ಪಡುವಣದ ಗಾಳಿ ಬೀಸಿ
ಮೂಡಣದಲಿ ಕೆಂಪೇರಿ
ಬೆಳಗಾಗುವ ಮುನ್ನ
ದಿನದ ಕೆಲಸಗಳಿಗೆ
ಹೊರಟಿದೆ ಪರದೇಸಿ ಮಾತೆ

ನನ್ನೂರು ಪಕ್ಕಾ ಹಳ್ಳಿ
ಪ್ಯಾಟಿ ಹತ್ತಿರ ಹಾಲಿನ
ಹೊಳೆ ಹರಿದಿದೆ ನೀರಿನಲ್ಲಿ

ನನ್ನೂರ ಹುಡುಗಿಯರು
ಕ್ವಾಪಿಸಿಕೊಳ್ಳುತ್ತಾರೆ
ಮೂಡಣದಿ ರಂಗೇರಿದಂತೆ
ಹೊಲದಲಿ ಸೋಬಾನೆಯ
ಕಟ್ಟು ತೆರೆಯಿತೆಂದರೆ
ನಾದದ ನದಿಯೆ ಹರಿದಂತಾಗುವುದು

ಮಂಜು ಮುಸುಕಿನ ಮರಡಿ
ಆಕಾಶಕ್ಕೆ ವಾಣಿ ಹಾಕುತ್ತಿದೆ
ತಂಪಾದ ಗಾಳಿ ಬೀಸಿದಾಗ
ನನ್ನೂರ ಕೆರೆ ಕಂಪಿಸಿ ಮೈದುಂಬುತ್ತದೆ

ದನಗಳು ದೂಳೆಬ್ಬಿಸಿ
ಸಂಜೆಯಾಗುತ ಕೇಕೆಯೊಡನೆ
ಮನೆ ಸೇರುತ್ತವೆ, ಕರುವಿನಾಸರಗೆ.

ಮನೆಯ ನಡುವಿನ ಬುಡ್ಡಿ
ಕತ್ತಲೆಯ ಜೊತೆ ಮಾತಿಗಿಳಿದಾಗ
ಬಡತನದ ಬದುಕು
ದೂರ ಹೊರಡುತ್ತದೆ.

ಜೀವನದ ನಗುವು ಬತ್ತಿಲ್ಲ
ಒರತೆಯ ನೀರಿನಂತೆ
ಕಂಗಳಿನ ತುಂಬಾ ನಗು
ಸುಗ್ಗಿಯ ಕಾಲದಲಿ

ಜಾತ್ರೆಯು ಜೋರು
ಮನೆಗೆರಡರಡು ಬ್ಯಾಟಿ
ರಂಗೇರಿದ ನಾಟಕದಲಿ
ಮುಂದಿನ ದಾರಿಗಾಗಿ
ನನ್ನೂರು ಹೊರಟಿದೆ.