ಅವಳ ನೆನಪುಗಳೇ ಹಾಗೆ,
ಅಕಾರಣ… ಸಕಾರಣ…ಕೆಲವೊಮ್ಮೆ ವಿನಾಕಾರಣ…
ಬಂದು ಕಾಡುತ್ತವೆ ಇದ್ದಕ್ಕಿದ್ದಂತೆ
ಇರಾಕಿನ ಮೇಲೆ ಅಮೆರಿಕಾದ ಆಕ್ರಮಣದಂತೆ,
ಆರೋಗ್ಯಕ್ಕೆ ಹಾನಿಕರ ಎಂದು ಛಾಪಿಸಿಕೊಂಡೇ
ಮಾರಾಟವಾಗುವ ಸಿಗರೇಟು ಪ್ಯಾಕಿನಂತೆ.

ಅವಳ ನೆನಪುಗಳೇ ಹಾಗೆ
ಆಸೆ ಹುಟ್ಟಿಸಿ…ಉಕ್ಕಿಸಿ…ಫೈನಲ್‌ನಲ್ಲಿ ಸೋಲುವ
‘ಕಮಾನ್ ಇಂಡಿಯಾ!’ ಕ್ರಿಕೆಟ್ ಟೀಮಿನಂತೆ;
ಅಪರೂಪಕ್ಕೊಮ್ಮೆ ಪುಸ್ತಕ ತೆರೆದು ಕೂತಾಗ
ಫಕ್ಕನೆ ಮಾಯವಾಗುವ ಕರೆಂಟಿನಂತೆ.

ಅವಳ ನೆನಪುಗಳೇ ಹಾಗೆ
ಸಂಜೆಯಾಕಾಶದಲಿ ದೇವರು
ಮಾಡಿದ ರುಜುವಿನಂತೆ
ಮಾಯದ ಅಂಗೈಯ ಹುಣ್ಣಿನಂತೆ.

ಅವಳ ನೆನಪುಗಳೇ ಹಾಗೆ
ಅವಳೆದುರು ಹೊರಬರದ ಮಾತುಗಳು
ಮನದಲ್ಲೇ ಹೆಪ್ಪುಟ್ಟಿ ಮೌನದ ಘಟ್ಟಿಯಾದಂತೆ;
ಮೈಸೂರಿನ ಮೇನ್‌ರೋಡುಗಳಲ್ಲಿ,
ಕರೆಂಟು ತಂತಿಗಳ ನಡುವೆ ಬಂಧಿಯಾದ
ತುಂಬು ಚಂದಿರನಂತೆ.

ಅವಳ ನೆನಪುಗಳೇ ಹಾಗೆ
ಎಲ್ಲಾ ಥೇಟ್ ಅವಳಂತೆಯೇ
ಮರೆಯಬೇಕೆಂದು ಅಂದುಕೊಂಡ ದಿನವೇ
ಕನಸಿನಲಿ ಬಂದು ಕಾಡುವಂತೆ
ತುಟಿಯಂಚಿನಲಿ ಹುಟ್ಟಿ ಕೆನ್ನೆಯ
ಕುಳಿಯಲ್ಲಿ ಕರಗುವ ಅವಳ ನಗುವಿನಂತೆ
ಸುಂದರ…ಸುಮಧುರ….ಮನೋಹರ
ಆದರೆ ನನ್ನ ಪಾಲಿಗೆ ಒಮ್ಮೊಮ್ಮೆ ಅತಿಭೀಕರ!