ಉಲುಪಿ:
ಬಾಗಿನ, ಮದುವೆ ಮುಂಜಿಯಂಥ ವಿಶೇಷ ಸಂದರ್ಭಗಳಲ್ಲಿ ಬ್ರಾಹ್ಮಣರಿಗೆ ಅಥವಾ ಅನ್ಯಕುಲದವರಿಗೆ ಅಂದರೆ ಅವರು ಇವರ ಮನೆಯಲ್ಲಿ ಊಟಮಾಡುವ ಕಲುಲದವರಾಗಿರದಿದ್ದರೆ ಅಂಥವರಿಗೆ ಒಂದು ಊಟದ ಸಾಮಗ್ರಿಗಳನ್ನು ಉದಾ: ಅಕ್ಕಿ, ಗೋದಿಹಿಟ್ಟು, ಕಡಲೆಬೇಳೆ, ಬೆಲ್ಲ, ಹುಣಸೇಹಣ್ಣು, ತೆಂಗಿನಕಾಯಿ, ಎಲೆ, ಅಡಿಕೆ, ಮತ್ತು ಒಂದು ಕುಪ್ಪಸ ಅಥವಾ ಧೋತರ ಅಥವಾ ವಸ್ತ್ರ ಮುಂತಾದವುಗಳನ್ನು ಮೊರದಲ್ಲಿಟ್ಟು ಕಾಣಿಕೆಯಾಗಿ ಕೊಡುತ್ತಾರೆ. ಕಿಟ್ವಲ್‌ ಕೋಶದ “ಉಲುಫೆ” ನೋಡಿರಿ.

ಗಿಣಿರಾಮ ನಮಗ ಇದಿರಾದ:
ಶುಭಸೂಚನೆ. ಬಯಕೆ ಊಟ ಒಯ್ಯುವಾಗ ಗಿಣಿ ಎದುರಾದರೆ ಆ ಬಸುರಿ ಗಂಡು ಹಡೆಯುತ್ತಾಳೆಂದು ಕಲ್ಪನೆ.

ಗುಗ್ಗಳ ಹೊರು:
ವೀರಭದ್ರ ದೇವರಿಗೆ ಹರಕೆ ಹೊತ್ತ ಮದುಮಗನಿಂದ ಮಾಡಿಸುವ ವಿಶೇಷ ಪೂಜೆ ಅಥವಾ ಸೇವೆ. ಮಣ್ಣಿನ ಐದು ಪಾತ್ರೆಗಳಲ್ಲಿ ಗುಗ್ಗಳ ಹಾಕಿ ಸಂಬಾಳವೇ ಮುಂತಾದ ವಾದ್ಯಗಳೊಂದಿಗೆ ಪರ್ವಂತರ ನರ್ತನದೊಂದಿಗೆ ನದಿಗೆ ಹೋಗಿ ಹೊತ್ತ ಗುಗ್ಗಳ ಮುಳುಗಿಸಿ ಬರುವ ಒಂದು ವಿಶೇಷ ವಿಧಿ. ವೀರಶೈವರಲ್ಲಿದೆ.

ಬಂಗಾರ ಜಡಿಸು:
ಬಯಸಿದ ಕಾರ್ಯ ನೆರವೇರಿದರೆ ದೇವರಿಗೆ ಬಂಗಾರ ಅಥವಾ ಬೆಳ್ಳಿ ಜಡಿಸುವೆನೆಂದು ಹರಕೆ ಹೊರುತ್ತಾರೆ. ಅಂದರೆ ಬಂಗಾರದ ಅಥವಾ ಬೆಳ್ಳಿಯ ನಾಣ್ಯಗಳನ್ನು ಗರ್ಭಗುಡಿಯ ಬಲಬಾಗಿಲಿಗೆ ಅಥವಾ ಎಡ ಬಾಗಿಲಿಗೆ ಬಡಿಸುತ್ತಾರೆ. ಇಷ್ಟಸಿದ್ಧಿಯಲ್ಲಿ ಅನ್ಯರಿಗೆ ಅಹಿತವಾಗುವಂತಿದ್ದರೆ ಎಡ ಬಾಗಿಲಿಗೂ, ಅಹಿತವಾಗದಂತಿದ್ದರೆ ಬಲಬಾಗಿಲಿಗೂ ಬಡಿಸುತ್ತಾರೆ.

ಬಿಕ್ಕಳಿಕೆ ಹತ್ತು:
ದೂರದ ಆಪ್ತೇಷ್ಟರು ಸ್ಮರಿಸಿದಾಗ ಬಿಕ್ಕಳಿಕೆ ಹತ್ತುತ್ತವೆಂದೂ ಸ್ಮರಿಸಿದವರನ್ನು ಸರಿಯಾಗಿ ಊಹಿಸಿದರೆ ಬಿಕ್ಕಳಿಕೆ ನಿಲ್ಲುತ್ತವೆಂದೂ ಕಲ್ಪನೆ ಇದೆ.

ಬೇಲಿಜಿಗಿ:
ಸಾಹಸಮಾಡು. ಕಾರಹುಣ್ಣಿಮೆಯೆ ಕರಿಯೊಂದಿಗೆ ಬೇಲಿ ಜಿಗಿಯುವುದು ಅಥವಾ ಪ್ರೀತಿಸುವ ಹುಡುಗೆಗಾಗಿ ಅವರ ಮನೆಯ ಹಿತ್ತಲ ಬೇಲಿ ಜಿಗಿದು ಕದ್ದು ಪ್ರವೇಶಿಸುವುದು ಅಥವಾ ಹೊರಗೋಡುವುದು.

ಶೆಟಿವಿತಾಯಿ:
ಸರಸ್ವತಿ(?) ಇವಳೇ ಹಣೆಬರಹ ಬರೆಯುತ್ತಾಳೆಂಬ ಕಲ್ಪನೆಯಿದೆ. ಸುಸಂಸ್ಕೃತರಿಗೆ ಹಣೆಬರಹ ಬ್ರಹ್ಮಲಿಪಿಯಾದರೆ ಹಳ್ಳಿಗರಿಗೆ ‘ಶೆಟವಿ ತಾಯಿಯ ಬರಿ’ಯಾಗಿದೆ. ಹಡೆದ ಮೂರು ತಿಂಗಳವರೆಗೆ ಅವಳೇ ಕೂಸು ಬಾಣಂತಿಯರ ರಕ್ಷಣೆ ಮಾಡುತ್ತಾಳೆ. ಅಲ್ಲಿಯ ತನಕ ಬಾಣಂತಿಯರು ಕುಂಕುಮ ತಾಳಿಗಳನ್ನು ಧರಿಸುವುದಿಲ್ಲ. ಅವರು ಹೆಂಗಸರಲ್ಲಿ ಜಮೆಯಾಗುವುದಿಲ್ಲ. ಆ ಅವಧಿಯಲ್ಲಿ  ಕೂಸು ನಕ್ಕರೂ ಅತ್ತರೂ ಶೆಟವಿತಾಯಿಯೇ ಕಾರಣಳು. ಮೂರು ತಿಂಗಳಾದನಂತರ ಮೊರದಲ್ಲಿ ಅವಳ ಸಂಕೇತವಾದ ಒಂದು ಗುಂಡುಕಲ್ಲನ್ನು ಪೂಜಿಸಿ ಐದಾರು ವರ್ಷದ ಎಳೆಯರಿಂದ ಕೂಸನ್ನೂ ಆ ಮೊರವನ್ನೂ ದಾಟಿಸಿ ಶೆಟವಿತಾಯಿಯನ್ನು ಬೀಳ್ಕೊಡುತ್ತಾರೆ.

ಸುರಿಗಿ ಸುತ್ತು:
ಮದುವೆಯ ಸಂದರ್ಭದಲ್ಲಿ ನಾಲ್ಕು ಮಂದಿ ಕೂಡ್ರುವಷ್ಟು ಸ್ಥಳದ ಸುತ್ತ ಐದು ತಂಬಿಗೆ ಕಳಸಗಳನ್ನಿಟ್ಟು ಅವುಗಳ ಸುತ್ತ ಮುತ್ತೈದೆಯರು ಹಾಡು ಹೇಳುತ್ತ ದಾರ ಸುತ್ತುತ್ತಾರೆ. ಅದರ ಒಳಗೆ ಮದುಮಗ, ಅವನ ತಾಯಿ, ಮದುಮಗಳು, ಅವಳ ತಾಯಿ ಕುಳಿತು ನೀರು ಹನಿಸಿಕೊಂಡರೆ ಪರಿಶುದ್ಧರಾದಂತೆ. ಸುರಿಗಿ ಸುತ್ತುವಾಗಿನ ಹಾಡುಗಳೇ ಎಷ್ಟೋ ಇವೆ.