ಪ್ರಶಾಂತವಾಗಿ ಪ್ರವಹಿಸುವ
ನದಿಯಾಳವನರಿಯೆ,
ಚೆಲ್ಲಲೇಬೇಕು ನಮ್ಮದೇ ನೆರಳ-
ಹರಿವ ನೀರಲ್ಲಿ
ಕದಡದ ತಿಳಿನೀರಲ್ಲಿ
ತೂರಿಬಿಡೆ ನೇರದೃಷ್ಟಿ
ಕಂಡಾವು ಒಡಲೊಳಗಿನ ಮುತ್ತುರತ್ನ
ಇಲ್ಲವೆಂದರೂ ಬೇಸರವಿಲ್ಲ
ಕಂಡೀತು ಕೆಲ ಮೀನು-ಮರಿಗಳ
ಚಿನ್ನಾಟ-ಚೆಲುವಿನಾಟ
ಮತ್ತೆ, ಮನವಂತೆ ಅಂಚಿಲ್ಲದ ಅಬ್ಧಿ
ಇರಲೇಬೇಕಲ್ಲ ಮುತ್ತು-ಹವಳ?
ಹುಡುಕಲು ಬೇಕಿಷ್ಟೆ
ಹನಿ ಏಕಾಂತ, ತುಸು ವಿಮರ್ಶೆ
ಶೋಧನೆ ತೀವ್ರವಿರೆ
ದೊರೆಯದಿದ್ದೀತೆ ಒಂದಾದರೂ ಮುತ್ತು
ಆ ಮುತ್ತಿನ ಪ್ರಭೆಯಲಿ
ಬೆಳೆಸೋಣ ಹಲವಾರು ಸಿಂಪಿಗಳ
ಸಿಕ್ಕಾವು ಮತ್ತಷ್ಟು ಮುತ್ತು
ಇಲ್ಲವೆಂದರೂ ಬೇಸರವಿಲ್ಲ
ಕಂಡಾವು ಚೆಂದನೆಯ ಮೀನುಗಳು
ಮುತ್ತೋ ಮೀನೋ
ಸೌಂದರ್ಯವಿದೆಯಲ್ಲ ಸಾಕು ಸಾಕು