ಎಲ್ಲ ಹೂಗಳಲು ಹುಟ್ಟುವ
ಹನಿ ಹನಿ ಜೇನಾಗು ಮನವೆ
ಎಲ್ಲ ಹೂಗಳನು ಅಪ್ಪಿ, ಮುದ್ದಿಸಿ
ಮಧು ಸವಿಯುವ ಜೀವಾತ್ಮ ಆಗು ಮನವೆ

ಅನಂತವಾಗು ಮನವೆ
ಎಲ್ಲ ದೇಶಗಳಿಗೂ ಒಂದೇ ದಿಕ್ತಟವಂತೆ
ಉದಯ ರವಿಯಾಗು ಮನವೆ
ಎಲ್ಲ ದೇಶಗಳಿಗೂ ಒಂದೇ ಬೆಳಕು ಬೆಳಗುವಂತೆ.

ವಾಯು ವರವಾಗು ಮನವೆ
ಎಲ್ಲ ಜನಜೀವಿಗಳು ಉಸಿರಾಡುವ ಗಾಳಿಯಂತೆ
ವಾಯು ಮಂಡಲವಾಗು ಮನವೆ
ಎಲ್ಲ ಪಕ್ಷಿಗಳು ಸೇರಿ ಹಾರಾಡುವಂತೆ

ಅವನಿಯಾಗು ಮನವೆ
ಎಲ್ಲ ಜೀವಿಗಳ ನೆಲೆಯಂತೆ
ಅವನಿಯಾಗು ಮನವೆ
ಎಲ್ಲ ವೃಕ್ಷ, ಬೆಟ್ಟ, ಖನಿಜಗಳ ಒಡಲಾಳದಂತೆ

ಅನಂತ ವಿಸ್ತೀರ್ಣ ಸಾಗರವಾಗು ಮನವೆ
ಎಲ್ಲ ಜಲಚರ, ಪ್ರಾಣಿ, ರೇಣು, ತಿಮಿಂಗಲಗಳು ವಾಸಿಸುವಂತೆ
ಅನಂತ ಆಳ ಅಬ್ಬಿಯಾಗು ಮನವೆ
ಕಲ್ಲು, ಪಾಚಿ, ಮುತ್ತು, ಹವಳ, ಮಾಣಿಕ್ಯಗಳು ಹೊಳೆವಂತೆ

ಇಂಪಾದ ಸ್ವರವಾಗು ಮನವೆ
ಎಲ್ಲರು ಸ್ವಾಧಿಸಿ ನಲಿಯುವಂತೆ
ತಂಪಾದ ಇರುಳಾಗು ಮನವೆ
ಎಲ್ಲರು ವಿವಶವಾಗುವ ಬೆಳ್ದಿಂಗಳಂತೆ

ವರವಾಗು, ಗೆಲುವಾಗು, ಸಾಧನೆಯ ಶಿಖರವಾಗು ಮನವೆ
ಎಲ್ಲರು ಅಪ್ಪಿ, ಕೂಡಿ ನಲಿಯುವಂತೆ
ಎಲ್ಲರೊಳಿತು ಒಂದಾಗು ಮನವೆ ವಿಶ್ವಮಾನವನಂತೆ.