ಹೇಳಬಹುದಿತ್ತು ನೀನು ಒಂದು ಬಾರಿ
ಹೋಗಿ ಬರುವೆ ಕಾದಿರು ಎಂದು
ಕಾಯುತ್ತಿದ್ದನೇನೊ ನೀ ಬರುವವರೆಗೂ
ಏಕೊ ನಾನು ನಾನಲ್ಲವೆನಿಸಿತ್ತು
ಏಕೆಂದರೆ ನೀನು ನೀನಾಗಿರಲಿಲ್ಲಾ

ಹೇಳಲು ನಿನಗೂ ಬಿಂಕ
ಕೇಳಲು ನನಗೂ ಬಿನ್ನಾಣ

ನಮ್ಮನ್ನು ಮೀರಿ ಬೆಳೆದು ನಿಂತಿತ್ತು
ನಾವೇ ಕಟ್ಟಿ ನಾವೇ ಬೆಳೆಸಿದ್ದ
ಬಿಂಕ ಬಿನ್ನಾಣಗಳ ಹಿಮಗೋಡೆ

ಆದರೂ
ಕಣ್ಣು ಉಡುಕುವಾಗ
ಮನಸು ತಳಮಳಿಸುವಾಗ
ಮಾತಿಗೇಕೆ ಈ ಬಗೆಯ ಅಂಟುಮುಂಟು
ಕಂಡು ಕಾಣದವರಂತೆ
ಬರಿಯ ತಪ್ಪಿಸಿಕೊಳ್ಳುವ ಸೂತ್ರ
ಯಾರನ್ನೂ ಹುಡುಕುವ ನೆಪ
ಏನನ್ನೂ ಮರೆತನೆಂಬ ನೆವ

ಇರಲಿಬಿಡು
ನೆನಪ ಪುಟದಲ್ಲಿ ಭದ್ರವಾಗಿ
ಬದುಕ ಅಂಚಿಗೆ ಸಿಂಚನವಾಗಿ
ಕನಸ ಹಕ್ಕಿಯ ರೆಕ್ಕೆಯಾಗಿ

ಆದರೂ
ನಮ್ಮ ನಗುವಲ್ಲಿ ಮಾತಿನಲ್ಲಿ ನೋಟದಲ್ಲಿ
ಜೊತೆಯಾಗಿ ಸವೆಸಿದ ಹಾದಿಯಲ್ಲಿ
ಎಲ್ಲೆಂದರಲ್ಲಿ ಆವರಿಸುವುದು ನೆನಪು
ಮರೆಯಬೇಡ

ಎಂದಾದರೊಂದು ದಿನ ನಿನಗೆ
ಹೇಳಬೇಕೆನಿಸುತ್ತದೆ ಆದರೇನು
ಕೇಳಲು ನಾನಿರುವುದಿಲ್ಲ ನಿನ್ನೊಂದಿಗೆ
ಬದುಕ ಹಾದಿಗಳೆ ಹೀಗೇ ನಾ

ಕವಲು ಕವಲು ಕವಲು
ಅಥವಾ
ನಾವೆಂದರೆ ಹೀಗೇನಾ
ಬದುಕೆಂದರೆ ಹೀಗೇನಾ

ಸ್ಥಿರವಾಗಿದೆಯಲ್ಲಾ ಹಿಮಗೋಡೆ
ಕರಗಲಿಲ್ಲ ಕಾಲಗರ್ಭದಲ್ಲಿ
ಉದಯಿಸಲಿಲ್ಲಾ ನಗುವೆಂಬ ಸೂರ್ಯ