ಏನಿರುವುದು ಏನಿರುವುದು ಎಂದೇಕೆ ಮರಗುವಿರಿ
ಇರುವುದನು ಗಮನಿಸುವ ಮನಸಿದೆಯೇ ನೋಡಿ
ಇದ್ದುದನು ಲೆಕ್ಕಿಸದೆ ಇಲ್ಲದ್ದನ್ನೆ ಹುಡುಕುವಿರಿ
ಗುರಿಯ ಮಾರ್ಗದಿ ಬರುವ ಕಷ್ಟಗಳನೇ

ಏನಿತ್ತು ಅವರಲಿ ಸಂವಿಧಾನ ಶಿಲ್ಪಿಗಳಲಿ
ಏನಿತ್ತು ಅವರಲಿ ಕರುನಾಡ ಗಾಂಧಿಯಲಿ
ಹಣದ ಬೆಂಬಲವಲ್ಲ, ಅಧಿಕಾರ ಮದವಲ್ಲ
ಛಲವಿತ್ತು ಮನದಲ್ಲಿ, ಒಲವಿತ್ತು ಗುರಿಯಲ್ಲಿ
ಇರುವುದನು ಗಮನಿಸುವ ಮನಸಿತ್ತು ನೋಡಿ

ಕಾರ್ಗತ್ತಲಿರಬಹುದು, ಕಲ್ಲಲೂ ಬೆಳಕಿದೆ
ತಂಪನೆರೆಯುತಲಿರುವ ಮರದಲೂ ಬೆಂಕಿಯಿದೆ
ಮರುಭೂಮಿಯಲ್ಲೂ ಜಲತಾಣಗಳಿವೆ
ಆತ್ಮವಿಶ್ವಾಸದಲಿ ಹೆಜ್ಜೆಗಳನಿರಿಸೋಣ
ಕಷ್ಟಗಳ ಮೆಟ್ಟಿ ಗುರಿಯ ಮುಟ್ಟೋಣ

ಲೋಪದೋಷಗಳನೇ ಆಡಿ ತೋರುವ ಬದಲು
ಗುಣಗಳೆಡೆ ಗಮನವನು ಹರಿಸೋಣ ನಾವು
ಧ್ಯೇಯ ಸಾಧನೆಗಾಗಿ ಗುಡ್ಡವೇ ಬೇಕಿಲ್ಲ
ಹುಲ್ಲುಕಡ್ಡಿಯೇ ಸಾಕು ಬಲ್ಲವರಿಗೆ