ಹುಳಿಉಪ್ಪುಕಾರಗಳ ಬಯಕೆಯಲೆ
ಪುಟಿಯುವುದು ಭ್ರೂಣದ ಬಿಂದು
ಭೂಮಿಯಾಳದ ಬೀಜದಂತೆ.
ಕಣ-ಕಣ ರಕ್ತಕಣಗಳ ಪೋಣಿಸಿ
ಮೂಳೆ-ಮಾಂಸಗಳ ಅಂಗಿ ತೊಡಿಸಿ
ಹೊರಲಾರದೆ ಹೊತ್ತು
ನಿಟ್ಟುಸಿರಿಟ್ಟಾಗ ಜೀವವೆರಡು.
ಬಯಕೆಯ ಕರುಳಬಳ್ಳಿ
ಮಡಿಲು ತುಂಬಿ ನಕ್ಕಾಗ
ಬೆಂದ ಬೇನೆ ಅಂತಿರಲೆಂದು
ಹೆತ್ತವಳ ನಿರಾಳ ಭಾವ ಮಡುವುಗಟ್ಟುವುದು
ಹಸಿರ-ಉಸಿರ ಹೂದೋಟದಲಿ
ಹಾಡುವಳು
ಇದು ನನ್ನದು ನನ್ನ ಕನಸುಗಳ ಕಣ್ಣಿದು
ಹೊಸ ಬೆಳಕಿದು, ಹೊಸ ಶಕ್ತಿ ಇದೆಂದು
ಹಾಡುವಳು ಜೋಗುಳವ
Leave A Comment