ಮುಂದಿನದ ಮೂರನೇ ಗಳಿಗೆ
ಲೆಖ್ಖ ಹಚ್ಚಿದ ಸಾಲ ಇರುಳ ಜೋಳಿಗೆಗೆ
ನಭದಿ ತಾರಾ ಬಳಗ, ಜಗದಿ ಜಡತಿನ ಛಾಯೆ
ಮೊದಲುಷೆಯ ಮೊದಲ ಕನಸಯಾತ್ರೆ

ಜಗಕೆ ನಿದ್ದೆಯ ಸಾವು ಜವನ ಕುಣಿಕೆಗೆ ಮುಟ್ಟು
ತಾರೇಂದು ಚಿಕ್ಕಿಯ ನಡಿಗೆ ವಾನಪ್ರಸ್ಥಕೆ,
ಇರುವ ಮಂಚದ ಮೇಲೆ ಭಾನ ಹೆರಿಗೆಯ
ಮೊದಲೇ
ಜನುಮದಾತರ ಜೊತೆಯ ಕನಸ ಯಾತ್ರೆ

ಬುತ್ತಿ ರೊಟ್ಟಿಯ ಜೊತೆಗೆ ನಂಬಿಕೆಯ ನೆರವು
ಉಸಿರು ಹಸಿರಿನ ಬಲಕೆ, ನೆತ್ತರೋಟದ ಹದಕೆ
ಹೂ ಹಣ್ಣು ಕರ್ಪೂರ ಕಾಯಿ ಅದರಡಿಗೆ
ಕಾಯೇನಾ ವಾಚಾ ಮನಸಾ ಶುದ್ದಿಯ ನೆವಕೆ
ಬಯಕೆ ರಾಶಿಯ ತಲೆಗೆ ನಿತ್ಯದ ಹಿಡಿದಿಸು
ಭವ-ಭಾವಗಳ ಬದುಕ ಧಗೆಯ ತಂಪಿಗೆ

ಅವನ ಕನಸಿನ ಕೊಡುಗೆ, ಯಂತ್ರ-ತಂತ್ರದ ನಡಿಗೆ
ದಿಕ್ಕು ತಪ್ಪಿದ ದಾರಿ ಬಯಲ ಬಳಿಗೆ
ಕಣ್ಣು ರೆಪ್ಪೆಯ ಛಣದಿ-ಸತ್ಯ ಮಿಥ್ಯದ ಮೋಹ
ಮರೆತ ಮಬ್ಬಿನ ತನಕೆ
ಕಂಡು ಕಾಣದಾ ದಾರಿ ಶೂನ್ಯದೆಡೆಗೆ

ತೇಗೆ, ದಿಬ್ಬಕೆ ನಡಿಗೆ
ನಿತ್ಯಸತ್ಯಗಳ ನಡುವ ಮರ್ತ್ಸ್ಯದ ಮನದಿ
ಹೆಜ್ಜೆ ಸಾಲಿನ ಸಾವು
ಮರು ಹೆಜ್ಜೆ, ಅದೇ ಹೆಜ್ಜೆ ಮುಂದೆ ಕಾಣದಾ

ದಾರಿ ಮಾಯಾಮಾರ್ಗಕೆ
ಹರಿದ ಹಸಿವಿನ ದೇಹ, ಮರೆತ ಮುನ್ನಿನ ನೇಹ
ನಡೆದು ನರಳಿತೆಲ್ಲೋ ಇರುಳಾಂಧಕಾರಕೆ
ಪಡುವಣದಿ ನೆತ್ತರ ಭಿತ್ತಿ, ಸಂಜೆ ತೀರದ
ರವಿಯ ನಿತ್ಯದ ವ್ರಣಕೆ.

ಕವಿದ ಕತ್ತಲೆ ಮಾಯೆ
ಹುಟ್ಟು ಸಾವಿನ ಸಾಲೆ
ದುತ್ತನೆ ಕಂಠ ಕನಸಿನ ನೆನದ್ರ
ಬಾಳ ಬೆನ್ನಿಗೆ