ಪುಟ್ಟ ಪುಟ್ಟ ಹೆಜ್ಜೆ ಇಟ್ಟು,
ಏಳುವ ಮುನ್ನವೇ ಜಾರಿ ಬಿದ್ದು
ಬಣ್ಣದ ಲೋಕದ ಮೋಹದಲ್ಲಿ ಸಿಲುಕಿ,
ಎಲ್ಲವನ್ನು ಹಿಡಿಯುವ ಆಸೆಯಲ್ಲಿ,
ನಾನು ನಡೆಯುತ್ತಲೇ ಇದ್ದೆ

ಜಾತಿ ಗೋಡೆಗೆ ಕನ್ನ ಹಾಕಿ
ಆಚೆಮನೆ ತಾತನ ಮಡಿಲಲ್ಲಿ
ಆಂಬೋಡೆ ರುಚಿಗೆ ಮಾರೂ ಹೋಗಿ
ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ
ನಾನು ನಡೆಯುತ್ತಲೇ ಇದ್ದೆ

ಶಾಲೆಯೆಂಬ ರೋಚಕ ಕಥೆಗೆ,
ದಿನಕ್ಕೊಂದು ಪಾತ್ರವಾಗಿ
ಪುಸ್ತಕ ಮೂಟೆ ಹೊತ್ತುಕೊಂಡು
ಮಿಠಾಯಿ ಆಸೆಯಲ್ಲಿ
ಆಟಿಕೆಗಳನ್ನು ನನ್ನದಾಗಿಸಲು,
ನಾನು ನಡೆಯುತ್ತಲೇ ಇದ್ದೆ

ಮಗುವಲ್ಲ ನಾನು ಇನ್ನು
ಸುಂಕವು ಇಲ್ಲ, ಮಿಠಾಯೂ ಇಲ್ಲ
ಆಟ, ಪಾಠ, ಮೇಸ್ಟ್ರರ ಕಾಟ
ಲೋಕವೇ ಬೇರೆ ಬಣ್ಣ
ಬೇಡ ಬೇಡವೆಂದುಕೊಂಡು
ಶಾಲೆಗೆ ನಾನು ನಡೆಯುತ್ತಲೇ ಇದ್ದೆ

ಬಂತು ಹೆಜ್ಜೆಗೆ ಹಂಸ ಕಳೆ
ಮಾತಿನಲ್ಲೊಂದು ನಾಚಿಕೆ ಬೆಲೆ
ಅಲ್ಲಿ ಬೇಡ, ಇಲ್ಲಿ ಬೇಡ
ಮಾಡಿದೆಲ್ಲವೂ ಸರಿಯಾದರೂ ತಪ್ಪೆ?
ಹೋಗಬಾರದೆಂದು ಕೊಂಡು ತಿಳಿದು,
ತಿಳಿಯದೆ ಆತನಲ್ಲಿಗೆ
ನಾನು ನಡೆಯುತ್ತಲೇ ಇದ್ದೆ

ಅವನ ಕಣ್ಣಿನ ಕಪ್ಪು ಚೆಂದ,
ನಗುವಿನ ನಡುವೆ ಹೊಳೆಯುವ ಹಲ್ಲುಗಳು ಅಂದ
ಮತ್ತೆ ಮತ್ತೆ ನೋಡಿ ನೋಡಿ
ಮುಗಿಯದೆ ಆಸೆ, ಹಂಬಲ,
ಆತ ಬಂದಾನೋ ಎಂದು
ಮರದ ಮುಂದೆ, ತೋಟದ ಹಿಂದೆ,
ನಾನು ನಡೆಯುತ್ತಲೇ ಇದ್ದೆ!
ಮದುವೆಯೆಂಬ ಹೊಸ ಹೆಜ್ಜೆ ಇಟ್ಟು,
ಸಂಸಾರ ಬಂಡಿ ಎಳೆದುಕೊಂಡು,
ಕಾತುರ, ಆತುರ, ಸಂಭ್ರಮದಿಂದ..
ಮಕ್ಕಳ ಅಲ್ಲಿ ಇಲ್ಲಿ ಕೂರಿಸಿಕೊಂಡು
ಕಿಲಕಿಲ ನಗುವಿನೊಂದಿಗೆ,
ಬಳಲಿಕೆ ಮರೆತು ನಾನು ನಡೆಯುತ್ತಲೇ ಇದ್ದೆ

ಕಾಸು ಎಣಿಸಿ, ಎಣಿಸಿ
ಮನೆಯ ಕಟ್ಟಿ, ಮಕ್ಕಳ ಸೇರಿಸಿ
ಹಣದ ಹೊಳೆ ಕಡಲ ಸೇರಿ,
ತೇಲಿ ತೇಲಿ ಕಾಮನಬಿಲ್ಲಾಗಿ
ಕನಸುಗಲೆಲ್ಲಾ ಬಣ್ಣ ತಾಳಲು
ನೋಡು, ನೋಡುತ್ತಾ, ನಾನು ನಡೆಯುತ್ತಲೇ ಇದ್ದೆ

ನಡೆದು ನಡೆಯ ದಡ ಸೇರಿದೆ.
ನಿಧಾನವಾಗಿ, ಪ್ರಶಾಂತವಾಗಿ
ಹೆಜ್ಜೆಗೆ ಹೆಜ್ಜೆಯಿಟ್ಟು, ನೆರವನ್ನು ಕೈಯಲಿಟ್ಟು
ಇಂದು ನೆನ್ನೆಯ ಕಾದಾಟದಲ್ಲಿ,
ಸೋಲಲಾರೆ ಎಂದು ಕೊಂಡರೂ
ಬಳಲಿದ ಕಾಲುಗಳ ಕೈಬಿಟ್ಟರೂ
ನಾನು ಅನಂತಯಾನದಲ್ಲಿ ನಡೆಯುತ್ತಲೇ ಇದ್ದೆ