ಯೌವ್ವನ ಹರುಷದ ರಸಕ್ಷಣ ಲೋಕಕೆ
ಜವ್ವನ ಜವನ ಹಸೆಮಣೆ ಎನ್ನ ಪಾಲಿಗೆ

ಹರಿದತ್ತ ಹರಿವ ಚಿತ್ತದಲಿ
ಹುದುಗಿಹುದು ಹಾವಿನ ಹುತ್ತ
ಪುಂಗಿನಾದಗೈವ ಪುಂಡರ ಗುಂಪು
ಹೆಂಡ ತುಂಬಿ ಬಳಸಿಹರು ಹುತ್ತ

ಬಯಲಲಿ ಬಯಸಿ, ಬಳಸಿ
ಬೀಸಾಡಿದ ಹಳಸಿದ ಹಸಿಮುದ್ದೆ
ಮನೆಗೆ ಮಾರಿ, ಊರಿಗೆ ಹೆಮ್ಮಾರಿ
ಕಾಮುಕರ ಕಣ್ಮಣಿ, ರಸಪೂರಿ ನಾನು

ಹೆತ್ತ ಮಗುವಿಗೆ ತಾಯಿಯಲ್ಲ
ಎದೆಯಲಿ ತೊಟ್ಟೂ ಹಾಲ ಬಿಟ್ಟಿಲ್ಲ
ಮಗುವ ಸಾಕುವ ಸತಿಯಲ್ಲ
ಪತಿಯ ಗುರುತೇ ಗೊತ್ತಿಲ್ಲ

ಕಾಲನ ನಡೆಗೆ ಮರ ಒಣಗಿ
ಎಲೆಯುದುರಿ ಒಂಟಿಯಾಗಿಹುದು
ಪಕ್ಕದಲಿ ಹೊಸಬಳ್ಳಿ ಬಲಿಯುತಿಹುದು
ಅದೇ ಕಾಯಕ! ಅದೇ ಕ್ರೂರಿ ಕಾಮುಕ!

ಎದೆಯ ಹದ, ಹೊನ್ನ ಜೋಳಿಗೆ!
ಬೆಳದಿಂಗಳ ಬಯಲ ಜವ್ವನ! ಸಾಕು
ಕಾಮುಕ ಪುರುಷನಿಗೆ ಇರಲಿ ಧಿಕ್ಕಾರ
ನಾ ಹೋಗುವೆ ರೂದ ರೂಪಗಳ ದಾಟಿ
ಜೀವಾಂತರದ ದಾರಿಗೆ