ಕಣ್ಣು ತೆರೆಯಲೇ ಭಯ
ಹೆದರಿ ಮಂಜುಗತ್ತಲೆಗಲ್ಲ
ಬೆಳಕಿಗೆ ಕೊಡಬೇಕಾದ
ಉತ್ತರದಿಂದ
ನೆತ್ತಿ ಸೆರಗು ಜಾರದಂತೆ
ಮನೆ ಹೊಸ್ತಿಲನೊಂದಿಗೆ
ಹೃದಯಕ್ಕೂ ವೇಳೆ
ಬಡಿಸಿಕೊಂಡ ದಿನದಿಂದ

ಗಂಡನ ಹೆಸರ‍್ಹೇಳಿ
ತನ್ನನ್ನೇ ಮರೆತ ಮರೆವು
ತಣ್ಣನೆಯ ಕಣ್ಣಿಗೆ
ಮರೀಚಿಕೆಯಾದ ಕನಸುಗಳು

ಬೆಳದಿಂಗಳ ಬಯಕೆಗಳ
ಸುಟ್ಟ ಕಾಮಕೇಳಿಯ ರಾತ್ರಿಗಳು
ಸಾಂತ್ವಾನ ಹೇಳಲರಿಯದ ಮೂಲೆಗೆ
ಅರ್ಥವಾಗದ ನಿವೇದನೆ

ಚುಕ್ಕೆಗಳ ನೋಡಿ ನೋವ
ಮರೆತಾಳೆಂದರೂ
ಮುಗಿಲ ಮರೆಮಾಚಿದ ಮಾಳಿಗೆ
ಯಾತನೆಯ ಮೌನದ ಪುಟಕ್ಕೆ

ಸ್ವಚ್ಛಂದ ಬಯಸಿ ಗೆಳತಿ
ಬರೆದಿಟ್ಟು ದಿನಚರಿ.
ಧರಿಸಿದ್ದೆಲ್ಲವ ಕಳಚಿ
ಹಂಡೆ ಕಟ್ಟೆಗಿಟ್ಟು

ಬೆನ್ನ ಮೇಲೆ ನಿರಾಳ
ಹೆರಳರಾಶಿ ಚೆಲ್ಲಿ
ಹಾಯೆನಿಸುವ
ಬಿಸಿ ನೀರಿನ ಆವಿಯೊಂದಿಗೆ
ತನ್ನ ಬಿಡುಗಡೆ
ಇಡೀ ಜಗತ್ತು
ಬಚ್ಚಲು ಮನೆಯಾದಂದು!