ಪರೀಕ್ಷೆಗಳೇ ಇಲ್ಲದಿದ್ದರೆ
ಈ ಕಾಲೇಜೆಂಬುದು ನನ್ನಂತವರಿಗೆ
ಅದೆಷ್ಟು ಸುಲಭವಾಗುತ್ತಿತ್ತು.
ಅದು ಇದ್ದು ಈಗ ಎಷ್ಟೊಂದು ಕಷ್ಟವಾಗಿದೆ
ಕಷ್ಟಪಟ್ಟು ಓದಬೇಕು, ಓದಿ ಬರೆಯಬೇಕು
ಬರೆದ ನನ್ನಂತವರ ಬ್ರಹ್ಮಲಿಪಿ ಅವರಿಗೆಲ್ಲಿ ತಿಳಿಯಬೇಕು?
ಅದಕ್ಕೆ ತಿಳಿದಷ್ಟು ಮಾರ್ಕು ಹಾಕಿ ಫಲಿತಾಂಶ ನೇತು ಹಾಕುತ್ತಾರೆ
ಅದನ್ನು ತಿಳಿದುಕೊಳ್ಳಲೆಂದೆ ಹೊರಟಿದ್ದೆ- ಮೇಲಿನಂತೆ ಯೋಚಿಸುತ್ತಾ (ಪ್ರಗತಿಪರ)

ಮುಂದಿನ ನೂರಾರು ನಿಲುಗಡೆಗೆ ನಾಂದಿಯೆಂಬಂತೆ
ಆ ತಿರುವಿನಲ್ಲಿ ನಿಂತ ಬಸ್ಸಿಗೆ ಹತ್ತಿದವರಲ್ಲಿ ನನ್ನ ಗಮನ ಸೆಳೆದವರೆಂದರೆ
ಮಗುವನೆತ್ತಿಕೊಂಡ ಆ ಗೃಹಿಣಿ ಮತ್ತು ಟೈಟಾನಿಕ್ ಮುದುಕಿ

ಇಂತಹವರಿಗೆ ಸೀಟುಬಿಟ್ಟುಕೊಡಬೇಕು ಶಾಲೆಯಲ್ಲಿ ಮೇಸ್ಟ್ರಂದದ್ದು ನೆನಪಾಯ್ತು.
ಆದರೆ ಇಬ್ಬರಲ್ಲಿ ಯಾರಿಗೆ ಅಂತ ನನ್ನ ಒಂದು ಸೀಟು ಬಿಡಲಿ?
ತರ್ಕಿಸುತ್ತಾ ಎದ್ದು ನಿಂತೆ, ಮುದುಕಿ ಕುಳಿತರು.
ಕುಳಿತವರೆ ಆ ಗೃಹಿಣಿಯ ಮಗುವನ್ನು ತೊಡೆಗೆ ತೆಗೆದುಕೊಂಡರು.

ಎಂಥ ದಯಾಮಯಿ (ನನ್ನಂತೆ) ಅಥವಾ ಆಕೆ ಆ ಗೃಹಿಣಿಯ ತಾಯಿ?
ಈ ನಡುವೆ ಆಗ ನನ್ನ ಪಕ್ಕ ಈಗ ಮುದುಕಿ ಪಕ್ಕ ಕುಳಿತ ಹುಡುಗಿ
ನನ್ನೆಡೆಗೆ ಮುಖ ಮಾಡಿ ನತ್ತು ಅರಳಿಸಿ ನಕ್ಕಳು ‘ಬಿಳಿ’ಪಾರಿಜಾತದಷ್ಟು ಶುಭ್ರವಾಗಿ.

ಈಕೆ ಮೊದಲೆ ನಗುತ್ತಿದ್ದಳೊ ಅಥವಾ ಇದೇ ಮೊದಲೊ?
ನಾನೆ ಪೆಕರನಂತೆ ಅದನ್ನು ಗಮನಿಸಲಿಲ್ಲವೊ?
ಯೋಚಿಸುತ್ತಿರುವಾಗಲೇ ಬಿತ್ತು ಬಸ್ಸಿಗೆ ತನ್ಮೂಲಕ ನನ್ನ ಯೋಚನೆಗೆ ಬ್ರೇಕು.

ಮುದುಕಿ ಇಳಿದು ಹೋದರು- ನನ್ನೆಡೆಗೆ ಕೃತಜ್ಞತೆಯ ನೋಟ ಬೀರಿ.
ನಾನು ಮತ್ತೆ ಜಾಗ ಗಿಟ್ಟಿಸಿಕೊಂಡೆ- ‘ಆ ಪಾರಿಜಾತದ ಪಕ್ಕ’
ತಡಮಾಡದೆ ಕೇಳಿದೆ- ‘ನಕ್ಕೀರಲ್ಲ ಯಾಕೆ’?

“ನಿಮ್ಮನ್ನು ನೋಡಿದರೆ ಸತ್ತ ಅಣ್ಣನ ನೆನಪಾಯ್ತು.”
ಚೆಲುವೆ ಬಣ್ಣ ಬದಲಾಯಿಸಿದಳು ಅಥವಾ ನಾನು ಹಾಗಂದುಕೊಂಡೆನೊ…
ಈ ಹುಡುಗಿಯರು ಅಣ್ಣ ಅಂದಕೂಡಲೇ ನಾವು ಹುಡುಗರು
ಯಾಕೆ ಸೋತು ಸುಣ್ಣವಾಗುವುದು?
ಅಂದಹಾಗೆ ಮರೆಯುವುದರಲ್ಲಿದ್ದೆ- ನನ್ನ ಫಲಿತಾಂಶ ಹೇಳಲು
ನಾನು ನಪಾಸು
ಹುಡುಗಿಯರನ್ನೇ ಸರಿಯಾಗಿ ಓದಲಾಗದ ದಡ್ಡ
ಇನ್ನು ಪುಸ್ತಕ ಓದಿ ಪಾಸಾಗುತ್ತೇನಾ?
ನನಗೆಲ್ಲೋ ಭ್ರಮೆ!?