ಬೆಳಗಾವಿ ಜಿಲ್ಲೆಯ ಅಕ್ಕತಂಗೇರಹಾಳ, ಘೋಡಗೇರಿ, ಗೋಕಾಕ-ಮುಂತಾದ ಊರುಗಳಲ್ಲಿ ಈ ಹಾಡುಗಳನ್ನು ಸಂಗ್ರಹಿಸಲಾಗಿದೆ. ಸಾಮಾನ್ಯವಾಗಿ ಇವು ಈ ಜಿಲ್ಲೆಯ ಉತ್ತರ ಭಾಗದಲ್ಲೆಲ್ಲ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಪ್ರಚಾರದಲ್ಲಿ ಇದ್ದಂಥವೆ. ಅಥವಾ ಬೇರೆ ಕಡೆಗೂ ಇರಬಹುದು. ಜಾನಪದ ಸಾಹಿತ್ಯದ ಸಂಗ್ರಹ ಕಾರ್ಯವನ್ನು ಈಗಾಗಲೇ ಅನೇಕರು ಮಾಡಿ ಪ್ರಕಟಿಸಿದ್ದಾರೆ. ಪ್ರಯತ್ನ ಮಾಡಿ ಈ ಸಂಗ್ರಹದಲ್ಲಿ ಪುನರುಕ್ತಿಯಾಗದಂತೆ ನೋಡಿಕೊಳ್ಳಲಾಗಿದೆ. ಅಥವಾ ಹಾಗಾಗುವುದು ಸ್ವಾಭಾವಿಕವೂ ಹೌದು. ಬರವಣಿಗೆಯ ಸೌಲಭ್ಯವನ್ನು ಬಿಟ್ಟು ಸ್ಮೃತಿಯನ್ನು ಮಾತ್ರ ಆಶ್ರಯಿಸುವ ಈ ಕವನಕ್ರಿಯೆ ಸ್ವಯಂಪ್ರೇರಿತ ಮತ್ತು ಅಖಂಡವಾಗಿರುವುದರಿಂದ ಸ್ವಭಾವತಃ ಸಹಜವಾಗಿರುತ್ತದೆ. ಆದರೆ ಈ ಗುಣ ಅದರ ‘ಅಭಿವ್ಯಕ್ತಿಯ ಮಿತಿಗಳಿಗೂ ಕಾರಣವಾಗಿರುತ್ತದೆ. ಜಾನಪದ ಕವಿಗಳು ಹಾಡುವಗ ಶಬ್ದಗಳ  ಯಥಾರ್ಥತೆಯನ್ನಾಗಲಿ, ಔಚಿತ್ಯವನ್ನಾಗಲಿ ಕುರಿತು ತಿಣುಕುವದಿಲ್ಲ. ತಮ್ಮ ಜನಾಂಗದಲ್ಲಿ ಭಾವನೆ, ವಿಚಾರಗಳನ್ನು ಸಮೀಕರಣದಲ್ಲಿ ಹಿಡಿದಿಡುವ ಪದ, ಪದಗುಂಫನ, ವಾಕ್ಸರಣಿ ಅಥವಾ ಸಾಲರ್ಧಸಾಲುಗಳು ಆಗಲೇ ತಯಾರಾಗಿ ಪ್ರಚಾರದಲ್ಲಿರುತ್ತವೆ. ಕವಿಗಳು ಸಂದರ್ಭ, ಛಂದಸ್ಸು, ಧಾಟಗಳಿಗೆ ಅನುಗುಣವಾಗಿ ಜ್ಞಾಪಿಸಿಕೊಳ್ಳುತ್ತ ಹೋಗುತ್ತಾರೆ.  ಕೆಲವು ಸಲ ಅನುಗುಣವಾದ ಹಿಂದಿನ ಇಡೀ ಪದ್ಯವನ್ನೇ ತುರ್ತು ಪರಿಸ್ಥಿತಿಗೆ ಅನುಸಾರವಾಗಿ ಒಂದೆರಡು ಹೊಸ ಪದ ಸೇರಿಸಿ ರಿಪೇರಿ ಮಾಡಿ ಗರ್ಜಕ್ಕೆ ಬಳಸಿಕೊಳ್ಳುತ್ತಾರೆ. ಹೀಗಾಗಿ ಎಷ್ಟೋ ಪದ್ಯಗಳು ಪುನರುಕ್ತಿಯಾದಂತೆ ತೋರುತ್ತವೆ. ಈ ಹಾಡುಗಳನ್ನು ರಚಿಸಿದವರ ಹೆಸರು ಗೊತ್ತಿಲ್ಲ. ಇವುಗಳನ್ನು ರಚಿಸಿದವರು ಮೇಲಿನ ಊರುಗಳವರೇ ಇರಬೇಕೆಂಬ ನಿಯಮವೂ ಇಲ್ಲ. ಜಾನಪದ ಸಾಹಿತ್ಯ ಹೇಳಿಕೇಳಿ ಜನಾಂಗದ ಕಲೆಯಾದ್ದರಿಂದ ಅವುಗಳನ್ನು ರಚಿಸಿದ ಯಾರೊಬ್ಬರೂ ಗುಂಪಿನಿಂದ ಪ್ರತ್ಯೇಕಿತರಾಗಿ ಅಂಕಿತ ನಾಮಗಳಿಂದ ತಮ್ಮ ಕರ್ತೃತ್ವವನ್ನು ಪ್ರದರ್ಶಿಸಿಕೊಳ್ಳಲಿಲ್ಲ. ಅಥವಾ ಇಂಥ ಹಾಡುಗಳ ರಚನೆ ಬದುಕಿನ ಒಂದು ಭಾಗವಾಗಿಯೋ, ಅಂತಃಕರಣ ಪೂರ್ವಕ ಆಚರಿಸುವ ವಿಧಿಯಾಗಿಯೋ ಇದ್ದವರಿಗೆ ತಮ್ಮ ಕವಿತ್ವದ ಅಹಂ ಪ್ರಜ್ಞೆ ಇರುವುದೂ ಇಲ್ಲ.  ಅಥವಾ ಇವುಗಳನ್ನು ಹಾಡಿದವರು ಹೆಚ್ಚಾಗಿ ಹೆಂಗಸರು. ತಮ್ಮ ಹೆಸರು ಅನ್ಯರ ಬಾಯಲ್ಲಿ ಬರುವುದೇ ಅಪಮಾನಕರವೆಂಬ ನಂಬುಗೆಯಲ್ಲಿದ್ದವರು. ಆದ್ದರಿಂದಲೇ ಯಾರೂ ತಮ್ಮ ಹೆಸರುಗಳನ್ನು ಹೇಳಿಕೊಳ್ಳುವುದಿಲ್ಲ. ಗಂಡಸರು ರಚಿಸಿದ ಬಹುಪಾಲು ಲಾವಣಿಗಳಿಗೆ ಬರೆದವರ ಹೆಸರುಗಳಿದ್ದು, ಕವಿತ್ವದ ಬಗೆಗೆ ಅವರವೇ ಆದ ಸಿದ್ಧಾಂತಗಳಿರುವುದನ್ನೂ ಪ್ರತಿವಾದಿಯ ಕವನಶಕ್ತಿಯನ್ನು ಹೀನೈಸಿ ತಮ್ಮ ಸಾಮರ್ಥ್ಯವನ್ನು ಹೊಗಳಿಕೊಳ್ಳುವ ಪರಿಪಾಠವಿದ್ದುದನ್ನೂ ಈ ಸಂದರ್ಭದಲ್ಲಿ ಗಮನಿಸಬಹುದು.

ಇವುಗಳನ್ನು ಬರೆದವರ ಭಾವಪ್ರಪಂಚಕ್ಕೂ ನಮ್ಮದಕ್ಕೂ ವ್ಯತ್ಯಾಸವಿರುವುದರಿಂದ ಇವುಗಳಿಗೂ ನಮಗೂ ಒಂದು ಅಂತರ ಉಳಿದೇ ಉಳಿಯುತ್ತದೆ. ಕಾವ್ಯ ಜೀವನೋಪಯೋಗಿ ಕಲೆಯಾಗಿದ್ದ ಸಂದರ್ಭದಲ್ಲಿ ಇವು ಹುಟ್ಟಿಕೊಂಡಂಥವು. ಬಾಜಾ ಬಜಂತ್ರಿಯಂತೆ ವಧೂವರರ ಹಿಂದೆ ಹಾಡುವವರೂ ಅನಿವಾರ್ಯವಾಗಿದ್ದ ಕಾಲದಲ್ಲಿ, ದೇವರಿಗೆ ಹಾಡಿ ಹರಕೆ ಮುಟ್ಟಿಸುವ ಕಾಲದಲ್ಲಿ, ಹಾಡುವವರಿಲ್ಲದೆ ದೇವರ ಜಾತ್ರೆಯನ್ನೇ ಮುಂದೂಡುವಂಥ ಕಾಲದಲ್ಲಿ ಹುಟ್ಟಿಕೊಂಡಂಥವು. ಇಂಥ ಭಾವನೆಗಳು ಹಳ್ಳಿಗರಿಗೇ ಚೇಷ್ಟೆಯ ವಿಷಯಗಳಾಗಿವೆ. ಈ ಹಾಡುಗಳು ಹುಟ್ಟಿಕೊಂಡಂಥ ಜಾನಪದವೀಗ ಉಳಿದಿಲ್ಲ; ಅದರ ನೆನಪು ಮಾತ್ರ ಮಸಕು ಮಸಕಾಗಿ ಉಳಿದಿದೆ. ಆದ್ದರಿಂದಲೇ ಅವುಗಳನ್ನು ಕೊನೆಯಪಕ್ಷ ಸಂಗ್ರಹಿಸುವ ಅವಸರ ಈಗ ಎಲ್ಲ ಕಡೆಗೆ ಕಂಡು ಬರುತ್ತಿದೆ.

ಸಂಸ್ಕೃತಿಯ ಹತ್ತಾರು ಶಿಖರಗಳನ್ನು ಒಂದು ಮಾತಿನಲ್ಲಿ ಹೇಳುವ ವಿಶಾಲದೃಷ್ಟಿಯ ಕಾವ್ಯ ಇದಲ್ಲ. ಬದುಕಿನ ಒಂದೊಂದು ಸಣ್ಣ ಪುಟ್ಟ ವಿವರವನ್ನೂ ಭಯ, ಭಕ್ತಿ, ಶ್ರದ್ಧೆಗಳಿಂದ ನೋಡಿ ಕಲೆಯಾಗಿಸುವಂಥದು. ಎಂಥ ಕ್ಷುಲ್ಲಕ ವಿವರವನ್ನೂ ಹೇಗೆ ಕಾವ್ಯವಾಗಿಸುತ್ತಾರೆಂಬುದಕ್ಕೆ ಇಲ್ಲಿನ ಯಾವ ತ್ರಿಪದಿಯನ್ನೂ ಉದಾಹರಣೆಯಾಗಿ ನೋಡಬಹುದು. ‘ನಿರುದ್ದಿಶ್ಯ ರಸಸೃಷ್ಟಿಯ ಗುರಿ ಅವುಗಳ ಒಂದು ಮಟ್ಟದ ಹಸಿತನಕ್ಕೆ, ಗುಣಕ್ಕೆ, ದ್ವೇಷಕ್ಕೆ ಕಾರಣವಾಗಿರುವಂತೆ ಕಾಣುತ್ತದೆ. ‘ಅದೇನೇ ಇರಲಿ ಜನಾಂಗಕ್ಕೆ ಜನಾಂಘವೇ ಭಾಗವಹಿಸುವ ಈ ಕವನಕ್ರಿಯೆಯ ಬಗೆಗೆ ಅದು ಸಾಧ್ಯವಿಲ್ಲದ ನಾವು ಕರುಬುವಂತಾಗುತ್ತದೆ. ಅದು ನಿಜ.

ಈ ಹಾಡುಗಳನ್ನು ಸಂಗ್ರಹಿಸುವಲ್ಲಿ ನೆರವಾದ ಆತ್ಮೀಯರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಹಾಡುಗಳನ್ನು ಸಂಗ್ರಹಿಸುವಾಗ ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶವೇನೂ ನನಗೆ ಇರಲಿಲ್ಲ. ಶ್ರೀ.ಕೆ.ವಿ. ಸುಬ್ಬಣ್ಣನವರು ಪ್ರಚೋದಿಸಿದ್ದರಿಂದ ಪುಸ್ತಕ ರೂಪದಲ್ಲಿ ಬರುವಂತಾಯಿತು. ಅವರಿಗೂ, ಪ್ರಕಟಗೊಳಿಸುತ್ತಿರುವ ಅಕ್ಷರ ಪ್ರಕಾಶನದವರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

– ಚಂದ್ರಶೇಖರ ಕಂಬಾರ
ಉಡಿಪಿ
೨೩-೨-೧೯೬೮