ಇರುಳು ಹಗಲಾಗಲೆತ್ನಿಸಿದರೆ
ಹಗಲು ಹಾರಲೆತ್ನಿಸುತ್ತಿದೆ
ಕಂಗಳಲಿ ಕನಸು ಗೂಡು ಕಟ್ಟುತ್ತ ಸೆಳೆಯುತ್ತ
ಎದೆಯಲ್ಲಿನ ಆತಂಕದ ಹುಳುಗಳು
ತಲೆಯ ಜಿಬರಗಟ್ಟಿ ತಿನ್ನುವ ಹೇನುಗಳನು
ಶಕ್ತಿಯೆಲ್ಲ ಹಾಕಿ ಉಗುರು ಸಂಧಿನಲಿ ಒರೆಯುವಂತೆ
ಕರುಳ ವೇದನೆಗೆ
ನೂರಾರು ನಿಟ್ಟುಸಿರ ತೊಟ್ಟ
ಮಹಾನಗರವೇ ಹೀಗೆ
ಅಂದರೆ ನನ್ನ ಹಾಗೆ.

ರೆಕ್ಕೆಯ ಕತ್ತಲ ನಡುವೆ
ನಡೆಯಲೆತ್ನಿಸುತ್ತೇನೆ ಮುಂದೆ
ಮಂದೆ ನಡೆಯುತ್ತೇನೆ

ಒಳಗಿನ ಅನೇಕ ಧ್ವನಿಗಳು
ಮಾದಕತೆಯಿಂದ ಕರಾಳವಾಗಿ
ನಾಲಗೆ ಚಾಚಿ, ದೈವದಂತೆ
ಸೆಳೆದು, ಕುದುರೆಯಂತೆ
ಭರ್ತಿ ನುಲಿದು ಬೆತ್ತಲೆಯಾಗಿ
ಮತ್ತೊಂದು ಬೋಧಿವೃಕ್ಷದ ಕೆಳಗೆ ಬಸವಳಿದಿದೆ
ಅಮರತ್ವದ ಅಮಲು ಅದಕೆ
ವೃಕ್ಷಕೆ ಚಿಗುರುವ ಬಯಕೆ
ಮನಸ್ಸಿನ ಪೂರ್ತಿ
ಮಾಯದ ಹೂ ಕೂತಂತೆ.

ಬಗೆ ಬಗೆದಷ್ಟೂ ಕುತೂಹಲ
ಕಾಲದದ್ಭುತ ಜೀವನ
ಬಿಟ್ಟು ಕೊಡದು ಭರವಸೆಯಿಡದ
ಮಹಾನಗರ
ಹೊಸತನಕ್ಕಾಗಿ ಜ್ವರ ಹಿಡಿದು ನಡುಗುವ
ನಿತ್ಯ ಮುತ್ತೈದೆ.
ರಸ್ತೆಯಲಿ ಗಲ್ಲಿಯಲಿ ಗಗನದಲಿ ಎಲ್ಲೆಲ್ಲೂ
ಮನೆಯಲ್ಲೂ ಕಿಟಕಿ ಗಾಜಿನ ಮುಗಿಯದ ಮೌನ
ರೋಧನದಂತೆ ಸುರಳಿಗೊಳ್ಳುತ್ತದೆ.
ದೇಹದ ಕಣಕಣವೂ ಬಳಸಿದ ಸುಖದ
ಮಹಾಸಾಗರವೇ ಹರಳುಗಟ್ಟಿ
ಮುಂದೆ ಮುಂದೆ ನಡೆಯುತ್ತೇನೆ
ಅನಾಥ, ಮನುಷ್ಯರ ನಡುವಿನಿಂದಲೆ
ಮನೆ ಮನೆಗಳ ಮುಂದೆ
ರಸ್ತೆ ರಸ್ತೆಯ ಮೇಲೆ
ಸರಪಳಿ ಎಳೆದುಕೊಂಡು
ದಿಕ್ಕಿಲ್ಲದ ಅನಂತ ಅನಿಶ್ಚಿತ ಓಟ.
ಮಣ್ಣು ಮೆತ್ತಿ ದಡ್ಡುಗೊಯ್ದ ಗಾಯಗಳ
ಸರಪಳಿ ಕೊರೆತ
ಇನ್ನೂ ಅರಳುತ್ತಿವೆ ಲಿಬಿಲಿಬಿ
ರೂಪಾಂತರಕ್ಕೆ ಕನಸುಗಳ ಔಷಧಿ
ಜಗತ್ತನ್ನು ಕಂಡು ಬಿಕ್ಕಳಿಸಿದರೆ
ದುಃಖವನ್ನು ಕಂಡು ನಿರ್ಲಿಪ್ತಭಾವ
ಎಷ್ಟೆಲ್ಲ ಅಮಲು ಮಾಯಾ ಮಹಾನಗರ
ನಾನು ಪ್ರೀತಿಸುವ ಹುಡುಗಿ.