ಗಿಟ್ಟಿಸಿಕೊಳ್ಳುವ ಗಟ್ಟಿಗರು
ಬಿಕರಿಗಿಟ್ಟಿದ್ದಾರೆ ತಮ್ಮ
ಚರಿತ್ರೆಗಳ ಮಾರುಕಟ್ಟೆಯಲಿ
ಬೆಳ್ಳಿ ಪುಟದಲಿ ಹೊಳೆವ
ಚಿನ್ನದ ಅಕ್ಷರಗಳ ಸಾಲು
ತೆರೆದ ಸತ್ಯದ ಬಾಗಿಲಿಗೆ
ಸುಳ್ಳಿನ ಹಸಿರು ತೋರಣ
ಒಳಹೊಕ್ಕು ಅದ್ಬುತವೆಂದು
ಮರುಳುಗೊಳ್ಳುವ ಜನ
ಮರೆತಿದ್ದಾರೆ ತಮ್ಮ ಚರಿತ್ರೆಯನ್ನೇ

ಮಣ್ಣ ಕಣಕಣದಲಿ
ಬೆವರ ಹನಿಗಳ ಬರೆದು
ದುಡಿದ ಫಲವು ದಕ್ಕದೆ
ಕೊಡುವ ಕೈ ಕಾಸಿಗೆ
ದೊರೆಗಳ ಅಂಗಲಾಚುವ
ದೇಹಗಳ ಚರಿತ್ರೆ
ಬಿಚ್ಚಿಕೊಳ್ಳುತ್ತವೆ
ಸರಿಹೊತ್ತಿಗೆ
ಮುಲುಗುವ ಹೆಗಲುಗಳೊಳಗೆ
ಮೂಟೆ ಹೊತ್ತು
ಬೆನ್ನುಗಳೊಳಗೆ

ಧರ್ಮಭಾರ ಹೊತ್ತ ಮುಂದಾಳುಗಳು
ಮಾನವ ಕುಲದ ಶಾಂತಿಗಾಗಿ
ಹೊತ್ತಿಸಿದ ಯಜ್ಞಕುಂಡದಲಿ
ಚಾಚಿದ ಮತೀಯ ಟಂಕ ನಾಲಗೆ
ಮುಸ್ಸಂಜೆಗೆ ರೊಯ್ಯನೆ ರಾಚಿ
ತಣ್ಣನೆಯ ತಾವು ಬಯಸಿ
ಹಲುಬುತ್ತಿರುವವರ
ಬದುಕಿಗೆ ಷರಾ ಬರೆದು
ಚರಿತ್ರೆಗೆ ಸಾಕ್ಷಿಯಾಯಿತು
ಬೂದಿ

ಯಾರೋ ಹೂಡುವ
ದಾಳಿಗಳಿಗೆ ಬಲಿಯಾದರು
ಹೇಳ ಹೆಸರಿಲ್ಲದವರು
ದಾಖಲಾಗದ ಇತಿಹಾಸದಲಿ
ಎಂದೆಂದೂ ನಂದದೆ ಬೆಳಗಿ
ಕರ್ಪೂರವಾದವರ ಚರಿತ್ರೆ
ಬರೆಯುವವರಾರು?
ಬರೆಯುವ ಗೀಳಿಲ್ಲದವರಿಗೆ
ಚರಿತ್ರೆಯೇ ಇಲ್ಲ!