ಹಲ್ಲು ಉದುರುವ ಸಮಯ
ಬಾಯ ತುಂಬಾ ಕಾವು, ದವಡೆ ತುಂಬಾ ಬಾವು
ಮೆಲ್ಲನೆ ಚೀರುವಂತೆ ಮಾಡುತ್ತದೆ,
ಹಲ್ಲ ಸಂದಿಯ ನೋವು.

ಹುಡುಗನಿಗೆ ಹಿರಿಯರಿಂದ ಎಚ್ಚರ
“ಅದುರುವ ಹಲ್ಲಿಗೆ ನಾಲಗೆ
ತಾಗಿಸಬೇಡವೋ ಪೋರ!
ನೀ ತಗುಲಿಸಿದ್ದೇ ಆದರೆ,
ಹಲ್ಲು ಹುಟ್ಟುವುದಿಲ್ಲ ನೇರ.”

ಅಲ್ಲಿಯವರೆಗೂ ಆ ಕುರಿತು
ಯೋಚಿಸದಿದ್ದ ಹುಡುಗ
ಕನ್ನಡಿಯ ಮುಂದೆ ಕುಳಿತು
ನಿಶ್ಚೈಸಿದ “ನೋಡೇ ಬಿಡುವ ಏನಾಗುತ್ತೆ?”
ತಾಗಿಸಿದ ಮರುಕ್ಷಣವೇ ಚೀರಿದ
“ಆ! ಬೇಡಪ್ಪ, ತುಂಬಾ ನೋವಾಗುತ್ತೆ”.

ಹೀಗೆ ಇದ್ದಾಗ ಒಮ್ಮೆ ಇದ್ದಕ್ಕಿದಂತೆ
ಬಾಯೊಳಗೇನೂ ಕಡಲೆ ಸಿಕ್ಕಂತೆ
ನೋಡಿದರೆ, ಅರೆ!
ಕಿಂಚಿತ್ತೂ ಸದ್ದೇ ಮಾಡದೆ
ಆ ಹಲ್ಲು ಬಿದ್ದೇ ಹೋಗಿದೆ.

ಅಜ್ಜಿಯ ಆದೇಶದಂತೆ ಹಲ್ಲನು
ಕಡೆಯ ಬಾರಿಗೆ ಕಣ್ತುಂಬ ನೋಡಿ,
ಸಗಣಿಯುಂಡೆಯ ಮಾಡಿ
ಹಲ್ಲ ಅದರೊಳು ಕೂಡಿ
ಕೊಟ್ಟಿಗೆಯ ಮೇಲೆಸೆದು ಕೂಗುವುದು-
“ಹಸುವಿನೊಟ್ಟೆಯಲಿ ಕರು ಹುಟ್ಟುವುದು ಮೊದಲೋ
ನನ್ನ ಬಾಯಲಿ ಹಲ್ಲುಟ್ಟುವುದು ಮೊದಲೋ…”

ಗೆಳೆಯರೆಲ್ಲಾ ರೇಗಿಸುತ್ತಾರೆ
ಬಾಯೊಳಗೇನೋ ಅದು ಚೋಟು?
ತೆರೆದಿದೆಯಲ್ಲೋ ಲಾಲ್‌ಬಾಗ್ ಗೇಟು
ಮುಚ್ಚುವ ಮೊದಲೇ ಹೇಳಿಬಿಡು
ಎಷ್ಟು ಎಂಟ್ರೆನ್ಸ್ ರೇಟು?

ಹಲ್ಲು ಉದುರುವ ಸಮಯ
ಬಾಯ ತುಂಬಾ ಕಾವು, ದವಡೆ ತುಂಬಾ ಬಾವು
ಮೆಲ್ಲನೆ ಚೀರುವಂತೆ ಮಾಡುತ್ತದೆ,
ಹಲ್ಲ ಸಂದಿಯ ನೋವು
ಒಮ್ಮೊಮ್ಮೆ ಅನಿಸುವುದೂ ಉಂಟು
ಬೇಗ ಬರಬಾರದೆ ಸಾವು…

ಬಾಲ್ಯದ್ದೆಲ್ಲಾ ಈಗ ಬರೀ ನೆನಪು
ಈಗ ಅದೂ ಮಾಸುತ್ತಿದೆ.
ಯಾವುದು? ಅದೇ ನೆನಪಿನ ನೆನಪು
ಹಿರಿಯರು ಹೇಳಿದ್ದಾರೆ,
ಯೌವನ ಕಳೆದ ನಂತರ ಬರುವುದು ಮುಪ್ಪು
ಆದರೆ ಇದೇನಿದು? ಮತ್ತೆ ಬಂದಿದೆಯೇ ಬಾಲ್ಯ?
ಅದೊಂದು ತಿಳಿದಿಲ್ಲ. ಯಾವುದೂ ಮೊದಲಿನಂತಿಲ್ಲ.

ಹಿಂದೆ ಮನಸ್ಸು ಹತೋಟಿಯಲ್ಲಿರಲಿಲ್ಲ…
ಈಗ ದೇಹವೇ ಹತೋಟಿಯಲ್ಲಿಲ್ಲ
ಎಲ್ಲಾ ಮಗುವಿನಂತೆ, ಸರ್ವತಂತ್ರ ಅತಂತ್ರ..ಪರತಂತ್ರ
ಅರಿತೋ, ಅರಿಯದೆಯೋ ಮಾಡಿದ ತಪ್ಪಿಗೆ ಇದು ಶಿಕ್ಷೆಯೇನು?
ಗೊತ್ತಿಲ್ಲ, ಆದರೆ ನಿಜವಾಗಿಯೂ ತಪ್ಪು ಆಗಿದೆಯೇನು?
ಹೇಳಿದೆನಲ್ಲ, ಅದೊಂದೂ ತಿಳಿದಿಲ್ಲ
ನೆನಪಿನ ನೆನಪು ಮಾಸುತ್ತಿದೆ
ಮರೆವಿನ ಮುಸುಕು ಮುಸುಗುತ್ತಿದೆ.

ಅರುಳೇ ಮರುಳೋ? ಮರುಳೇ ಅರುಳೋ?
ಮುಪ್ಪೇ ಬೆಪ್ರೋ? ಬೆಪ್ಪೇ ಮುಪ್ರೋ?
ಬಾಕಿ ಇರುವುದಾದರೂ ಇನ್ನೇನು?
ನರಕಕ್ಕಿನ್ನು ಮೂರೇ ಗೇಣು
ಆ! ಮೆಲ್ಲನೆ ಚೀರುವಂತೆ ಮಾಡುತ್ತಿದೆ,
ಹಲ್ಲ ಸಂದಿಯ ನೋವು
ಅದಕ್ಕೇ ಈಗೀಗ ಅನಿಸುತ್ತಿದೆ
ಬೇಗ ಬರಬಾರದೇ ಸಾವು?