ಪ್ರೀತಿಯೊಂದು ಆರಾಧ್ಯದ ದೈವವಲ್ಲ
ಕೈಗೆ ತಾಗುವ ವಸ್ತುವಲ್ಲ
ಕಣ್ಣಿಗೆ ಅದು ಕಾಣುವುದೂ ಇಲ್ಲ
ಆದರೂ ಯೌವನಕ್ಕೆ ಅದೇ ದೈವ
ಅದನ್ನು ಕೈಲಿ ಹಿಡಿಯುವ ಹಂಬಲ
ಕಾಣುವಂತಹ ಕುತೂಹಲ

ಪ್ರೀತಿ ಸ್ನೇಹಕ್ಕಿಂತ ದೊಡ್ಡದೇನಲ್ಲ
ಮಮತೆ, ವಾತ್ಸಲ್ಯಗಳಿಗಿಂತ ಹತ್ತಿರವೇನಲ್ಲ
ಪ್ರಾಣದ ಒಡವೆಗಿಂತ ದೊಡ್ಡ ಸಂಪತ್ತೇನಲ್ಲ
ಆದರೂ, ಹರಯಕ್ಕೆ ಸ್ನೇಹವನ್ನೇ ಕಡೆಗಣಿಸುವ ಸಾಹಸ
ಮಮತೆ ವಾತ್ಸಲ್ಯಗಳನ್ನು ಮರೆಯುವ ಮನಸ್ಸು,
ಪ್ರಾಣದೊಡವೆಯನ್ನೇ ಒತ್ತೆಯಿಡುವ ಹುಚ್ಚು

ಪ್ರೀತಿ ಕಣ್ಣಿಲ್ಲದೆ ಹರಿಯುವ ವಾಹಕವೇನಲ್ಲ
ಬಂಡೆಯನ್ನು ಹುಡಿಮಾಡುವಷ್ಟು ಗಟ್ಟಿಯೇನಲ್ಲ
ಜೀವನದ ಮಹತ್ಸಾಧನೆಯಂತೂ ಅಲ್ಲವೇ ಅಲ್ಲ
ಅದು ಪ್ರೇಮಿಗಳನ್ನು ಕುರುಡಾಗಿಸುವ ಭ್ರಮೆ
ಬಂಡೆಯನ್ನು ಒಡೆಸುವ ಒಂದು ಸಾಧನ
ಜೀವನದ ಸಾಧನೆಯ ಒಂದು ಮೆಟ್ಟಿಲಷ್ಟೆ
ಯುವಕತೆಯ ಪಾಲಿನ ಕಲ್ಪನೆಯಷ್ಟೆ
ಆಲೋಚನೆಗೆ ಸಿಲುಕದ ಮಂಥನವಷ್ಟೆ
ಪ್ರೀತಿಯ ರೂಪದ ಪ್ರೇಮವಷ್ಟೇ ಈ ಹದಿನೆಂಟರ ಪ್ರೀತಿ.