ಎಲ್ಲಿ ನೋಡಿದರಲ್ಲಿ ಬರದ ಬರೆ
ಎಳೆದಂತೆ ಕಾಸಿದ ಕಬ್ಬಿಣದ ಸಲಾಕೆ
ಅಳಿದುಳಿದ ಬೆಳೆಗಳೊಣಗಿ
ರೈತರ ಹೊಟ್ಟೆ ಮೇಲೆ
ತಣ್ಣೀರು ಬಟ್ಟೆ

ಮುಂಗಾರು ಕೈಕೊಟ್ಟ
ಕಸಾಯಿ ಮನೆಗಳತ್ತ
ಹೊರಟ ಜಾನುವಾರುಗಳಿಗೆ
ನೀರಿಲ್ಲದ ತೊಟ್ಟಿ, ಬಾವಿ
ಮೇವಿಲ್ಲದೇ ಬಡಕಲಾದ ದನಗಳು
ಊರು ಬಿಟ್ಟು ಗುಳೆ ಹೊರಟ
ಅಂಡಲೆವ ಜನ ಜಂಗುಳಿಯ ದಂಡು
ಅನ್ನ ಅಂಬಲಿಗಾಗಿ ಪರದಾಟ.

ಬತ್ತಿ ಹೋಗಿದೆ ಅರ್ಕಾವತಿ, ಶರಾವತಿ,
ಕೃಷ್ಣ, ಕಾವೇರಿ, ಕಪಿಲೆ, ತುಂಗೆ,
ಭದ್ರೆ, ಹೇಮಾವತಿಯ ಒಡಲು!
ಬಡಿದು ಬರದ ಸಿಡಿಲು.

ಸರ್ಕಾರಿ ಕಛೇರಿಗಳಲ್ಲೂ
ಸಾಮೂಹಿಕ ರಜ
ನೂರಾರು ಸಾಮೂಹಿಕಗಳಲ್ಲಿ
ಮತ್ತೊಂದು ಸಾಮೂಹಿಕ
ಸಾಮೂಹಿಕ ಮದುವೆ

ಎಲ್ಲರಿಗೂ ಗಗನಕ್ಕೆ ಕೈಚಾಚಿ
ಎಲ್ಲಾ ಕಛೇರಿ, ಅಂಗಡಿ
ಮುಂಗಟ್ಟುಗಳಲ್ಲೂ ಎಲ್ಲಾ ಸಾಮಾನುಗಳ
ದರ ಸಾಮೂಹಿಕ ಕಡಿತ
ಎಲ್ಲೆಲ್ಲೂ ಉದ್ಯೋಗಿಗಳಿಗೆ
ಸಾಮೂಹಿಕ ಬೇಡಿಕೆ
ಅಲ್ಲಲ್ಲಿ ಪ್ರಾಮಾಣಿಕತೆಯ ತೂಕಡಿಕೆ.

ಪ್ರಜಾಪ್ರಭುತ್ವದಲಿ ಸಾಮಾಜೀಕರಣ
ಎಲ್ಲಕ್ಕೂ ನ್ಯಾಯೀಕರಣ
ಬಿಡಾಡಿ ನಾಯಿಗಳ ನಿರ್ಭೀಜೀಕರಣ
ಹುಂಜ ಮೊಟ್ಟೆಗೆ ಕಾವು ಕೊಟ್ಟ
ಎತ್ತು ಕರುವ ಹೀದ
ಹ್ಯಾಟೇ ಮುಂಜಾನೆ ಕೂಗಿತು
ಕೋಗಿಲೆ ಕಾ.ಕಾ.ಎಂದಿತು
ನಾಯಿ ತತ್ತಿ ಹಿಕ್ಕಿತು

ಅದೇ ಸುದ್ದಿ ಹೊತ್ತು ತಂದ
ಅದೇ ಪತ್ರಿಕೆ, ಅಸಲು ಪತ್ರಿಕೆ
ಅದೇ ಉರಿ, ಅದೇ ದಗರಿ
ಎಲ್ಲದಕ್ಕೂ ಸುತ್ತೋಲೆಯ
ಅಧಿಕೃತ ದಾಖಲೆ
ಪ್ರಜಾಪ್ರಭುತ್ವದ ಮುದ್ರೆ
ನಾಡಿನುದ್ದಗಲಕ್ಕೂ ಸೌಹಾರ್ದದ ಮುದ್ರೆ!
ಜಾತಿ, ಮತ, ಪಂಥ, ಪಕ್ಷ, ಬಣ್ಣ,
ಸಾಲ, ಬಡ್ಡಿ, ಮನೆ, ವಿಮೆ, ಲಂಚ,
ಅನಾಚಾರ, ಅತ್ಯಾಚಾರ, ಹಿಂಸಾಚಾರ,
ಭ್ರಷ್ಟಾಚಾರಗಳಂತೆ
ಸಾಮೂಹಿಕ ಪ್ರಾರ್ಥನೆ
ಚರ್ಚು, ಮಂದಿರ, ಮಸೀದಿ
ಗುಡಿ, ಗುರುದ್ವಾರಗಳಲ್ಲಿ
ಕೈ ಚಾಚಿ ಆಕಾಶದೆಡೆಗೆ
ಆಕ್ರಂಧನ!

ದೇವರೆಲ್ಲರೂ ಕೈಕೊಟ್ಟ ಕ್ಷಣ
ದೂರ ದಿಗಂತದಲ್ಲೊಂದು
ಆರ್ಭಟ,
ಗುಡುಗಿನ ಹಾಗೆ
ಕೈಕೊಟ್ಟ ಮುಂಗಾರು
ಅಣಕಿಸಿ ನಗುತ್ತಿತ್ತು
ಕಂಡು ಅಪರಾಧಿಯ ಭಂಗಿ

ಸಾಮೂಹಿಕ ಪರಿವರ‍್ತನೆ
ದೈವ ಗೊತ್ತುವಳಿಗಳ
ತುರ್ತು ಅಧಿವೇಶನದಲ್ಲಿ
ಛಿದ್ರ ಮನಸ್ಸುಗಳು
ವಕ್ರ ಮಾರ್ಗಗಳು
ರಾಜೀನಾಮೆಗಳತ್ತ,
ವಿಚ್ಛೇಧನಗಳತ್ತ,
ಬೇಸತ್ತ ಪಕ್ಷದಿಂದ ಉಚ್ಛಾಟನೆ
ಹೊಸ ಪಕ್ಷಗಳ ಉದ್ಘಾಟನೆ
ಒಂದೇ ಕ್ಷಣ,
ರೈತರ ಸಾಮೂಹಿಕ ಆತ್ಮಹತ್ಯೆ,
ಹಗರಣಗಳೇ ಇಲ್ಲ
ರಾಜಕೀಯ ಶಬ್ದಕೋಶದಲ್ಲಿ!
ಬರಬಾರದ ಬರ
ಅದೇ ಉರಿ ಅದೇ ದಗರಿ! ಅದೇ
ಸಾಮೂಹಿಕ ಬರ
ಬರುವು ತಂದ ವರ!