ಎಲ್ಲೋ ಹುಟ್ಟಿ
ಹಕ್ಕಿಯ ಹಿಕ್ಕೆಯಲ್ಲಿ
ಗಾಳಿ, ಮಳೆ ನೀರಿಗೆ
ಇಲ್ಲಿ ಬಂದು ಬಿದ್ದೆ
ಜನದನಗಳ ತುಳಿತಕ್ಕೆ
ಕೆಸರೊಳಗೆ ಸಿಕ್ಕುಬಿದ್ದು
ಹೋದೆ ಇನ್ನಷ್ಟು ಆಳಕ್ಕೆ
ಪ್ರಾರಂಭವಾಯಿತು ಅಲ್ಲಿಂದಲೇ
ಜೀವಾರಂಭದ ಮೊಳಕೆ
ಸಂಕಷ್ಟಾದಿಗಳ ಮಾಲಿಕೆ.

ಭೂಮಿಯಿಂದ ಇಣುಕುವಾಗಲೇ
ಗಾಳಿ, ಬಿಸಿಲು, ತುಳಿತಕ್ಕೆ
ತಿನ್ನುವ ಬಾಯಿಗೆ ಸಿಕ್ಕಿ
ಊನವಾಗಿ ಹೋದೆ
ಬಾಯಾರಿದ ಬಾಯಿಗೆ
ಹನಿ ಹಾಲಿಲ್ಲದೆ
ನಭೋ ಮಂಡಲವೇ ಕೊರೆದು
ಮತ್ತೆ ಮೇಲೆ ಬಂದೆ.
ಆಗಲೆ ಅರ್ಥವಾಯಿತು
ವನ ಹಂತಕನ ಸ್ವಾರ್ಥ.

ಜೀವದ ಹನಿಗಾಗಿ
ಬಾಯ್ತೆರೆದು ನಿಂತೆ
ಗೋಗರದೆ, ಪ್ರಾರ್ಥಿಸಿದೆ
ನನ್ನಯ ಆಕ್ರಂದನವಾಲಿಸುವ
ಕಿವಿಗಳೆ ಇರಲಿಲ್ಲವೆ
ಕೊನೆಗೂ ನನ್ನ ಬೇರುಗಳು
ಕತ್ತಲೆಯ ಗರ್ಭದಾಳಕ್ಕೆ
ಊರಿ ಶೋಧಿಸಿವೆ.
ಈ ಪ್ರಾಣ ಉಳಿಯಲು
ಜೀವ ಜಲವ!

ಹೆಮ್ಮರವಾಗಿ ಬೆಳೆದು
ಹಸಿದವರಿಗೆ ಹಣ್ಣಾದೆ
ದಣಿದವರಿಗೆ ನೆರಳಾದೆ
ಹಕ್ಕಿಗಳಿಗೆ ಗೂಡಾದೆ
ಜೀವಿಗಳಿಗೆ ಜೀವ ವಾಯುವಾಗಿ
ಬೇಡಿದೆಲ್ಲವ ಕೊಟ್ಟು ಕಷ್ಟಪಟ್ಟು

ಕೊನೆಗೂ ಸಂದಿತೆನಗೆ ಕೊಡಲಿ ಪೆಟ್ಟು.
ಆಗಲೆ ನನ್ನದೆಷ್ಟೋ ಬೀಜಗಳು
ಪ್ರಾರಂಭಿಸಿದವು ಬೀಜಾಂಕುರ
ಜೀವಾರಂಭದ ಮೊಳಕೆ
ಸಂಕಷ್ಟಾದಿಗಳ ಮಾಲಿಕೆ.