ನಡೆಯೋ ನಾಡದೇಗುಲಕೆ
ಮನದ ಗಾಡಿಯ ಹೂಡಿ
ಗಡಿಬಿಡಿ ಏತಕ್ಕೊ
ಸಡಗರದ ಸಾಹೇಬ

ಮನವೆಂಬ ಮಡಿಉಡಿಗೆಯನು ತೊಟ್ಟು
ಗುಣವೆಂಬ ನಡೆನುಡಿಯನು ಉಟ್ಟು
ಬೆಟ್ಟ-ಬೆಟ್ಟಗಳ ತೊಟ್ಟಿಲಲಿ ಉಯ್ಯಾಲೆ ಆಡಿ
ದಿಟ್ಟ-ದಿಟ್ಟ ಹೆಜ್ಜೆಗಳಿನ್ನಿಡುತ ಖವ್ವಾಲಿ ಹಾಡಿ-ನಡೆಯೋ
ನೇಸರನ ನೃತ್ಯನಗರಿ ಕಾಣಲು

ಮನದ ಭಾವ-ತರಂಗದ ಭವ್ಯಪಾಶ
ಮಣಿದ ಮೋಹ-ರಂಗದ ದಿವ್ಯಲೋಕ
ದಣಿವಿಲ್ಲ ದಾಹವಿಲ್ಲ ವಿರಹಭಾವವಿಲ್ಲ
ದಯವೆಲ್ಲ ಬಂದಿತಲ್ಲ ಹಣೆ ಬರಹವಲ್ಲ- ನಡೆಯೋ
ನೇಸರನ ನೃತ್ಯನಗರಿ ಕಾಣಲು

ಸ್ಪಂದನ ಚಿಂತನ ಚೇತನ ಚಿರನೂತನ
ಸಂತನ ಸಾಧನ ಮೋದನ ಅನಂತನಂತನ
ಝಣ ಝಣ ಜನಮನ ಕಣ್ಮನ ಹೃಣ್ಮನ
ಬಾಳಿನ ನಂದನ ನೇಸರನ ಬೃಂದಾವನ-ನಡೆಯೋ
ನೇಸರನ ನೃತ್ಯನಗರಿ ಕಾಣಲು

ಲಾಲಿಸಿ ಪೋಷಿಸಿ ಮುದ್ದಿಸಿ ಕುಣಿಯುವ
ಬಲಿಯುವ ನಲಿಯುತ ಲೋಕಕೆ ಹಾಡುವ
ಬಲೆಯಿಲ್ಲದ ಬಲಿಯಿಲ್ಲದ ಲೋಕವ ಬೆಳಗುವ
ಸೋಲಿಲ್ಲದ ಶೂಲಲ್ಲದ ಅಮೃತಸೆಲೆ ಇವ-ನಡೆಯೋ
ನೇಸರನ ನೃತ್ಯನಗರಿ ಕಾಣಲು

ಜಗದ ಜನರ ಬಾಳಿನ ಬೆಳಕಿನ ನೈಜ ಸಂಗಾತಿ
ಜಗದ ಜನರಿಗೆ; ನಿಸರ್ಗದಿ ನಡೆಯುವ ಒಂದು ಸಂಗತಿ
ಜಾಣ ನೀ ಅರಿಯೋ! ಇವನೊಬ್ಬ ಹರಿಯೋ!
ನಿನ ಆರೋಗ್ಯ ಆಯುಷ್ಯಕೆ ಸಂಜೀವಿನಿಯೋ-ನಡೆಯೋ
ನೇಸರನ ನೃತ್ಯನಗರಿ ಕಾಣಲು
ರೆಂಬೆ-ಕೊಂಬೆಗಳ ಬಿಂಬ ಅಂಬಾರಿ
ಅಂಬೆ-ಅಂಬೆಯರ ಸ್ತಂಭ ಸಿರಿ
ಬಾಳ ಅಂಬಿಗನ ದೋಣಿ ಬನದಂಬೆ
ಪ್ರಾಣ ಪ್ರತೀಕ ಈ ಆಗುಂಬೆ-ನಡೆಯೋ
ನೇಸರನ ನೃತ್ಯನಗರಿ ಕಾಣಲು