ಹೌದು ಅವರಿಗೆ ಅದೇ ಹುಚ್ಚು
ದೇಶದ ಗಡಿರೇಖೆಗಳನ್ನು ಗುರುತಿಸಲು
ಮನುಷ್ಯನ ರಕ್ತದಿಂದ ಬಣ್ಣ ಹಚ್ಚುವ ಕೆಲಸ!

**

ಅಲ್ಲಿ ಮದ್ದುಗುಂಡುಗಳು ಮಾತನಾಡುತ್ತವೆ
ಕೇಕೆ ಹಾಕುತ್ತವೆ, ಮನುಷ್ಯನ ದೇಹ ಸೇರಿ
ರಕ್ತ ಚಿಮ್ಮಿಸಿ ರಂಗೋಲಿ ಹಾಕುತ್ತವೆ!

**

ಆ ರಾತ್ರಿಯ ಚಂದಿರ ಕೆಂಪಾಗಿದ್ದ
ಏಕೆಂದರೆ ಯುದ್ಧದಲ್ಲಿ ಹಾರಿದ ಗುಂಡು
ಚಂದಿರನ ಒಡಲು ಸೇರಿ ರಕ್ತಹೋಮ ಮಾಡಿತ್ತು!

**

ಹೌದು ಅದು ನಿಜವಾಗಲು ಮಾರಿಯ ಜಾತ್ರೆ
ಯಾರದೋ ಹರಕೆಗೆ, ಯಾರೋ ಜೀವತೆತ್ತು
ರಕ್ತ ನೈವೇದ್ಯ ಮಾಡಿ ದೇವಿಯ ಸಂತೃಪ್ತಿಗೊಳಿಸುತ್ತಾರೆ!

**

ಬೆಳ್ಳಂಬೆಳಿಗ್ಗೆ ಸತ್ತ ವೀರಯೋಧರ ಕಣ್ಣಲ್ಲಿ
ಹುಟ್ಟಿದ ಸೂರ್ಯ ಸಂಜೆ ಮೃತ್ಯುವಿನ ವಶವಾದ
ಯೋಧನ ಹೃದಯದಲ್ಲಿ ಮುಳುಗುತ್ತಾನೆ!

**

ದೇವರು ಗಲಿಬಿಲಿಗೊಳ್ಳುತ್ತಾನೆ
ಇವರನ್ನೆಲ್ಲಾ ಸೃಷ್ಟಿಸುವಾಗ ಅವಸರದಲ್ಲಿ
ಹೃದಯವನ್ನೇ ಮರೆತಿದ್ದೇನೆ ಎಂದು!