ನಡು ಮಧ್ಯಾಹ್ನದ ಬಿಸಿಲಿನಲ್ಲಿ
ಮುಕ್ಕಾಲು ತುಕ್ಹಿಡಿದ
ಕಿರ್ರನೆ ಸದ್ದುಮಾಡುತ ಸಾಗುವ
ರಾಯನ ಕಾಲದ ಸೈಕಲ್ಲು.
ಹೆಗಲಿಗೆ ಹರಿದು
ತೇಪೆ ಹಾಕಿದ ಹಸಿಬೆ,
ಬಹುಶಃ ಒಳಗೆ
ಏನೂ ಇದ್ದಿಲ್ಲ.

ಸೈಕಲ್ಲಿನ ಹಿಂದು ಮುಂದಿನ ಗಾಲಿ
ಅದಕೆರಡು ಕೋಲು,
ಕೋಲು ಹೊತ್ತಿದೆ ಅವನ ಕನಸುಗಳ ಪತಾಕೆ.
ಬಣ್ಣಬಣ್ಣದ ಪುಗ್ಗ
ಸಣ್ಣ ಹುಡುಗನ ದೊಡ್ಡ ಕಣ್ಣಲ್ಲಿ
ಸಣ್ಣ ಆಸೆ.
ಒಣಗಿದ ಬಾಯಲ್ಲಿ
ಬರೀ ಬಲೂನ್, ಬಲೂನ್….

ಆತ ಈಗ ರಸ್ತೆ ದಾಟಬೇಕಿದೆ
ಕ್ಲಿಷ್ಟ ರಸ್ತೆ,
ರಸ್ತೆ ತುಂಬಾ ಬರೀ ವಾಹನ
ಸರ್ ಬರ್ ಹರಿದಾಡುವ ಕಾರು,
ಬೈಕು, ಬಸ್ಸುಗಳಿಗೆ
ಏಕೋ ತಿಳಿಯಲೇ ಇಲ್ಲ
ಆ ಹುಡುಗನ ಸಿರಿಗೆ
ಇದ್ದಕ್ಕಿದ್ದಂತೆ ಏನೋ ಆಯ್ತು
ಬಿರ್ರನೆ ತುಯ್ದ ಗಾಳಿಯ
ರಭಸ ಹೇಳದೆ ಕೇಳದೆ
ಐದಾರು ಪುಗ್ಗವ ಕಿತ್ತೊಯ್ಯಿತು

ಕೈಯಲ್ಲಿ ಸ್ಟ್ಯಾಂಡಿಲ್ಲದ
ಸೈಕಲ್ಲು, ನಿಂತ ನಡು ರಸ್ತೆ,
ಏನೂ ತೋಚದಿಹ ಮನಸು,
ಹಾರಿಕೊಂಡು ಹೋಗಿ
ಕಾರು ಬೈಕಿನ ಗಾಲಿಗೆ ಸಿಕ್ಕಿ
ಒಡೆದ ತನ್ನ ಪುಗ್ಗವನ್ನೇ
ವಿಷಾದಭರಿತ ನೋವಿನಿಂದ ದಿಟ್ಟಿಸುತ್ತಿವೆ

ಸಣ್ಣ ಆಸೆಯ ದೊಡ್ಡ ಕಂಗಳ ತುಂಬ
ಆಕಾಶ ಕಂಬನಿಯಾಗಿ ಒಟ್ಟಾಡುತ್ತಿದೆ
ಆಚೆ ಬದಿಯ ರಸ್ತೆಯ ಮೇಲೆ
ನಿಂತ ನಾನು
ಏನೂ ಮಾಡಲಾಗದೆ
ಸುಮ್ಮನೆ ನಿಟ್ಟುಸಿರಿಟ್ಟೆ