ಪಾಚಿಗಟ್ಟಿದ ಬಂಡೆಗಳ ಮೇಲೆ
ವೀಚಿಗಳ ರುದ್ರನರ್ತನ!
ಹೃದಯದೊಳಗೆ
ಬೆಚ್ಚನೆಯ ಅನುಭವ
ನುಚ್ಚುನೂರಾಗಿ ಹರಡಿದ ಹನಿಮುತ್ತುಗಳು
ಮಾತಿಲ್ಲ ಮೌನ; ಅಲ್ಲ ಮೌನವೇ ಮಾತು!
ಚಾಚೂ ತಪ್ಪದೆ ಅತ್ಯಲ್ಪವನ್ನೂ
ಹೊರತಳ್ಳುವ ಬಿಚ್ಚು ಮನದ ನಿಸ್ವಾರ್ಥ,
ಸಚ್ಚರಿತ ರತ್ನಾಕರ ನಿತ್ಯಸ್ವಚ್ಛ
ಹೆಚ್ಚಿಲ್ಲ, ಹುಚ್ಚಿಲ್ಲ…
ಯಾವುದೇ ಮುಚ್ಚು ಮರೆಯಿಲ್ಲ
ಸ್ವಚ್ಛಂದ ಪವನ, ಸಂಗೀತಧಾರೆ
ನಿಸರ್ಗದ ವರ
ಹಚ್ಚಹಸಿರಿನ ವಸುಧೆ ಇತ್ತ
ನಿಚ್ಚ ರಂಪದ ರತ್ನಾಕರ ಅತ್ತ
ಅಂಚಿನಲಿ ಕುಳಿತವಗೆ ಅಡಿಗಡಿಗೆ ಕೌತುಕ
ರವಿ-ರತ್ನಾಕರರ
ನಿತ್ಯಾನುಷ್ಠಾನ, ಸತ್ಯಾನುಸಂಧಾನ, ಸಿಹಿಚುಂಬನ!
ಮತ್ತೊಮ್ಮೆ ಮಗದೊಮ್ಮೆ
ಕರಿಬಂಡೆಗಳಿಗೆ ರಾಚಿ
ನಾಚಿ ತಲೆತಗ್ಗಿಸುವ
ಸಾಲುಸಾಲು ಹಾಲುವೀಚಿಗಳು
ರತ್ನಾಕರ- ದಿವ್ಯಮೌನ, ಘನಗಾಂಭೀರ್ಯ
ತಿಳಿಲಾಸ್ಯ, ರಮ್ಯಭಾಷ್ಯ!