ಓ ಮೇಘ
ನೀ ಸುರಿಸಿದ ಅದೆಷ್ಟೋ ಪನ್ನಿರ ಹನಿಗಳು
ಕಡಲ ಸೇರಿವೆ
ಅದೆಷ್ಟೋ ಹನಿಗಳು ಕಪ್ಪೆಚಿಪ್ಪಿನೊಳಗವಿತು
ಮುತ್ತಾಗಿವೆ
ಅದೆಷ್ಟೋ ಹನಿಗಳು ಮೈಮೇಲೆ ಬಿದ್ದು
ತಂಪೇರಿಸಿವೆ

ಓ ಮೇಘ
ನಾ ಎಷ್ಟೊಂದು ಸಲ ಆಕಾಶ ನೋಡಿದರೂ
ಅಲ್ಲಿ ನಿನ್ನೇ ಕಾಣುವೆ
ನಿನ್ನ ಚೆಲುವಿಗೆ ಮನಸೋತು ಪ್ರೇಮದ
ನೋಟ ಬೀರುವೆ
ಮಂದಾರ ಮುಗುಳುನಗೆಯ ಚೆಲ್ಲುವೆ

ಓ ಮೇಘ
ನಾನರಿಯಲಾರೆ ನಿನ್ನ ಮನಸ್ಸು ಹೇಗೋ ಏನೋ
ಬಹುಶಃ ನನ್ನಲ್ಲಿ ನಿನಗೆ ಭಾರೀ ಕೋಪವೆನೋ
ನಾ ನಿನ್ನ ಕಂಡಾಗೆಲ್ಲಾ ನೀ ಕೋಪದಲ್ಲಿ ಕಪ್ಪುಕಪ್ಪಾಗಿರುತ್ತೀ
ನೀ ನನ್ನ ಭಾವನೆಗಳಿಗೆ ಸ್ಪಂದಿಸದಿದ್ದರೂ ನಾನಿನ್ನ ಮೌನವಾಗಿ ಪ್ರೇಮಿಸುವೆ
ನನ್ನ ಅನನ್ಯ ಪ್ರೇಮ ಕಂಡೋ ಇಲ್ಲಾ ಕರುಣೆಯಲ್ಲೋ
ಒಮ್ಮೊಮ್ಮೆ ನಿನ್ನ ಕೋಪವೆಲ್ಲಾ ಕರಗಿ ಕರಗಿ
ತಡೆಹಿಡಿದಿದ್ದ ಪನ್ನೀರ ಹನಿಗಳನ್ನ ಪಟಪಟನೆ ಉದುರಿಸುತ್ತೀ
ಆ ಎಷ್ಟೋ ಹನಿಗಳನ್ನ ನನ್ನ ಬೊಗಸೆಯಲ್ಲಿ ಸಂಗ್ರಹಿಸಿದೆ
ಮೊದಲೇ ನೀ ಆಕಾಶ ದೀಪವಾಗುವಿಯೆಂಬ ದುಃಖದಲ್ಲಿ
ಸುರಿಸಿದ ಕಣ್ಣೀರು ಬೊಗಸೆಯಲ್ಲಿ ಸೇರಿತ್ತು
ಸಮ್ಮಿಲನಗೊಂಡ ನನ್ನ ಕಣ್ಣೀರನ್ನು ನಿನ್ನ ಪನ್ನೀರನ್ನು
ನಾ ಮೌನವಾಗಿ ಅಳುತ್ತಾ ಕುಡಿದೆ
ನನಗೆ ಗೊತ್ತು ನಾ ಅಳುವುದರಲ್ಲಿ ಅರ್ಥವಿಲ್ಲ

ಓ ಮೇಘ
ಕಟ್ಟಕಡೆಯಲ್ಲೊಂದು ನನ್ನ ಪುಟ್ಟ ಪ್ರಾರ್ಥನೆ
ನಾ ನಿನ್ನ ನೋಡಿದಾಗಲೆಲ್ಲಾ ನನಗಾಗಿ
ನಿನಗಾಗಿ ಹಂಬಲಿಸುವ ಈ ಮನಸ್ಸಿಗಾಗಿ
ಒಂದಿಷ್ಟು ಪನ್ನೀರ ಹನಿಗಳನ್ನ ಸುರಿಸಿಬಿಡು
ಸಾಕು ನನಗೆ ಆ ಹನಿಗಳಷ್ಟೇ ಸಾಕು
ಬದುಕಲು ಬದುಕಲ್ಲಿ ಆನಂದ ಕಾಣಲು