ಹಗಲ ಹೊಲದ ತೆನೆಗಳು
ಹಕ್ಕಿ ಕೊರಳಿಗೆ ತೊನೆಯುತ್ತ
ನಲಿವ ಪುಟ್ಟ ಬಾಲಕಿ.
ತೊಟ್ಟ ಉಸಿರುಸಿರು ಬಿಸಿ
ಕಾಮಿ ಬೆಕ್ಕಿನ ನವಿರು ಸ್ಪರ್ಶ
ಸಾಗರ ಬಿಚ್ಚಿ ನಿಲ್ಲುತ್ತದೆ ಮೆಲ್ಲಗೆ
ಚಲಿಸುತ್ತದೆ ನಯವಾಗಿ ಬೆರಳು ಹಸ್ತ ರಟ್ಟೆ
ಆಳ ತಳದ ಆಗರ, ಸೋಂಬೇರಿ ಬೇಸರಕ್ಕೆ ಗರಬಡಿದು
ಮಿದುಗೊಂಡು ಆಸರೆಯ ಹಾಡು ಹರಿಯುತ್ತದೆ.
ಕುಲುಕುಲುಕಿ ವಸಂತಕ್ಕೆ ಒದ್ದೆಗೊಂಡ ಮರ
ಹುಲ್ಲು ಬೆಟ್ಟ ಧರೆ ಹಳ್ಳ
ನಿಸ್ಸೂರ ನೀರವ ನೀಲ ಜಲಜಲ
ಕಣ್ಣೋಡಿದಷ್ಟು ತೆರೆ ದಾವಿಸುತ್ತಿವೆ
ಸಂಜೆ ಸುದ್ದಿ ಹೊತ್ತು; ಕಾತರ
ದಿಗಂತ ಕಂದುವುದೆಂದಿಗೂ


ಆಗ ಸಂಜೆ ಏನೆಲ್ಲ
ಮನದ ಕನ್ನಡಿಯಲಿ ಮೂಡಿಸುತ್ತದೆ ಚಿತ್ರ
ಕಾರ್ಮಿಕ ಅಲೆಮಾರಿ
ಹಸಿಯಲಾರದ ಹೊಟ್ಟೆ
ಧ್ವಾರಗಳ ಮೌನ
ಬಿತ್ತಿರಿಸುತ್ತದೆ ಬಿಡುಗಡೆಯ ಕಪ್ಪು ಹಾಡ
ಪ್ರೇಮ ಕಾಮದ ಸಖ್ಯೆ
ಹಗಲಿಗೆ ದಕ್ಕದ
ಕಣ್ಣು ನೋಡಲಾರದ
ನಾನು ಅರಿಯಲಾರದ
ಕಾಲ ಮೆಟ್ಟಲಾರದ
ಅವಳ ತೆಕ್ಕೆ
ಸಂಜೆಯಾಗುವುದೆಂದಿಗೆ?


ಸಮುದ್ರ ತಡಿಯ
ಮರಳು ಮರಳಾಗಿಸುತ್ತದೆ
ನನ್ನ, ಮಿಡಿಯುವ ತಂತುಗಳೆಲ್ಲ
ಛಿದ್ರಗೊಂಡ ಚೂರು ಚೂರು ಗಾಜು
ಮುಗಿಲ ಮಂದಿರದ ಸೈನಿಕರ ಈಟಿ ಭರ್ಜಿ
ಮೈಯೆಲ್ಲ ಮುತ್ತಿಕ್ಕಿ ಮೃದುವಾಗಿ
ರಕ್ತ ತೊಟ್ಟಿಕ್ಕದೆ ಹೆಪ್ಪಿಟ್ಟು ಕಪ್ಪು
ಕವಿದ ಕಲ್ಬುರ್ಗಿ ಬೀದಿ ಬೀದಿ ಧೂಳು
ಕೊಡವಿ ದಿಟ್ಟಿಸಿದಾಗಲೂ
ನಚ್ಚಗೆ ಉರಿಯುವ ಸೂರ್ಯ
ಕುಕ್ಕುತ್ತಿದ್ದಾನೆ ಕಪ್ಪು ತಲೆ
ನೋವು ಕೇಳಿತು ಭವಿಸಿ
ಸಂಜೆಯಾಗುವುದೆಂದಿಗೆ?


ಸಂಜೆ
ಪೂರ್ಣ ಬದುಕು
ಹಕ್ಕಿಪಕ್ಷಿಗಳು ಗುಡ್ಡ ತೊರೆದರೆ ಸಾಗರ
ಖುಷಲದ ಹಾಡು ಗುನುಗುತ್ತ
ಗೂಡಿನ ಜೀವಗಳಿಗೆ ಗುಟುಕಿಡುವ ಹೊತ್ತು
ದಿನದ ಕೊನೆ ಕಾಫಿ ಹೀರುತ್ತ ರೈತಾಪಿ
ಕಾರ್ಮಿಕರು ಮತ್ತು ಇತರ ಶ್ರಮಿಕರ
ಈ ದಿನ ಸುರಿಸಿದ ಬೆವರ ಕುರಿತ
ಸಂತೃಪ್ತಿಯ ನೆನಪ ಹೊತ್ತು
ಬೀದಿ ಬೀದಿಯಲಿ ನಿಂತ ದೀಪದ ಕಂಬ
ಇನ್ನು ಬೆಳಗುವ ಸಮಯ
ಪ್ರೇಮಿಗಳು ಬಿಕ್ಷುಕರು ದರ್ವೇಸಿಗಳು
ಮನುಷ್ಯರು ಇಲ್ಲದವರು ಇರುವವರ
ಕನಸಿನ ತೊಟ್ಟಿಲು ತೂಗುವ ಘಳಿಗೆ
ಜಾತ್ರೆಯಲಿ ಕಳೆದ ಬಾಲಕ
ಪ್ರಶ್ನಿಸಿದ್ದಾನೆ ಪೋಲಿಸರನ್ನ
ಸಂಜೆಯಾಗುವುದೆಂದಿಗೆ?