ನನ್ನ ಎದೆಯ ಕಣ್ಣಾಲಿಗಳಲ್ಲಿ ಚಿತ್ರಿಸಿದೆ
ನಿನ್ನ ಪ್ರತಿಕೃತಿಯನು
ರಕ್ತದೋಕುಳಿಯ ಎರಚಿ
ನಾಟಿದ ನಿನ್ನ ನೋಟ
ನನ್ನ ಎದೆಯೊಳಗೆ
ಸೃಷ್ಟಿಸಿತು ಚಿತ್ರಕಾರನನು
ನಿಂತಿದೆ ಇದಕೆ
ನನ್ನ ಎದೆಯೇ ಸಾಕ್ಷಿಯಾಗಿ
ಇನ್ನೇನು ಬೇಕು ಕೇಳು ಗೆಳತಿ
ನನ್ನಲ್ಲೇ ನಾನು ನಿನ್ನನುಡುಕುತ್ತಿರುವೆ
ತಿಳಿಯದಾಗಿದೆ ಈ ಚಿತ್ರಕಾರನ
ಹುಚ್ಚು ಪ್ರೀತಿ.
ಚಿತ್ರ ಮೂಡಿದೆ ನಿನ್ನ ಭಿತ್ತಿಗೆ
ನಿನ್ನ ಒಂದೊಂದು ಹೆಜ್ಜೆಗೂ ಹಪಾಹಪಿಸುತ್ತಿದ್ದೇನೆ
ನಿನಗಿದು ಗೊತ್ತೇ ಗೆಳತಿ!
ಕಣ್ಣುಗಳು ಕಾತುರವಾಗಿವೆ ನೋಡಲು
ನಿನ್ನ ರೂಪವನು
ಎದೆ ಬಯಸಿದೆ ನಿನ್ನ ಪ್ರೀತಿಯನು
ನಿನ್ನ ಕಿಲಕಿಲ ನಗುವೇ ತೆರೆದಿದೆ
ನನ್ನ ಹೃದಯ ಕಿಟಕಿಯನು
ಇಣುಕಿ ನೋಡ ಬಾರದೇಕೆ ಗೆಳತಿ
ಒಮ್ಮೆಯಾದರೂ
ನನ್ನ ಹೃದಯದಂತರಾಳವನು
ಕಾಣಿಸುತ್ತಿಲ್ಲವೇ ನಿನಗೆ
ನನ್ನಲ್ಲಿನ ನೀನು
ಪ್ರೀತಿಸದಿದ್ದರೆ ಹೋಗಲಿ
ಪ್ರೀತಿಸುವ ಹಾಗೆ ನಟಿಸು
ಅದರಲ್ಲೇ ಉಸಿರಾಡಿಕೊಳ್ಳುತ್ತೇನೆ.