ಪ್ರಾಯದ ಭಾವನೆಗಳು ತುಂಬ ಉತ್ಕಟವಾಗಿರುತ್ತವೆ. ಆ ಕಾರಣದಿಂದಲೆ ಆ ಸಂವೇದನೆಯು ಕಾವ್ಯಕ್ಕೆ ಹತ್ತಿರವಾಗಿರುತ್ತದೆ. ತೀವ್ರವಾಗಿ ಮಿಡಿವ ಸ್ವಭಾವದಿಂದಾಗಿಯೆ ಭಾಷೆಯ ಛಂದಸ್ಸಿನಲ್ಲಿ ಏರಿಳಿತಗಳು ಉಂಟಾಗಿ ಮಧುರ ವೇದನೆ ವ್ಯಕ್ತವಾಗುತ್ತದೆ. ಈ ಬಗೆಯನ್ನು ಯಾರು ಆತ್ಯಂತಿಕವಾಗಿ ಮೈದುಂಬಿ ಅನುಭವದ ಆಳಕ್ಕೆ ಇಳಿಯುವರೊ ಆಗ ಅವರ ಅಭಿವ್ಯಕ್ತಿಯ ಭಾಷೆಯು ಕಾವ್ಯಾತ್ಮಕ ರೂಪಕ ಸಂಕೇತ ಪ್ರತಿಮೆಗಳ ನಾದದಲ್ಲಿ ವಿಶಿಷ್ಠ ಅರ್ಥಸಾಧ್ಯತೆಯನ್ನು ಧ್ವನಿಸುತ್ತದೆ. ಉತ್ಕಟತೆಯು ತಂತಾನೆ ತುಂಬಿ ತುಳುಕುವಾಗ ಅದು ಸಹಜ ಕಾವ್ಯದ ದಾರಿಯಲ್ಲಿ ಆ ಕ್ಷಣಕ್ಕೆ ಹೊಳೆದದ್ದನ್ನು ಹೊಳೆಸಿ ಮರೆಯಾಗಿ ಬಿಡುತ್ತದೆ. ಹದಿಹರೆಯದ  ಭಾವನೆಗಳೆಲ್ಲ ಇಂತಹ ಓಘದಲ್ಲಿಯೇ ಒತ್ತಡವನ್ನು ಹೊರಚೆಲ್ಲಿ ಚಿತ್ತಗುದುರೆಯ ಹಿಂಬಾಲಿಸಿ ಮತ್ತೆಲ್ಲಿಗೊ ಹಾರುತ್ತದೆ. ಪ್ರಾಯದ ಮನಸ್ಸಿನ ತುಂಬ ಕಾಮನ ಬಿಲ್ಲು ಮೂಡಿ ಅದು ಹಾಗೇ ಮಾಯದ ಮೋಹದ ಮಳೆಯಲ್ಲಿ ಕರಗಿ ಆವಿಯಾಗಿ ಬಿಡಬಲ್ಲದು. ಅಂತೆಯೇ ಅವರೊಳಗಿನ ಕವಿತೆಗಳೆಂಬ ಅಸಂಖ್ಯಾತ ಕಾಮನಬಿಲ್ಲುಗಳು ದಿನವೂ ಮೂಡಿ ದಿನ ರಾತ್ರಿಯೂ ಕರಗಿ ಭಾಷೆಯ ಮಾಯಾ ಜಾಲದಲ್ಲಿ ಕಳೆದು ಹೋಗ ಬಲ್ಲವು.

ಇದು ಸೃಜನಶೀಲತೆಯ ವರಸೆಯೂ ಹೌದು. ನಮ್ಮ ಕಡೆ ‘ವರಸೆ’ ಎಂದರೆ ಸಂಬಂಧ ಮಾಡಿಕೊಳ್ಳಬಹುದು ಎಂಬ ಅರ್ಥವಿದೆ. ಇದು ವೈವಾಹಿಕ ಇಲ್ಲವೆ ಪ್ರೇಮ ಸಂಬಂಧಗಳನ್ನು ಸೂಚಿಸುವ ಪದವೂ ಹೌದು. ಸೃಜನಶೀಲತೆಯು ಭಾಷೆಯ ಜೊತೆಗಿನ ವರಸೆ ಸಂಬಂಧವನ್ನು ಸಾಧ್ಯವಾಗಿಸುತ್ತದೆ. ಹಾಗೆ ನೋಡಿದರೆ ಎಲ್ಲ ಒಳ್ಳೆಯ ಕವಿಗಳಿಗೆ ಭಾಷೆಯು ಸಂಗಾತಿ ಇದ್ದಂತೆ. ಹೆಣ್ಣಿನಂತೆಯೆ ಭಾಷೆಯು ಸೃಷ್ಠಿಶೀಲವಾದದ್ದು. ಕವಿಯ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥಶೋಧವನ್ನು ಭಾಷೆಯ ಜೊತೆ ಮಾಡಿಕೊಳ್ಳಲು ಸಾಧ್ಯ. ಹದಿಹರೆಯದಲ್ಲಿ ಭಾಷೆ ಎಂಬ ಮಾಯಕಾತಿಯ ಜೊತೆ ಅರ್ಥಕ್ಕಿಂತ ಮಿಗಿಲಾಗಿ ವಿಚಿತ್ರವಾದ ಮೋಹ ಕಾಮನೆಗಳು ಇರುತ್ತವೆ. ಅರ್ಥಕ್ಕೆ ಮಿತಿ ಇರಬಹುದಾದರೂ ಮೋಹಕ್ಕೆ ಮಿತಿ ಇಲ್ಲ ಎಂಬ ತತ್ವವನ್ನು ಅದು ಹೇಗೊ ಪ್ರಾಯದ ಮನಸ್ಸು ತಿಳಿದುಬಿಟ್ಟಿರುತ್ತದೆ. ಈ ಪರಿಯ ವರಸೆಯ ಮೋಹವು ಸುಖ, ದುಃಖ ಎರಡನ್ನೂ ತನ್ನ ತನ್ಮಯತೆಯಲ್ಲೆ ಹಾಡಿಕೊಳ್ಳುವುದು ಸಾಮಾನ್ಯ. ಸೃಜನಶೀಲ ಬೆಳಗಿನಲ್ಲಿ ದಾರಿ ಸಾಗುತ್ತಿದ್ದಂತೆ ಮೋಹದ ಹಗಲು ಸಾಕೆನಿಸಿ ಹಗಲಿನಾಚೆಯ ಬೇರೆ ಬೇರೆ ಲೋಕಗಳನ್ನು ಹುಡುಕಲು ಮನಸ್ಸು ಮುಂದಾಗುತ್ತದೆ. ಲೋಕಾಂತ ಹಾಗೂ ಏಕಾಂತಗಳ ನಡುವಿನ ಕೊಂಡಿಯನ್ನು ಯಾರು ಸಮರ್ಥವಾಗಿ ಬೆಸೆದುಕೊಳ್ಳುವರೊ ಅವರು ಕವಿಯಾಗಿ ಮುಂದೆ ಸಾಗುವರು. ಯಾರು ಆ ಕೊಂಡಿಯ ವರಸೆ ಬೇಡ ಎಂದು ಭಾವಿಸುವರೊ ಅವರು ಕವಿಯಾಗಿ ಮುಂದೆ ಪಯಣ ಮಾಡಲಾರರು. ಇದು ಕಾವ್ಯ ಸಾಂಗತ್ಯದ ಸಂಬಂಧ ಅಳಿದುಳಿ ಯುವ ಪರಿ.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸೃಜನಶೀಲತೆಗೆ ತುಂಬ ಬಡತನವಿದೆ. ಆದರೆ ಕಲಿಯಲು ಬರುವ ಸಮಾಜದ ನೂರೆಂಟು ದಾರಿಗಳ ವಿದ್ಯಾರ್ಥಿಗಳಿಗೆ ಅಪಾರವಾದ ಸೃಜನಶೀಲತೆಯ ಸಾಧ್ಯತೆಯಿರುತ್ತದೆ. ಈ ಸೃಜನ ಸಾಮರ್ಥ್ಯವು ಎಷ್ಟೋ ಬಾರಿ ಒಮ್ಮೆಯೂ ವ್ಯಕ್ತಿಯ ಒಳದನಿಯಿಂದ ಹೊರಬರಲಾರದೆ ಹಾಗೇ ಕುಗ್ಗಿ ಹೋಗುತ್ತದೆ. ಒಳದನಿಯೇ ಭಾಷೆಯ ಜೀವಂತಿಕೆ. ಬಾಹ್ಯಲೋಕದ ವ್ಯವಹಾರಗಳ ಸಂವಹನ ಯಾವತ್ತೂ ಕೂಡ ಸಂಕುಚಿತ ವಾಗಿರುತ್ತದೆ. ಅಲ್ಲಿ ವ್ಯವಹಾರ ಮುಖ್ಯವೇ ಹೊರತು ಮಾನವ ಸಂಬಂಧ ದೊಡ್ಡದಲ್ಲ ವೆನಿಸುತ್ತದೆ. ಒಳದನಿಗೆ ಮಾತ್ರ ಮಾನವರ ಅಖಂಡ ಧ್ವನಿತಾರ್ಥಗಳ ಸಾಧ್ಯತೆಯಿರುತ್ತದೆ. ಈ ಸಾಧ್ಯತೆಯನ್ನು ಕಾವ್ಯ ಭಾಷೆ ಇಲ್ಲವೇ ಯಾವುದೇ ಅತ್ಯುತ್ಕಟ ನಿರೂಪಣೆಗಳು ಮಾಡುತ್ತವೆ. ಶುಷ್ಕವಾದ ಒಣ ಪಾಂಡಿತ್ಯದ ಪಠ್ಯಕ್ರಮಗಳು ನಿಜದನಿಯ ಹದಕೆಡಿಸಿ ಸವಕಲು ಮಾತುಗಳನ್ನು ಕಲಿಸುತ್ತವೆ. ಸಾಹಿತ್ಯವನ್ನೇ ಓದುವ ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯವಾಗುತ್ತದೆ. ಸೃಜನಶೀಲತೆಗೆ ಅವಕಾಶವಿಲ್ಲದ ಶಿಕ್ಷಣದಿಂದ ಯಾವ ಉನ್ನತ ಸಂಶೋಧನೆಗಳೂ ಸಾಧ್ಯವಾಗಲಾರವು. ಒಬ್ಬ ಕವಿಯಿಂದ ಒಂದು ಭಾಷೆಗೆ ಒಂದು ಅನನ್ಯ ನುಡಿಗಟ್ಟು ಸಿಕ್ಕಿದರೆ ಒಂದು ಸಮಾಜದ ವಿಕಾಸಕ್ಕೆ ಅದರಿಂದ ಒಂದು ಸನ್ನೆಗೋಲಿನ ಕ್ರಿಯೆ ಒದಗಿ ಬರುತ್ತದೆ. ಅಂತಃಶಕ್ತಿಯನ್ನು ಉದ್ದೀಪಿಸುವ ಶಿಕ್ಷಣ ಪರಿಸರವೇ ನಿಜವಾದ ಸೃಜನಶೀಲ ಆವರಣ. ಇಂತಹ ಆವರಣದಲ್ಲಿ ಬೆಳೆದ ಬೆಳೆಯೆ ಭವಿಷ್ಯವನ್ನು ವಿಸ್ತರಿಸು ವಂತದ್ದು.

ಇಂತಹ ಒಂದು ಆವರಣ ಸೃಷ್ಟಿಯ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದವರು ಪ್ರೊ. ಚಿ. ಶ್ರೀನಿವಾಸರಾಜು ಹಾಗೂ ಪ್ರೊ. ಎಚ್.ಎಸ್. ರಾಘವೇಂದ್ರರಾವ್ ಅವರು. ಕ್ರೈಸ್ಟ್ ಕಾಲೇಜಿನ ಮೂಲಕ ನಾಡಿನ ಎಲ್ಲ ಶಾಲಾ ಕಾಲೇಜುಗಳ ಹದಿಹರೆಯದ ಕವಿಗಳನ್ನು ಬೇಂದ್ರೆ ಕಾವ್ಯ ಸ್ಪರ್ಧೆಗೆ ಆಹ್ವಾನಿಸಿ ಒಳ್ಳೆಯ ಕವಿತೆಗಳಿಗೆ ಬಹುಮಾನ ಕೊಟ್ಟು PRWತ್ಸಾಹಿ ಸುತ್ತಿದ್ದರು. ಪ್ರತಿ ವರ್ಷ ನಡೆಯುತ್ತಿದ್ದ ಈ ಕಾವ್ಯ ಸ್ಪರ್ಧೆ ಅನೇಕ ಸಮರ್ಥ ಕವಿಗಳನ್ನು ನಾಡಿಗೆ ಪರಿಚಯಿಸಿದೆ. ಬಹುಮಾನ ಪಡೆದ ಕವಿಗಳನ್ನೆಲ್ಲ ಮಹತ್ವದ ಹಿರಿಯ ಕವಿಗಳ ಮನೆಯಂಗಳಕ್ಕೆ ಕರೆದೊಯ್ದು ಅವರ ಮುಂದೆ ಆಯಾ ಕವಿಯ ಪರಿಚಯಿಸಿ ಆತನ ಕವಿತೆಯನ್ನು ಆತನಿಂದಲೇ ವಾಚಿಸಲಾಗುತ್ತಿತ್ತು. ಆ ಹಿರಿಯ ಕವಿಯ ಕೈಯಿಂದ ಬಹುಮಾನ ಕೊಡಿಸಿ ನೆನಪಿಗೆ ಒಂದು ಫೋಟೊ ಕೂಡ ತೆಗೆಸಿ ಕೊಡುತ್ತಿದ್ದರು. ಹಾಗೆಯೆ ಪ್ರಕಟಗೊಂಡ ಬಹುಮಾನಿತ ಕವನಗಳ ಸಂಗ್ರಹಗಳನ್ನು ಕೈ ತುಂಬ ಕೊಟ್ಟು ಮುಂದಿನ ವರ್ಷ ಮತ್ತೆ ಸೇರೋಣ ಎಂದು ದೂರದೂರಿಂದ ಬಂದಿದ್ದ ಯುವ ಕವಿಗಳನ್ನು ಕಳುಹಿಸಿಕೊಡುತ್ತಿದ್ದರು. ಇದು ಯಾವತ್ತೂ ಕೂಡ ಕಾವ್ಯ ವ್ಯವಸಾಯದಲ್ಲಿ ತೊಡಗುವ ಯುವಕರಿಗೆ ಬೇಕೇ ಬೇಕಾದ ಒತ್ತಾಸೆ. ಇಂತಹ ಪ್ರೇರಣೆಯಿಂದಲೇ ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆಯ ಮೂಲಕವೇ ನಾನು ಕೂಡ ಕವಿಯಾದದ್ದು. ಈಗ ಈ ‘ಅಲ್ಲಮ ಕಾವ್ಯ ಸ್ಪರ್ಧೆ’ಯ ಆಲೋಚನೆಯು ನನಗೆ ಬಂದದ್ದು ಪ್ರೊ. ಚಿ. ಶ್ರೀನಿವಾಸರಾಜು ಅವರಿಂದಲೇ. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯ ಗಾಂಭೀರ್ಯಕ್ಕೆ ಮಾತ್ರವೇ ಪ್ರಥಮ ಸ್ಥಾನವಿಲ್ಲ. ಇಲ್ಲಿ ಸೃಜನಶೀಲ ವಿವೇಚನೆಯೆ ಸಂಶೋಧನೆಯು ದಿಕ್ಸೂಚಿಯಾಗಿದೆ. ಹೀಗಾಗಿಯೆ ಶಿಕ್ಷಣದ ಚೌಕಟ್ಟಿನ ಆಚೆಗಿನ ಸೃಜನಶೀಲ ಮನಸ್ಸುಗಳ ಪ್ರತಿಭೆಯನ್ನು ಹುಡುಕಲು ಕನ್ನಡ ವಿಶ್ವವಿದ್ಯಾಲ ಯವು ‘ಅಲ್ಲಮಕಾವ್ಯ ಸ್ಪರ್ಧೆ’ಯನ್ನು ಏರ್ಪಡಿಸಿದ್ದು.

‘ಅಲ್ಲಮ ಕಾವ್ಯ ಸ್ಪರ್ಧೆ’ಯು ಹದಿಹರೆಯದವರ ಸೃಜನಶೀಲ ಕಾವ್ಯ ವರಸೆಯ ಸಂಬಂಧಕ್ಕಾಗಿ ರೂಪುಗೊಂಡ ಸ್ಪರ್ಧೆ. ಪಠ್ಯದ ಆಚೆಗಿನ ಪ್ರತಿಭೆಯು ಪಠ್ಯದ ಕೇಂದ್ರವೇ ಆಗಬೇಕೆನ್ನುವುದು ಒಂದು ಆದರ್ಶ. ವ್ಯವಸ್ಥೆ ಇದನ್ನು ಆಗು ಮಾಡಲು ಉತ್ಸಾಹ ತೋರದು. ಆದರೂ ಪ್ರಯತ್ನವನ್ನು ಬಿಡಬೇಕಾದುದಿಲ್ಲ. ಕವಿತೆ ಬರೆಯುವುದು ಭಾಷೆಯ ಜೊತೆಗಿನ ಬೇಕಾಬಿಟ್ಟಿ  ಅಭಿವ್ಯಕ್ತಿಯಲ್ಲ. ಕಾವ್ಯಾಭಿವ್ಯಕ್ತಿಯ ಸ್ವಭಾವವು ಮಾನವರ ಸೂಕ್ಷ್ಮ ಸಂವೇದಿ ಪ್ರವೃತ್ತಿಯದಾಗಿದೆ. ಇಂತಹ ಅಭಿವ್ಯಕ್ತಿಯಿಂದಲೇ ಭಾಷೆ ಮತ್ತು ಭಾವಕೋಶಗಳು ವಿಕಾಸಗೊಂಡಿರುವುದು. ಈ ಕ್ರಿಯೆಯಲ್ಲಿ ಯುವ ಮನಸ್ಸು ಉತ್ಕಟವಾಗಿರುತ್ತದೆ. ಇದು ಬೆಳೆಯುತ್ತಾ ಸಾಗಿದಂತೆಲ್ಲ ಲೋಕ ಲೋಕಾಂತರಗಳ ಆವರಣವನ್ನೆಲ್ಲ ತನ್ನೊಳಗೆ ಪ್ರತಿ ಸೃಷ್ಠಿಸಲು ತೊಡಗುತ್ತದೆ. ಆದ್ದರಿಂದಲೆ ಹದಿಹರೆಯದ ಸೃಜನಶೀಲತೆಗೆ ವಿಶೇಷವಾದ ಕಾವ್ಯ ಪರಿಸರದ ಅವಕಾಶವಿರಬೇಕು. ಅಂತಹ ಪುಟ್ಟ ಪ್ರಯತ್ನಗಳಲ್ಲಿ ಅಲ್ಲಮ ಕಾವ್ಯ ಸ್ಪರ್ಧೆಯು ಒಂದು.

ಅಲ್ಲಮ ಶ್ರೇಷ್ಠ ದಾರ್ಶನಿಕ ಕವಿ. ಕ್ರಾಂತಿಯ ಬಾಹ್ಯ ಪರಿವರ್ತನೆಯ ಹಂಗು ಮೀರಿ; ಅಂತರಂಗದ ಮಹಾಮೌನಕ್ರಾಂತಿಯ ಬೆಳಗನ್ನು ಹುಡುಕಿಕೊಂಡು ಹೊರಟ ಕವಿ ಅಲ್ಲಮನ ರೂಪಕ ಸಾಮ್ರಾಜ್ಯವು ಲೌಕಿಕದ ಎಲ್ಲ ಕಲ್ಯಾಣ ಸುಖಗಳನ್ನು ದಾಟಿದ್ದಾಗಿತ್ತು. ಕನ್ನಡ ಭಾಷೆಯ ಆಧ್ಯಾತ್ಮದ ಶಿಖರ ಅಲ್ಲಮನಲ್ಲಿ ಆತ್ಯಂತಿಕವಾಗಿ ಘಟಿಸಿದೆ. ಅಂತಹ ಕವಿಯ ಹೆಸರಲ್ಲಿ ಹದಿಹರೆಯದ ಮನಸ್ಸುಗಳಿಗೆ ಕಾವ್ಯ ಸ್ಪರ್ಧೆಯನ್ನು ಒಡ್ಡುವುದು ಉನ್ನತ ನಿರೀಕ್ಷೆಗಳಿಂದ. ಕರ್ನಾಟಕದ ಎಲ್ಲ ಮೂಲೆಗಳಿಂದಲು ಈ ಸ್ಪರ್ಧೆಗೆ ವಿದ್ಯಾರ್ಥಿಗಳು ಸ್ಪಂದಿಸಿದರು. ಈ ಎಲ್ಲ ಕವಿತೆಗಳಲ್ಲು ಬಣ್ಣದ ಚಿತ್ತಾರದ ಚಿತ್ತ ರಂಗುರಂಗಾಗಿಯೆ ಜಾತ್ರೆಯ ಸಡಗರದಲ್ಲಿ ನಲಿದಿದೆ. ಅಷ್ಟೇ ಮುಖ್ಯವಾಗಿ ವರ್ತಮಾನದ ರೂಪ ವಿರೂಪವೆಲ್ಲ ವಿವಿಧ ವರ್ಣಗಳಲ್ಲಿ ಪ್ರತಿಫಲಸಿದೆ. ಆಯ್ಕೆಯನ್ನು ಉದಾರವಾಗಿಯೇ ಮಾಡಬೇಕಾಯಿತು. ಒಂದು ಸಣ್ಣ ಸನ್ನೆ ಗೋಲು ಬಂಡೆಯನ್ನು ಚಲಿಸುವಂತೆ ಮಾಡಬಲ್ಲದು ಎಂಬ ಪ್ರಜ್ಞೆಯಿಂದ; ಕವಿತೆಗಳ ಮಧ್ಯೆ ಮಿಂಚಿದ ಕೆಲವೇ ಸಾಲುಗಳಿಂದಲೇ ಆ ಕವಿತೆಯು ಆ ಕವಿಯನ್ನು ಆಯ್ಕೆ ಮಾಡಿತು. ಹದಿಹರೆಯದ ಸಹಜ ರಾಗಗಳೆಲ್ಲ ಇಲ್ಲಿ ಸಂಗಮಿಸಿವೆ. ಸುಮ್ಮನೆ ರೂಪುಗೊಂಡ ಚೆಲುವಿನ ರಚನೆಗಳೂ ಸೇರ್ಪಡೆಗೊಂಡಿವೆ. ಕನ್ನಡ ಕಾವ್ಯದ ಗಾಢವಾದ ಓದನ್ನೇನೂ ಮಾಡದೆ ತುಳುಕುವ ಭಾವನೆಗಳನ್ನೆ ನೆಚ್ಚಿ ನಂಬಿ ವ್ಯಕ್ತವಾದ ಅನುಭವಗಳೂ ಇಲ್ಲಿ ಸಾಲುಗಟ್ಟಿವೆ. ಇವೆಲ್ಲ ಪ್ರಾಯದ ನೈಸರ್ಗಿಕ ರೂಪಗಳು ಮಾತ್ರ. ಕೆಲವರಾದರೂ ಶಕ್ತ ಕವಿಗಳು ಇಲ್ಲಿ ಕಾಣಿಸಿಕೊಂಡಿದ್ದಾರೆ. ನಾಗರಾಜಶೆಟ್ಟಿ, ಅಂಕುರ್ ಬೆಟಗೇರಿ, ಪ್ರತಿಭಾ.ಪಿ, ಎಂ.ಪಿ. ನಿರ್ಮಲಾದೇವಿ, ನಾಗಣ್ಣ ಕಿಲಾರಿ, ಅರುಣ್ ಜೋಳದ ಕೂಡ್ಲಿಗಿ, ಪ್ರಶಾಂತಕುಮಾರ, ಶಬ್ರೀನ್ ಎಂ.ಎಚ್, ಚಂದ್ರಶೇಖರ ಐಜೂರು, ಟಿ.ಎಂ. ಉಷಾರಾಣಿ, ನೇತ್ರಾವತಿ.ಕೆ.ವಿ, ವಿನಯ್.ಬಿ.ಎಸ್, ಇವರೆಲ್ಲ ನಿಸ್ಸಂದೇಹವಾಗಿ ನಾಳೆ ನಮಗೆ ಬೇಕಾದ ಕವಿಗಳಾಗಬಲ್ಲವರು. ಭಾಷೆ, ಭಾವ, ಅರ್ಥ, ರೂಪಕ, ಸಂಕೇತ, ಪ್ರತಿಮೆ, ನಾದ ಇವನ್ನೆಲ್ಲ ತಂತಾನೆ ಹೊಂದಿಸಿಕೊಂಡು ಬರೆಯಬಲ್ಲ ಸಾಮರ್ಥ್ಯ ಇರುವವರು. ಇಂಥವರ ಸೃಜನಶೀಲತೆ ವಿಸ್ತರಿಸುತ್ತದೆ ಎಂಬ ನಂಬಿಕೆ ನನಗಿದೆ. ಇವರ ಬಿಡಿ ಕವಿತೆಗಳನ್ನಿಲ್ಲಿ ವಿಶ್ಲೇಷಿಸುವುದು ಸಾಧುವಲ್ಲ. ಕಾವ್ಯ ಸಾಂಗತ್ಯದಲ್ಲಿ ಇವರೆಲ್ಲ ಯಶ ಪಡೆಯಲಿ ಎಂದು ಮಾತ್ರ ಆಶಿಸುವೆ.

ಅಲ್ಲಮ ಕಾವ್ಯ ಸ್ಪರ್ಧೆಯ ಬಹುಮಾನಿತ ಕವಿತೆಗಳು ಎಲ್ಲರ ಮನದಂಗಳನ್ನು ಮುಟ್ಟುವಂತಾಗಲಿ. ಅನೇಕ ಕಾರಣಗಳಿಂದ ಈ ಕವಿತೆಗಳನ್ನು ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಅದು ಈಗಲಾದರೂ ಸಫಲವಾಗಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಾನೇ ಕಟ್ಟಿಕೊಂಡ ‘ಕಾವ್ಯಾರಣ್ಯ’ ವೇದಿಕೆಯ ಮೂಲಕ ಈ ಕಾವ್ಯ ಸ್ಪರ್ಧೆಯನ್ನು ೨೦೦೪ರಲ್ಲಿ ಆಯೋಜಿಸ ಲಾಗಿತ್ತು. ಇದರ ಜೊತೆಗೆ ‘ಕುವೆಂಪು ವೈಚಾರಿಕ ಪ್ರಬಂಧ ಸ್ಪರ್ಧೆ’ಯನ್ನು ಅಂತೆಯೇ ‘ಶಂಬಾ ಜೋಷಿ ಸಂಶೋಧನಾ ಪ್ರಬಂಧ ಸ್ಪರ್ಧೆ’ಯನ್ನು ರೂಪಿಸಲಾಗಿತ್ತು. ಅಲ್ಲಿ ಬಹುಮಾನ ಪಡೆದ ಲೇಖನಗಳು ಕೂಡ ಪ್ರಕಟವಾಗುತ್ತಿರುವುದು ಸಂತಷಕರ. ಈ ಸ್ಪರ್ಧೆಗಳನ್ನು ಏರ್ಪಡಿಸಿದ್ದಕ್ಕೆ ಉತ್ತೇಜಿಸಿದ್ದ ಆಗಿನ ಕುಲಪತಿಗಳಾದ ಪ್ರೊ. ಎಚ್.ಜೆ. ಲಕ್ಕಪ್ಪಗೌಡರಿಗೂ, ಕುಲಸಚಿವರಾಗಿದ್ದ ಪ್ರೊ. ಕೆ.ವಿ. ನಾರಾಯಣ ಅವರಿಗೂ ಹಾಗೂ ಈಗ ಈ ಕೃತಿಗಳು ಪ್ರಕಟವಾಗಲು ದಾರಿ ತೋರಿದ ಪ್ರೊ. ಎ. ಮುರಿಗೆಪ್ಪ ಅವರಿಗೂ ನಮಿಸುವೆ. ಪ್ರಸಾರಾಂಗದ ನಿರ್ದೇಶಕರೂ ನನ್ನ ಮಿತ್ರರೂ ಆದ ಪ್ರೊ. ಎ. ಮೋಹನ ಕುಂಟಾರ್ ಅವರ ಜೊತೆಯಲ್ಲೇ ಪ್ರಕಟಣ ಕಾರ್ಯವನ್ನು ಸುಗಮಗೊಳಿಸಿದ ಶ್ರೀ ಬಿ. ಸುಜ್ಞಾನಮೂರ್ತಿಯವರನ್ನು ನೆನೆಯುವೆ. ಮುಖಪುಟಕ್ಕೆಂದು ಅರ್ಥಪೂರ್ಣವಾದ ಚಿತ್ರ ಕಲಾಕೃತಿಯನ್ನು ನೀಡಿರುವ ಸುಚಿತ್ರ ಲಿಂಗದಳ್ಳಿ, ಮುಖಪುಟ ವಿನ್ಯಾಸವನ್ನು ರೂಪಿಸಿದ ಶ್ರೀ ಕೆ.ಕೆ. ಮಕಾಳಿ, ಹಾಗೆಯೇ ಡಿ.ಟಿ.ಪಿ. ಮಾಡಿದ ಶ್ರೀಮತಿ ಎ. ನಾಗವೇಣಿ ಮತ್ತು ಜೆ. ಬಸವರಾಜ ಅವರನ್ನು ಸ್ಮರಿಸುವೆ.

ಮೊಗಳ್ಳಿ ಗಣೇಶ್
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ