ಮುಂಜಾನೆ ಮಂಜುಹನಿ ತುಂತುರಿನ ಮಳೆಯಲ್ಲಿ
ಇಂದ್ರಚಾಪದ ಸೊಬಗು ಕಣ್ಗೂಡಿನೊಳಗೆ
ಕಪ್ಪು ಕಂಬಳಿ ಹೊದ್ದು ಹಾಲ್ನಗುವ ನಕ್ಕಾಗ
ಬಣ್ಣಬಣ್ಣದ ಕನಸು ಎದೆಗೂಡಿನೊಳಗೆ

ಎಷ್ಟು ಮುಂಜಾವುಗಳು ಎಷ್ಟು ಬಗೆ ಭಾವಗಳು
ಮನತುಂಬ ಚಿತ್ತಾರ ಚೆಲುವು ಒಲವು
ಚಿಲಿಪಿಲಿಯ ಕಲರವದಿ ಮಧುರ ಸಖ್ಯದ ಮೋಡಿ
ಹೃದಯ ಭಿತ್ತಿಯಲೆಲ್ಲ ಕಲೆಯ ಬಲೆಯು

ಮುದದಿ ವರುಷಗಳಿಂದ ಜೊತೆಯಾಗಿ ನೇಸರನ
ಹೊನ್ನ ಬಿಸಿಲಲಿ ಮಿಂದ ಪ್ರೇಮಪಕ್ಷಿ
ಅಗಲಿ ಸಾಗಿತು ಏಕೆ?; ಮನತುಂಬ ಕನವರಿಕೆ
ಒದ್ದೆಯಾಗಿಹ ಕೆನ್ನೆ ಮೂಕಸಾಕ್ಷಿ!

ಕಡಿದ ತಂತಿಯ ಮೀಟಿ ನಾದ ಹೊಮ್ಮಿಸುವಾಸೆ
ಮೂಡಿಬಂದರೆ ಏನು ಮನದತುಂಬ?
ಕರದೊಳಗೆ ಸೇರಿತೆ ಹುಣ್ಣಿಮೆಯ ಇರುಳಿನಲಿ
ತಿಳಿಗೊಳದಿ ನಗುವಂಥ ಚಂದ್ರಬಿಂಬ?!