವನ್ನು ನಮ್ಮ ಮಿದುಳು ಗುರುತಿಸುವುದು ಹೇಗೆನ್ನುವ ಬಗ್ಗೆ ಇದುವರೆಗೂ ಇದ್ದ ನಂಬಿಕೆಗಳಿಗೆ ಕೊಡಲಿಯೇಟನ್ನೂ ನೀಡಿದೆ. ಇದುವರೆವಿಗೂ ಬಣ್ಣಗಳನ್ನು ಗುರುತಿಸುವುದಕ್ಕೆ ಮಿದುಳಿನಲ್ಲಿರುವ ನರಕೋಶಗಳ ಜಾಲವೇ ಕಾರಣ ಎಂದು ನಂಬಲಾಗಿತ್ತು. ಒಮ್ಮೆ ಬಣ್ಣಗುರುಡರಾಗಿ ಹುಟ್ಟಿದವರಲ್ಲಿ ಇಂತಹ ಜಾಲವಿಲ್ಲದ ಕಾರಣ ಅವರ ಬಣ್ಣಗುರುಡುತನವನ್ನು ಹೋಗಲಾಡಿಸಲಾಗದು ಎಂದುಕೊಂಡಿದ್ದರು. ಆದರೆ ನರಕೋಶಗಳಲ್ಲಿ ಹೊಸಜಾಲ ಹುಟ್ಟಬೇಕಿಲ್ಲ. ಆಪ್ಸಿನ್ ಪೂರೈಕೆಯಿಂದಲೇ ಬಣ್ಣಗುರುಡುತನವನ್ನು ಹೋಗಲಾಡಿಸಬಹುದು ಎಂದು ಮಾಂಚುಸೋರ ಸಂಶೋಧನೆ ಹೇಳುತ್ತಿದೆ. ಬಣ್ಣಗುರುಡರಿಗೆ ಹೊಸ ಬೆಳಕನ್ನು ತೋರಿದೆ.

Mancuso, K et al., 30,000-year ………….,  Nature, Vol. 461,  Pp 784-789 (8 October 2009), 2009.

Robert Shapely, Gene Therapy in Colour, Nature, Vol. 461, Pp 731-732, (8 October, 2009) 2009