ಎಲ್ಲಿಗೆ ಹೋಗುವೆ ಹೇ ಹಾದಿಗಾರನೆ
ನೀನೆಲ್ಲಿಗೆ ಹೋಗುವೆ
ಎಲ್ಲಿಗೆ ಎಂಬುದೇನು ಅರಿಯೆ
ಎದುರು ಹಾದಿಯನೇ ಹಿಡಿದು ಹೋಗುವೆ

ಎಲ್ಲಿಗೋ ಹೋಗುವ ಊರಲಿ ಯಾರಿರುವರೊ
ನಿನ್ನವರೆಂಬ ಕುಲದವರು
ಎಲ್ಲರು ಬಲ್ಲವರು, ಇರುವವರೇ ನನ್ನವರು
ಕುಲವೆಂಬ ತನವನ್ನು ಬಿಟ್ಟವರು

ಯಾವ ಕೆಲಸದಿ ಹೊರಟಿರುವೆ
ಏನು ಜಯಿಸಲು ಹೊರಟಿರುವೆ
ಯಾವ ಕೆಲಸವಾದರೂ ಸರಿಯೇ
ಏನಾದರು ಸಾಧಿಸೇ ತೀರಲು ಹೊರಟಿರುವೆ

ಎಲ್ಲಿಗೋ ಯಾವುದೋ ಊರಲಿ ಏನೋ ಸಾಧಿಸಲು ಹೊರಟ
ನಿನ್ನ ಕೈಯಲಿ ಏನಿಹುದಯ್ಯ ಶಕ್ತಿ
ಶಾಂತಿ, ಸಹನೆ, ಸ್ನೇಹ, ಛಲ, ಸಾಹಸ, ಒಲುಮೆ
ಗುರಿಗಳೆಂಬ ಅಸ್ತ್ರಗಳೇ ನನ್ನಯ ಯುಕ್ತಿ

ಹೇ ಹಾದಿಗಾರನೆ ಎಲ್ಲಿಂದ ಬಂದೆಯೋ
ಏನು ನಿನ್ನ ಹೆಸರು.
ತಾಯ ಒಡಲಿನಿಂದ ಬಂದಿರುವುದು ಗೊತ್ತಯ್ಯ
ಉಸಿರಿಗೂ ಹೆಸರಿದೆಯೇ? ಅರಿಯೆ-ಉಸಿರೆ ನನ್ನ ಹೆಸರು.