ಅವ್ವ, ಕಾಡತಾಳ ಮದುವೆಯಾಗs ಎನ್ನತಾಳ
ಎಂಥ ಹುಡುಗ ಬೇಕು ಎಂದು ಕೇಳತಾಳ
ಅವ್ವ, ಡಬ್ಲಡಿಗ್ರಿನಂದ ಅರ್ಧಮರ್ಧ ನೋಡ
ಡಬ್ಲಡಿಗ್ರಿ ಪೂರ್ತಿಯಾದ ಹುಡುಗ ನನಗ ನೋಡಾs
ಮಗಳ, ಎಂ.ಎ. ಹುಡುಗ ನೋಡ
ಇವನ ವಿಷಯ ಸಾಹಿತ್ಯ ನೋಡ
ಅವ್ವ, ಮಾತಿನಲ್ಲಿ ಚತುರ ಅವ
ಮಾತು ಮಾತಿನಲ್ಲೆ ತಲೆಯಲ್ಲಿ ಕೈ ಹಾಕತಾನವ್ವ
ಸಾಹಿತ್ಯ ಹುಡುಗ ಬ್ಯಾಡs ನನಗ ಬ್ಯಾರೆ ಹುಡುಗ ನೋಡಾs

ಮಗಳ, ಎಂ.ಕಾಂ. ಹುಡುಗ ನೋಡ
ಇವನು ಲೆಕ್ಕದಲ್ಲಿ ಜಾಣ
ಅವ್ವ, ನನಗ ಲೆಕ್ಕ ಬರುವದಿಲ್ಲಾ
ಅವನ ಲೆಕ್ಕಾಚಾರ ಬ್ಯಾಡ
ಲೆಕ್ಕದ ಹುಡುಗ ಬ್ಯಾಡs ನನಗ ಬ್ಯಾರೆ ಹುಡುಗ ನೋಡಾs

ಮಗಳ, ಎಂ.ಎಫ್.ಎ. ಹುಡುಗ ನೋಡ
ಇವನು ನಿನಗಿಂತ ಚೆಂದ ಚಿತ್ರ ಬಿಡಿಸುತಾನ ನೋಡ
ಅವ್ವ, ನನಗಿಂತ ಚೆಂದ ಚಿತ್ರ ಬಿಡಿಸಿದರೆ ಅವ
ನನ್ನ ಚಿತ್ರ ಚೆಂದ ಎನ್ನುವರು ಯಾರs
ಚಿತ್ರಕಾರ ಬ್ಯಾಡs ನನಗ ಬ್ಯಾರೆ ಹುಡುಗ ನೋಡಾs
ಮಗಳ, ಎಂ.ಇ. ಹುಡುಗ ನೋಡ
ಇವನು ಇಂಜಿನಿಯರು ನೋಡ
ಅವ್ವ, ಊರು ಬಿಡುವ, ದೇಶ ಬಿಡುವ ಅವ
ಒಮ್ಮೆ ನನ್ನನೆ ಬಿಡುವನು ಅವನು
ಇಂಜೀನಿಯರ್ ಬ್ಯಾಡs ನನಗ ಬ್ಯಾರೆ ಹುಡುಗ ನೋಡಾs

ಮಗಳ, ಎಂ.ಡಿ. ಹುಡುಗ ನೋಡ
ಇವನು ಡಾಕ್ಟರ ನೋಡ
ಅವ್ವ, ಮಾತನಾಡಿದರೆ ಅವ
ರೋಗಗಳ ಬಗ್ಗೆ ನುಡಿವನವ್ವ
ಅವನಿಗೆ ಎಷ್ಟು ರೋಗ ಏನೊs
ನನಗ ಡಾಕ್ಟರು ಬ್ಯಾಡಯವ್ವ ಬ್ಯಾರೆ ಹುಡುಗ ನೋಡಾs

ಮಗಳ, ಐಶ್ವರ್ಯ ರೈ ಹಂಗ ಆಡುತೀಯ ನೋಡs
ಅವ್ವ, ಐಶ್ವರ್ಯ ರೈ ಏನ ಬೇಲೂರು ಶಿಲಾಬಾಲೆಗಿಂಥ ಸುಂದರಿ ಏನಲ್ಲಾ
ಬೇಲೂರು ಶಿಲಾಬಾಲೆ ಕೂಡ ನನಗಿಂತ ಕಪ್ಪು ನೋಡಾs

ಮಗಳ ಮಾತಿನಲ್ಲಿ ನಿನ್ನ ಮೀರುವರೇ ಇಲ್ಲಾ
ಅವ್ವ, ಎಷ್ಟಾದರು ನಾನು ನಿನ್ನ ಮಗಳ ಅಲ್ಲಾs