ನಿನ್ನೇತ್ತರಕೆ ಏರಲಾರೆ
ಈ ಮಡಿಲ ತುಂಬೆಲ್ಲಾ
ಕಂಬನಿ ನಿಟ್ಟುಸಿರುಗಳ
ಕೂಡಿಟ್ಟಿರುವೆ.

ನೀ ಉಣಬಡಿಸಿದ
ಸಿಂಚನಕೆ
ಬಿತ್ತಲಿಲ್ಲ ಬೀಜವ
ಮೊಳಕೆಯೊಡೆದು ಹಸಿರು ಚಿಗಿಯಲಿಲ್ಲ
ಜೀವದುಸಿರು ಗರಿಗೆದರಲಿಲ್ಲ.

ಈ ಕಂಗಳ ತುಂಬೆಲ್ಲಾ
ನಿನ್ನ ತುಂಬಿಕೊಂಡು
ಆ ಶೂನ್ಯಕ್ಕೆ ಮುಖವಿಟ್ಟಿರುವೆ.

ಬಯಲು ನೆಲದಲಿ
ಬರಿಯ ಕನಸುಗಳ ಬಿತ್ತಿ
ಬಿಸಿಲುಗುದುರೆಗಳ ಏರಿ
ನಿನ್ನೇತ್ತರಕೆ ಏರಲಾದೀತೆ?

ನೀ ಮುನಿದೆ
ನಿನಗೆಷ್ಟು ಜೀವಗಳ ಉಡುಗೊರೆ
ಇನ್ನೂ ಕರಗಲಾರೆಯಾ
ಕನಿಕರಿಸಿ ಕಂಬನಿ ಒರೆಸಲಾರೆಯಾ