ಹೇಳಲೇ ಬೇಕು
ತುಂಬಾ ಥ್ಯಾಂಕ್ಸ್
ನನ್ನವಳಿಗೆ
ಮದುವೆಯೇ ಆಗದೆ
ವಿಧುರನಾಗಲು ಅವಕಾಶ ನೀಡಿದ್ದಕ್ಕೆ.

ಇನ್ನು ಸ್ವಲ್ಪ ಥ್ಯಾಂಕ್ಸ್
ನನ್ನ ಹೃದಯಿಗೆ
ಬದುಕಿನುದ್ದಕ್ಕೂ ಮನೆಯವರಿಗೇ
ಸಾಕಷ್ಟು ನೆರವಾಗಲು ಅವಕಾಶ ಕಲ್ಪಿಸಿದ್ದಕ್ಕೆ
ಉಸಿರಿರುವ ತನಕವೂ
ತಂದೆ-ತಾಯಿಯ ಮಡಿಲಲ್ಲೇ ನಲಿಯುವ
ಸೌಭಾಗ್ಯ ದೊರಕಿಸಿಕೊಟ್ಟದ್ದಕ್ಕೆ.
ಮತ್ತೊಂದಿಷ್ಟು ಥ್ಯಾಂಕ್ಸ್
ನನ್ನ ಮನದನ್ನೆಗೆ
ಆಡಂಬರದ ಖರ್ಚು-ವೆಚ್ಚ ಇಲ್ಲದೆಯೇ
ಎಂಗೇಜ್‌ಮೆಂಟ್- ಮ್ಯಾರೇಜ್- ರಿಸೇಪ್‌ಶನ್
ನನ್ನ ಮನದಾಳದಲ್ಲೇ ಮುಗಿಸಿರುವುದಕ್ಕೆ
ಜೊತೆಗೆ,
ಕೋರ್ಟು-ಮನೆ ಅಲೆದಾಟವಿಲ್ಲದೆಯೇ
ಅನಾದರದಿಂದಲೇ ‘ಡೈವೋರ್ಸ್‌’ ನೀಡಿ
ಉಳಿತಾಯ ಮಾಡಿದ್ದಕ್ಕೆ.

ಮತ್ತಷ್ಟು ಥ್ಯಾಂಕ್ಸ್
ನನ್ನ ಸ್ಫೂರ್ತಿ ಚಿಲುಮೆಗೆ
ಸಾವಿರ ಕನಸಿನ ಹಾದಿಗಳನ್ನೆಲ್ಲ ಮುಚ್ಚಿ
ವಾಸ್ತವಕ್ಕೆ ಒಗ್ಗಿಕೊಳ್ಳಲು ಕಲಿಸಿದ್ದಕ್ಕೆ
ಭಾವ ಪ್ರಪಂಚದೊಂದಿಗಿನ ಸಂಬಂಧವನ್ನೇ ಕಡಿದು
ನನಸಿನ ಹಾದಿಯ
ವ್ಯಾವಹಾರಿಕ ಪ್ರಪಂಚದ ಹಾದಿ ತೋರಿಸಿದ್ದಕ್ಕೆ
ಗುಣವಲ್ಲ, ಲವಲವಿಕೆಯಲ್ಲ ಮುಖ್ಯ
ಹಣವೇ ಬದುಕಿಗೆ ಮುಖ್ಯ
ಎನ್ನುವುದನ್ನ ತಿಳಿಸಿದ್ದಕ್ಕೆ.
ಒಂದಷ್ಟು ಥ್ಯಾಂಕ್ಸ್
ನನ್ನ ಕನಸಿಗೆ
ಕಾಲು ಜಾರುವ ಮೊದಲೇ
ಎಚ್ಚೆತ್ತುಕೊಳ್ಳುವ ಪಾಠ ಬೋಧಿಸಿದ್ದಕ್ಕೆ
ಪ್ರೀತಿ-ವಿಶ್ವಾಸಗಳೆಲ್ಲ
ಈ ವ್ಯಾವಹಾರಿಕ ಸಮಾಜದಲ್ಲಿ ನಗಣ್ಯ
ಎನ್ನುವ ನಗ್ನ ಸತ್ಯ ತಿಳಿಸಿದ್ದಕ್ಕೆ
ನಗುವಿಗೆ, ಕಣ್ಣೋಟಕ್ಕೆ
ಒಂದು ಅರ್ಥವಲ್ಲ, ಸಾವಿರ ಅರ್ಥವಿದೆ
ಎನ್ನುವುದನ್ನ
ಒಂದು ವರ್ಷದ ನಂತರವಾದರೂ ಮನದಟ್ಟು ಮಾಡಿದ್ದಕ್ಕೆ.
ತುಂಬಾ ತುಂಬಾ ಥ್ಯಾಂಕ್ಸ್
ನನ್ನವಳಾಗದ ನನ್ನವಳಿಗೆ
ತುಂಬಾ ತುಂಬಾ ಥ್ಯಾಂಕ್ಸ್
ಎಷ್ಟಾದರೂ ಅವಳು
ಓಡಿಬಿಡುತ್ತಾಳೆ….ದೂರ…ದೂರ
ಯಾವುದೇ ರೀತಿಯ ಮುಜುಗರವಿಲ್ಲದೆ
ಭಾವ-ಬಂಧವ ತೊಡೆದು ಹಾಕಿ
ನನ್ನಿಂದ…ದೂರ…ದೂರ…
ಸಿನ್‌ಸಿಯರ್ ಲವ್‌ಗೆ ಬೆಲೆ ಇಲ್ಲಪ್ರೋ
ಥ್ಯಾಂಕ್ಸಪ್ರೋಥ್ಯಾಂಕ್ಸ್.