ನೀನು ನಡುಗುವ ಕೈಗಳನ್ನು ಹೊಂದಿದ್ದೀಯ
ಎಲ್ಲ ಮಾತೂ ಬೇಸರದ ತಂತುಗಳು
ಅವು ನಿನ್ನ ದಣಿದ ಮೌನ ಚಡಪಡಿಸುವಂತೆ
ಶಪಿಸುತ್ತ ಕಾಡುತ್ತವೆ.

ದೈವವೇ, ನನ್ನ ಮುಖವನ್ನು ಕೆರೆಯಲ್ಲಿ ಮುಳುಗಿಸಿ
ನಿನ್ನ ಹಸಿರು ಸ್ಪರ್ಶದಿಂದ ಕಣ್ಣುಗಳಲ್ಲಿ
ಬೆಳಕನ್ನು ತುಂಬಿ, ಈಗ ಕಮಾನಿನಂತೆ ನಿರ್ಲಿಪ್ತವಾಗಿ
ನನ್ನ ಒಳಗು ಹೊರಗುಗಳ ಮಧ್ಯೆ
ಮರಗಳ ಎಲೆಗಳೆಲ್ಲ ಹೆಣೆದುಕೊಂಡು
ದಟ್ಟವಾಗಿ ಗಿಜುಗುಡುವ ಮರಗಳಲ್ಲಿ ನನ್ನ ಧ್ವನಿಯನ್ನು
ಬಚ್ಚಿಟ್ಟೆಯಾ?

ನಾನು ಅಜೀರ್ಣವಾದ ಪುಟಗಳಲ್ಲಿ
ಹುಡುಕಿ, ಜಿರಲೆ ತುಂಬಿದ ರೇಡಿಯೋಗಳನ್ನು ಕುಟ್ಟಿ
ಆಲಿಸಿ, ನನ್ನ ಚರ್ಮ ರೆಪ್ಪೆಗಳನ್ನು ಸೀಳಿ ಅರಸುತ್ತಿರುವೆ

ತ್ವರಿತವಾಗಿ ನನ್ನನ್ನು ಹೊಕ್ಕು
ನಾನು ಕ್ಷಣಕಾಲ ತತ್ತರಿಸಿದರೂ ಕೂಡ
ಯಾವ ಅರ್ಥ ತನ್ನ ಸಂಯಮದಿಂದ
ನನ್ನನ್ನು ಪೂರ್ಣಗೊಳಿಸುತ್ತದೋ
ಅದು ಪ್ರೀತಿಯಾಗಿ ಅಥವಾ
ನನ್ನ ಒಳಗಿನ ಹಸಿದ ಭೂತಗಳಿಗೆ
ನೇಣಿನ ಕುಣಿಕೆಯಾಗಿ
ನಾನು ಸಂಜೆ ನಡೆದು ಹೋಗುವ ದಾರಿಯಲ್ಲಿ
ಕಾಣಿಸಲಿ.