ಆಚರಿಸುವುದು ಬೇಡವೆ ದೀಪಾವಳಿ
ಸೂರ್ಯ ಬಂದನು ಚಂದ್ರನ ಬಳಿ
ಆಯಿತು ಎಂದನಲ್ಲಾ ಎಷ್ಟು ಸಾರಿ
ಮತ್ತೇಕೆ ಮಾಡಲಿಲ್ಲಾ ತಯಾರಿ

ಕೇಳುತ್ತಲೆ ಚಂದ್ರನು ನಕ್ಕು
ಈ ಸತಿ ಮುರಿಯುವೆ ನಿನ್ನ ಸೊಕ್ಕು
ನೋಡು ರಾತ್ರಿಯ ದೀಪಾವಳಿ ಹೇಗೆ ಎಂದು
ಬೆಚ್ಚನೆಯ ಹಗಲಿನಿಂದ, ಶಾಂತ ಇರುಳಿಗೆ ಬಂದು

ಬೆಳಗಿಸುವವನ ಮುಂದೆ ಸವಾಲೇ?
ಮುಳುಗಿದ ಸೂರ್ಯ ಸಿಡುಕುತ್ತಲೆ
ಬೆಳಕಿನ ಆಟದಲ್ಲಿ ನಾನೇ ನಿಪುಣ,
ನಿಬ್ಬೆರಗಾಗಬೇಕು ದೀಪಾವಳಿ ನೋಡಿ ಬಣ

ಬೆಳಗಾಗುತ್ತಲೆ ದೀಪಾವಳಿ ಶುಭದಿನದಂದು,
ಸಮುದ್ರ ಗರ್ಭದಲ್ಲಿ ಮಿಂದು,
ಮೇಲೆದ್ದನು ರವಿ, ಸಂಭ್ರಮದಿಂದ,
ನೆನಸಿಕೊಂಡು ತನ್ನ ಬೆಳಕಿನ ಒಪ್ಪಂದ.

ಚೆಲ್ಲಿದ ಎಲ್ಲೆಲ್ಲು ಬಂಗಾರ,
ಮಾಡಿದ ಬೆಳಕಿನ ಚಿತ್ತಾರ
ಹೂವು, ಹಣ್ಣು, ಬೆಟ್ಟ ಮರಲತೆ…
ಎಲ್ಲ ಆದವು ದೀಪಾವಳಿ ಹಣತೆ

ನನ್ನಿಂದಲೇ ದೀಪಾವಳಿ ಸುಗ್ಗಿ
ಮತ್ತೂ ಪ್ರಕಾಶಿಸಿದ ಸೂರ್ಯನು ಹಿಗ್ಗಿ
ಹೆಚ್ಚ ತೊಡಗಿತ್ತು ಭೂಮಿಗೆ ತಾಪ
ಜನ ಹಾಕಿದರು ಸೂರ್ಯನಿಗೆ ಶಾಪ

ದೀಪಾವಳಿಗೇಕೆ ಇಷ್ಟು ಶೆಕೆ,
ಸೂರ್ಯನಿಗೆ ಇಷ್ಟು ಸೊಕ್ಕು ಬೇಕೆ
ಅಡಗಬಾರದೆ ಮೋಡದ ಮರೆಯಲ್ಲಿ
ಬಿಡಬಾರದೇ ದೀಪಾವಳಿ ಆಚರಿಸಲು ನೆಮ್ಮದಿಯಲ್ಲಿ

ರವಿಗು ಏರಿತು ಕೋಪ,
ಮುರಿದ ತನ್ನ ಬೆಳಕಿನ ಸಲ್ಲಾಪ
ಸಂಜೆ ಯಾವುದನ್ನು ಕಾಯದೆ ಮುಳುಗಿ,
ಚಂದ್ರನು ಗೆದ್ದಾನು ಎಂದು ಮರುಗಿ.

ಇರುಳಿನ ಗರ್ಭವ ಸೀಳಿ,
ಬಂದನು ಶಶಿ ಚುಕ್ಕಿಗಳ ಬಳಿ
ಹಿಗ್ಗಿದ, ಬೆಳ್ಳಿ ಬೆಳಕನ್ನು ಪ್ರಕಾಶಿಸಿ,
ಕುಣಿದಾಡಿದ ಚುಕ್ಕಿಗಳ ದೀಪ ಬೆಳಗಿಸಿ.

ನಾನೇ ಗೆದ್ದೆ ಎನ್ನುವಷ್ಟರಲ್ಲಿ,
ಸದ್ದು, ಗದ್ದಲ ಎಲ್ಲೆಲ್ಲು
ಇಣುಕಿದ ಒಮ್ಮೆ ಭೂಮಿ ಮೇಲೆ,
ಅಯ್ಯೋ, ಎಲ್ಲೆಲ್ಲೂ ಪಟಾಕಿ ಮಾಲೆ ಮಾಲೆ!

ದೀಪದ ಮಧ್ಯೆ ಸಿಡಿಮದ್ದಿನ ಅಬ್ಬರ,
ಜನರ ದೀಪಾವಳಿ ಭಯಂಕರ
ಶಶಿ, ಸದ್ದು ಕೇಳಲಾರದೆ ಓಡಿದ,
ಮೋಡದ ಮರೆಯಲ್ಲಿ ಅಡಗಿದ.

ಹೇಗೋ ಮುಗಿಯಿತು ದೀಪಾವಳಿ!
ಮತ್ತೆ ಬಂದ ಸೂರ್ಯ ಚಂದ್ರನ ಬಳಿ
ಯಾಕೆ ಸುಮ್ಮನೆ ನಮ್ಮಲ್ಲಿ ಹೋರಾಟ
ಜನರು ಕಲಿಸಲಿಲ್ಲವೇ ನಮಗೆ ಪಾಠ

ಅಷ್ಟರಲ್ಲಿ ಕೇಳಿತ್ತು ಅಟ್ಟಹಾಸ
ಮುಂದೆ ನಿಂತಿದ್ದ ಮಾಲಿನ್ಯ ರಾಕ್ಷಸ
ಜನರ ದೀಪಾವಳಿಯಲ್ಲಿ
ಗೆದ್ದವನು ನಿಮ್ಮಲ್ಲಿ,
ನಾನಲ್ಲದೆ ಇನ್ಯಾರು, ಹೇಳಿ ಎಂದು!