ದೂರದ ಅಂಗಳದಲ್ಲಿ
ಮುಂಜಾವಿನ ಮುಸುಕಿನಲ್ಲಿ
ಎದೆಯ ಭಾವಗಳಲ್ಲಿ
ಅವಳೊಬ್ಬಳೆ ಅಲ್ಲಿ
ರಂಗೋಲಿಯ ನೆಪದಲ್ಲಿ.

ಚಿತ್ತಾರ ಬಿಡಿಸುತ್ತಿದ್ದಳು
ದಿಟ್ಟ ಕೊಡಿಸಿದ್ದಳು ನನ್ನಲ್ಲಿ
ಕವಿಯಾದೆ ನಾನೊಂದೆ ಕ್ಷಣದಲ್ಲಿ
ಎಲೆ ಬಿಡಿಸಿದಳು ಹೋಗಿ
ತಲೆ ಬಿಡಿಸಿದ್ದಳು ಅವಳಲ್ಲಿ.

ತಾ ಬಿಡಿಸಿದ ರಂಗೋಲಿ
ನೋಡಿ ನಾಚಿ ನಕ್ಕಳಲ್ಲಿ,
ಆಹಾಹಾ ಅವಳ ಈ ಸ್ವಭಾವದಲ್ಲಿ,
ನಮ್ಮಿಬ್ಬರ ನಡುವಿನ
ಮೌನದ ರಾಗದಲ್ಲಿ
ಅವಳ ಹೃದಯ ಮಡುವಲ್ಲಿ
ನಾ ಬೆರೆತು ಹೋಗಿದ್ದೆ.

ಗೆಳತಿ ಅರಳುತಿದ್ದಳು ತಾ
ರಂಗೋಲಿ ಹಾಕಿದ ಸಂಭ್ರಮದಲ್ಲಿ,
ನನ್ನ ಹೃದಯ ನರಳುತ್ತಿತ್ತು
ಅವಳಿನ್ನು ಹೋಗುವಳೆಂಬ ಅಳುಕಿನಲಿ,
ನಕ್ಕಳವಳೊಮ್ಮೆ ನೋಡಿ ನನ್ನ,
ನಾ ಕನಸಿನಿಂದ ಏಳುವ ಮುನ್ನ.

ಸಮಯ ನಿಲ್ಲಲಿಲ್ಲಾ,
ಮಂಜು ಕರಗಿತೆಲ್ಲಾ,
ಕನಸಿನ ಕಣ್ಣು ತೆರೆಯುವುದರಲ್ಲಿ,
ಯಾರೂ ಇರಲಿಲ್ಲ ಅಲ್ಲಿ
ನಾನೊಬ್ಬನೆ ಇಲ್ಲಿ
ಕಿಡಕಿಯ ಒಳಬದಿಯಲ್ಲಿ.