ನಾಳೆ ‘ನಿನ್ನ ವಧು ಪರೀಕ್ಷೆ’
ಆ ಸಂಜೆ ಅಡುಗೆ ಕೋಣೆಯಲ್ಲಿ
ಅಮ್ಮ ಸಡಗರಿಸಿದಾಗ…..
ತಬ್ಬಿಕೊಂಡರೆ ಮೈಮೂಳೆ ಲಟಗುಟ್ಟಬೇಕು
ಆ ಪರಿಯ ಸುದೃಢ ಮೈಕಟ್ಟು
ಗಲ್ಲ ಗಿಲುಕಿದರೆ ಚುಚ್ಚುವ ಮೀಸೆ
ಜತೆಗಿದ್ದರೆ ಲೋಕ ಗೆಲ್ಲುವ ಭರವಸೆ
ಭಾವನೆಗಳಿಗೆ ಬಣ್ಣವಾಗಿ, ಕನಸುಗಳಿಗೆ ಕಣ್ಣಾಗಿ
ನಮ್ಮದು ಅವರಿವರು ಅಸೂಯೆ ಪಡುವ ಜೋಡಿಯಾಗಿ….
ಆ ರಾತ್ರಿ ಕನಸುಗಳದ್ದೇ ಮೆರವಣಿಗೆ
ಎಂದು ಏರಿಯೇನೋ ಅವನ ಜತೆ ಹಸೆಮಣೆಗೆ?
ಕನವರಿಕೆಗಳ ರಾತ್ರಿ ಕಳೆದು ಹಗಲು ಕಣ್ತೆರೆದಾಗ….
ಆಸ್ಥೆಯಿಂದ ಮುಗಿಸಿ ಗಂಟೆಗಟ್ಟಲೆ ಸ್ನಾನ
ರವಕೆಯ ಹುಕ್ಕುಗಳಿಗೆ ಮಾಡುತ್ತಿರಬೇಕಾದರೆ ಸಂಧಾನ
ವಿವರಿಸಲಾಗದ ಪುಳಕದಲ್ಲಿ ಮುಳುಗೇಳುತ್ತಿತ್ತು ಮೈಮನ
ಸೋಫಾದಲ್ಲಿ ಪವಡಿಸಿದ, ಅಮ್ಮ ತೋರಿಸಿದ
‘ಅವರೆಡೆಗೆ’
ನೋಟಕ್ಕೆ ಲಜ್ಜೆ ಬೆರೆಸಿ ಕತ್ತೆತ್ತಿದರೆ
ಕಣ್ಣುಕತ್ತಲು ಗಟ್ಟಿ, ಬವಳಿ ಬಂದಂತಾಯ್ತು
ಬೀಳಬಾರದೆಂದು ಆಸರೆಗೆ ಸೋಫಾ ಹಿಡಿದೆ.
ನಮ್ಮೂರಿನ ರಸ್ತೆ ರಿಪೇರಿಗೆಂದು
ಎಂದೋ ತಂದು ಹಾಕಿ ಮರೆತ
ಡಾಮರಿನ ಡಬ್ಬದಂತಹ ದೇಹ ಮತ್ತು ಬಣ್ಣ
ಢಾಳು ಬಣ್ಣದ ಅಂಗಿಯಲ್ಲಿ ನಿಲುವೋ ಸ್ಪಷ್ಟ: ಉಡಾಳ
ಇವನ ಜತೆಗಾದರೆ ನನಗೆ ಮದುವೆಯಲ್ಲ, ಕೋಳ
ಮನಸ್ಸು ಸ್ಪಷ್ಟವಾಗಿ ನಿರಾಕರಿಸಿತ್ತು
‘ನಿನ್ನ ಕನಸಿನ ನಲ್ಲ ಇವನಲ್ಲ’?
‘ಗಂಡು ಒಪ್ಪಿಗೇನಾ’
ಕೇಳಿದ ಅಮ್ಮನಿಗೆ ನನ್ನ ಉತ್ತರ
ಒಣ ಮುಗುಳ್ನಗೆ
ಅದರ ಹಿಂದಿನ ನಿರಾಕರಣೆ
ಅಮ್ಮನಿಗೆ ಅರ್ಥವಾಗಲಿಲ್ಲ ಅಥವಾ
ನಾನೇ ಸ್ಪಷ್ಟಪಡಿಸಲಿಲ್ಲ
ಪಡಿಸುವುದಾದರೂ ಹೇಗೆ?
ನನ್ನ ಹಿಂದೆ ಎದೆಯೆತ್ತರ ಬೆಳೆದು ನಿಂತ
ಮೂವರು ತಂಗಿಯರು
ಅವರ ಸುಂದರ ನಾಳೆಗಳಿಗಾಗಿ
ನನ್ನ ಇಂದನ್ನು, ಅಮ್ಮ ತೋರಿಸಿದ ಗಂಡನ್ನು
ಒಪ್ಪಿ ಅಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ!
ಅಪ್ಪ-ಅಮ್ಮನದ್ದೋ ನಾಲ್ಕು ಹೆಣ್ಣು ಹೆತ್ತ ಅಸಹಾಯಕತೆ
ಖಂಡಿತ.
ಆತ ನನ್ನ ಪಾಲಿಗೆ ಗಂಡನಲ್ಲದ ಗಂಡಸು
ಮದುವೆಯಾದ ಮಾರನೇ ದಿನವೆ….
…..ಚೂರಾಯ್ತು ನನ್ನೆಲ್ಲ ಕನಸು
ನನಗೂ ಇದ್ದಿದ್ದರೆ ಆಯ್ಕೆಯ ಸ್ವಾತಂತ್ರ್ಯ
ಅದಿಲ್ಲದ್ದರಿಂದ
ನನ್ನ ಕನಸಿನ ನಲ್ಲ
ಕನಸಾಗಿಯೇ ಉಳಿದೆನಲ್ಲ.