ಪ್ರೀತಿ ಮತ್ತು ಅಲ್ಲಾಹುವನ್ನರಸಿ
ಮಂದಿರ ಮಸೀದಿಗಳ ಕದ ಬಡಿದೆ
ಅಲ್ಲೆಲ್ಲೂ ಅವು ಸಿಗಲಿಲ್ಲ
ಒಮ್ಮೆ ದಣಿದು
ಮತ್ತೊಮ್ಮೆ ಜಡಿಮಳೆಯಲ್ಲಿನೆನೆದು
ನೀನಿರುವ ಓಣಿಯಲ್ಲಿ ನಡೆದು ಬಂದೆ
ತೃಷೆಯಾಗಿತ್ತಾದರೂ
ನಿನ್ನಲ್ಲಿ ನೀರು ಕೇಳಲು ಸಂಕೋಚ
ಏನಂದು ಕೊಂಡೆಯೋ
ಮಧುಶಾಲೆಯ ತುಂಬ ಹುಟ್ಟು ಫಕೀರರು
ನಿಮ್ಮೂರ ಸಂತೆಯಲಿ
ನಾನೊಬ್ಬನೆ ಒಂಟಿ
ಯಾರೂ ಕೊಳ್ಳದೆ ಹೋದ
ಕೊನೆಯ ದೀಪದಂತೆ
ಕತ್ತಲೆಗಂಜಿದ ಸೂರ್ಯ
ಎಲ್ಲೋ ಓಡಿ ಹೋಗಿದ್ದ
ಯಾರೂ ಕೊಳ್ಳಧ ಕವಿತೆಯೊಂದು
ನನ್ನೊಂದಿಗಿತ್ತು
ಎಲ್ಲಿದಲೋ ಬೆಳಕಿನ ಚೂರು
ನನ್ನತ್ತ ಬಂತು
ನಿನ್ನ ಕೈಯಲ್ಲಿ ದೀವಿಗೆಯಿತ್ತು
ರೊಟ್ಟಿ ನೀರು ಕೂಡ
ಹಸಿವು ನಗುವು ನನ್ನಲ್ಲಿತ್ತು
ಕಣ್ಣೆತ್ತಿ ನೋಡಿದೆ
ನಿನ್ನಲ್ಲಿ ಪ್ರೀತಿಯಿತ್ತು
ಮೌನಕ್ಕೂ ಮೀರಿದ ಮಾತಿತ್ತು.