ಅವನೆಂದಾದರೊಮ್ಮೆ ಬಂದೇ ಬಂದಾನೆಂದು
ಆ ಮುದುಕನಿಗೆ ಗೊತ್ತಿತ್ತು.
ಬಂದರೂ ಇರನೆಂದು ಮೊದಲೇ ತಿಳಿದಿತ್ತು

ನಿನ್ನೆಯದಾಯಿತು. ಇಂದು ಹೀಗೆ
ನಾಳೆ ಹೇಗೋ, ಎಂದವನಂದಿದ್ದಂತೂ
ಮುದುಕ ಮೊದಲೇ ಹೇಳಿತ್ತು
ಬಾಯಲ್ಲೊಂದು ಕೈಯಲ್ಲೊಂದು ಬಂದ ಬಾಯಿಗೆ
ತಿರುಗಿ ಹಾಯುವ, ಅವನ ಲೆಖ್ಖಗಳ
ಮುಪ್ಪು ಮೊದಲೇ ಎಣಿಸಿತ್ತು

ಬಂದಿದ್ದವನಂತೂ ಬಂದ, ಬಯಸಿದ ಪಡೆದ
ಲೆಖ್ಖಣಿಕೆ ತಪ್ಪಿದರೂ, ಲೆಖ್ಖ ತಪ್ಪದೆಯೇ
ಪೆಟ್ಟಿಗೆಯೊಳಿದ್ದ ಅವನ ಪರಿಯ
ಕಣ್ಣಿರದಿದ್ದರೂ ನೋಡಿತ್ತು

ಅವನೂ ನನ್ನಂತಾಗುವವ, ನನ್ನಂತೇರದವ
ನಿನ್ನೆ ನಾಳೆಯ ಸಂತೆಯಲೇ ತನ್ನತನ ಮರೆತವ
ಎಂದಾದರೊಂದು ದಿನ ನನ್ನಡಿಗೆ ಬಂದು ಅಲ್ಲೆ ಕರಗು
ಏನೆಂದು ಮುದುಕ ಹೇಳದೇ ಹೋಗಿತ್ತು

ಕೊಡುವೆನೆಂದಿದ್ದು, ತರುವೆನೆಂದು ಹೋಗಿದ್ದು
ಹೋಗಿ ಬರುವ ಮೊದ ಹಾಳು ನೆನಹು ಹಾರಿತೆಂದು
ಮುಂದೋಡಿಸಿದ ರೀತಿಗೆ ಮುದುಕ ಸಾಕ್ಷಿಯಾಗಿತ್ತು