ನಿಮಿಷ ಬಂದಿದ್ದಾಳೆ
ತೀರ ಸಿನಿಮಾ ನಟಿಯರ ನಾಚಿಸುವ ರೂಪ
ಅವಳ ಬಾಲ್ಯ ಸ್ನೇಹಿತ ನಾನು
ತೀರದ ಬಯಕೆಗಳ ತಲೆತುಂಬಿಸಿಕೊಂಡ ಭೂಪ
ಪುಸ್ತಕದೊಂದಿಗೆ ಅವಳ ಶತಪಥ
ಬಹುಶಃ ಮೌನ ಮುರಿಯಲಾರೆನೆಂಬ ಶಪಥ!
ನನಗೊ, ಅವಳ ಇನಿದನಿಗೆ ಕಿವಿಯಾಗುವ
ಅದನ್ನೆಲ್ಲ ಕವನವಾಗಿಸಿ ಕವಿಯಾಗುವ ತವಕ
ಅದೃಷ್ಟ ಚೆನ್ನಿತ್ತು, ಹುಡುಗಿ ನನ್ನೆಡೆಗೆ ಕಣ್ಣಾದಳು ಎಂಥ ಸಡಗರ
ತೊಂಡೆ ತುಟಿ, ಸಿಂಹ ಕಟಿ, ಮೂಗು ಸಂಪಿಗೆ…
ಹುಟ್ಟಿದ ಮೇಲೆ ಹುಡುಗಿಯರ ಕಾಣದವರಂತೆ, ಕಾಣ ಹತ್ತಿದೆ
ಅಲ್ಲಲ್ಲಿ ಸೌಂದರ್ಯೋಪಾಸಕನಾದೆ ಎಷ್ಟಾದರೂ ಕುರುಡನಲ್ಲವಲ್ಲ!
ಸಿಡುಕಿ (?) ಬೆನ್ನು ತಿರುಗಿಸಿದಳು
ಎಲ್ಲ ಗಂಡಸರೂ ಇಷ್ಟೇ ಅನಿಸಿರಬೇಕು
ನಾನು ಅಷ್ಟೇ ಆಗಲು ಸಿದ್ಧನಿರಲಿಲ್ಲ
ಇದಕ್ಕೆ ಮತ್ತೂ ಒಂದು ಕಾರಣ
ಬಾಲ್ಯದಲ್ಲಿ ನನ್ನೊಂದಿಗೆ ಆಟವಾಡಿ, ಕುಣಿದು ಬೆಳೆದವಳು ನಿಮಿಷ
ಆಸೆ ಯಾರಪ್ಪನ ಮನೆಯದ್ದು?- ಮಾತನಾಡಿಸುವ ಆಸೆ
ಅಂತಹ ಆಸೆ ನನ್ನನ್ನು ಅವಳ ಬಳಿ ಸಾಗಿಸಿಬಿಟ್ಟಿತು
ಯಾವಾಗ ಬಂದೆ? ಯಾರೊಂದಿಗೆ ಬಂದೆ? ಈಗ ಏನು ಮಾಡುತ್ತಿರುವೆ?
ನಿಮಗೆ ಹೇಳಿದ್ದು ಮೂರು, ಆಕೆಯ ಬಳಿ ನೂರು
ಎಲ್ಲ ನೂರು ಪ್ರಶ್ನೆಗಳನ್ನು ಕೇಳುವಾಸೆ ಆದರೆ…
ನಾನೇ ಮಾತನಾಡಿಸುವ ಮೊದಲೇ ತಲೆತಗ್ಗಿಸಿ, ನಿಮಿಷ ಮೌನಿಯಾದಳು
ಇದು ಯಾವ ಸೀಮೆಯ ಹುಡುಗಿ? ಇದು ಎಂಥ ಹೊಸ ಬಗೆ?
ಜರ್ರನೆ ಇಳಿಯಿತು ಅವಳೆಡೆಗಿನ ನನ್ನ ನೋಟ
ಅದರ ಜಾಗದಲ್ಲೊಂದು ತಣ್ಣನೆ ಹತಾಶೆ
ದಂತದ ಬೊಂಬೆಗೆ ಜೀವವಿದೆ ಭಾವವಿಲ್ಲ, ಮೌನ ಗೌರಿ
ಇದ್ದರೂ ಅದನ್ನು ಶ್ರುತಪಡಿಸುವರೇ ಮಾತಿಲ್ಲ, ಏಕೆ ಈ ರೀತಿ?
ಬಾಲ್ಯದ ನೆನಪುಗಳನ್ನೆಲ್ಲ ಛಿದ್ರವಾಗಿಸುವ ಬಗೆ
ಅವಳ ಸಾಲಿಗೆ ಸೇರಲು ನನಗ್ಯಾಕೊ ಇಷ್ಟವಾಗಲಿಲ್ಲ
ಅದಕ್ಕೆ ಆಕೆಯಿಂದ ದೂರಸರಿದೆ
ಏಕಾಂತದಲ್ಲಿ ನಾ ‘ಮೂಕವೇದನೆ’ ಅನುಭವಿಸಲು ನಿಮಿಷ ಕಾರಣಳಾದಳು
ತರುಣ-ತರುಣಿ ಪರಸ್ಪರ ಮಾತನಾಡಿದರೆ
ಅಪಾರ್ಥಕ್ಕೆಡೆ ಮಾಡುವ ಸಮಾಜವೆ, ಇದಕ್ಕೆ ಕಾರಣ?
ಆ ಮುಗ್ಧ ಹುಡುಗಿಯ ಮೌನ ಸಾಮ್ರಾಜ್ಯದ ಅಧಿಪತಿಯು ‘ಪ್ರಾಯ’ ತಾನೆ?