ಎರಡೆಂದರೆ ಎರಡೇ ಕವಲು
ಮೂರಾಗದು
ಒಂದಾಗಲಿ ಎರಡಾಗಲಿ ಎಂದರದು ಕನಸು
ಒದಗುವುದು ಆಶ್ರಯಿಸಿದ ಬಸಿರು.

ಹೇಳಿದಂತೆ ಕೇಳುವ,
ಕೇಳದ ಕವಲೆಂಬಂತೆ
ಕವಲುಗಳ ವಿಧ;
ಈಗ ಹೆತ್ತೊಡಲ ನಿಯಂತ್ರಣವಿಲ್ಲ
ಅದು ನಿತ್ರಾಣ,
ಸಿಕ್ಕಷ್ಟು ಬಾಚಿಕೊಳ್ಳುವ ಅವಸರ
ಕವಲುಗಳಿಗೆ.

ಕದಿಯಲಾಗದ್ದು ಪ್ರೀತಿ;
ಘನಮೌನಕ್ಕೆ ಅಲ್ಲಿ ಪ್ರತೀತಿ,
ಜವ್ವನಕೆ ಜವ್ವನವೇ ಕಾಂತಿ,
ಮುಪ್ಪಿಗೆ ಮುಪ್ಪೇ ಶಾಂತಿ.

‘ಕವಲಿಗೆ ಕವಲು ಬೇರಲ್ಲ
ಕರುಳ ಕುಡಿಗಳವು’
ಎಂದೆನಲು ನಾಚಿಕೊಂಡಿತು
ಅಲ್ಲೇ ಇದ್ದ ಹೂವು.